ವಿಕಲಚೇತನರು, ಹಿರಿಯ ನಾಗರೀಕರ ಎನ್‌ಜಿಒಗಳ ನೋಂದಣಿ ಮಾದರಿ ಬದಲು; ಕರ್ನಾಟಕದಲ್ಲಿ ಆನ್‌ಲೈನ್ ಪ್ರಮಾಣ ಪತ್ರ ಈಗ ಕಡ್ಡಾಯ
ಕರ್ನಾಟಕದಲ್ಲಿ ವಿಕಲಚೇತನರು, ಹಿರಿಯ ನಾಗರೀಕರ ಕುರಿತು ಕೆಲಸ ಮಾಡುವ ಸ್ವಯಂ ಸೇವಾ ಸಂಘಟನೆಗಳ ನೋಂದಣಿಯನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಕಡ್ಡಾಯವಾಗಿ ಮಾಡಿಸಬೇಕು. ಈ ಕುರಿತು ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು:ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಉಸ್ತುವಾರಿ, ಸೇವಾ ಚಟುವಟಿಕೆ ನೋಡಿಕೊಳ್ಳುತ್ತಿರುವ ಹಾಗೂ ವೃದ್ದಾಶ್ರಮ ನಡೆಸುತ್ತಿರುವ ಸಂಘಟನೆಗಳಿಗೆ ನೋಂದಣಿ ಮಾದರಿಯನ್ನು ಬದಲಾಯಿಸಲಾಗಿದೆ.ಮ್ಯಾನುಯಲ್ ಬದಲಿಗೆ ಆನ್‌ಲೈನ್ ಮೂಲಕವೇ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಾಡಿದೆ. ಇದಕ್ಕಾಗಿ ಕಡ್ಡಾಯವಾಗಿ ಸ್ವಯಂ ಸೇವಾ ಸಂಘಟನೆಗಳು ಹಾಗೂ ಸಂಸ್ಥೆಗಳು ಪಾಲಿಸಬೇಕಾದ ಸೂಚನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ನೋಂದಣಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿಯೂ ತಿಳಿಸಲಾಗಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ನೋಂದಣಿ ಪ್ರಮಾಣ ಪತ್ರ ಪಡೆಯಬೇಕು. ಕರ್ನಾಟಕದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಹಿಂದೆ ಮ್ಯಾನುಯಲ್ ಆಗಿ ವಿತರಿಸಲಾಗುತ್ತಿದ್ದ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ ಈ ಆಡಳಿತ ಇಲಾಖೆಯ ಸೇವಾ ಸಿಂಧು ಯೋಜನೆಯಡಿ ನೋಂದಣಿ ಮಾಡಿಸಲು ಆನ್‍ಲೈನ್ ತಂತ್ರಾಂಶ ಅಭಿವೃದ್ದಿ ಪಡಿಸಿದ್ದು, ಈ ತಂತ್ರಾಂಶ ಬಳಸಿ ಸ್ವಯಂ ಸೇವಾ ಸಂಸ್ಥೆಗಳಿಗೆ ನೋಂದಣಿ, ನವೀಕರಣ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹಿರಿಯ ನಾಗರಿಕರ ವೃದ್ದಾಶ್ರಮಗಳನ್ನು ನಡೆಸುತ್ತಿರುವ ಎಲ್ಲಾ ಅನುದಾನಿತ/ಅನುದಾನರಹಿತ ಸ್ವಯಂ ಸೇವಾ ಸಂಸ್ಥೆಗಳು ಆನ್‍ಲೈನ್ ಮೂಲಕ https://sevasindhu.karnataka.gov.in ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣೆ ಪ್ರಮಾಣ ಪತ್ರ ಪಡೆಯಬೇಕೆಂದು ಈ ಮೂಲಕ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.