ಕನ್ನಡ ಸುದ್ದಿ  /  Karnataka  /  Panchamasali Reservation: Make The Declaration Of Reservation At This Stage, Otherwise Face The Consequences; Panchmasali Swamiji Warns The Government

Panchamasali reservation: ಮೀಸಲಾತಿ ಘೋಷಣೆ ಈ ಕಲಾಪದಲ್ಲೇ ಮಾಡಿ, ಇಲ್ಲ ಪರಿಣಾಮ ಎದುರಿಸಿ; ಸರ್ಕಾರಕ್ಕೆ ಪಂಚಮಸಾಲಿ ಸ್ವಾಮೀಜಿ ಎಚ್ಚರಿಕೆ

Panchamasali reservation: ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರಿಸದೇ ಇದ್ದರೆ ಬಿಜೆಪಿಗೆ ಈ ಸಲ ಚುನಾವಣೆಯಲ್ಲಿ 74 ಕ್ಷೇತ್ರಗಳ ಗೆಲುವಿಗೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ನಿರತ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಬೆಂಬಲಿಗರು (ಕಡತ ಚಿತ್ರ)
ಪ್ರತಿಭಟನಾ ನಿರತ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಬೆಂಬಲಿಗರು (ಕಡತ ಚಿತ್ರ) (Basava Jaya Mruthyunjaya Swamiji page)

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ. ಪಂಚಮಸಾಲಿ ಮೀಸಲಾತಿ (Panchamasali reservation) ಮತ್ತು ಇತರೆ ಬೇಡಿಕೆ ಈಡೇರಿಸದೇ ಇದ್ದರೆ, ಈ ಚುನಾವಣೆಯಲ್ಲಿ ಬಿಜೆಪಿಗೆ ತೊಂದರೆ ಉಂಟಾಗಲಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಪಂಚಮಸಾಲಿ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರಿಸದೇ ಇದ್ದರೆ ಬಿಜೆಪಿಗೆ ಈ ಸಲ ಚುನಾವಣೆಯಲ್ಲಿ 74 ಕ್ಷೇತ್ರಗಳ ಗೆಲುವಿಗೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು.

ಪಂಚಮಸಾಲಿಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಪ್ರಮಾಣ ಮಾಡಿದ್ದರು. ಆದರೆ ಅವರು ಮತ್ತೆ ಮಾತು ತಪ್ಪಿದ್ದಾರೆ. ಆದ್ದರಿಂದ ಹೋರಾಟ ಅನಿವಾರ್ಯ ಎಂದು ಸ್ವಾಮೀಜಿ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಅವರ ನಂತರ ಪಂಚಮಸಾಲಿಗಳು ನಿಮ್ಮನ್ನು ನಂಬಿದ್ದರು. ಆದರೆ ನೀವು ಇದುವರೆಗೂ ನಮ್ಮ ಬೇಡಿಕೆ ಈಡೇರಿಸದಿರುವುದರಿಂದ ನಮಗೆ ಬೇಸರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡವಳಿಕೆ ಬಗ್ಗೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಾವು ಪಂಚಮಸಾಲಿ ಜನಗಣತಿ ಮಾಡಿಸಿದ್ದೇವೆ. ರಾಜ್ಯದ ಒಟ್ಟು ಮತದಾರರ ಪೈಕಿ ಶೇಕಡ 15ರಷ್ಟು ಪಂಚಮಸಾಲಿ ಜನರಿದ್ದಾರೆ. ನಮ್ಮನ್ನು ಕಡೆಗಣಿಸಿದರೆ ತೊಂದರೆ ತಪ್ಪಿದ್ದಲ್ಲ. ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರೂ ನಮ್ಮ ಬೇಡಿಕೆ ಈಡೇರಿಸುವ ಕಡೆಗೆ ಗಮನಕೊಡಬೇಕು. ಇಲ್ಲದೇ ಹೋದರೆ ಬಿಜೆಪಿಗೆ ಕಷ್ಟವಾಗಲಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪುನರುಚ್ಚರಿಸಿದರು.

ಚುನಾವಣಾ ಇನ್ನೂ ಘೋಷಣೆ ಆಗಿಲ್ಲ. ನೀತಿ ಸಂಹಿತೆಯೂ ಜಾರಿಗೆ ಬಂದಿಲ್ಲ. ಅದಕ್ಕೂ ಮೊದಲೇ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ವಿಚಾರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಬಿಜೆಪಿ ಸರ್ಕಾರದ ಕೊನೆಯ ಅಧಿವೇಶನ ನಡೆಯುತ್ತಿದೆ. ಇದರಲ್ಲಿಯೇ ನಮ್ಮ ಬೇಡಿಕೆ ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕು. ತಪ್ಪಿದರೆ ಈ ಸಲ ನಾವು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಬೇಕಾದೀತು ಎಂದು ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಂಚಮಸಾಲಿಗಳ ಮತ ಬೇಕಾದರೆ ಈ ಸಲದ ಅಧಿವೇಶನದಲ್ಲಿ ಎಲ್ಲ ಪಕ್ಷಗಳ ಶಾಸಕರು ಪಕ್ಷಬೇಧ ಮರೆತು ನಮಗೆ ಮೀಸಲಾತಿ ಒದಗಿಸುವಲ್ಲಿ ಧ್ವನಿ ಎತ್ತಬೇಕು. ಇಲ್ಲದೇ ಇದ್ದರೆ ಈ ಸಲದ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಪಂಚಮಸಾಲಿಗಳ ಅಸಮಾಧಾನ ಸ್ಫೋಟವಾಗಲಿದೆ ಎಂದು ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಮೀಸಲಾತಿ ಹೋರಾಟ

ಪಂಚಮಸಾಲಿ ಮೀಸಲಾತಿ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಆರಂಭಿಸಿದ ಹೋರಾಟಕ್ಕೆ ಮತ್ತೆ 30 ದಿನ ದಾಟಿದೆ. ಈ ಹೋರಾಟಕ್ಕೆ ಸಮಾಜದ ಗಣ್ಯರು ಮತ್ತು ಪ್ರಮುಖ ಸಂಘಟನೆಗಳು ನಿತ್ಯವೂ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದ್ದು ಗಮನಸೆಳೆದಿತ್ತು.

ಇದಾಗಿ ಕಳೆದ ತಿಂಗಳು ಮಧ್ಯಭಾಗದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ ಸಮಯದಾಯಕ್ಕೆ, ರಾಜ್ಯ ಸರ್ಕಾರ ನೀಡಿರುವ 2ಸಿ ಹಾಗೂ 2ಡಿ ಮೀಸಲಾತಿಗೆ ಹೈಕೋರ್ಟ್‌ ಬ್ರೇಕ್‌ ಹಾಕಿತ್ತು. ಮೀಸಲಾತಿ ವಿಚಾರದಲ್ಲಿ ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ, ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

IPL_Entry_Point