ಕನ್ನಡ ಸುದ್ದಿ  /  Karnataka  /  Peenya Flyover Traffic Jam: Is Toll Collection Right Despite Traffic Jam Questions Dasarahalli Mla Majunath In Karnataka Assembly Session

Peenya Flyover Traffic Jam: ಟ್ರಾಫಿಕ್‌ ಜಾಮ್‌ ಆದ್ರೂ ಟೋಲ್‌ ವಸೂಲಿ ಸರಿಯಾ? ಶಾಸಕರ ಪ್ರಶ್ನೆ; ಸರ್ಕಾರದ ಉತ್ತರ ಏನಿತ್ತು ಗಮನಿಸಿ..

Karnataka Assembly Session 2022: ವಿಧಾನ ಸಭೆ ಕಲಾಪದಲ್ಲಿ ಇಂದು ದಾಸರಹಳ್ಳಿ ಪೀಣ್ಯ ಟ್ರಾಫಿಕ್‌ ಜಾಮ್‌ (Peenya Flyover Traffic Jam) ವಿಚಾರ ಪ್ರಸ್ತಾಪವಾಗಿದೆ. ಹೆದ್ದಾರಿಯಲ್ಲಿ ಟೋಲ್‌ ಶುಲ್ಕ ಸಂಗ್ರಹ ಮಾಡಿಕೊಂಡು ಸಂಚಾರ ದಟ್ಟಣೆ ನಿರ್ವಹಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕ ಮಂಜುನಾಥ್‌. ಸರ್ಕಾರದ ಉತ್ತರ ಏನಿತ್ತು ಗಮನಿಸಿ…

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ದಾಸರಹಳ್ಳಿ ಶಾಸಕ ಮಂಜುನಾಥ್‌
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ದಾಸರಹಳ್ಳಿ ಶಾಸಕ ಮಂಜುನಾಥ್‌

ಬೆಂಗಳೂರು: ಪೀಣ್ಯ ದಾಸರಹಳ್ಳಿ ಟ್ರಾಫಿಕ್‌ ಜಾಮ್‌ ವಿಚಾರ ಇಂದು ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪವಾಗಿದೆ. ದಾಸರಹಳ್ಳಿ ಶಾಸಕ ಮಂಜುನಾಥ್‌ ಈ ವಿಚಾರ ಪ್ರಸ್ತಾಪಿಸಿದ್ದು ಅವರು ಕೇಳಿದ ಪ್ರಶ್ನೆಗೆ ಸರ್ಕಾರ ಸಿದ್ಧ ಉತ್ತರ ನೀಡಿತು. ಆದರೂ, ಟ್ರಾಫಿಕ್‌ ಜಾಮ್‌ ಮತ್ತು ಟೋಲ್‌ ವಸೂಲಿ ಕುರಿತ ಪ್ರಶ್ನೆಗಳಿಗೆ ಸರ್ಕಾರದ ಉತ್ತರ ಶಾಸಕರಿಗೆ ಸಮಾಧಾನ ಉಂಟುಮಾಡಿಲ್ಲ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಟೋಲ್‌ ವಿಚಾರಕ್ಕೆ ಪ್ರತ್ಯೇಕ ಪ್ರಶ್ನೆ ಕೇಳುವಂತೆ ಸೂಚಿಸಿದ್ದು ʻವಿಶೇಷʼ ಗಮನಸೆಳೆಯಿತು.

ಪ್ರಶ್ನೋತ್ತರ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮಂಜುನಾಥ್‌ ಅವರು ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ನಿರ್ಬಂಧದಿಂದ ಸರ್ವಿಸ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಚಾರ ಪ್ರಸ್ತಾಪಿಸಿದ್ದರು. ಅಲ್ಲದೆ, ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಏನು ಕ್ರಮ ಆಗಿದೆ ಎಂದು ಪ್ರಶ್ನಿಸಿದ್ದರು.

ಲೋಕೋಪಯೋಗಿ ಸಚಿವರ ಪ್ರತಿಕ್ರಿಯೆ

ಫ್ಲೈಓವರ್ ಕೇಬಲ್ ಕಟ್ ಆಗಿತ್ತು. ಹೀಗಾಗಿ ಸಂಚಾರ ನಿರ್ಬಂಧಿಸಲಾಗಿತ್ತು. ದುರಸ್ತಿ ಬಳಿಕ‌ ಮತ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಾರೀ ವಾಹನಗಳ ಸಂಚಾರಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ಡಿಸೆಂಬರ್ ಒಳಗೆ ಸಮಸ್ಯೆ ಬಗೆಹರಿಸಿ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಕೊಡ್ತೇವೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಉತ್ತರ ನೀಡಿದ್ದರು.

ಮುಖ್ಯಮಂತ್ರಿ ಏನು ಹೇಳಿದ್ರು

ಲೋಕೋಪಯೋಗಿ ಸಚಿವರು ಹೇಳಿದ ಪ್ರಕಾರ, ಪೀಣ್ಯ ಫ್ಲೈಓವರ್‌ ಮೇಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಾರೀ ವಾಹನಗಳ ಸಂಚಾರಕ್ಕೆ ಇನ್ನಷ್ಟು ಕ್ರಮಗಳ ಅಗತ್ಯವಿದೆ. ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬೆಂಗಳೂರಿಗೆ ಬಂದಾಗ ಈ ಫ್ಲೈಓವರ್‌ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇವೆ. ಭಾರೀ ವಾಹನಗಳ ಸಂಚಾರ ವಿಚಾರ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಅಗತ್ಯ ಕ್ರಮಗಳನ್ನು ಕೈಗೊಳ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಈ ವಿಚಾರವಾಗಿ ನಾವು ಫಾಲೋ ಅಪ್‌ ಮಾಡ್ತೇವೆ. ಆದಷ್ಟು ಬೇಗ ಪೀಣ್ಯ ಫ್ಲೈಓವರ್ ಸಮಸ್ಯೆ ಬಗೆಹರಿಸಿ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಟೋಲ್‌ ಯಾಕೆ ತಗೊಳ್ತೀರಿ ಎಂದ ಶಾಸಕ ಮಂಜುನಾಥ್‌

ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದು ಕೇಳಿದೆ. ವಿದೇಶಿ ಕಂಪನಿ ಐಕಿಯಾ ಅನ್ನೋ ಕಂಪನಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಹೋಗಿ ಉದ್ಘಾಟನೆ ಮಾಡಿದ್ದರು. ಎಲ್ಲರೂ ಆ ಭಾಗದಿಂದಲೇ ಬರ್ತಾ ಇದ್ದಾರೆ. ಇಲ್ಲಿರುವ ಸದಸ್ಯರು ಅನೇಕರು ಅದೇ ದಾರಿಯಾಗಿ ಬರ್ತಾರೆ. ಅಲ್ಲೊಂದು ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ದಾಸರ ಹಳ್ಳಿ ಕ್ಷೇತ್ರದಲ್ಲಿ ಸಂದಿ ಗೊಂದಿಗಳಲ್ಲಿ ಜನ ವಾಹನ ಪಾರ್ಕ ಮಾಡ್ತಿದ್ದಾರೆ.

ಅಲ್ಲಿ ಅಪಾರ್ಟ್‌ಮೆಂಟ್‌ಗಳಿವೆ. ಒಂದೊಂದರಲ್ಲಿ ಎರಡು ಸಾವಿರ ಮೂರು ಸಾವಿರ ಮನೆಗಳಿದ್ದಾವೆ. ಬೆಂಗಳೂರು ಇಂಟರ್‌ನ್ಯಾಷನಲ್‌ ಎಕ್ಸಿಬಿಷನ್‌ ಎಲ್ಲವೂ ಇವೆ. ಪೀಣ್ಯ ಇಂಡಸ್ಟ್ರಿಯವರು ಏನು ಮಾಡಬೇಕು? ಜನ ಏನು ಮಾಡಬೇಕು? ಎಲ್ಲಿ ಪಾರ್ಕಿಂಗ್‌ ಮಾಡಬೇಕು? ಎಂದು ಶಾಸಕ ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಅದೆಲ್ಲ ಸರಿ. ನಿಮ್ಮ ಕ್ಷೇತ್ರದಲ್ಲಿ ಅದೆಲ್ಲವೂ ಇದೆ…ಈಗ ಏನ್‌ ಮಾಡೋಣ? ಎಂದು ಕೇಳಿದರು.

ಪೀಣ್ಯ ಫ್ಲೈಓವರ್‌ ಸಮಸ್ಯೆ ಶುರುವಾಗಿ ಒಂಭತ್ತು ತಿಂಗಳ ಮೇಲಾಗಿದೆ. ಈ ದೇಶದ ನಾಲ್ಕನೇ ಹೆದ್ದಾರಿ ಅದು. ಅಲ್ಲಿ ಪರ್ಯಾಯ ವ್ಯವಸ್ಥೆ ಆಗಬೇಕಲ್ಲ. ಜನ ಏನ್‌ ಮಾಡಬೇಕು ಅಲ್ಲಿ? ಎಂದು ಶಾಸಕ ಮಂಜುನಾಥ್‌ ಮತ್ತೆ ಪ್ರಶ್ನಿಸಿದರು.

ಅಲ್ರೀ ನೀವು ಕೇಳಿರೋದು ನ್ಯಾಷನಲ್‌ ಹೈವೇ ವಿಚಾರದಲ್ಲಿ. ಸರ್ಕಾರ ಬಹಳ ಸ್ಪಷ್ಟವಾಗಿ ಉತ್ತರ ಕೊಟ್ಟಿದೆ. ಮುಖ್ಯಮಂತ್ರಿಯವರೇ ಉತ್ತರ ಕೊಟ್ಟಿದ್ದಾರೆ. ಗಡ್ಕರಿ ಅವರ ಹತ್ರ ಮಾತನಾಡಿದ್ದೇನೆ. ಶೀಘ್ರವೇ ಹೆವಿ ವೆಹಿಕಲ್‌ ಬಿಡೋದಕ್ಕೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಇನ್ನೇನಾಗಬೇಕು ಹೇಳಿ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಳಿದರು.

ಟೋಲ್‌ ಕೂಡ ವಸೂಲಿ ಮಾಡ್ತಾರೆ… ಕಿಲೋಮೀಟರ್‌ ಗಟ್ಟಲೆ ನಿಲ್ತಾರೆ ಅಲ್ಲಿ. ಇದು ಸರಿ ಅಲ್ಲ ಅಲ್ವಾ?. ಅಷ್ಟು ಟೋಲ್‌ ಕೊಟ್ಟು ಸಂಚಾರ ದಟ್ಟಣೆಯಲ್ಲಿ ಜನರೇಕೆ ನಲುಗಬೇಕು ಎಂದು ಶಾಸಕ ಮಂಜುನಾಥ್‌ ಪ್ರಶ್ನಿಸಿದರು.

ಇದಕ್ಕೆ ಕೂಡಲೇ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಟೋಲ್‌ ಬೇರೆ ವಿಷಯ ಆಗುತ್ತೆ. ಟೋಲ್‌ ವಿಚಾರ ಹೈವೆ ವಿಚಾರದೊಳಗೆ ಬರಲ್ಲ. ಅದನ್ನು ಬೇರೆಯೇ ಬರೆದುಕೊಡಿ ಎಂದು ಕಲಾಪ ಮುಂದುವರಿಸಿದ್ದು ರಾಜ್ಯದ ಗಮನಸೆಳೆಯಿತು.