ಕನ್ನಡ ಸುದ್ದಿ  /  Karnataka  /  Pm Narendra Modi To Launch Shivamogga Airport Tomorrow. Five Things To Know

Shivamogga airport: ಪ್ರಧಾನಿ ನರೇಂದ್ರ ಮೋದಿಯಿಂದ ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಈ 5 ವಿಷಯಗಳು ತಿಳಿದಿರಲಿ

ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಬಿಎಸ್‌ ಯಡಿಯೂರಪ್ಪ ಹುಟ್ಟುಹಬ್ಬದ ದಿನವಾದ ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ದಾಣನವು ಶಿವಮೊಗ್ಗ ಜಿಲ್ಲೆ ಮತ್ತು ಸುತ್ತಮುತ್ತಲಿನ ಜನತೆಗೆ ವರದಾನವಾಗಲಿದೆ.

Shivamogga airport: ಪ್ರಧಾನಿ ಮೋದಿಯಿಂದ ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ
Shivamogga airport: ಪ್ರಧಾನಿ ಮೋದಿಯಿಂದ ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ (Twitter\MLASudhakar)

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ದಾಣವು ರಾಷ್ಟ್ರಕವಿ ಕುವೆಂಪು ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡಲಾಗುತ್ತದೆ. ನಾಳೆ ಪ್ರಧಾನಿ ಮೋದಿಯವರು ನೇರವಾಗಿ ಇದೇ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ.

ಶಿವಮೊಗ್ಗದ ಕುವೆಂಪು ವಿಮಾನದ ನಿಲ್ದಾಣದ ಕುರಿತು ಐದು ವಿಷಯಗಳು

  1. ನಾಳೆ ಈ ವಿಮಾನ ನಿಲ್ದಾಣದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಲ್ಯಾಂಡ್‌ ಆಗಲಿದ್ದಾರೆ. ಹೀಗಾಗಿ, ಕುವೆಂಪು ವಿಮಾನ ನಿಲ್ದಾಣದಲ್ಲಿ ಮೊದಲು ಲ್ಯಾಂಡ್‌ ಆದ ವಿಮಾನವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ವಿಮಾನ ನಿಲ್ದಾಣದಿಂದ ಯಾವೆಲ್ಲ ವಿಮಾನ ನಿಲ್ದಾಣಕ್ಕೆ ಯಾವ ವಿಮಾನಗಳು ಕಾರ್ಯನಿರ್ವಹಣೆ ಮಾಡಲಿವೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
  2. ಈ ವಿಮಾನ ನಿಲ್ದಾಣದ ನಿರ್ಮಾಣ ವೆಚ್ಚ ಸುಮಾರು 600 ಕೋಟಿ ರೂಪಾಯಿ. ವಿಮಾನ ನಿಲ್ದಾಣದ ಮೂಲಸೌಕರ್ಯಕ್ಕಾಗಿ ಇದರಲ್ಲಿ 449 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಉಳಿದ ಮೊತ್ತವು ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನಕ್ಕೆ ಬಳಕೆಯಾಗಿದೆ.
  3. ಶಿವಮೊಗ್ಗ ವಿಮಾನ ನಿಲ್ದಾಣವು ಕರ್ನಾಟಕದ 9ನೇ ದೇಶೀಯ ವಿಮಾನ ನಿಲ್ದಾಣ. ಈಗ ಬೆಂಗಳೂರು, ಮೈಸೂರು, ಬಳ್ಳಾರಿ, ಬೀದರ್‌, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮಂಗಳೂರುಗಳಲ್ಲಿ ವಿಮಾನ ನಿಲ್ದಾಣಗಳಿವೆ. ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ.
  4. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರಕಾರದ ಉದಾನ್‌ ಯೋಜನೆಯಡಿ ನಿರ್ಮಿಸಲಾಗಿದೆ. ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ದೊಡ್ಡ ರನ್‌ ವೇ ಹೊಂದಿರುವ ವಿಮಾನ ನಿಲ್ದಾಣವಾಗಿದೆ.
  5. ಆರಂಭದಲ್ಲಿ ಕರ್ನಾಟಕ ಸರಕಾರವು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಹೆಸರು ಇಡಲು ನಿರ್ಧರಿಸಿತ್ತು. ಆದರೆ, ರಾಜಕೀಯ ಬೇಡವೆಂದು ಬಳಿಕ ರಾಷ್ಟ್ರಕವಿ ಕುವೆಂಪು ಹೆಸರನ್ನು ಅಂತಿಮಗೊಳಿಸಲಾಗಿದೆ. ಅಂದಹಾಗೆ, ಈ ವಿಮಾನ ನಿಲ್ದಾಣವು ಲಾಂಚ್‌ ಆಗುವ ಫೆಬ್ರವರಿ 27, ಅಂದರೆ ನಾಳೆ ಬಿಎಸ್‌ ಯಡಿಯೂರಪ್ಪನವರ ಹುಟ್ಟುಹಬ್ಬವೂ ಹೌದು.

ಶಿವಮೊಗ್ಗ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಕಮಲದ ಅಲಂಕಾರ, ಮುಂಭಾಗದಲ್ಲಿ ಹುಲ್ಲುಹಾಸು, ಪ್ರಧಾನಿ ಬರುವ ರಸ್ತೆಗೆ ಹೊಸದಾಗಿ ಡಾಮರೀಕರಣ ಇತ್ಯಾದಿಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಜಿಲ್ಲೆಗೆ ನಾನಾ ಕಡೆಗಳಿಂದ ಜನರನ್ನು ಕರೆತರಲು ಸಾವಿರದ ಏಳುನೂರು ಕೆಎಸ್‌ಆರ್‌ಸಿ ಬಸ್‌ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಬಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಮೋದಿ ಆಗಮನದ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ವಿಮಾನದ ನಿಲ್ದಾಣವನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿಯ ಕ್ಲಬ್‌ ರೋಡ್‌, ಕಾಲೇಜ್‌ ರೋಡ್‌, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಕಿಂಡ ಗಲ್ಲಿ, ಕಪಿಲೇಶ್ವರ ರೈಲ್ವೆ ಗೇಟ್‌, ಶಿವಾಜಿ ಪಾರ್ಕ್‌, ಶಿವಚರಿತ್ರೆ ರೋಡ್‌, ಬಿಎಸ್‌ ಯಡಿಯೂರಪ್ಪ ರೋಡ್‌ ಮೂಲಕ ಮಾಲಿನಿ ಸಿಟಿಗೆ ತಲುಪಲಿದ್ದಾರೆ.

ಬೆಳಗಾವಿ ಚನ್ನಮ್ಮ ಸರ್ಕಲ್‌ನಿಂದ ಮಾಲಿನಿ ಸಿಟಿಯವರೆಗೆ ಭರ್ಜರಿ ರೋಡ್‌ ಶೋ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಹತ್ತು ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ರೋಡ್‌ ಶೋ ನಡೆಯುವ ಅಕ್ಕಪಕ್ಕದ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ನಾಲ್ಕೈದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

IPL_Entry_Point