ಕನ್ನಡ ಸುದ್ದಿ  /  Karnataka  /  Paycm Campaign Is Not Against Lingayat Community Eshwar Khandre Clarifies

Eshwar Khandre:ಲಿಂಗಾಯತ ಧರ್ಮದ ವಿರುದ್ಧ ಪೇಸಿಎಂ ಅಭಿಯಾನ?: ಈಶ್ವರ್‌ ಖಂಡ್ರೆ ಹೇಳಿದ್ದೇನು?

ಪೇಸಿಎಂ ಅಭಿಯಾನವು ವೀರಶೈವ- ಲಿಂಗಾಯತ ಸೇರಿದಂತೆ ಯಾವುದೇ ಜಾತಿ, ಧರ್ಮದ ವಿರುದ್ಧವಾದ ಅಭಿಯಾನವಲ್ಲ. ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹಾಗೂ ಸ್ವಚ್ಛ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಸಲುವಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಈಶ್ವರ್‌ ಖಂಡ್ರೆ (ಸಂಗ್ರಹ ಚಿತ್ರ)
ಈಶ್ವರ್‌ ಖಂಡ್ರೆ (ಸಂಗ್ರಹ ಚಿತ್ರ) (Verified Twitter)

ಬೀದರ್:‌ ರಾಜ್ಯ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿರುವ ಪೇಸಿಎಂ ಅಭಿಯಾನ, ಲಿಂಗಾಯತ ಧರ್ಮದ ವಿರುದ್ಧ ಹಮ್ಮಿಕೊಂಡಿರುವ ಅಭಿಯಾನ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್‌ ನಾಯಕರು ಇದು ಭ್ರಷ್ಟಾಚಾರದ ವಿರುದ್ಧದ ಅಭಿಯಾನವೇ ಹೊರತು ಲಿಂಗಾಯತ ಧರ್ಮದ ವಿರುದ್ಧದ ಅಭಿಯಾನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಅಭಿಪ್ರಾಯವನ್ನು ಪುನರುಚ್ಛಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪೇಸಿಎಂ ಅಭಿಯಾನವು ವೀರಶೈವ- ಲಿಂಗಾಯತ ಸೇರಿದಂತೆ ಯಾವುದೇ ಜಾತಿ, ಧರ್ಮದ ವಿರುದ್ಧವಾದ ಅಭಿಯಾನವಲ್ಲ. ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹಾಗೂ ಸ್ವಚ್ಛ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಸಲುವಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರ್‌ ಖಂಡ್ರೆ, ಬಿಜೆಪಿ ಆಡಳಿತಾವಧಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು, ಬಿಬಿಎಂಪಿ, ವಿಧಾನಸೌಧದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿಯೊಂದೂ ಇಲಾಖೆಗಳ ಎಲ್ಲ ಹಂತಗಳಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಇದರ ವಿರುದ್ಧ ಕಾಂಗ್ರೆಸ್‌ ಪೇಸಿಎಂ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.

ರಾಜ್ಯದ ಜನತೆ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ರಾಜ್ಯದ ಜನರ ಕಷ್ಟಗಳನ್ನು ದೂರ ಮಾಡಬೇಕಾಗಿದ್ದ ರಾಜ್ಯ ಸರ್ಕಾರವೇ, ಭ್ರಷ್ಟಾಚಾರದಲ್ಲಿ ಮುಳುಗುವ ಮೂಲಕ ಅವರ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದೆ. ಭ್ರಷ್ಟಾಚಾರದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಈ ಅನ್ಯಾಯದ ವಿರುದ್ಧ ಕಾಂಗ್ರೆಸ್‌ ಪಕ್ಷ ಪೇಸಿಎಂ ಅಭಿಯಾನ ಹಮ್ಮಿಕೊಂಡಿದೆ ಎಂದು ಈಶ್ವರ್‌ ಖಂಡ್ರೆ ಇದೇ ವೇಳೆ ಸ್ಪಷ್ಟಪಡಿಸಿದರು.

ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶೇ. 40 ಕಮಿಷನ್ ಪಡೆಯುತ್ತಿರುವ ಕುರಿತು ಪ್ರಧಾನಿಗಳಿಗೆ ಪತ್ರ ಬರೆ‌ದಿದ್ದರು. ಕಾಂಗ್ರೆಸ್‌ ಕೂಡ ಈ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡುತ್ತಲೇ ಇದೆ. ಆದರೂ ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಈ ಕುರಿತು ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದು ಖಂಡ್ರೆ ಕಿಡಿಕಾರಿದರು.

ಪಿಎಸ್‌ಐ, ಉಪನ್ಯಾಸಕರ, ಶಿಕ್ಷಕರ, ಸಹಕಾರ ಬ್ಯಾಂಕ್‌ಗಳ ನೇಮಕಾತಿಗಳಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತಲೇ ಇದೆ. ಸದನದ ಒಳಗೂ ಈ ಕುರಿತು ನಾವು ಶ್ವನಿ ಎತ್ತಿದ್ದೇವೆ. ಆದರೆ ಎಮ್ಮೆ ಚರ್ಮದ ರಾಜ್ಯ ಬಿಜೆಪಿ ಸರ್ಕಾರ, ರಾಜ್ಯದ ಜನರ ಬೇಡಿಕೆಗೆ ಮಣಿಯುತ್ತಿಲ್ಲ ಎಂದು ಖಂಡ್ರೆ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ವೀರಶೈವ- ಲಿಂಗಾಯತ ಸಿಎಂಗೆ ಕಾಂಗ್ರೆಸ್ ಅವಮಾನ ಮಾಡಲಾಗುತ್ತಿದೆ ಎಂದು ಹೇಳುತ್ತಿರುವ ಬಿಜೆಪಿ, ಲಿಂಗಾಯತ‌ರನ್ನು ಹೇಗೆ ನಡೆಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಅಭಿಯಾನವನ್ನು ಒಂದು ಜಾತಿಗೆ ವಿರುದ್ಧವಾದ ಅಭಿಯಾನ ಎಂದು ಬಿಂಬಿಸುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.

ಈ ಹಿಂದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಜೈಲಿಗೆ ಕಳುಹಿಸಿದವರು ಇದೇ ಬಿಜೆಪಿಯವರು. 2ನೇ ಬಾರಿ ವಯಸ್ಸಾಗಿದೆ ಎಂಬ ನೆಪವೊಡ್ಡಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ, ಕುರ್ಚಿಯಿಂದ ಕೆಳಗಿಸಿದರು. ಮಠಗಳಿಗೆ ನೀಡುವ ಅನುದಾನದಲ್ಲಿ ಶೇ. 30ರಷ್ಟು ಲಂಚ ಪಡೆದ ಆರೋಪ ಬಂದಿದೆ. ಇದೆಲ್ಲಾ ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ ಎಂದೂ ಈಶ್ವರ್‌ ಖಂಡ್ರೆ ಇದೇ ವೇಳೆ ಖಾರವಾಗಿ ಪ್ರಶ್ನಿಸಿದರು.

IPL_Entry_Point