Padma Award: ಅಪ್ರತಿಮ ಯಕ್ಷಗಾನ ಕಲಾವಿದ ಗೋವಿಂದ ಮಾಮಗೂ ಬರಬೇಕಿತ್ತು ಪದ್ಮ ಪ್ರಶಸ್ತಿ, ಕನ್ನಡಾಭಿಮಾನಿಗಳಿಂದಲೂ ಬೆಂಬಲ
Padma Award: ಕರ್ನಾಟಕದ ಹಲವರಿಗೆ ಪದ್ಮ ಪ್ರಶಸ್ತಿ ಬಂದಿದೆ. ಯಕ್ಷಗಾನ ಕಲಾವಿದ ಗೋವಿಂದ ಭಟ್ಟರಿಗೂ ಪ್ರಶಸ್ತಿ ಬರಬೇಕಿತ್ತು ಎನ್ನುವ ಒತ್ತಾಸೆ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಿ ಬಂದಿದೆ.

ಈ ಬಾರಿ ಪದ್ಮ ಪ್ರಶಸ್ತಿ ಕನ್ನಡದ ಒಂಬತ್ತು ಮಂದಿಗೆ ಬಂದಿದೆ. ಅರ್ಹರಿಗೆ ಪ್ರಶಸ್ತಿ ಲಭಿಸಿರುವ ಖುಷಿಯಂತೂ ಇದೆ. ಆದರೆ ಇನ್ನೂ ಅರ್ಹರಿದ್ದರು ಅವರನ್ನೂ ಪರಿಗಣಿಸಬೇಕಿತ್ತು ಎನ್ನುವ ಚರ್ಚೆಗಳೂ ನಡೆದಿವೆ. ಅದರಲ್ಲೂ ಕರಾವಳಿ ಭಾಗದವರಾಗಿ ಯಕ್ಷಗಾನ ಕಲೆಗೆ ಜೀವತುಂಬಿ ಅದಕ್ಕೊಂದು ಘನತೆ ತಂದುಕೊಟ್ಟಂತಹ ಕಲಾವಿದರೂ ಇದ್ದರು. ಅವರನ್ನು ಗುರುತಿಸಬೇಕಿತ್ತು. ಕನ್ನಡಿಗರು ಇಂತಹ ಕಲಾವಿದರ ಪರವಾಗಿ ನಿಲ್ಲುವ, ಸೂಕ್ತ ವೇದಿಕೆಯಲ್ಲಿ ಇಂತವರ ಕುರಿತು ಅಭಿಪ್ರಾಯ ಮೂಡಿಸುವ ಮೂಲಕ ಪದ್ಮ ಪ್ರಶಸ್ತಿ ಸಿಗುವಂತೆ ಮಾಡಬೇಕು ಎನ್ನುವ ಗಂಭೀರ ಸಲಹೆಯೂ ಕೇಳಿಬಂದಿದೆ. ಹೀಗಾದರೆ ಮಾತ್ರ ಸಾಧಕ ಕನ್ನಡಿಗರನ್ನು ಗುರುತಿಸಲು ಸಾಧ್ಯವಾಗಬಹುದು ಎನ್ನುವುದು ಚರ್ಚೆಯ ಮುಖ್ಯಸಾರ.
ಪ್ರತೀ ಬಾರಿ ಪದ್ಮ ಪ್ರಶಸ್ತಿಗಳ ಘೋಷಣೆ ಆದಾಗಲೂ ನಾನು ತುಂಬ ಆಸೆಯಿಂದ ಪಟ್ಟಿಯ ಮೇಲೆ ಕಣ್ಣಾಡಿಸುತ್ತೇನೆ - ನಮ್ಮ ಗೋವಿಂದ ಮಾವನ ಹೆಸರು ಉಂಟಾ ಅಂತ... ಮತ್ತೆ ಮತ್ತೆ ನಿರಾಸೆ....
ಯಕ್ಷಗಾನ ಕಂಡ ಅದ್ವಿತೀಯ ಕಲಾವಿದ, ಯಕ್ಷರಂಗದ ದಶಾವತಾರಿ, ತಮ್ಮ 87 ವರ್ಷಗಳ ಬದುಕಿನಲ್ಲಿ 71 ವರ್ಷಗಳನ್ನೂ ಸಂಪೂರ್ಣ ವೃತ್ತಿಪರ ಕಲಾವಿದನಾಗಿಯೇ ಯಕ್ಷಗಾನಕ್ಕೆ ಮುಡಿಪಾಗಿಟ್ಟ, ಗುರುಗಳ ಗುರು ಸೂರಿಕುಮೇರು ಕೆ. ಗೋವಿಂದ ಭಟ್ಟರು ನನ್ನಂತಹ ಸಾವಿರಾರು ಅಭಿಮಾನಿಗಳ ಕಣ್ಣಲ್ಲಿ ಎಷ್ಟೋ ಸಲ ಪದ್ಮಶ್ರೀಯಾಗಿದ್ದಾರೆ, ಪದ್ಮಭೂಷಣರಾಗಿದ್ದಾರೆ....ಅವರೇನೂ ಇದನ್ನೆಲ್ಲ ಬಯಸಿದವರಲ್ಲ, ನಿರೀಕ್ಷಿಸಿದವರೂ ಅಲ್ಲ. "ನಾನಿನ್ನೂ ಯಕ್ಷಗಾನ ಕಲಾವಿದನಾಗಿಲ್ಲ. ಬಹಳ ಕಲಿಯುವುದಿದೆ" ಎಂಬ ಪ್ರಾಂಜಲ ಮನಸ್ಸು ಅವರದ್ದು. ಆದರೂ ಅವರಿಗೆ ಅದೊಂದು ಗೌರವ ಅಧಿಕೃತವಾಗಿ ಇನ್ನೂ ಸಂದಿಲ್ಲವಲ್ಲ ಎಂಬ ನಿರಾಸೆ ನಮಗೆಲ್ಲ. ಸಲ್ಲುವ ಸಮಯದಲ್ಲಿ ಸಲ್ಲದ ಗೌರವ ಯಾವಾಗಲೋ ಸಂದರೆ ಆ ಇಳಿವಯಸ್ಸಿನ ಜೀವಕ್ಕೆ ಯಾವ ಸಂತೃಪ್ತಿ ಲಭಿಸೀತು?
ಇಂತಹ ಪ್ರಶ್ನೆಯನ್ನು ಫೇಸ್‌ಬುಕ್ ಮೂಲಕ ಕನ್ನಡಿಗರ ಮುಂದೆ ಇಟ್ಟವರು ತುಮಕೂರಿನಲ್ಲಿ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿರುವ, ಸ್ವತಃ ಯಕ್ಷಗಾನ ಕಲಾವಿದರೂ ಆಗಿರುವ ಡಾ.ಸಿಬಂತಿ ಪದ್ಮನಾಭ.
ತಪ್ಪು ನಮ್ಮ ಕಡೆಯಿಂದಲೇ ಇದೆ....ಸರಿಯಾದ ಸಮಯದಲ್ಲಿ ಸರಿಯಾಗಿ ಅವರನ್ನು ರೆಪ್ರೆಸೆಂಟ್ ಮಾಡುವಲ್ಲಿ ನಾವೇ ಸೋತಿದ್ದೇವೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿ ಡ್ಯೂಪ್ ಗಳನ್ನು ಬಳಸಿಕೊಂಡು ಹೀರೋಗಳಾದವರೆಲ್ಲ ನಮ್ಮ ಹುಡುಗರ ಕಣ್ಣಲ್ಲಿ ಆದರ್ಶ ನಾಯಕರಾಗುವ, ಎರಡು ಒಳ್ಳೆಯ ಕೃತಿಗಳನ್ನು ಕೊಡದ ಅನಾಮಧೇಯರು ಅದ್ಯಾವುದೋ ಪ್ರಶಸ್ತಿ ಹೊಡೆದುಕೊಂಡು ಕುಣಿದಾಡುವ ಈ ಕಾಲದಲ್ಲಿ, ಅಭಿನಯದ ಚತುರ್ವಿಧಗಳನ್ನೂ ಕರಗತ ಮಾಡಿಕೊಂಡು ಏಳು ದಶಕಗಳ ಕಾಲ ಯಕ್ಷರಾತ್ರಿಗಳನ್ನು ಬೆಳಗಿದ ದಶಾವತಾರಿಗೆ ಒಂದು ರಾಷ್ಟ್ರೀಯ ಗೌರವ ಕೊಡಬೇಕೆಂದು ದೊಡ್ಡವರಿಗೆ ಅನಿಸಿಲ್ಲವೆಂದರೆ ಅವರಿಗೆ ಅದನ್ನು ಸಮರ್ಪಕವಾಗಿ ಮನದಟ್ಟು ಮಾಡುವಲ್ಲಿ ನಾವು ಸೋತಿದ್ದೇವೆ ಎಂದೇ ಅರ್ಥ.. ಇರಲಿ, ನಾವು ಮತ್ತೆ ಕಾಯೋಣ ಎನ್ನುವ ಅಭಿಪ್ರಾಯ ಸಿಬಂತಿ ಅವರದ್ದು.
ಇದಕ್ಕೆ ಹಲವರು ದನಿಗೂಡಿಸಿದ್ದಾರೆ ಕೂಡ.
ಸೂರ್ಯಪ್ರಕಾಶ, ಸಾಧ್ವಿ ರಿತಂಬರಾ, ಮನೋಹರ ಜೋಶಿಯವರ ಜೊತೆಗೆ ಗೊವಿಂದಣ್ಣನ ಹೆಸರು ಇಲ್ಲದಿರುವುದೇ ಅವರಿಗೊಂದು ಪ್ರಶಸ್ತಿ! ಎಂದು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಪ್ರತಿಕ್ರಿಯಿಸಿದರೆ.
ಕೊನೆಯ ವಾಕ್ಯವೇ ಮುಖ್ಯ ಅನ್ನಿಸುತ್ತಿದೆ.ಪ್ರಯತ್ನಬೇಕು ಎಂದು ಸಲಹೆ ನೀಡಿದ್ದಾರೆ ವಿಷ್ಣು ಕನ್ನಡಗುಳಿ ಹೇಳಿದ್ದಾರೆ.
ಗೋವಿಂದ ಭಟ್ಟರು ಪದ್ಮ ಪ್ರಶಸ್ತಿಗೆ ಅರ್ಹ ವ್ಯಕ್ತಿ. ಮುಂದಾದರೂ ಘನ ಭಾರತ ಸರಕಾರ ಅವರನ್ನು ಪರಿಗಣಿಸಬೇಕು. ಒಂದು ಸಮಾಧಾನಕರ ವಿಷಯ ಎಂದರೆ ಶ್ರೀ ಗೋವಿಂದ ಭಟ್ಟರಿಗೆ ಈಗಾಗಲೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಅದು ಕೂಡ ರಾಷ್ಟ್ರೀಯ ಪ್ರಶಸ್ತಿ. ಇದುವರೆಗೆ ಯಕ್ಷಗಾನದಲ್ಲಿ ಕೇವಲ 7-8 ಕಲಾವಿದರಿಗೆ ಮಾತ್ರ ಸಿಕ್ಕಿದೆ ಎಂದಿದ್ದಾರೆ ಆನಂದ ಹಾಸ್ಯಗಾರ.
ಅಭಿಮಾನಿಗಳ ಕಡೆಯಿಂದ ಏನಾದರೂ ಪ್ರಯತ್ನ ಮಾಡಬಹುದೇ? ಎಂದು ಶಿವರಾಮ ಸಂಪತ್ತಿಲ ಪ್ರಶ್ನಿಸಿದ್ದಾರೆ.
2021ರಲ್ಲಿ ನಾನು , ಎಂ ಎಲ್ ಸಾಮಗರು ಮತ್ತು ಮಧುಸೂದನ ಅಲೆವೂರಾಯರು- ನಾವು ಮೂವರು ಸೇರಿಕೊಂಡು ಗೋವಿಂದ ಭಟ್ಟರ ಪರವಾಗಿ ಪದ್ಮಶ್ರೀ ಪ್ರಶಸ್ತಿಗಾಗಿ ನಾಮಿನೇಶನ್ ಹಾಕಿದ್ದೆವು. ಅದರಲ್ಲಿ ಗೋವಿಂದ ಭಟ್ಟರ ಯಕ್ಷ ಸಾಧನೆಯ ಬಗ್ಗೆ ಅವರು ಕೊಟ್ಟಿದ್ದ ನಮೂನೆ ಮಾದರಿಯಲ್ಲಿ ಎಲ್ಲವನ್ನೂ ನಮೂದಿಸಿದ್ದೆವು. ಆಗ ಪ್ರಶಸ್ತಿ ಬಂದಿರಲಿಲ್ಲ. ಆನಂತರ ನಾಲ್ಕು ವರ್ಷಗಳೇ ಕಳೆದು ಹೋದುವು....ಈ ಸಾರಿಯೂ ಇಲ್ಲ...ಕಾಯುತ್ತಿದ್ದೇವೆ ಎನ್ನುವುದು ದಿನೇಶ್ ನಾಯಕ್ ಅಭಿಪ್ರಾಯ.
ಗೋವಿಂದ ಭಟ್ಟರಿಗೆ ಪ್ರಶಸ್ತಿ ಬರಬೇಕಿತ್ತು. ಬರಲಿ ಎಂದು ಆಶಿಸೋಣ. ಆದರೆ, ನಮ್ಮ ಬಯಲುಸೀಮೆಯಲ್ಲೂ ಅಸಂಖ್ಯಾತ ಗೋವಿಂದಣ್ಣ, ಗೋವಿಂದಯ್ಯ, ಗೋವಿಂದ ನಾಯ್ಕ ಹೆಸರಿನ ಪ್ರತಿಭೆಗಳಿವೆ. ಅವರನ್ನು ತೀರಾ ಇತ್ತೀಚಿನವರೆಗೂ ಕೇಳುವವರೇ ಇರಲಿಲ್ಲ. ಕಳೆದ ಕೆಲ ವರ್ಷಗಳಿಂದ ಅಂಥವರ ಹೆಸರುಗಳು ಕಾಣಿಸಿಕೊಳ್ಳುತ್ತಿವೆ ಎಂಬುದೇ ಸಮಾಧಾನಕರ ಎನ್ನುವುದು ಚೀ.ಜ.ರಾಜೀವ್ ಅಭಿಮತ.
ಇವರಿಗೆ ಎಂದೋ ಪ್ರಶಸ್ತಿ ಲಭಿಸಬೇಕಿತ್ತು. ಮುಂದಾದರೂ ಸಿಗುವ ನಿರೀಕ್ಷೆ ಇಡೋಣ. ಅಭಿಮಾನಿಗಳ ಬಳಗದಿಂದ ಸರ್ಕಾರಕ್ಕೆ ಎಲ್ಲರ ಸಹಿಯೊಂದಿಗೆ ಮನವಿ ಪತ್ರ ಸಲ್ಲಿಸುವ ಏರ್ಪಾಡು ಮಾಡಿದರೆ ಹೇಗೆ? ಎಂದು ನಮಿತಾ ಶುಭಂಕರ್ ಪ್ರಶ್ನಿಸಿದ್ದಾರೆ.
