Public transport ropeway: ನಾಳೆ ಕಾಶಿಯಲ್ಲಿ ಪ್ರಧಾನಿ ಮೋದಿ, ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇಗೆ ಶಂಕುಸ್ಥಾಪನೆ
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಲೋಕಸಭೆ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, ಅಲ್ಲಿ 645 ಕೋಟಿ ರೂ. ವೆಚ್ಚದ ಪ್ರಯಾಣಿಕ ರೋಪ್‌ವೇಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಾರಣಾಸಿ: ನಾಳೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಲೋಕಸಭೆ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, ಅಲ್ಲಿ 645 ಕೋಟಿ ರೂ. ವೆಚ್ಚದ ಪ್ರಯಾಣಿಕ ರೋಪ್‌ವೇಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ರೋಪ್‌ವೇ ಜತೆಗೆ 1,780 ಕೋಟಿ ರೂ. ಮೌಲ್ಯದ ವಿವಿದ ಯೋಜನೆಗಳಿಗೆ ಶಂಕುಸ್ಥಾಪನೆ/ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಮೈದಾನದಲ್ಲಿ ನಾಳೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
3.75-ಕಿಮೀ ಉದ್ದದ ವಾರಣಾಸಿ ಕ್ಯಾಂಟ್ ನಿಲ್ದಾಣದಿಂದ ಗೋಡೋಲಿಯಾ ರೋಪ್‌ವೇ ಐದು ನಿಲ್ದಾಣಗಳನ್ನು ಹೊಂದಿರುತ್ತದೆ. ಪ್ರವಾಸಿಗರು, ಯಾತ್ರಿಕರು ಮತ್ತು ವಾರಣಾಸಿಯ ನಿವಾಸಿಗಳು ಈ ರೋಪ್‌ವೇಯನ್ನು ಬಳಸಲು ಅವಕಾಶವಿದೆ.
"ಮೊದಲ ಹಂತದಲ್ಲಿ, ದೇಶದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇ ಕ್ಯಾಂಟ್‌ನಿಂದ ಕಾಶಿಯ ಗೋಡೋಲಿಯಾವರೆಗೆ ಕಾರ್ಯನಿರ್ವಹಿಸಲಿದೆ. ರೋಪ್‌ವೇ ಸಂಪೂರ್ಣಗೊಂಡು ಉದ್ಘಾಟನೆಯಾದ ಬಳಿಕ ಯಾತ್ರಿಗಳು ಗೋಡೋಲಿಯಾ, ಕಾಶಿ ವಿಶ್ವನಾಥ ದೇವಾಲಯ ಮತ್ತು ದಶಾಶ್ವಮೇಧ ಘಾಟ್‌ಗೆ ಹೋಗಲು ರೋಪ್‌ವೇ ಬಳಸಬಹುದು ಎಂದು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅಭಿಷೇಕ್ ಗೋಯಲ್ ಹೇಳಿದ್ದಾರೆ.
ಇದರ ನಿರ್ಮಾಣದ ಬಳಿಕ ಬೊಲಿವಿಯಾ ಮತ್ತು ಮೆಕ್ಸಿಕೊ ಸಿಟಿ ನಂತರ ಸಾರ್ವಜನಿಕ ಸಾರಿಗೆಗಾಗಿ ರೋಪ್‌ವೇ ಹೊಂದಿರುವ ವಿಶ್ವದ ಮೂರನೇ ದೇಶ ಭಾರತವಾಗಲಿದೆ ಎಂದು ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಯೋಜನಾ ನಿರ್ದೇಶಕ ಅನುರಾಗ್ ತ್ರಿಪಾಠಿ ಹೇಳಿದ್ದಾರೆ.
ನಾಳೆ ಪ್ರಧಾನಿಯು ಭೇಟಿ ಸಮಯದಲ್ಲಿ ರುದ್ರಾಕ್ಷ ಕನ್ವೆನ್ಷನ್ ಸೆಂಟರ್‌ನಲ್ಲಿ ಒನ್ ವರ್ಲ್ಡ್ ಟಿಬಿ ಸಮ್ಮಿಟ್‌ನಲ್ಲಿಯೂ ಮಾತನಾಡಲಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟಿಬಿ ಮುಕ್ತ ಪಂಚಾಯತ್ ಕಾರ್ಯತಂತ್ರಕ್ಕೂ ಚಾಲನೆ ನೀಡಲಿದ್ದಾರೆ. ಕ್ಷಯ ರೋಗಕ್ಕೆ ದೇಶಾದ್ಯಂತ ಚಿಕಿತ್ಸೆ ನೀಡಲು ಫ್ಯಾಮಿಲಿ ಸೆಂಟ್ರಿಕ್ ಕೇರ್ ಮಾಡೆಲ್ ಆರಂಭಿಸಲಾಗುತ್ತದೆ.
ಅಂದಹಾಗೆ, ನಾಳೆ ಕಾಶಿ ಭೇಟಿಯ ಬಳಿಕ ನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ವೈಟ್‌ಫೀಲ್ಡ್ ಮೆಟ್ರೋ ಹಳಿಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ದಾವಣಗೆರೆಗೆ ಭೇಟಿ ನೀಡಲಿದ್ದು, ಬಿಜೆಪಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ, ಬೆಳಗಾವಿಗೆ ಆಗಮಿಸಿದ್ದರು. ಫೆಬ್ರವರಿ 27 ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಬಳಿಕ ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದ್ದರು. ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡ ಹಾಗೂ ಹಳೆ ಮೈಸೂರು ಭಾಗವಾದ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದರು.