ಕನ್ನಡ ಸುದ್ದಿ  /  Nation And-world  /  People Spray Black Paint On A Karnataka Bus In Solapur

Border row: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆಗೆ ಮಸಿ ಬಳಿದ ಪುಂಡರು; ರಾಜ್ಯದ ಬ್ಯಾಂಕ್ ಮೇಲೂ ಕೆಂಗಣ್ಣು

ಕಲ್ಯಾಣ ಕರ್ನಾಟಕ ಸಾರಿಗೆ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಮಸಿ ಬಳಿದು ಮರಾಠಿ ಸಂಘಟನೆಯ ಜನರು ಪ್ರತಿಭಟಿಸಿದ್ದಾರೆ.

ಕಲ್ಯಾಣ ಕರ್ನಾಟಕ ಸಾರಿಗೆಗೆ ಮಸಿ ಬಳಿದ ಪುಂಡರು
ಕಲ್ಯಾಣ ಕರ್ನಾಟಕ ಸಾರಿಗೆಗೆ ಮಸಿ ಬಳಿದ ಪುಂಡರು (ANI)

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿವಿವಾದ ಮತ್ತಷ್ಟು ಹೆಚ್ಚಾಗುವಂತೆ ಕಾಣುತ್ತಿದೆ. ಉಭಯ ರಾಜ್ಯಗಳ ನಡುವಿನ ಗಡಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಇಂದು ಸೊಲ್ಲಾಪುರದ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಕರ್ನಾಟಕದ ಬಸ್‌ಗೆ ಮಸಿ ಬಳಿದಿದ್ದಾರೆ.

ಕಲ್ಯಾಣ ಕರ್ನಾಟಕ ಸಾರಿಗೆ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಮಸಿ ಬಳಿದು ಮರಾಠಿ ಸಂಘಟನೆಯ ಜನರು ಪ್ರತಿಭಟಿಸಿದ್ದಾರೆ. ರಾಜ್ಯಗಳ ಗಡಿ ವಿವಾದದ ಬಗ್ಗೆ ರಾಜಕಾರಣಿಗಳ ಹೇಳಿಕೆಗಳ ನಡುವೆ, ಜನರ ಪ್ರತಿಭಟನೆ ಕೂಡಾ ತೀವ್ರ ಸ್ವರೂಪ ಪಡೆಯುತ್ತಿದೆ. ಇದರಿಂದಾಗಿ ಸಾರ್ವಜನಿಕ ಸ್ವತ್ತಿಗೆ ಹಾನಿಯಾಗುತ್ತಿದೆ.

ಉಭಯ ರಾಜ್ಯಗಳ ನಡುವೆ ಗಡಿ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಹೀಗಾಗಿ ಎರಡು ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಖಾಸಗಿ ವಾಹನಗಳ ಸಂಚಾರ ಕೂಡಾ ವಿರಳವಾಗಿದೆ.

ಈ ನಡುವೆ ನಾಸಿಕ್‌ನಲ್ಲಿರುವ ಕರ್ನಾಟಕ ಬ್ಯಾಂಕ್‌ ಶಾಖೆಯ ನಾಮಫಲಕ ಹಾಗೂ ಬಾಗಿಲಿಗೆ ಮಸಿ ಬಳಿದ ಘಟನೆಯೂ ವರದಿಯಾಗಿದೆ. ಮರಾಠಿ ಪುಂಡರು ಪುಂಡಾಟಿಕೆ ಪ್ರದರ್ಶಿಸಿದ್ದು, ಕೈಯಲ್ಲಿ ಭಗವಧ್ವಜ ಹಿಡಿದು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ನಿನ್ನೆ ರಾತ್ರಿ ಎಂಇಎಸ್ ಪುಂಡರು ಬೆಳಗಾವಿಯ ಬಸ್ ಡಿಪೋಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಮಸಿ ಬಳಿದು ದರ್ಪ ತೋರಿಸಿದ್ದರು. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ನಡುವೆ ಸೊಲ್ಲಾಪುರದ ಕರ್ನಾಟಕ ರಾಜ್ಯ ಸಾರಿಗೆಯ ಬಸ್‌ ಹಾಗೂ ಸಿಎಂ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ.

ನಿನ್ನೆಯಷ್ಟೇ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶರದ್‌ ಪವಾರ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕದಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಆಕ್ರಮಣ ನಿಲ್ಲಿಸಲು 24 ಗಂಟೆಗಳ ಗಡುವು ನೀಡಿದ್ದರು. ಎಲ್ಲಾದರೂ, ಈ ರೀತಿ ಮಾಡಲು ಸಾಧ್ಯವಾಗದೆ ಹೋದರೆ ನಾವು ತಾಳ್ಮೆಯಿಂದ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಆದರೆ, ಇದರ ನಡುವೆ ಮಹಾರಾಷ್ಟ್ರದಲ್ಲೂ ರಾಜ್ಯದ ಬಸ್‌ಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.

ಮಹಾರಾಷ್ಟ್ರದ ಗಡಿ ಕ್ಯಾತೆಯಿಂದ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಯಬೇಕಿದ್ದ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.

ಮಹಾರಾಷ್ಟ್ರವು, ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ರಾಜ್ಯದ ನಿಯಂತ್ರಣದಲ್ಲಿರುವ ಇತರ 80 ಮರಾಠಿ ಮಾತನಾಡುವ ಹಳ್ಳಿಗಳ ಸ್ಥಾನಮಾನದ ಕುರಿತು ಕರ್ನಾಟಕದೊಂದಿಗೆ ವಿವಾದದಲ್ಲಿ ಸಿಲುಕಿಕೊಂಡಿದೆ. ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮತ್ತೆ ಗಡಿ ವಿವಾದ ಭುಗಿಲೆದ್ದಿದೆ.