Planet parade 2025: ಆಕಾಶದಲ್ಲಿ ಅತ್ಯದ್ಭುತ ದೃಶ್ಯ, ಇಂದು ಗ್ರಹಗಳ ಪೆರೇಡ್ ಸ್ಪಷ್ಟವಾಗಿ ಕಣ್ತುಂಬಿಕೊಳ್ಳಿ; ಅಪರೂಪದ ವಿದ್ಯಮಾನ ಹೀಗೆ ನೋಡಿ
Planet parade 2025: ಆಕಾಶದಲ್ಲಿ ಈ ಜನವರಿಯಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ "ಪ್ಲಾನೇಟ್ ಪೆರೇಡ್" ಜನವರಿ 25 ಅಂದರೆ ಇಂದು ಹೆಚ್ಚು ಸ್ಪಷ್ಟವಾಗಿ ಕಾಣಲಿದೆ. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಆಕಾಶದಲ್ಲಿ ಒಂದೇ ಸಾಲಿನಲ್ಲಿ (ಪರಿಪೂರ್ಣ ಸಾಲು ಅಲ್ಲ) ನೋಡಬಹುದಾಗಿದೆ.

Planet parade 2025: ಆಕಾಶದಲ್ಲಿ ಈ ಜನವರಿಯಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ "ಪ್ಲಾನೇಟ್ ಪೆರೇಡ್" ಜನವರಿ 25 ಅಂದರೆ ಇಂದು ಹೆಚ್ಚು ಸ್ಪಷ್ಟವಾಗಿ ಕಾಣಲಿದೆ. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಆಕಾಶದಲ್ಲಿ ಒಂದೇ ಸಾಲಿನಲ್ಲಿ (ಪರಿಪೂರ್ಣ ಸಾಲು ಅಲ್ಲ) ನೋಡಬಹುದಾಗಿದೆ. 'ಆರು ಗ್ರಹಗಳು - ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ -ಒಂದೇ ಸಾಲಿನಲ್ಲಿ ಕಾಣಿಸಲಿವೆ. ಇವು ತಾಂತ್ರಿಕವಾಗಿ ಒಂದೇ ಸಾಲಿನಲ್ಲಿ ಇರದೆ ಇದ್ದರೂ ನಮಗೆ ನೋಡುವಾಗ ಸರಿಸುಮಾರು ಒಂದೇ ಸಾಲಿನಲ್ಲಿ ಇರುವಂತೆ ಕಾಣಿಸುತ್ತವೆ. ನಿಜ ಹೇಳಬೇಕೆಂದರೆ ಈ ಗ್ರಹಗಳ ನಡುವೆ ಹಲವು ಮಿಲಿಯನ್ ಕಿಮೀಗಳ ಅಂತರ ಇರಲಿದೆ. ಈ ಗ್ರಹಗಳು ಫೆಬ್ರವರಿ ಅಂತ್ಯದವರೆಗೆ ಸರಿಸುಮಾರು ಹೀಗೆಯೇ ಇರುತ್ತವೆ. ಇದಲ್ಲದೆ, ಫೆಬ್ರವರಿ ಅಂತ್ಯದಲ್ಲಿ ಬುಧ ಗ್ರಹವು ಈ ಗ್ರಹಗಳ ವಿರುದ್ಧ ಸ್ಥಾನವನ್ನು ತಲುಪುತ್ತದೆ. ಫೆಬ್ರವರಿ 28 ರಿಂದ ಮಾರ್ಚ್ 12 ರವರೆಗೆ ಬುಧವು ಏಳು ಗ್ರಹಗಳ ಕಾಸ್ಮಿಕ್ ಪ್ರದರ್ಶನವನ್ನು ಪೂರ್ಣಗೊಳಿಸುತ್ತದೆ.
ಪ್ಲಾನೆಟ್ ಪೆರೇಡ್ 2025 ಬಗ್ಗೆ ವಿವರ
ನಿಜ ಹೇಳಬೇಕೆಂದರೆ ಇವುಗಳನ್ನು ಗ್ರಹಗಳ ಪಥ ಸಂಚಲನ ಎಂದು ಕರೆದರೂ ಇವು ಪರಿಪೂರ್ಣವಾಗಿ ಒಂದೇ ಸಾಲಿನಲ್ಲಿ ಇರುವುದಿಲ್ಲ. ಅವು ನಮ್ಮ ಸೌರವ್ಯೂಹದ ಕಕ್ಷೆಯ ಸಮತಲವನ್ನು ಅನುಸರಿಸುತ್ತವೆ. ಈ ಅಪರೂಪದ ಘಟನೆಯನ್ನು ಕಣ್ತುಂಬಿಕೊಳ್ಳಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ರೀತಿ ವ್ಯವಸ್ಥೆ ಇಲ್ಲದವರೂ ಚಿಂತಿಸಬೇಕಾಗಿಲ್ಲ. ಇವುಗಳಲ್ಲಿ ನಾಲ್ಕು ಗ್ರಹಗಳನ್ನು ಬರಿಗಣ್ಣಿನಲ್ಲೇ ಕಣ್ತುಂಬಿಕೊಳ್ಳಬಹುದು.
ಭಾರತದಾದ್ಯಂತ ಖಗೋಳಾಸಕ್ತರ ಗ್ರೂಪ್‌ಗಳು 2025ರ ಪ್ಲಾನೆಟ್ ಪೆರೇಡ್ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಇವುಗಳೊಂದಿಗೆ, ನೀವು ಗ್ರಹಗಳನ್ನು ನೋಡುವುದಲ್ಲದೆ ಗೆಲಕ್ಸಿಗಳು ಮತ್ತು ನೀಹಾರಿಕೆಗಳಂತಹ (ನಕ್ಷತ್ರಗಳ ನಡುವೆ ಕಂಡುಬರುವ ಬಾಹ್ಯಾಕಾಶದಲ್ಲಿ ಧೂಳು ಮತ್ತು ಅನಿಲದ ದೊಡ್ಡ ಮೋಡಗಳು) ಬಾಹ್ಯಾಕಾಶ ಅದ್ಭುತಗಳನ್ನು ನೋಡಬಹುದು. ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿಯೂ ಪ್ಲಾನೆಟ್‌ಗಳನ್ನು ಪೆರೇಡ್ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜನವರಿ 25ರಂದು ಸಂಜೆ 6.30 ಗಂಟೆಯ ಬಳಿಕ ಉಚಿತವಾಗಿ ಈ ಅದ್ಭುತ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು. ಗುರುಗ್ರಾಮ, ಮುಂಬೈ, ಡೆಹ್ರಾಡೂನ್‌ನಲ್ಲಿಯೂ ಇಂತಹ ವ್ಯವಸ್ಥೆ ಮಾಡಲಾಗಿದೆ.
ಬರೀಗಣ್ಣಲ್ಲಿ ನೋಡುವ ಅವಕಾಶ
ಈ ಆರು ಗ್ರಹಗಳ ಪ್ಲಾನೆಟ್ ಅಲೈನ್‌ಮೆಂಟ್ ಸಮಯದಲ್ಲಿ ನಾಲ್ಕು ಗ್ರಹಗಳನ್ನು ಬರಿಗಣ್ಣಿನಲ್ಲಿಯೇ ನೋಡಬಹುದು. ವಾಸ್ತವವಾಗಿ, ಗ್ರಹಗಳ ಜೋಡಣೆ ಅಥವಾ ಅಲೈನ್‌ಮೆಂಟ್ ಸಾಮಾನ್ಯ ಘಟನೆಯಾಗಿದೆ. ಆದರೆ ಇಲ್ಲಿ ವಿಶೇಷವೆಂದರೆ ಆರು ಗ್ರಹಗಳು ಒಂದೇ ಬಾರಿ ಕಾಣಿಸುತ್ತಿರುವುದು ಮಾತ್ರ ಅಪರೂಪದ ಖಗೋಳ ವಿದ್ಯಮಾನ. ಅದಕ್ಕಾಗಿಯೇ ಈ ಬಾರಿಯ ಪ್ಲಾನೆಟ್ ಪೆರೇಡ್ ನೋಡಲು ಕುರಿತು ಎಲ್ಲರೂ ವಿಶೇಷ ಆಸಕ್ತಿಯಿಂದ ಕಾಯುತ್ತಿದ್ದಾರೆ.
ವೀಕ್ಷಣೆ ಹೇಗೆ?
ಈ ಆಕಾಶ ಪ್ರದರ್ಶನವನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಸೂರ್ಯಾಸ್ತದ ಒಂದು ಗಂಟೆಯ ನಂತರ ಎಂದು ಮೈಕ್ರೊಬಯೋಲಜಿಸ್ಟ್‌ನಲ್ಲಿ ಪಿಎಚ್‌ಡಿ ಮಾಡಿರುವ ಡಾ. ಅನೂಪ್ ಸಿಂಗ್ ಹೇಳುತ್ತಾರೆ. ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಆ ದೃಶ್ಯಗಳನ್ನು ಸೆರೆಹಿಡಿಯಲು ಬಯಸುವವರು ಲಾಂಗ್ ಎಕ್ಸ್‌ಪೋಸರ್ ಶಾಟ್‌ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಪ್ಲಾನೆಟ್ ಪೆರೇಡ್‌ನ ಸ್ಪಷ್ಟ ಚಿತ್ರಣವನ್ನು ಪಡೆಯಲು ಇದು ಉಪಯುಕ್ತವಾಗಿದೆ.
"ಬೈನಾಕ್ಯುಲರ್ ಬಳಸಿದರೆ ಗುರು ಮತ್ತು ಅದರ ಚಂದ್ರರನ್ನು ನೋಡಬಹುದು, ದೂರದರ್ಶಕದ ಸಹಾಯದಿಂದ ಯುರೇನಸ್ ಮತ್ತು ನೆಪ್ಚೂನ್ ಅನ್ನು ನೋಡಬಹುದು" ಎಂದು ಬೆಂಗಳೂರು ಆಸ್ಟ್ರೋನಮಿ ಕ್ಲಬ್‌ನ ವಿಜಯ್ ಕಪೂರ್ ಹೇಳಿದ್ದಾರೆ. "ಕಡಿಮೆ ಮಾಲಿನ್ಯವಿರುವ ಪ್ರದೇಶಗಳಲ್ಲಿ ಗ್ರಹಗಳ ಗೋಚರತೆ ಹೆಚ್ಚಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ಪ್ಲಾನೆಟ್ ಪೆರೇಡ್ ವೀಕ್ಷಿಸಲು ಅತ್ಯುತ್ತಮ ಮೊಬೈಲ್ ಅಪ್ಲಿಕೇಷನ್‌ಗಳು
- ಸ್ಟಾರ್ ವಾಕ್
- ಸ್ಟಾರ್ ಟ್ರ್ಯಾಕರ್
- ಸ್ಕೈ ಮ್ಯಾಪ್
2025 ರಲ್ಲಿ ನಡೆಯುವ ಇತರ ಆಕಾಶ ಘಟನೆಗಳು
ಪ್ಲಾನೆಟ್ ಪೆರೇಡ್ 2025 ಜೊತೆಗೆ, ಈ ವರ್ಷ ಈ ಮುಂದಿನ ಖಗೋಳ ವಿದ್ಯಮಾನಗಳೂ ನಡೆಯಲಿವೆ.
1. ಸಂಪೂರ್ಣ ಚಂದ್ರಗ್ರಹಣ (ಮಾರ್ಚ್ 13-14)
2. ಗುರು-ಶುಕ್ರ ಸಂಯೋಗ (ಆಗಸ್ಟ್ 12)
3. ಸೂಪರ್ ಹಾರ್ವೆಸ್ಟ್ ಮೂನ್ (ಅಕ್ಟೋಬರ್ 6)
4. ಜೆಮಿನಿಡ್ ಉಲ್ಕಾಪಾತ (ಡಿಸೆಂಬರ್ 13-14)
