ಗಮನಿಸಿ, ಇವು ಮಕ್ಕಳ ಕಥೆಗಳಷ್ಟೇ ಅಲ್ಲ; ಸರಳ ಕನ್ನಡದಲ್ಲಿ ಮೂಲ ಶ್ಲೋಕಸಹಿತ ಪ್ರಕಟವಾಗುತ್ತಿವೆ ಪಂಚತಂತ್ರ ಮತ್ತು ಹಿತೋಪದೇಶ
ಮೂಲ ಶ್ಲೋಕಸಹಿತ ಪಂಚತಂತ್ರ ಮತ್ತು ಹಿತೋಪದೇಶ ಸರಳ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಅನುವಾದ ಮಾಡಿದ ಪಂಚತಂತ್ರ ಮತ್ತು ಹಿತೋಪದೇಶದಲ್ಲಿನ ವಿಶೇಷತೆ ಇಲ್ಲಿದೆ ಗಮನಿಸಿ.

ಐದು ಮೂಲತತ್ವಗಳನ್ನು ಹೊಂದಿರುವ ಸಂಸ್ಕೃತ ಮೂಲದ ಕಥೆ ಪಂಚತಂತ್ರ. ಹಿತೋಪದೇಶವು ಸಂಸ್ಕೃತ ಭಾಷೆಯ ಒಂದು ಭಾರತೀಯ ಪಠ್ಯ. ಪಂಚತಂತ್ರ ಮತ್ತು ಹಿತೋಪದೇಶ ಕಥೆಗಳ ಸಾಕಷ್ಟು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸರಳ ಕನ್ನಡದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಕಥೆಗಳ ಪುಸ್ತಕ ಅಂಗಡಿಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ ಅಮೆಜಾನ್ ಹಾಗೂ ಹರಿವು ಬುಕ್ಸ್‌ನಲ್ಲಿಯೂ ಲಭ್ಯವಿದೆ. ಆದರೆ, ಮೂಲ ಶ್ಲೋಕಸಹಿತ ಪಂಚತಂತ್ರ ಮತ್ತು ಹಿತೋಪದೇಶ ಸರಳ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು. ವಿಘ್ನೇಶ್ವರ್ ಭಟ್ ಅವರು ತಮ್ಮ ಫೇಸ್ಬುಕ್‌ನಲ್ಲಿ ಈ ಪುಸ್ತಕದ ಬಗ್ಗೆ ಹಂಚಿಕೊಂಡಿರುವ ಮಾಹಿತಿಯನ್ನು ನಾವು ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇವೆ.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಅನುವಾದ ಮಾಡಿದ ಪಂಚತಂತ್ರ ಮತ್ತು ಹಿತೋಪದೇಶದಲ್ಲಿನ ವಿಶೇಷತೆ ಏನು ಎಂಬುದನ್ನು ಅವರು ಬರೆದುಕೊಂಡಿದ್ದಾರೆ. ಆ ಅಂಶಗಳನ್ನು ನೀವಿಲ್ಲಿ ಗಮನಿಸಬಹುದು.
ಹಿತೋಪದೇಶವೂ ಈ ಸ್ವರೂಪದಲ್ಲಿ, ಇಷ್ಟು ಸರಳವಾಗಿ ಇರುವುದು ನನ್ನ ಗಮನದಲ್ಲಿಲ್ಲ. ಸಾರ್ವಕಾಲಿಕ ನೀತಿಯನ್ನು ಬೋಧಿಸುವ, ಮತ್ತೆ ಮತ್ತೆ ಓದಬೇಕಾದ ಈ ಎರಡೂ ಕೃತಿಗಳೂ ಕೇವಲ 'ಮಕ್ಕಳ ಕತೆಗಳ' ಗುಂಪಿಗೆ ಸೇರಿಸಲ್ಪಟ್ಟು, ಕೃತಿಗಳಿಗೂ ಓದುಗರಿಗೂ ಎಂಥ ಅನ್ಯಾಯವಾಯಿತಲ್ಲ ಎನಿಸುತ್ತದೆ.
ಕತೆಗಳ ಮೂಲಕ ಜೀವನಪಾಠಮಾಡುವ ನಮ್ಮ ಪರಂಪರೆಯ ಅತ್ಯಪೂರ್ವ ಶಿಕ್ಷಣ ಕ್ರಮದ ಪ್ರಭಾವ ಈ ಕೃತಿಗಳ ಮೂಲಕ ತಿಳಿದುಬರುತ್ತದೆ.
ಉಪಾಧ್ಯಾಯರ ಅನುವಾದ ಎಷ್ಟು ಸರಳವೂ ಸುಂದರವೂ ಔಚಿತ್ಯಪೂರ್ಣವೂ ಆಗಿದೆ ಎಂಬುದನ್ನು ಓದಿಯೇ ಆಸ್ವಾದಿಸಬೇಕು.
(ಔಚಿತ್ಯಪೂರ್ಣ ಎಂದು ಹೇಳುವುದಕ್ಕೂ ಕಾರಣವಿದೆ. ಈ ಎರಡೂ ಕೃತಿಗಳಲ್ಲಿ ಕೆಲವು ಕಡೆ ಶೃಂಗಾರ ಕಥೆಗಳೂ ಸ್ವಲ್ಪ ಅತಿಯೆನಿಸಬಹುದಾದ ವಿವರಗಳೂ ಇವೆ. ಆದರೆ ಅವುಗಳ ಅನುವಾದದ ಸಂದರ್ಭದಲ್ಲಿ ಉಪಾಧ್ಯಾಯರು ಬಹಳ ಎಚ್ಚರ ವಹಿಸಿರುವುದರ ಪರಿಣಾಮ, ಈ ಅನುವಾದಗಳನ್ನು ಆಬಾಲವೃದ್ಧರಾದಿಯಾಗಿ ಎಲ್ಲರೂ ಮುಜುಗರವಿಲ್ಲದೆ ಓದಬಹುದು.)
ಸಂದರ್ಭವಿಲ್ಲದಿರುವಲ್ಲೂ ಹಸಿಹಸಿ ವಿವರಗಳನ್ನೆಲ್ಲ ತುರುಕುವ ಪ್ರವೃತ್ತಿಯೇ ಎಲ್ಲೆಡೆ ಕಾಣಿಸುತ್ತಿರುವ ಕಾಲದಲ್ಲಿ ಉಪಾಧ್ಯಾಯರು ಹಿಡಿದ ಅನುವಾದದ ಕ್ರಮ ನಿಜಕ್ಕೂ ಶ್ಲಾಘನೀಯವಾದದ್ದು.
ಉಪಾಧ್ಯಾಯರು ಭಾಷೆಯನ್ನು ಬಳಸಿಕೊಳ್ಳುವ ಪರಿ ಆಶ್ಚರ್ಯವನ್ನುಂಟುಮಾಡುತ್ತದೆ. ಬಹುಶಃ, ಅವರು ಬರವಣಿಗೆಗೆ ಕುಳಿತಾಗ ಪದಗಳೇ ಬಂದು ತಮ್ಮನ್ನು ಬಳಸುವಂತೆ ದುಂಬಾಲು ಬೀಳುತ್ತವೇನೊ! - ಎಂಬಂತೆ ಅವರು ಸಂಸ್ಕೃತ-ಕನ್ನಡ, ಗ್ರಾಮ್ಯ-ಗ್ರಾಂಥಿಕ, ಆಡುನುಡಿ, ಎಲ್ಲವನ್ನೂ ಬಳಸುತ್ತಾರೆ. ಗಮನವಿಟ್ಟು ಓದುವವನಿಗೆ ಆ ಯಾವ ಶಬ್ದಗಳೂ ಅಪರಿಚಿತವೆನಿಸುವುದೇ ಇಲ್ಲ: ಸಹಜವಾಗಿ ಅವು ತಮ್ಮ ಅರ್ಥವಿಸ್ತಾರವನ್ನು ಓದುಗನೆದುರು ಹರವಿಕೊಳ್ಳುತ್ತವೆ.
ಆಕರ್ಷಕ ಭಾಷೆ, ಸಾಂದ್ರಶೈಲಿ, ನಿರೂಪಣೆಯಲ್ಲಿನ ರಭಸ, - ಹೀಗೆ ಹಲವು ಕಾರಣಗಳಿಂದ ಉಪಾಧ್ಯಾಯರ ಬರಹಗಳ ಓದು ನೀಡುವ ಖುಷಿಯನ್ನು ವಿವರಿಸಲು ಸಾಧ್ಯವಿಲ್ಲ; ಅನುಭವಿಸಬಹುದಷ್ಟೇ!
ಪಂಚತಂತ್ರ ಹಾಗೂ ಹಿತೋಪದೇಶಗಳೂ ಅಂಥ ವಿಶಿಷ್ಟ ಅನುಭವವನ್ನು ನೀಡುತ್ತವೆ - ಎಂಬುದರಲ್ಲಿ ಅನುಮಾನವಿಲ್ಲ.
ಈ ಎಲ್ಲ ಅಂಶಗಳನ್ನು ವಿಘ್ನೇಶ್ವರ್ ಭಟ್ ಅವರು ಹಂಚಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಪುಸ್ತಕಗಳು ನಿಮ್ಮ ಕೈ ಸೇರಲಿದೆ. ಏಪ್ರಿಲ್ ಎರಡನೇ ವಾರದಲ್ಲಿ ಬಿಡಗಡೆಯಾಗುವ ಈ ಎರಡೂ ಪುಸ್ತಕಗಳ ಮುಂಗಡ ಬುಕಿಂಗ್ ಆರಂಭವಾಗಿದೆ. Gpay/Phonepe ಮೂಲಕ ರೂ. 675.00 ಪಾವತಿಸಿ, ವಿಳಾಸವನ್ನು WhatsApp ಮಾಡಿ ನೀವು ಈ ಪುಸ್ತಕವನ್ನು ಖರೀದಿಸಬಹುದು. ಮುಂಗಡ ಬುಕಿಂಗ್ ಮಾಡುವವರಿಗೆ ಮುಖಬೆಲೆಯ ಮೇಲೆ 25% ರಿಯಾಯಿತಿ ದೊರೆಯಲಿದೆ.
ವಾಟ್ಸಾಪ್ ಸಂಖ್ಯೆ: 074836 81708

ವಿಭಾಗ