ಕನ್ನಡ ಸುದ್ದಿ  /  Karnataka  /  Panchamasali Reservation: Has Bsy Interfered With Panchmasali Reservation? Who Told What

Panchamasali Reservation: ಪಂಚಮಸಾಲಿ ಮೀಸಲಿಗೆ ಬಿಎಸ್‌ವೈ ಅಡ್ಡಿ ಪಡಿಸಿದ್ರಾ? ಯಾರು ಏನು ಹೇಳಿದ್ರು?

Panchamasali Reservation: ಪಂಚಮಸಾಲಿ ಮೀಸಲು ವಿಚಾರ ಮತ್ತೆ ಸದ್ದು ಮಾಡಿದೆ. ಪಂಚಮಸಾಲಿ ಸಮುದಾಯದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೀಡಿದ ಹೇಳಿಕೆ ಅದಕ್ಕೆ ಕಾರಣ. ಈ ಹೇಳಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರ ಬಿಂದು. ಹೀಗಾಗಿ ಪರ - ವಿರೋಧ ಹೇಳಿಕೆ ವ್ಯಕ್ತವಾಗಿದೆ. ವಿವರ ವರದಿ ಇಲ್ಲಿದೆ.

ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಬಿಎಸ್‌ವೈ, ಮುರುಗೇಶ್‌ ನಿರಾಣಿ
ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಬಿಎಸ್‌ವೈ, ಮುರುಗೇಶ್‌ ನಿರಾಣಿ

ಬೆಂಗಳೂರು: ಪಂಚಮಸಾಲಿ ಮೀಸಲು ವಿಚಾರ ಮತ್ತೆ ಸದ್ದು ಮಾಡಿದೆ. ಪಂಚಮಸಾಲಿ ಸಮುದಾಯದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೀಡಿದ ಹೇಳಿಕೆ ಅದಕ್ಕೆ ಕಾರಣ. ಈ ಹೇಳಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರ ಬಿಂದು. ಹೀಗಾಗಿ ಪರ - ವಿರೋಧ ಹೇಳಿಕೆ ವ್ಯಕ್ತವಾಗಿದೆ.

ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?

ಯಡಿಯೂರಪ್ಪನವರು ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಲು ಅಡ್ಡಿಯಾಗಿದ್ದಾರೆ. ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿದ್ದಾರೆ ಹೀಗಾಗಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಎಂದು ಕರೆ ಕೊಟ್ಟಿರುವುದು ಸರಿಯಲ್ಲ ಎಂದು ಪಂಚಮಸಾಲಿ ಸಮುದಾಯದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಎಸ್‌ವೈ ಪರ ಸಚಿವ ಮುರುಗೇಶ್‌ ನಿರಾಣಿ ಹೇಳಿಕೆ

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಡ್ಡಗಾಲು ಹಾಕಿಲ್ಲ. ಈ ಬಗ್ಗೆ ಕೇಳಿಬಂದಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್‌. ನಿರಾಣಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ನಿರಾಣಿ ಅವರು, "ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸಲು ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ ಹೊರುತು, ಅಡ್ಡಿಪಡಿಸುವ ಕೆಲಸವನ್ನು ಎಂದೂ ಮಾಡಿಲ್ಲ," ಎಂದು ಅವರು ಪುನರುಚ್ಚರಿಸಿದರು.

"ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯವನ್ನು ಅಭಿವೃದ್ಧಿಪಡಿಸುವ ಏಕೈಕ ಸದ್ದುದ್ದೇಶದಿಂದ ಪ್ರಾಧಿಕಾರ ರಚಿಸಿ 500 ಕೋಟಿ ರೂ. ಅನುದಾನವನ್ನು ಕೊಟ್ಟಿದ್ದರು. ಅದೇ ರೀತಿ 2ಎ ಮೀಸಲಾತಿ ಕೊಡುವ ಸಂಬಂಧ ಸಚಿವ ಸಂಪುಟ ಉಪಸಮಿತಿಯನ್ನು ಮಾಡಿದ್ದು ಸಹ ಯಡಿಯೂರಪ್ಪನವರು. ಅವರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಬಾರದು," ಎಂದು ನಿರಾಣಿ ತಿರುಗೇಟು ನೀಡಿದರು.

ಸಿಎಂ ಬೊಮ್ಮಾಯಿ ನೀಡಿದ ಭರವಸೆ ಏನು?

ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮೀಸಲು ಕಲ್ಪಿಸುವ ಸಂಬಂಧ ಅಧ್ಯಯನ ನಡೆಸುತ್ತಿರುವ ಆಯೋಗ ವರದಿ ನೀಡಿದ ನಂತರ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ.

ಮೀಸಲು ಸಂಬಂಧ ನಮ್ಮ ಸರ್ಕಾರ ಈಗಾಗಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಶಿಫಾರಸು ಮಾಡಿದೆ. ಆಯೋಗವು ಕುಲಶಾಸ್ತ್ರ ಅಧ್ಯಯನ ನಡೆಸುತ್ತಿದೆ. ಇನ್ನು ಕೆಲವು ಜಿಲ್ಲೆಗಳಿಗೆ ಭೇಟಿ ಕೊಡಬೇಕಾಗಿದೆ. ಇವೆಲ್ಲದಕ್ಕೂ ಸಮಯ ಅವಕಾಶ ಬೇಕಾಗುತ್ತದೆ. ಅನಿವಾರ್ಯ ಕಾರಣಗಳಿಂದ ವಿಳಂಬವಾದಾಗ ಕಾರಣಕ್ಕೆ ಟೀಕೆ ಮಾಡುವುದು ಸರಿಯಲ್ಲ ಎಂದು ಸಚಿವ ನಿರಾಣಿ ವಿವರಿಸಿದರು.

ಕಾಂಗ್ರೆಸ್‌ ವಿರುದ್ಧ ಕಿಡಿ

"ನಮ್ಮ ಸಿಎಂ ಎಂದರೆ ಕಾಮನ್‌ ಮ್ಯಾನ್‌ ಎನ್ನುವ ಮಟ್ಟಿಗೆ ಸರಳ ವ್ಯಕ್ತಿತ್ವ ಅವರದ್ದು. ಇಡೀ ಕರ್ನಾಟಕದ ಜನತೆಯ ನೆಚ್ಚಿನ ನಾಯಕರು ಅವರು. ಆದರೆ, ಕಾಂಗ್ರೆಸ್ ಪಕ್ಷದವರು ನಮ್ಮ ಮುಖ್ಯಮಂತ್ರಿ ವಿರುದ್ಧ ಸುಳ್ಳುಆರೋಪ ಮಾಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ," ಎಂದರು.

"ಬೊಮ್ಮಾಯಿ ಅವರ ವಿರುದ್ಧ ಮಾಡಿರುವ ಆರೋಪ ನಿರಾಧಾರ. ಪ್ರತಿಪಕ್ಷದವರು ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಗಮನ ಹರಿಸಲಿ, ಬೇರೆಯವರ ತಟ್ಟೆ ನೋಡುವ ಅಗತ್ಯವಿಲ್ಲ," ಎಂದು ಕಿಡಿಕಾರಿದರು.

ಇದಕ್ಕೂ ಮುನ್ನ, PAYCM Campaign: ರಾಜ್ಯ ರಾಜಧಾನಿ ಬೆಂಗಳೂರಿನ ತುಂಬ ಪೇಸಿಎಂ ಪೋಸ್ಟರ್‌ ಅಭಿಯಾನ (PAYCM Campaign) ಶುರುವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖವನ್ನು ಹೋಲುವ ಮುಖವೂ ಇದೆ. ಇದೇ ರೀತಿಯ ಪೋಸ್ಟರ್‌ - '40% ಸಿಎಂಗೆ ಸ್ವಾಗತ' - ಕಳೆದ ವಾರ ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಹೈದರಾಬಾದ್ 'ವಿಮೋಚನಾ ದಿನ' ಕಾರ್ಯಕ್ರಮದ ವೇಳೆ ಕಾಣಿಸಿದ್ದವು. PayCM Campaign: ಬೆಂಗಳೂರು ತುಂಬ ಪೇಸಿಎಂ ಅಭಿಯಾನ!; ಸಾಮಾಜಿಕ ತಾಣದಲ್ಲಿ ಪ್ರೊಮೋಟ್‌ ಮಾಡ್ತಿದೆ ಕಾಂಗ್ರೆಸ್‌; ಇಲ್ಲಿವೆ ಫೋಟೋ, ವಿಡಿಯೋ ಲಿಂಕ್

IPL_Entry_Point