ಅಕ್ರಮ ಸಂಬಂಧ ಶಂಕೆ: ಅರೆಬೆತ್ತಲೆಯಾಗಿ ಕಂಬಕ್ಕೆ ಕಟ್ಟಿ ಹೊಡೆದಿದ್ದ ವ್ಯಕ್ತಿ ಸಾವು, ಹಾವೇರಿ ಜಿಲ್ಲೆಯ 9 ಮಂದಿ ಬಂಧನ
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ಅಕ್ರಮ ಸಂಬಂಧದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದೂ ಅಲ್ಲದೇ ಚಪ್ಪಲಿ ಹಾರ ಹಾಕಿದ್ದು, ಆತ ಮೃತಪಟ್ಟಿರುವ ಘಟನೆ ನಡೆದಿದೆ.
ಹಾವೇರಿ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ವ್ಯಕ್ತಿಯೊಬ್ಬರನ್ನು ಅರಬೆತ್ತಲೆಯಾಗಿ ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಅಮಾನವೀಯ ಘಟನೆ ನಡೆದಿದೆ.
ಗ್ರಾಮದ ಪ್ರಕಾಶ ಓಲೆಕಾರ (40) ಎಂಬುವನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೆ ಮೃತಪಟ್ಟದ್ದಾನೆ.
ಘಟನೆ ಹಿನ್ನೆಲೆ ಏನು
ಪಕ್ಕದ ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಮಹಿಳೆ ಸಂಬಂಧಿಗಳಾದ ಗದಿಗೆಪ್ಪ ಓಲೆಕಾರ, ಸುಭಾಸ ಓಲೆಕಾರ, ಬಸವರಾಜ ಓಲೆಕಾರ, ಪರಶುರಾಮ ಓಲೆಕಾರ, ಪ್ರಕಾಶ ಓಲೆಕಾರ, ಪುಷ್ಪಾ ಓಲೆಕಾರ, ಗಿರಿಜಮ್ಮ ಓಲೆಕಾರ, ಅಣ್ಣಪ್ಪ ಓಲೇಕಾರ, ಆಕಾಶ ಓಲೆಕಾರ ಸೇರಿ ಮನೆ ಎದುರಿನ ವಿದ್ಯುತ್ ಕಂಬಕ್ಕೆ ಕಟ್ಟಿ ಬತ್ತದ ಹುಲ್ಲಿನಿಂದ ಸುಟ್ಟು ಕಟ್ಟಿಗೆ ಇಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ನಂತರ ಚಪ್ಪಲಿ ಹಾರ ಹಾಕಿ ಬಾಯಲ್ಲಿ ಚಪ್ಪಲಿ ಇಟ್ಟು ಅಮಾನವಿಯ ಹಲ್ಲೆ ನಡೆಸಿದ್ದು, ಅದರ ಫೋಟೋ ವೈರಲ್ ಆಗಿದೆ.
ಹಲ್ಲೆಗೊಳಗಾದ ಪ್ರಕಾಶನನ್ನು ಹಾನಗಲ್ ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತಾದರೂ. ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ ಮೃತ ಪಟ್ಟಿದ್ದಾನೆ.
ಈ ಕುರಿತು ಹಾನಗಲ್ ಪೋಲಿಸ್ ಠಾಣೆಯಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲ 9 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಂದ ತನಿಖೆ
ಊರಿನಲ್ಲಿ ಅಕ್ರಮ ಸಂಬಂಧದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಪ್ರಕಾಶನಿಗೆ ನೆರೆ ಹೊರೆಯವರು ಸೂಚನೆ ನೀಡಿದ್ದರೂ ಆತನ ಸಂಬಂಧ ಮುರಿದುಕೊಂಡಿರಲಿಲ್ಲ. ಗುರುವಾರ ಮತ್ತೆ ಆತ ಮನೆಗೆ ಬಂದಾಗಲೇ ಕೆಲವರು ಕಾದು ಹಿಡಿದಿದ್ದಾರೆ. ಆತನನ್ನು ಅರೆಬೆತ್ತಲೆ ಮಾಡಿ ಚಡ್ಡಿಯಲ್ಲಿಯೇ ಕರೆದುಕೊಂಡು ಬಂದಿದ್ದಾರೆ. ಆನಂತರ ಅಲ್ಲಿ ಕಟ್ಟಿ ಹಾಕಿ ಮನಸೋ ಇಚ್ಛೇ ಥಳಿಸಿದ್ದಾರೆ. ಆನಂತರ ಚಪ್ಪಲಿ ಹಾರವನ್ನು ಹಾಕಿದ್ದಾರೆ. ಕೆಲಹೊತ್ತು ನೆರೆಹೊರೆಯವರು ಸೇರಿಕೊಂಡು ಆತನ ಮೇಲೆ ಹಲ್ಲೆ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಹಾನಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ಅಲ್ಲಿಂದ ಬಿಡಿಸಿದರು. ಅಲ್ಲದೇ ಆತನಿಂದ ಹೇಳಿಕೆ ದಾಖಲಿಸಿಕೊಂಡು ಕೂಡಲೇ ಆಸ್ಪತ್ರೆಗೂ ಕಳುಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಕಾಶ್ ಮೃತಪಟ್ಟಿದ್ದಾರೆ. ಬಳಿಕ ಆತನ ನೀಡಿದ್ದ ಮಾಹಿತಿ ಆಧರಿಸಿ 9 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ಕುರಿತು ತನಿಖೆ ಮುಂದುವರಿದಿದೆ. ಘಟನೆಯಲ್ಲಿ ಯಾರ ಪಾತ್ರ ಇದೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.