ಕರ್ನಾಟಕದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ? ಶಿವಕುಮಾರ್‌ ಅವರನ್ನು ಹದ್ದುಬಸ್ತಿನಲ್ಲಿಡುವ ತಂತ್ರವೇ, ಸಿದ್ದರಾಮಯ್ಯ ನಂತರ ಸಿಎಂ ಯಾರು?
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ? ಶಿವಕುಮಾರ್‌ ಅವರನ್ನು ಹದ್ದುಬಸ್ತಿನಲ್ಲಿಡುವ ತಂತ್ರವೇ, ಸಿದ್ದರಾಮಯ್ಯ ನಂತರ ಸಿಎಂ ಯಾರು?

ಕರ್ನಾಟಕದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ? ಶಿವಕುಮಾರ್‌ ಅವರನ್ನು ಹದ್ದುಬಸ್ತಿನಲ್ಲಿಡುವ ತಂತ್ರವೇ, ಸಿದ್ದರಾಮಯ್ಯ ನಂತರ ಸಿಎಂ ಯಾರು?

ಕರ್ನಾಟಕದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ವಿವಿಧ ಸಚಿವರು ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಬೇಕೆಂದು ಬಹಿರಂಗವಾಗಿಯೇ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದು ಡಿಕೆ ಶಿವಕುಮಾರ್‌ ಅವರನ್ನು ಹದ್ದುಬಸ್ತಿನಲ್ಲಿಡುವ ತಂತ್ರ ಎಂಬ ಮಾತೂ ಕೇಳಿಬರುತ್ತಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಕರ್ನಾಟಕದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ? ಸಿದ್ದರಾಮಯ್ಯ ನಂತರ ಸಿಎಂ ಯಾರು?
ಕರ್ನಾಟಕದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ? ಸಿದ್ದರಾಮಯ್ಯ ನಂತರ ಸಿಎಂ ಯಾರು?

ಬೆಂಗಳೂರು: ಲೋಕಸಭಾ ಚುನಾವಣೆಗಳು ಮುಗಿದಿದ್ದು ಮತ್ತೆ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ವಿವಿಧ ವರ್ಗಗಳಿಗೆ ಸೇರಿದ ಸಚಿವರು ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಬೇಕೆಂದು ಬಹಿರಂಗವಾಗಿಯೇ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ವೀರಶೈವ ಲಿಂಗಾಯತ, ಎಸ್ ಸಿ, ಎಸ್‌ ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸಚಿವರು ಮೂವರು ಡಿಸಿಎಂಗಳ ಅಗತ್ಯವನ್ನು ಪ್ರತಿಪಾದಿಸುತ್ತಿದ್ದಾರೆ.

ಈ ಬೇಡಿಕೆಯನ್ನು ಮುಂದಿಡುತ್ತಿರುವ ಸಚಿವರೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಂಪಿಗೆ ಸೇರಿದವರು ಎನ್ನುವುದು ವಿಶೇಷ ಮತ್ತು ಕುತೂಹಲಕಾರಿಯಾಗಿದೆ. ಈ ಮಧ್ಯೆ ಪಕ್ಷದ ಹೈಕಮಾಂಡ್‌ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಿವಕುಮಾರ್‌ ಮಾತ್ರ ಏಕೈಕ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಆಗಾಗ್ಗೆ ಉಪಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪ ಮಾಡುತ್ತಿರುವುದು ಶಿವಕುಮಾರ್‌ ಅವರನ್ನು ಹದ್ದುಬಸ್ತಿನಲ್ಲಿಡುವ ತಂತ್ರದ ಒಂದು ಭಾಗ ಎಂದು ಸಿದ್ದರಾಮಯ್ಯ ಅವರ ಬಣದ ಮುಖಂಡರೊಬ್ಬರ ಅಭಿಪ್ರಾಯವಾಗಿದೆ. ಒಪ್ಪಂದದಂತೆ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಹುದ್ದೆಯನ್ನು ತ್ಯಾಗ ಮಾಡಬೇಕಾಗುತ್ತದೆ. ಇನ್ನು ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದ್ದು, ಪಕ್ಷ ಮತ್ತು ಸರ್ಕಾರದಲ್ಲಿ ಶಿವಕುಮಾರ್‌ ಅವರ ಪ್ರಭಾವವನ್ನು ತಡೆಯಲು ಸಿದ್ದರಾಮಯ್ಯ ಬಣವೇ ರೂಪಿಸಿರುವ ತಂತ್ರ ಇದಾಗಿದೆ ಎಂದೂ ಹೇಳಲಾಗುತ್ತಿದೆ.

ಸಮಾಜದ ಎಲ್ಲ ಸಮುದಾಯಗಳಿಗೂ ಅಧಿಕಾರ ಹಂಚಿಕೆಯಾದರೆ ಎಲ್ಲ ವರ್ಗಗಳೂ ಪಕ್ಷದ ಜೊತೆಗೆ ನಿಲ್ಲುತ್ತವೆ. ಆದರೆ ಕೆಲವೇ ಮಂದಿ ಮಾತ್ರ ಅಧಿಕಾರ ಅನುಭವಿಸುತ್ತಿದ್ದರೆ ಇದು ಸಾದ್ಯವಾಗದು ಎನ್ನುವುದು ಸಹಕಾರ ಸಚಿವ ಕೆ.ಎನ್‌,ರಾಜಣ್ಣ ಅವರ ನಿಲುವುವಾಗಿದೆ. ಮುಂದುವರೆದು ಅವರು ವೀರಶೈವ ಲಿಂಗಾಯತ, ಎಸ್ ಸಿ, ಎಸ್‌ ಟಿ ಮತ್ತು ಅಲ್ಪಸಂಖ್ಯಾತಗಳಿಗೆ ಸೇರಿದ ಮೂವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸಬೇಕೆಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದಾರೆ. ಇವರು ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎನ್ನುವುದು ಗಮನಾರ್ಹ ಸಂಗತಿ.

ಈ ಹಿಂದೆಯೂ ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿರುವುದನ್ನು ಅನೇಕ ಸಚಿವರು ಉದಾಹರಣೆಯಾಗಿ ನೀಡುತ್ತಾರೆ. ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರದ್ದೂ ಇದೇ ಅಭಿಪ್ರಾಯವಾಗಿದ್ದು ಹೆಚ್ಚು ಉಪಮುಖ್ಯಮಂತ್ರಿಗಳಿರುವುದು ಒಳ್ಳೆಯದು ಎಂದು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಆಸೆ ಎನ್ನುವುದು ಇರುತ್ತದೆ. ಲಿಂಗಾಯತ, ಅಲ್ಪಸಂಖ್ಯಾತ ಹಿಂದುಳಿದ ವರ್ಗ ಸೇರಿದಂತೆ ಪ್ರತಿಯೊದು ಸಮುದಾಯಕ್ಕೂ ನಮ್ಮವರೊಬ್ಬರು ಡಿಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ಸದ್ಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲಾಗಿದೆ. ಉಳಿದ ವರ್ಗಗಳ ಬೇಡಿಕೆಯನ್ನು ಈಡೇರಿಸಿದರೆ ತಪ್ಪೇನು ಎಂದೂ ಜಮೀರ್‌ ಪ್ರಶ್ನಿಸುತ್ತಾರೆ.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರತಿಕ್ರಿಯಿಸುತ್ತಾ ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಎಂಬ ಹುದ್ದೆ ಇಲ್ಲ. ಸಚಿವರ ಕಾರ್ಯಕ್ಷಮತೆಯನ್ನು ಆಧರಿಸಿ ಈ ಹುದ್ದೆಯನ್ನು ನೀಡಲಾಗುತ್ತದೆ. ದಲಿತ ವರ್ಗದಲ್ಲಿಯೂ ಈ ಹುದ್ದೆಯನ್ನು ನಿಭಾಯಿಸಲು ಅನೇಕ ಅರ್ಹರಿದ್ದಾರೆ ಎಂದು ಹೇಳುತ್ತಾರೆ.

ಶಿವಕುಮಾರ್‌ ಅವರನ್ನು ದುರ್ಬಲಗೊಳಿಸುವ ಹುನ್ನಾರವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾರು ಯಾರನ್ನೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರು ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇವರಷ್ಟೇ ಅಲ್ಲದೆ ಈ ಹಿಂದೆಯೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹಹೊಳಿ ಎಲ್ಲ ಸಮುದಾಯಗಳನ್ನು ಪಕ್ಷದ ಜೊತೆ ಜೋಡಿಸಬೇಕಾದರೆ ಇಂತಹ ಪ್ರಸ್ತಾವನೆಗಳನ್ನು ಹೈಕಮಾಂಡ್‌ ಪರಿಗಣಿಸಬೇಕು ಎಂದು ಹೇಳಿದ್ದರು. ಅವರೂ ಈ ಹುದ್ದೆಯ ಆಕಾಂಕ್ಷಿ ಎನ್ನುವುದು ಗುಟ್ಟೇನೂ ಅಲ್ಲ.

ಪಕ್ಷದ ಸರ್ಕಾರ ರಚನೆಯಾಗುವಾಗ ಶಿವಕುಮಾರ್‌ ಅವರೊಬ್ಬರೇ ಡಿಸಿಎಂ ಆಗಿರಬೇಕು. ಎರಡೂವರೆ ವರ್ಷದ ನಂತರ ಸಿಎಂ ಹುದ್ದೆಯನ್ನು ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕು ಎನ್ನುವುದು ಒಪ್ಪಂದದ ಭಾಗವಾಗಿತ್ತು.

ಸಿದ್ದರಾಮಯ್ಯ ಅವರಿಗೆ ಇನ್ನೂ 20 ತಿಂಗಳ ಅವಧಿಯಿದ್ದು, ಅಧಿಕಾರವನ್ನು ಬಿಟ್ಟುಕೊಡಲಿದ್ದಾರೆಯೇ ಎನ್ನುವುದನ್ನು ಈಗಲೇ ಹೇಳಲಾಗುವುದಿಲ್ಲ. ಅನಾಯಾಸವಾಗಿ ದಕ್ಕಿರುವ ಅಧಿಕಾರವನ್ನು ಯಾರೊಬ್ಬರೂ ಸುಲಭವಾಗಿ ತ್ಯಾಗ ಮಾಡಲಾರರು. 135 ಶಾಸಕರ ಬೆಂಬಲ ಇರುವುದರಿಂದ ಕಾಂಗ್ರೆಸ್‌ ಸರಕಾರ 5 ವರ್ಷ ಪೂರ್ಣಗೊಳಿಸುತ್ತದೆ ಎನ್ನುವುದಂತೂ ಸತ್ಯ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಶಿವಕುಮಾರ್‌ ಅಥವಾ ಮೂರನೇ ವ್ಯಕ್ತಿಯೂ ಕೂರಬಹುದು. ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ ಎನ್ನುವುದಂತೂ ಸತ್ಯ.

  • ವರದಿ: ಎಚ್.ಮಾರುತಿ, ಬೆಂಗಳೂರು

Whats_app_banner