ಬೆಂಗಳೂರಿನಿಂದ ರಾಮೇಶ್ವರಂಗೆ ಹೋಗುವುದು ಹೇಗೆ? ನೋಡಬಹುದಾದ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ
ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಯಾಗಿರುವ ತಮಿಳುನಾಡಿನ ರಾಮೇಶ್ವರಂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೆಂಗಳೂರಿನಿಂದ ರಾಮೇಶ್ವರಂಗೆ ಹೋಗುವುದು ಹೇಗೆ ಎಂಬುದನ್ನು ತಿಳಿಯೋಣ.

Bengaluru to Rameshwaram: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ತಮಿಳುನಾಡಿನ ರಾಮೇಶ್ವರಂನಲ್ಲಿ ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಅನ್ನು ಲೋಕಾರ್ಪಣೆ ಮಾಡಿದ್ದರು. ಆಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಪಂಬನ್ ಸೇತುವೆ ಇದೀಗ ಎಲ್ಲರ ಆಕರ್ಷಣೆಯಾಗುತ್ತಿದೆ. 534 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಭಾರತೀಯ ರೈಲ್ವೆ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲು ಆಗಿದೆ. ಒಂದು ವೇಳೆ ನೀವೇನಾದರೂ ರಾಮೇಶ್ವಂಗೆ ಪ್ರವಾಸ ಕೈಗೊಳ್ಳುವ ಪ್ಲಾನ್ ಇದ್ದರೆ ಪಂಬನ್ ಸೇತುವೆ ವೀಕ್ಷಣೆಯ ಜೊತೆಗೆ ಈ ಭಾಗದಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳನ್ನು ನೋಡಬಹುದು, ಬೆಂಗಳೂರಿನಿಂದ ರಾಮೇಶ್ವರಂಗೆ ಹೋಗುವುದು ಹೇಗೆ ಎಂಬುದರ ಮಾಹಿತಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.
ಬೆಂಗಳೂರಿನಿಂದ ರಾಮೇಶ್ವರಂಗೆ ರೈಲಿನಲ್ಲಿ ಹೋಗುವುದು ಹೇಗೆ
ಬೆಂಗಳೂರಿನಿಂದ ರಾಮೇಶ್ವರಂಗೆ ಒಂದೇ ಒಂದು ನೇರ ರೈಲು ಸೇವೆ ಇದೆ. ಅದು ಕೂಡ ವಾರದಲ್ಲಿ ಒಮ್ಮೆ ಬೆಂಗಳೂರಿನಿಂದ ರಾಮೇಶ್ವರಂಗೆ ಸಂಚಾರ ನಡೆಸುತ್ತಿದೆ. ಈ ರೈಲಿನ ಹೆಸರು ಯುಬಿಎಲ್ ಆರ್ ಎಂಎಂ ಎಕ್ಸ್ ಪ್ರೆಸ್ (07355) ಬೆಂಗಳೂರಿನ ಯಶ್ವಂತಪುರ ಜಂಕ್ಷನ್ (ವೈಪಿಆರ್) ನಿಂದ ಶನಿವಾರ ಮಧ್ಯಾಹ್ನ 2.45ಕ್ಕೆ ಹೊರಟು ಮರು ದಿನ ಅಂದ್ರೆ ಭಾನುವಾರ ಸಂಜೆ 4.23ಕ್ಕೆ ರಾಮೇಶ್ವರಂ (ಆರ್ ಎಂಡಿ) ರೈಲು ನಿಲ್ದಾಣ ತಲುಪಲಿದೆ. ಬೆಂಗಳೂರಿನಿಂದ ರಾಮೇಶ್ವರಂ ತಲುಪಲು 596 ಕಿಲೋ ಮೀಟರ್ ಗಳ ಅಂತರವನ್ನು ತಲುಪಲು 13 ಗಂಟೆ 38 ನಿಮಿಷ ತೆಗೆದುಕೊಳ್ಳುತ್ತದೆ. ರೈಲು ಟಿಕೆಟ್ ಬೆಲೆ 435 ರೂಪಾಯಿಯಿಂದ ಆರಂಭವಾಗುತ್ತದೆ.
ಬೆಂಗಳೂರಿನಿಂದ ರಾಮೇಶ್ವರಂಗೆ ಬಸ್ ನಲ್ಲಿ ಹೋಗುವುದು ಹೇಗೆ
ಬೆಂಗಳೂರಿನಿಂದ ರಾಮೇಶ್ವರಂಗೆ ಸಾಕಷ್ಟು ಬಸ್ ಸೌಲಭ್ಯಗಳಿವೆ. ಸಾರಿಗೆ ಬಸ್ ಗಳಿಗಿಂತ ಖಾಸಗಿ ಬಸ್ ಸೇವೆಗಳು ಲಭ್ಯ ಇವೆ. ಶರ್ಮಾ ಟ್ರಾವೆಲ್ಸ್, ಸ್ವಾಮಿ ಅಯ್ಯಪ್ಪ ಟ್ರಾವೆಲ್ಸ್ , ಆರ್ ಜಿಪಿ ಟ್ರಾವೆಲ್ಸ್, ರಾಯಲ್ಸ್ ಟ್ರಾವೆಲ್ಸ್ ಹೀಗೆ ಹತ್ತಾರು ಖಾಸಗಿ ಬಸ್ ಸಂಸ್ಥೆಗಳು ಬೆಂಗಳೂರಿನಿಂದ ರಾಮೇಶ್ವರಂಗೆ ನೇರ ಬಸ್ ಸೇವೆಗಳನ್ನು ನೀಡುತ್ತಿವೆ. ಬಸ್ ಟಿಕೆಟ್ ಬೆಲೆ 849 ರೂಪಾಯಿಯಿಂದ ಆರಂಭವಾಗುತ್ತವೆ. ಈ ಬಸ್ ಗಳು ಮೆಜೆಸ್ಟಿಕ್ ನಿಂದ ಪ್ರಯಾಣವನ್ನು ಆರಂಭಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಆಯಾ ಬಸ್ ಸಂಸ್ಥೆಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಬೆಂಗಳೂರನಿಂದ ರಾಮೇಶ್ವರಂಗೆ ವಿಮಾನದಲ್ಲಿ ಹೋಗುವುದು ಹೇಗೆ
ಬೆಂಗಳೂರಿನಿಂದ ರಾಮೇಶ್ವರಂಗೆ ನೇರ ವಿಮಾನ ಸೇವೆಗಳು ಲಭ್ಯವಿಲ್ಲ. ಕಾರಣ ರಾಮೇಶ್ವರಂನಲ್ಲಿ ಯಾವುದೇ ರೀತಿಯ ವಿಮಾನ ನಿಲ್ದಾಣಗಳು ಇಲ್ಲ. ಆದರೆ ರಾಮೇಶ್ವರಂಗೆ ಅತಿ ಸಮೀಪದ ವಿಮಾನ ನಿಲ್ದಾಣವಾಗಿರುವ ಮಧುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ರಾಮೇಶ್ವರಂ ತಲುಪಬಹುದು. ಮಧುರೈನಿಂದ ರಾಮೇಶ್ವರಂಗೆ 147 ಕಿಲೋ ಮೀಟರ್ ಗಳ ಅಂತರವಿದೆ. ಇದನ್ನು ಹೊರತುಪಡಿಸಿದರೆ ತಿರುಚನಾಪಲ್ಲಿ ವಿಮಾನ ನಿಲ್ದಾಣ (174 ಕಿಮೀ) ಇಲ್ಲಿಗೆ ತಲುಪಿ ಬಳಿಕ ರಾಮೇಶ್ವರಂಗೆ ಹೋಗಬಹುದು.
ರಾಮೇಶ್ವರಂ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು
ಕಲಾಂ ನ್ಯಾಷನಲ್ ಮೆಮೋರಿಯಲ್, ರಾಮೇಶ್ವರಂ ದೇವಾಲಯ, ಪಂಬನ್ ಬ್ರಿಡ್ಜ್, ಧನುಷ್ಕೋಡಿ ಬೀಚ್ ಕಣ್ತುಂಬಿಕೊಳ್ಳಬಹುದು. ಜೊತೆಗೆ ಗಂಧಮದನ ಪರ್ವತ, ಅಗ್ನಿ ತೀರ್ಥಂ, ಜಡ ತೀರ್ಥಂ, ರಾಮ ಸೇತು, ರಾಮನಾಥಸ್ವಾಮಿ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ಪಂಚಮುಖಿ ಹನುಮಾನ್ ದೇವಾಲಯ, ವಿಲ್ಲೂಂಡಿ ತೀರ್ಥಂ, ಲಕ್ಷಣ ತೀರ್ಥಂ, ಜಟಾಯು ತೀರ್ಥಂ, ಶ್ರೀನಂಬುನಾಯಕಿ ಅಮ್ಮನ್ ದೇವಸ್ಥಾನ, ಡ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಭದ್ರಕಾಳಿಯಮ್ಮ ದೇವಾಲಯವನ್ನು ಕಾಣಬಹುದು.
