PM Modi: ಪ್ರಧಾನಿ ಮೋದಿ ಇಂದು ಬಂಡೀಪುರಕ್ಕೆ ಭೇಟಿ; 'ಪ್ರಾಜೆಕ್ಟ್ ಟೈಗರ್' 50 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ
ಇವತ್ತು (ಏ.9, ಭಾನುವಾರ) ಬೆಳಗ್ಗೆ 7 ಗಂಟೆಗೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ. ನಮೋ ಅವರ ಇಂದಿನ ಕಾರ್ಯಕ್ರಮಗಳ ವಿವರ ಹೀಗಿದೆ.
ಬೆಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ (Karnataka Assembly Elections) ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಬಂಡೀಪುರ (Bandipur) ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ (National Tiger Reserve) ಪ್ರದೇಶಕ್ಕೆ ಬೆಳಗ್ಗೆ 7 ಗಂಟೆಗೆ ಭೇಟಿ ನೀಡಲಿದ್ದಾರೆ.
ನಮೋ ಅವರ ಇವತ್ತಿನ ಕಾರ್ಯಕ್ರಮಗಳ ವಿವರಗಳನ್ನು ನೋಡುವುದಾದರೆ ನಿನ್ನೆ (ಏ.8) ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಿ, ಬಳಿಕ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ಗೆ ಆಗಮಿಸಿದ್ದರು.
ಇಂದು ಬೆಳಗ್ಗೆ 6.20ಕ್ಕೆ ಹೋಟೆಲ್ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ 7 ಗಂಟೆಗೆ ಆಗಮಿಸಲಿದ್ದಾರೆ. ಬಳಿಕ 7.15ಕ್ಕೆ ಬಂಡೀಪುರದಲ್ಲಿ ಸಫಾರಿ ನಡೆಸಲಿದ್ದಾರೆ. 9.30ರ ವರೆಗೆ ಸಫಾರಿ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗ್ಗೆ 11 ರಿಂದ 12 ಗಂಟೆಯವರಿಗೆ ಹುಲಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ‘ಪ್ರಾಜೆಕ್ಟ್ ಟೈಗರ್’ (Project Tiger) 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಇದೇ ವೇಳೆ ಅವರು ಇತ್ತೀಚಿನ ಹುಲಿ ಗಣತಿ ಡೇಟಾವನ್ನ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
'ಅಮೃತ್ ಕಾಲ' ನೀಲ ನಕ್ಷೆಯಲ್ಲಿ ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನವನ್ನು ಬಿಡುಗಡೆ ಮಾಡುತ್ತಾರೆ. ಜೊತೆಗೆ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಅನ್ನು ಸಹ ಉದ್ಘಾಟನೆ ಮಾಡಲಿದ್ದಾರೆ.
ಐಬಿಸಿಎ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಬೆಕ್ಕು ಹಾಗೂೂ ಜಾಗ್ವಾರ್ ಈ ಜಾತಿಗಳ ಪ್ರಾಣಿಗಳಿಗೆ ಆಶ್ರಯ ನೀಡುವ ಶ್ರೇಣಿಯ ದೇಶಗಳ ಸದಸ್ಯತ್ವದೊಂದಿಗೆ ಐಬಿಸಿಎಂ ಅನ್ನು ಆರಂಭಿಸಲಾಗುತ್ತಿದೆ.
ಪ್ರಧಾನಿ ಮೋದಿ ಅವರು ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ, ಪ್ರಾಣಿ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಮುಂಚೂಣಿಯಲ್ಲಿರುವ ಇಲ್ಲಿನ ಸಿಬ್ಬಂದಿ ಹಾಗೂ ಸ್ವಸಹಾಯ ಗುಂಪುಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗಡಿ ಪ್ರದೇಶದ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಆನೆ ಶಿಬಿರದ ಮಾವುತರು ಮತ್ತು ಕಾವಾಡಿಗರೊಂದಿಗೆ ಸಂವಾದ ನಡೆಸಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಮ್ಯಾನೇಜ್‌ಮೆಂಟ್ ಎಫೆಕ್ಟಿವ್‌ನೆಸ್ ಮೌಲ್ಯಮಾಪನದ 5 ನೇ ಆವೃತ್ತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹುಲಿ ಮೀಸಲು ಕ್ಷೇತ್ರ ನಿರ್ದೇಶಕರೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಲಿದ್ದಾರೆ.
2019 ರ ಜುಲೈನಲ್ಲಿ ಪ್ರಾಣಿಗಳ ಬೇಟೆಯನ್ನು ನಿಲ್ಲಿಸಲು, ಏಷ್ಯಾದಲ್ಲಿ ಕಳ್ಳಬೇಟೆ, ಅಕ್ರಮ ವನ್ಯಜೀವಿ ವ್ಯಾಪಾರವನ್ನ ಸಮರ್ಥವಾಗಿ ನಿಗ್ರಹಿಸಲು 'ಗ್ಲೋಬಲ್ ಲೀಡರ್‌ಗಳ ಒಕ್ಕೂಟ'ಕ್ಕೆ ಪ್ರಧಾನಿ ಕರೆ ನೀಡಿದ್ದರು.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಇವತ್ತು ಪ್ರಧಾನಿ ಮೋದಿ ಆಗಮಿಸಿದ್ದರೂ ಬಿಜೆಪಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಾಪಸ್ ಆಗಲಿದ್ದಾರೆ. ಮೂಲಗಳ ಪ್ರಕಾರ ಮಧ್ಯಾಹ್ನ 12.30ಕ್ಕೆ ಮೈಸೂರಿನಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಬಿಜೆಪಿ ಹಿರಿಯ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು.