ಕನ್ನಡ ಸುದ್ದಿ  /  Karnataka  /  Paycm 40 Percent Accepted Here, I Will Put Up The Poster Arrest Me If You Can, Siddaramaiah

PayCM - 40% accepted here: ನಾನೇ ಪೋಸ್ಟರ್‌ ಅಂಟಿಸುತ್ತೇನೆ, ತಾಕತ್ತಿದ್ದರೆ ಬಂಧಿಸಿ ಎಂದು ಗುಡುಗಿದ ಸಿದ್ದರಾಮಯ್ಯ

ಪೇಸಿಎಂ ಇಲ್ಲಿ 40 ಪರ್ಸೆಂಟ್‌ ಸ್ವೀಕರಿಸಲಾಗುವುದು (PayCM - 40% accepted here) ಎಂದು ಬೆಂಗಳೂರಿನ ಬೀದಿಬೀದಿಗಳಲ್ಲಿ ಕಾಂಗ್ರೆಸ್‌ ಪಕ್ಷವು ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಇಂತಹ ಪೋಸ್ಟರ್‌ಗಳನ್ನು ತೆರವುಗೊಳಿಸುತ್ತಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ನಾನೇ ಪೋಸ್ಟರ್‌ ಅಂಟಿಸುವೆ, ತಾಕತ್ತಿದ್ದರೆ ನನ್ನನ್ನು ಮತ್ತು ನನ್ನ ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

PayCM - 40% accepted here: ನಾನೇ ಪೋಸ್ಟರ್‌ ಅಂಟಿಸುತ್ತೇನೆ, ತಾಕತ್ತಿದ್ದರೆ ಬಂಧಿಸಿ ಎಂದು ಗುಡುಗಿದ ಸಿದ್ದರಾಮಯ್ಯ (Sonu Mehta/HT PHOTO)
PayCM - 40% accepted here: ನಾನೇ ಪೋಸ್ಟರ್‌ ಅಂಟಿಸುತ್ತೇನೆ, ತಾಕತ್ತಿದ್ದರೆ ಬಂಧಿಸಿ ಎಂದು ಗುಡುಗಿದ ಸಿದ್ದರಾಮಯ್ಯ (Sonu Mehta/HT PHOTO) (HT_PRINT)

ಬೆಂಗಳೂರು: ಪೇಸಿಎಂ ಇಲ್ಲಿ 40 ಪರ್ಸೆಂಟ್‌ ಸ್ವೀಕರಿಸಲಾಗುವುದು (PayCM - 40% accepted here) ಎಂದು ಬೆಂಗಳೂರಿನ ಬೀದಿಬೀದಿಗಳಲ್ಲಿ ಕಾಂಗ್ರೆಸ್‌ ಪಕ್ಷವು ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಇಂತಹ ಪೋಸ್ಟರ್‌ಗಳನ್ನು ತೆರವುಗೊಳಿಸುತ್ತಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ನಾನೇ ಪೋಸ್ಟರ್‌ ಅಂಟಿಸುವೆ, ತಾಕತ್ತಿದ್ದರೆ ನನ್ನನ್ನು ಮತ್ತು ನನ್ನ ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ರಾಜ್ಯ ಬಿಜೆಪಿ ಸರಕಾರದ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಡಿಕೆ ಶಿವಕುಮಾರ್‌ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲಾ, ಅದರ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ. ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ ಬಿಜೆಪಿ ಕರ್ನಾಟಕ? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ? ಜನ ಬಂಡೆದಿದ್ದಾರೆ, ಎಚ್ಚರ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನವನ್ನುಬಿಜೆಪಿ ಅವರಷ್ಟು ದುರುಪಯೋಗ ಪಡಿಸಿಕೊಂಡ ರಾಜಕೀಯ ಪಕ್ಷ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯ ಬಿಜೆಪಿಯ ದ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧದ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಪೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ.

ನಾನು ಅಧಿಕಾರದಲ್ಲಿದ್ದಾಗಲೇ ಇಂಥವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಕರ್ನಾಟಕದ ಬಿಜೆಪಿಗೆ ಸಲ್ಲುತ್ತದೆ. ಏನು ಬಸವರಾಜ ಬೊಮ್ಮಾಯಿ ಅವರೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ? ಎಂದು ಸರಣಿ ಟ್ವೀಟ್‌ ಮಾಡಿದ್ದಾರೆ.

ಏನಿದು ಪೇಸಿಎಂ ಅಭಿಯಾನ?

ಇದು ಕರ್ನಾಟಕ ಕಾಂಗ್ರೆಸ್‌ ಪಕ್ಷವು ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ಆರಂಭಿಸಿದ ಹೊಸ ಅಭಿಯಾನ. ಪೇಟಿಎಂನ ಮಾದರಿಯಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ನಲ್ಲಿ ಪೇಸಿಎಂ ಇಲ್ಲಿ 40 ಪರ್ಸೆಂಟ್‌ ಸ್ವೀಕರಿಸಲಾಗುವುದು ಎಂದು ಬರೆದಿರುವ ಬ್ಯಾನರ್‌ಗಳನ್ನು ಬೀದಿಬೀದಿಗಳಲ್ಲಿ ಅಂಟಿಸಿತ್ತು. ಇದರ ಜತೆಗೆ ಮೊಬೈಲ್‌ ಸಂಖ್ಯೆಯನ್ನೂ ನಮೂದಿಸಲಾಗಿತ್ತು.

ಈ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ರಾಜ್ಯ ಸರಕಾರದ ವಿರುದ್ಧ ದೂರು ನೀಡುವ ಕಾಂಗ್ರೆಸ್‌ ಘಟಕದ ಹೊಸ ವೆಬ್‌ಸೈಟ್‌ಗೆ ಕಾಣಿಸುತ್ತದೆ. ಇಲ್ಲಿ ರಾಜ್ಯ ಸರಕಾರದ ವಿವಿಧ ಸ್ಕ್ಯಾಮ್‌ಗಳ ಕುರಿತು ವರದಿಗಳನ್ನು, ಮಾಹಿತಿಗಳನ್ನು ನೀಡಲಾಗಿದೆ. ಸ್ಕ್ಯಾನ್‌ ಮಾಡಿದ ತಕ್ಷಣ ಅಭಿಯಾನಕ್ಕೆ ಸೇರ್ಪಡೆಯಾಗಿದ್ದೀರಿ ಎಂಬ ಸಂದೇಶವೂ ಬರುತ್ತದೆ. ಈ ಮೂಲಕ ಹೆಚ್ಚಿನ ಜನರನ್ನು ಸೆಳೆಯಲು ಕಾಂಗ್ರೆಸ್‌ ಯತ್ನಿಸಿದೆ.

ಸಿಎಂ ಗರಂ

ಈ ರೀತಿ ಬೆಂಗಳೂರಿನ ನಗರದ ಬೀದಿಬೀದಿಗಳಲ್ಲಿ ಪೋಸ್ಟರ್‌ಗಗಳನ್ನು ಕಂಡಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಇದು ಸರಕಾರದ ಹೆಸರು ಕೆಡಿಸುವ ಷಡ್ಯಂತ್ರ ಎಂದಿದ್ದಾರೆ. ಜತೆಗೆ, ಪೊಲೀಸ್‌ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡು ತಕ್ಷಣ ತೆರವುಗೊಳಿಸುವಂತೆ ಆದೇಶಿಸಿದ್ದರು.