Karnataka Election 2023: ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್‌ ಶೋ ವೇಳಾಪಟ್ಟಿಯೇ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್‌ ಶೋ ವೇಳಾಪಟ್ಟಿಯೇ ಬದಲಾವಣೆ

Karnataka Election 2023: ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್‌ ಶೋ ವೇಳಾಪಟ್ಟಿಯೇ ಬದಲಾವಣೆ

Modi Road Show Rescheduled: ಮೇ 6 ಹಾಗೂ 7ನೇ ತಾರೀಕಿನಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ ಶೋ ಕಾರ್ಯಕ್ರಮವಿದ್ದು, ನೀಟ್‌ ಪರೀಕ್ಷೆ ಹಿನ್ನೆಲೆಯಲ್ಲಿ ರೋಡ್‌ ಶೋ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಮೇ 7 ರಂದು ಭಾನುವಾರ 11.30ಕ್ಕೂ ಮೊದಲು ರೋಡ್‌ ಶೋ ಮುಗಿಸುವಂತೆ ರಾಜ್ಯ ಬಿಜೆಪಿಗೆ ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ ರೋಡ್​ ಶೋ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ ರೋಡ್​ ಶೋ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಹಿನ್ನೆಲೆಯಲ್ಲಿ ಮೇ 6 ಹಾಗೂ 7ನೇ ತಾರೀಕಿನಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಮೇ 7ನೇ ಭಾನುವಾರ, ನೀಟ್‌ ಪರೀಕ್ಷೆ ಇದ್ದು, ರೋಡ್‌ ಶೋದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ರೋಡ್‌ ಶೋ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಆ ಮೂಲಕ ಬೆಂಗಳೂರಿನ ಮೋದಿ ರೋಡ್‌ ಶೋ ಕಾರ್ಯಕ್ರಮದ ವೇಳಾಪಟ್ಟಿಯನ್ನು ಎರಡನೇ ಬಾರಿಗೆ ಮರುಹೊಂದಿಸಲಾಗಿದೆ.

ಈ ಮೊದಲು ಮೇ 7ರಂದು 26 ಕಿಲೋಮೀಟರ್‌ ಅಂತರದ ರೋಡ್‌ ಶೋ ನಿಗದಿಯಾಗಿತ್ತು, ಇದೀಗ ನೀಟ್‌ ಪರೀಕ್ಷೆಯ ಕಾರಣ ಈ ರೋಡ್‌ವನ್ನು ಒಂದು ದಿನ ಮುಂಚಿತವಾಗಿ ಅಂದರೆ ಮೇ 6 ರಂದು ನಡೆಸಲು ನಿರ್ಧರಿಸಲಾಗಿದೆ. ಮೇ 7ರಂದು ಕೇವಲ 8 ಕಿಲೋಮೀಟರ್‌ ರೋಡ್‌ ಶೋ ಇರಲಿದ್ದು, ಇದು 11.30ಕ್ಕೆ ಮುಕ್ತಾಯವಾಗಲಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಂಸದ ತೇಜಸ್ವಿ ಸೂರ್ಯ ʼನೀಟ್‌ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಬಿಜೆಪಿ ಘಟಕಕ್ಕೆ ಪ್ರಧಾನಿ ಆದೇಶ ನೀಡಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.

ʼಮೇ 7 ರಂದು ನೀಟ್‌ ಪರೀಕ್ಷೆ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿಜೀ ಅವರು 26ಕಿಲೋಮೀಟರ್‌ ರೋಡ್‌ವನ್ನು ಒಂದು ದಿನ ಮುಂಚಿತವಾಗಿ ಅಂದರೆ ಮೇ 6ಕ್ಕೆ ಮುಂದೂಡಲು ತಿಳಿಸಿದ್ದು, ಮೇ 7ಕ್ಕೆ ದೂರ ಶೋ ಅಂತರವನ್ನು ಕಡಿಮೆ ಮಾಡಿ 11.30ಕ್ಕೂ ಮೊದಲು ಮುಕ್ತಾಯಗೊಳಿಸುವಂತೆ ರಾಜ್ಯ ಬಿಜೆಪಿಗೆ ನಿರ್ದೇಶನ ಮಾಡಿದ್ದಾರೆʼ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಶೋಭಾ ಕರಂದ್ಲಾಜೆ ʼಮೇ 6, 7ರಂದು ನಡೆಯಲಿರುವ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಬೃಹತ್ ರೋಡ್ ಶೋ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆʼ ಎಂದು ತಿಳಿಸಿದ್ದಾರೆ.

ʼಭಾನುವಾರ ಮಧ್ಯಾಹ್ನ ನೀಟ್ ಪರೀಕ್ಷೆ ಇರುವುದರಿಂದ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ವಿಶೇಷ ಕಳಕಳಿ ಹೊಂದಿರುವ ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲು ಸೂಚಿಸಿದ್ದಾರೆ. ಭಾನುವಾರ ಯಾವುದೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರೆ ಅಂತಹ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದರೆ, ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಪೋಲಿಸರು ಬಿಡುತ್ತಾರೆ. ಈ ಕುರಿತಂತೆ ಪೊಲೀಸರೊಂದಿಗೆ, ಎಸ್‍ಪಿಜಿಯವರೊಂದಿಗೆ ಚರ್ಚಿಸಲಾಗಿದೆʼ ಎಂದಿದ್ದಾರೆ.

ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ

ʼನಾಳಿನ ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಅವರದೇ ಕಾರ್ಯಕರ್ತರ ಆ್ಯಂಬುಲೆನ್ಸ್‌ಗಳನ್ನು ರೋಡ್ ಶೋ ಮಾರ್ಗದಲ್ಲಿ ಓಡಿಸುವುದಾಗಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರೋಗಿಗಳಿರುವ ಆ್ಯಂಬುಲೆನ್ಸ್‌ಗಳನ್ನು ಪೊಲೀಸರು ಖುದ್ದು ಆಸ್ಪತ್ರೆಗಳವರೆಗೆ ಬಿಡುವಂತೆ ಮನವಿ ಮಾಡಲಾಗಿದೆʼ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಾಳಿನ ರೋಡ್‌ ಶೋ ವಿವರ

ʼಪ್ರಧಾನಮಂತ್ರಿಯವರು ನಾಳೆ (ಏಪ್ರಿಲ್‌ 6) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್‌ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕಿವರೆಗೆ 26.5 ಕಿ.ಮೀ ರೋಡ್ ಶೋ ನಡೆಸುತ್ತಾರೆ. ನಾಡಿದ್ದು ಭಾನುವಾರ ಬೆಳಿಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದವರೆಗೆ 8 ಕಿ.ಮೀ ರೋಡ್ ಶೋ ನಡೆಯಲಿದೆʼ ಎಂದು ವಿವರಿಸಿದರು.

ಈ ಮೊದಲು 36 ಕಿಲೋಮೀಟರ್‌ ಅಂತರದ ರೋಡ್‌ ಶೋವನ್ನು ಶನಿವಾರ ಒಂದೇ ದಿನ ಮಾಡುವುದಾಗಿ ನಿಶ್ಚಯಿಸಲಾಗಿತ್ತು ಹಾಗೂ ಅದರಲ್ಲಿ ಬೆಂಗಳೂರಿನ 17 ಕ್ಷೇತ್ರಗಳನ್ನು ಕವರ್‌ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಟ್ರಾಫಿಕ್‌ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೋಡ್‌ ಶೋವನ್ನು ಶನಿವಾರ ಹಾಗೂ ಭಾನುವಾರ ಎರಡು ದಿನಗಳಿಗೆ ವಿಂಗಡಿಸಲಾಗಿತ್ತು.