ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು

ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು

ಹಿರಿಯ ಸಾಹಿತಿ ನಾ ಡಿಸೋಜ ಅವರ ಅಗಲಿಕೆಗೆ ಕನ್ನಡ ಸಾಹಿತ್ಯಾಸಕ್ತರು ಕಂಬನಿ ಮಿಡಿದಿದ್ದಾರೆ. ಪರಿಸರ ಕಾಳಜಿ ಇದ್ದ ಲೇಖಕರು, ವಯೋಸಹಜ ಕಾಯಿಲೆಯಿಂದಾಗಿ ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಸಾಹಿತಿಯ ಅಗಲಿಕೆಗೆ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ
ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ

ಮಂಗಳೂರು: ಕನ್ನಡದ ಹಿರಿಯ ಸಾಹಿತಿ ನಾ ಡಿಸೋಜ ಅವರು, ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪುತ್ರ ನವೀನ್ ನಾ ಡಿಸೋಜ ಖಚಿತಪಡಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು (ಜನವರಿ 6) ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದ ಹಿರಿಯ ಸಾಹಿತಿಯ ಅಗಲಿಕೆಗೆ ಗಣ್ಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಅವರನ್ನು ಕಳೆದುಕೊಂಡು ನಾಡಿಗೆ ನಷ್ಟವಾಗಿದೆ ಎಂದು ಸಾಹಿತ್ಯಸಕ್ತರು ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಲವರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಒಂದಿಷ್ಟೂ ಪ್ರತಿಷ್ಟೆ ಇಲ್ಲದ ಸರಳ ನಡವಳಿಕೆ: ವಸುಧೇಂದ್ರ

ಕನ್ನಡದಲ್ಲಿ ಕ್ರೈಸ್ತ ಧರ್ಮದವರು ಸಕ್ರಿಯರಾಗಿ ಸಾಹಿತ್ಯ ಬರೆದದ್ದು ಅಪರೂಪ. 'ನಾಡಿ' ಅವರು ವಿಫುಲವಾಗಿ ಬರೆದು ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ತಮ್ಮ ಬದುಕಿನ ಕೊನೆಯ ದಿನಗಳ ತನಕವೂ ಸಾಹಿತ್ಯ ರಚಿಸಿದ್ದಾರೆ. ಅವರೊಡನೆ ಎರಡು ಬಾರಿ ಒಡನಾಡಿದ್ದೆ. ಒಮ್ಮೆ ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯ ತೀರ್ಪುಗಾರರಾಗಬೇಕೆಂದು ಕೇಳಿಕೊಂಡಾಗ ಅತ್ಯಂತ ಸಂತೋಷದಿಂದ ಒಪ್ಪಿಕೊಂಡಿದ್ದರು. ನಾನು ಕೋರಿಕೊಂಡ ಡೆಡ್‌ಲೈನ್‌ಗೆ ಮುಂಚೆಯೇ ಫಲಿತಾಂಶ ಮತ್ತು ಮುನ್ನುಡಿ ಬರೆದುಕೊಟ್ಟು ವೃತ್ತಿಪರತೆಯನ್ನು ತೋರಿದ್ದರು. ಅವರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡಿದ್ದರು. ಒಂದಿಷ್ಟೂ ಪ್ರತಿಷ್ಟೆ ಇಲ್ಲದ ಸರಳ ನಡವಳಿಕೆ ಅವರದು. ಹಿರಿಯರ ಆತ್ಮಕ್ಕೆ ಅಂತಿಮ ನಮನಗಳನ್ನು ಸಲ್ಲಿಸುವೆ. ಎಂದು ಲೇಖಕ ವಸುಧೇಂದ್ರ ಬರೆದುಕೊಂಡಿದ್ದಾರೆ.

ನಿಮ್ಮ ನಗುಮುಖದ ನೆನಪು ಮಾಸುವುದಾದರೂ ಹೇಗೆ: ಗಜಾನನ ಶರ್ಮಾ

ನಾ ಡಿಸೋಜ ಸರ್, ನೀವು ಅಳಿದರೂ ನಿಮ್ಮ ನಗುಮುಖ ನಮ್ಮಂತಹ ಶಿಷ್ಯರ ನೆನಪಿನಿಂದ ಮಾಸದು. ನಾವು ನೋಡಿದ ಮೊದಲ 'ಸಾಹಿತಿ' ಎನ್ನಿಸಿಕೊಂಡ ವ್ಯಕ್ತಿಯೊಬ್ಬರ ನಗುಮುಖ. ನಾವು ಬಾಲಿಶವಾಗಿ ಬರೆದಾಗ ಕೂಡ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಹಿರಿಯ ಹಿತೈಷಿಯ ಆ ನಗುಮುಖ. ಅದು ಮಾಸುವುದಾದರೂ ಹೇಗೆ ಸರ್? ನೀವಿಲ್ಲದ ಸಾಗರಕ್ಕೆ ಕಳೆಯಿಲ್ಲ. ಶರಾವತಿಯ ಕಣಿವೆಗೆ ಹೊಳಪೇ ಇಲ್ಲ' ಎಂದರೆ ಉತ್ಪ್ರೇಕ್ಷೆಯಲ್ಲ. ದ್ವೀಪ, ಒಡ್ಡು, ಮುಳುಗಡೆ ಮುಂತಾದ ಕೃತಿಗಳ ಮೂಲಕ ಶರಾವತಿಯ ಮುಳುಗಡೆಯ ಕಥನಕ್ಕೆ ಒಂದು ಘನತೆಯನ್ನು ತಂದು ಕೊಟ್ಟವರು ನೀವು. ಕುಂಜಾಲು ಕಣಿವೆಯ ಕೆಂಪು ಹೂವಿನ ಕಂಪಿನ ಜೊತೆಗೆ 'ಕಾಡಿನ ಬೆಂಕಿ'ಯ ಅಪಾಯವನ್ನೂ ಕಂಡವರು. ನಮಗೆ ಬೆಳಕಿನ ನೆನಪನ್ನು ಕಟ್ಟಿಕೊಟ್ಟು ನೀವೇಕೆ ಇಷ್ಟುಬೇಗ ಕತ್ತಲೆಗೆ ಜಾರಿದಿರಿ? ಇನ್ನಷ್ಟು ಕಾಲ ಇರಬೇಕಿತ್ತು. ಸರ್, 'ಕಾಲಾಯ ತಸ್ಮೈ ನಮಃ'. ಹೋಗಿ ಬನ್ನಿ ಸರ್. ದೇವರು ತಮ್ಮ ಆತ್ಮಕ್ಕೆ ಸದ್ಗತಿಯನ್ನು ನೀಡಲಿ. ಆದರೆ ತಮ್ಮ ಚೈತನ್ಯ ಮಾತ್ರ ನಿತ್ಯ ನಿರಂತರ ನೆನಪಾಗಿ ಈ ನಿಮ್ಮ ಶಿಷ್ಯರ ಎದೆಯನ್ನು ಬೆಳಗುತ್ತಿರಲಿ ಎಂದು ಗಜಾನನ ಶರ್ಮಾ ಬರೆದುಕೊಂಡಿದ್ದಾರೆ.

ನಮ್ಮ ನಾಡಿನ ನಾ-ಡಿ ಇನ್ನಿಲ್ಲ: ಬೇಳೂರು ಸುದರ್ಶನ

ಎಬಿವಿಪಿ ವತಿಯಿಂದ ಸಂಕ್ರಾಂತಿ ಹಬ್ಬವನ್ನು ದಾವಣಗೆರೆಯ ಸೆರೆಮನೆಯಲ್ಲಿ ಆಚರಿಸಬೇಕೆಂದು ನಿರ್ಧರಿಸಿ ಸಾಹಿತಿ ನಾ ಡಿಸೋಜಾರನ್ನು ಕರೆದಿದ್ದೆವು. ಅವರು ವಾಪಸಾದ ಮೇಲೆ ಬರೆದ ಪತ್ರದಿಂದಲೇ ಅವರೆಂತಹ ಸೂಕ್ಷ್ಮ ಸಂವೇದನಾಶೀಲ ಎಂದು ಅರಿವಾಗುತ್ತದೆ. ಬಾಲ್ಯದಲ್ಲಿ ನನ್ನೂರು ಸಾಗರ ಎಂದಾಕ್ಷಣ ನನಗೆ ಅವರದೇ ನೆನಪು. ಕೊನೆಗೆ ಅವರ ಮನೆಗೆ ಒಮ್ಮೆ ಹೋಗಿ ಬಂದಾಗಲೇ ಸಮಾಧಾನ ಆಗಿತ್ತು. ಎಷ್ಟು ಸರಳ ಜೀವಿ, ಎಂತಹ ಸಜ್ಜನಿಕೆ. ಬರವಣಿಗೆಯಲ್ಲಿ ಎಂತಹ ಸಹಜತೆ. ಸಂಭಾಷಣೆಗಳಲ್ಲಿ ಏನೆಲ್ಲ ಕತೆಗಳು, ವ್ಯಥೆಗಳು... ನಿಜದಲ್ಲಿ ಅವರೊಬ್ಬ ಅಕ್ಷರ ಸಂತ; ಕನ್ನಡ ಚಿಂತನೆಯ ಮಹಾಸಮುದ್ರ. ನನ್ನ ಅಂತಿಮ ನಮನಗಳು ಎಂದು ಬೇಳೂರು ಸುದರ್ಶನ ನಮನ ಸಲ್ಲಿಸಿದ್ದಾರೆ.

ಪರಿಸರ ಕಾಳಜಿಯುಳ್ಳ ಕಥೆಗಾರ: ರಾಘವೇಂದ್ರ ವಿ ಕಾಂತಾನವರ

ನಾಡಿನ ಹಿರಿಯ ಸಾಹಿತಿ ನಾ.ಡಿಸೋಜ ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳು ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದ್ದರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿದ್ದರು. ಇಂತಹ ಹಿರಿಯ ಸಾಹಿತಿಗಳು ವಿಧಿವಶರಾಗಿದ್ದು ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರಿಗೆ ಭಗವಂತ ಸದ್ಗತಿ ನೀಡಲಿ ಎಂದು ರಾಘವೇಂದ್ರ ವಿ ಕಾಂತಾನವರ ಎಂಬವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪತ್ರ ನನಪಿಸಿಕೊಂಡ ಸಂಗಮೇಶ ಮೆಣಸಿನಕಾಯಿ

ಹೈಸ್ಕೂಲು ಓದುವಾಗ ಕತೆ ಬರೆಯುವ, ಪತ್ರಿಕೆಗೆ ಕಳುಹಿಸುವ ಹುಚ್ಚು ಹಿಡಿದುಬಿಟ್ಟಿತ್ತು. ನಮ್ಮ ಕತೆಯ ಜೊತೆ ನಾವೇ ಚಿತ್ರ ಬರೀಬೇಕಾ ಎಂಬ ಪ್ರಶ್ನೆ ಕಾಡುತ್ತಿತ್ತು. ತರಂಗದಲ್ಲಿ ಪ್ರಕಟವಾಗುತ್ತಿದ್ದ ಕತೆಗಳ ಜೊತೆಗೆ ಪ್ರಕಟವಾಗುತ್ತಿದ್ದ ಚಿತ್ರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಿದ್ದೆ. ಮೊದಲು ಚಿತ್ರಕಾರರಿಗೆ ನಮ್ಮ ಕತೆ ಕಳುಹಿಸಿ, ಚಿತ್ರ ಬರೆಸಿ, ತರಿಸಿಕೊಂಡು ಪತ್ರಿಕೆಗೆ ಕಳುಹಿಸಬೇಕೇ ಎಂಬ ಗೊಂದಲದಲ್ಲಿದ್ದಾಗ ಒಮ್ಮೆ 'ನಾ.ಡಿ.' ಅವರ ಕತೆಯ ಜೊತೆಗೆ ಅವರ ವಿಳಾಸವೂ ಪ್ರಕಟವಾಗಿತ್ತು. ನನ್ನೆಲ್ಲ ಸಂದೇಹಗಳನ್ನು ಒಂದು ಅಂಚೆ ಕಾರ್ಡ್‌‌ನಲ್ಲಿ ಬರೆದು ಕಳುಹಿಸಿದೆ. ಒಂದು ವಾರದಲ್ಲಿ ಒಂದೇ ಸಾಲಿನ ಉತ್ತರ ಬಂದಿತ್ತು. "ಪ್ರಿಯ ಸಂಗಮೇಶ್, ಪತ್ರಿಕೆಗೆ ಕತೆ ಕಳುಹಿಸು. ಚಿತ್ರ ಇತ್ಯಾದಿ ಅವರೇ ಸಿದ್ಧಪಡಿಸಿಕೊಳ್ಳುತ್ತಾರೆ" ಎಂದು ಬರೆದಿತ್ತು. ಆ ಪತ್ರವನ್ನು ಶಾಲೆಯಲ್ಲಿ ಶಿಕ್ಷಕರಿಗೆ, ಗೆಳೆಯರಿಗೆ ತಿಂಗಳವರೆಗೆ ತೋರಿಸುತ್ತಾ ಬೀಗಿದ್ದೆ. ನಂತರದಲ್ಲಿ ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿದ್ದಾಗ ಕಾರ್ಯನಿಮಿತ್ತ ಕರೆ ಮಾಡಿದ್ದೆ. ನನ್ನ ಪತ್ರ ಪುರಾಣವನ್ನೂ ಹೇಳಿದ್ದಾಗ ನಕ್ಕಿದ್ದರು. "ತುಂಬಾ ಸಂತೋಷ. ನಿಮ್ಮಂಥ ಸಾಹಿತ್ಯಿಕ, ಮಾನವೀಯ ಸಂವೇದನೆ ಉಳ್ಳ ಪತ್ರಕರ್ತರ ಸಂಖ್ಯೆ ಹೆಚ್ಚಬೇಕು" ಎಂದು ಹಾರೈಸಿದ್ದರು ಎಂದು ಸಂಗಮೇಶ ಮೆಣಸಿನಕಾಯಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Whats_app_banner