ಕನ್ನಡ ಸುದ್ದಿ  /  Karnataka  /  Panchamasali Protest: Panchamasali Lingayat Demands 2a Reservation Protest Rally At Hubballi And Gives August 22nd As Deadline To Meet The Demand

Panchamasali Protest: 22ರ ಮುನ್ನ ಮೀಸಲು ಕೊಡಿ; ಪ್ರತಿಭಟನೆ ತಡೆಗೆ ಪೊಲೀಸ್‌ ಬಲ ಬೇಡ!

ಪಂಚಮಸಾಲಿ ಸಮಾಜಕ್ಕೆ ಮೀಸಲು ಕೊಡದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗಾಗಬಾರದು ಎಂದರೆ, ಆ.22 ಇದಕ್ಕೆ ಡೆಡ್‌ಲೈನ್‌ ಎಂದು ಮಾಜಿ ಶಾಸಕ‌ ವಿಜಯಾನಂದ ಕಾಶಪ್ಪನವರ ಎಚ್ಚರಿಸಿದರು. ಪ್ರತಿಭಟನೆ ತಡೆಗೆ ಪೊಲೀಸ್‌ ಬಲ ಪ್ರಯೋಗ ಬೇಡ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ!

ಪಂಚಮಸಾಲಿ ಲಿಂಗಾಯಿತ 2ಎ ಮೀಸಲು ಹೋರಾಟ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಆಗಸ್ಟ್‌ 22ರ ಒಳಗೆ ಬೇಡಿಕೆ ಈಡೇರಿಸಬೇಕು ಎಂದು ಕೂಡಲಸಂಗಮ ಪಂಚಮ ಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ವೇಳೆ ಆಗ್ರಹಿಸಿದರು.
ಪಂಚಮಸಾಲಿ ಲಿಂಗಾಯಿತ 2ಎ ಮೀಸಲು ಹೋರಾಟ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಆಗಸ್ಟ್‌ 22ರ ಒಳಗೆ ಬೇಡಿಕೆ ಈಡೇರಿಸಬೇಕು ಎಂದು ಕೂಡಲಸಂಗಮ ಪಂಚಮ ಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ವೇಳೆ ಆಗ್ರಹಿಸಿದರು.

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಬಿಜೆಪಿಗೆ ಹಲವು ಸಂಕಷ್ಟಗಳು ಒಂದೊಂದಾಗಿ ಬಂದೆರಗತೊಡಗಿವೆ. ಹುಬ್ಬಳ್ಳಿ ಭಾಗದಲ್ಲಿ ಪಂಚಮಸಾಲಿ ಲಿಂಗಾಯಿತರಿಗೆ ಮೀಸಲು ನೀಡಬೇಕು ಎಂಬ ಹೋರಾಟ ಮತ್ತೆ ಚುರುಕಾಗಿದೆ.

ಪಂಚಮಸಾಲಿ ಲಿಂಗಾಯಿತ 2ಎ ಮೀಸಲು ಹೋರಾಟ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಆಗಸ್ಟ್‌ 22ರ ಒಳಗೆ ಬೇಡಿಕೆ ಈಡೇರಿಸಬೇಕು. ತಪ್ಪಿದರೆ ಆಗಸ್ಟ್‌ 23ರಂದು ಹಾವೇರಿ ಶಿಗ್ಗಾಂವಿಯಲ್ಲಿರುವ ಸಿಎಂ ನಿವಾಸದ ಎದುರೇ ಪ್ರತಿಭಟನೆ ನಡೆಸುವುದಾಗಿ ಕೂಡಲಸಂಗಮ ಪಂಚಮ ಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಟನಾ ರ್ಯಾಲಿ ಮತ್ತು ಧರಣಿ ಸತ್ಯಾಗ್ರಹಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡಬೇಕು ಎಂಬ ಬೇಡಿಕೆ ಈಡೇರಿಸುವಂತೆ ಸಮಾಜದ ಪ್ರಮುಖರು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಆಗಲಿದೆ. ಈಗಾಗಲೇ ಉಪಚುನಾವಣೆಗಳಲ್ಲಿ ಬಿಜೆಪಿಗೆ ಇದರ ಅರಿವು ಆಗಿದೆ. ಈಗಾಗಲೇ 27 ದಿನಗಳಿಂದ ನಿರಂತ ಪ್ರತಿಭಟನೆ ನಡೆಯುತ್ತಿದೆ. ಕಳೆದ ಒಂದೂವರೆ ವರ್ಷದಿಂದ ತೀವ್ರ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದು ಸ್ವಾಮೀಜಿ ವಿವರಿಸಿದರು.

<p>ಪಂಚಮಸಾಲಿ ಮೀಸಲು ಹೋರಾಟ ರ್ಯಾಲಿಯಲ್ಲಿ ಸಮಾಜದ ಗಣ್ಯರು</p>
ಪಂಚಮಸಾಲಿ ಮೀಸಲು ಹೋರಾಟ ರ್ಯಾಲಿಯಲ್ಲಿ ಸಮಾಜದ ಗಣ್ಯರು

ಬೊಮ್ಮಾಯಿ ನಮ್ಮವರೇ ಆದರೆ…

ಪಂಚಮಸಾಲಿ ಸಮಾಜದಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸಮಾಜದ ಬೇಡಿಕೆ ಈಡೇರಿಸುವುದಕ್ಕೆ ಕಾಲಾವಕಾಶ ನೀಡಲಾಗಿದೆ. ಅಷ್ಟರೊಳಗೆ ಅವರು ಅದನ್ನು ಈಡೇರಿಸಿದರೆ ಸರಿ. ಇಲ್ಲದೇ ಹೋದರೆ, ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಮತ್ತೊಂದು ಹಂತದ ಹೋರಾಟ ಖಚಿತ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್‌ ಬಲ ಪ್ರಯೋಗ ಬೇಡ!

ಪಂಚಮಸಾಲಿ ಸಮಾಜದ ಧ್ವನಿಯನ್ನು ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ ಮಾಡಬೇಡಿ. ಆ ರೀತಿಯ ಬಲ ಪ್ರಯೋಗದಿಂದ ಪ್ರಯೋಜನವಿಲ್ಲ. ನಮಗೆ ಆ ರೀತಿಯ ಭಯ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಮೂವರು ಶಾಸಕರಿದ್ದಾರೆ. ನಮ್ಮ ಸಮಾಜದ ಧ್ವನಿಯಾಗಿದ್ದವರನ್ನು ತುಳಿಯುವ ಕೆಲಸ ನಡೆಯುತ್ತಲೇ ಬಂದಿದೆ. ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ ಅನೇಕ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಜಗತ್ತಿಗೆ ಅನ್ನಕೊಟ್ಟ ನಮ್ಮ ಸಮಾಜವನ್ನೇ ಒಡೆಯುವ ಪ್ರಯತ್ನ ನಡೆದಿದೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಸಹಕಾರ ಬೇಕಾದರೆ ಬೇಡಿಕೆ ಈಡೇರಿಸಿ

ಮುಂದಿನ ಚುನಾವಣೆಯಲ್ಲಿ ನಿಮಗೆ ನಮ್ಮ ಸಹಕಾರ ಬೇಕು ಎಂದಾದರೆ ನಮ್ಮ ಸಮಾಜದ ಬೇಡಿಕೆಯನ್ನು ಈಡೇರಿಸಿ. ಇಲ್ಲದೇ ಹೋದರೆ ನಮ್ಮ ಸಮಾಜ ತಿರುಗಿ ಬೀಳಲಿದೆ. ನಮ್ಮ ಅಸಹಕಾರ ಏನು ಎಂಬುದನ್ನು ನೀವು ಅರಿಯಲಿದ್ದೀರಿ ಎಂದು ಎಚ್ಚರಿಸಿದ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಮ್ಮ ಸಮಾಜಕ್ಕೆ ಮೀಸಲು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಪೂರ್ವಕವಾಗಿ ಒತ್ತಾಯ ಮಾಡಿದರು.

ಬಹುಸಂಖ್ಯಾತರಾದರೂ ಅಲ್ಪಸಂಖ್ಯಾತರು. ಬೊಮ್ಮಾಯಿ‌ಯವರೇ ಇದೇ ಕೊನೆ ಹಂತ, ಆಗಸ್ಟ್​ 22ರೊಳಗೆ ನಮಗೆ ಮೀಸಲು ಕಲ್ಪಿಸಿಕೊಡಿ. ಕೊಟ್ಟ ಮಾತು ತಪ್ಪಿದರೆ ಬೊಮ್ಮಾಯಿಯವರೇ ನಿಮ್ಮ ಮನೆ ಮುಂದೆ ಹೋರಾಟ ಮಾಡುತ್ತೇವೆ. ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನೂ ಮನೆಗೆ ‌ಕಳಿಸುತ್ತೇವೆ. ಕೊಟ್ಟ ಮಾತು ತಪ್ಪಿದ ಕಾರಣ ಯಡಿಯೂರಪ್ಪನವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ. ಎಂತಹ ಹುಲಿಗಳ ಬಂದರೂ ನಾವು ನೋಡಿಕೊಳ್ಳುತ್ತೇವೆ. ನಮ್ಮ‌ ಕಡೆ ಬಸವರಾಜ ಪಾಟೀಲ ಯತ್ನಾಳ ಎನ್ನುವ ಹೆಬ್ಬುಲಿ ಇದೆ ಎಂದು ಕಾಶಪ್ಪನವರ ಗುಡುಗಿದರು.

ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಪಿ.ಸಿ. ಸಿದ್ದನಗೌಡ್ರ, ಎಸ್​.ಐ. ಚಿಕ್ಕನಗೌಡ್ರ, ಮುಖಂಡರಾದ ಮಂಜುನಾಥ ಕುನ್ನೂರ, ಹರಿಹರ ಮಾಜಿ ಶಾಸಕ ಎಚ್​.ಎಸ್​. ಶಿವಶಂಕರ, ವಿಜಯ ಕುಲಕರ್ಣಿ, ಅರವಿಂದ ಕಟಗಿ, ನಾಗರಾಜ ಗೌರಿ, ವೀರೇಶ ಉಂಡಿ, ಶಿವಲೀಲಾ ವಿನಯ ಕುಲಕರ್ಣಿ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡ ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ರಾಮನಗೌಡ ಪಾಟೀಲ ಯತ್ನಾಳ, ಗುರುರಾಜ ಹುಣಸೀಮರದ, ಶಿವಾನಂದ ಅಂಬಡಗಟ್ಟಿ ಮತ್ತು ಸಮಾಜದ ಇತರೆ ಗಣ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

IPL_Entry_Point