ಕನ್ನಡ ಸುದ್ದಿ  /  Karnataka  /  Police Seize Tiffin Boxes With Pics Of Ramesh Jarakiholi Close Aide In Belagavi

Ramesh Jarakiholi: ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ಭಾವಚಿತ್ರವಿದ್ದ ಟಿಫನ್ ಬಾಕ್ಸ್ ಗಳು ವಶ

ಬೆಳಗಾವಿ ಪೊಲೀಸರು ಇಂದು ಕಾರ್ಯಾಚರಣೆ ನಡೆಸಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಂಗ್ರಹಿಸಿಟ್ಟಿದ್ದ ಟಿಫನ್ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೆಲವು ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಮತದಾರರಿಗೆ ಸೀರೆ, ಟಿಫನ್ ಬಾಕ್ಸ್, ಟಿವಿ ಕುಕ್ಕರ್, ವಾಟರ್ ಕ್ಯಾನ್ ಹೀಗೆ ಹಲವು ವಸ್ತುಗಳನ್ನು ನೀಡುವ ಮೂಲಕ ಆಮಿಷವೊಡುತ್ತಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದ್ರೇಮನಿ ಗ್ರಾಮದ ಮನೆಯೊಂದರಲ್ಲಿ ಇಟ್ಟಿದ್ದ ಅಪಾರ ಸಂಖ್ಯೆಯ ಟಿಫಿನ್‌ ಬಾಕ್ಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಈ ಟಿಫಿನ್‌ ಬಾಕ್ಸ್‌ಗಳ ಮೇಲೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತರಾದ ನಾಗೇಶ ಮನ್ನೋಳಕರ ಅವರ ಭಾವಚಿತ್ರವಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹಿಂಡಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ ಮನ್ನೋಳಕರ ಈ ಬಾರಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮತದಾರರಿಗೆ ಆಮಿಷ ಒಡ್ಡಲು ಈ ಟಿಫಿನ್‌ ಬಾಕ್ಸ್ ಸಂಗ್ರಹಿಸಿ ಇಡಲಾಗಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕುದ್ರೇಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಸಾವಿರಾರು ಟಿಫಿನ್ ಬಾಕ್ಸ್ ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮತದಾರರಿಗೆ ಉಡುಗೊರೆಯಾಗಿ ನೀಡಲು ಮನೆಯಲ್ಲಿ ಟಿಫಿನ್ ಬಾಕ್ಸ್ ಗಳನ್ನು ಸಂಗ್ರಹಿಸಲಾಗಿತ್ತು. ನೀತಿ ಸಂಹಿತೆ ಉಲ್ಲಂಘನೆಯಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ನಾಗೇಶ್ ಮನ್ನೋಳ್ಕರ್ ಅವರು ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತರೆಂದು ತಿಳಿದು ಬಂದಿದೆ.

ಸೀರೆ ಸುಟ್ಟು ವ್ಯಕ್ತಿ ಆಕ್ರೋಶ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಬೆಂಬಲಿಗರು ಹಂಚಿದ್ದಾರೆ ಎನ್ನಲಾದ ಸೀರೆಯನ್ನು ಸುಟ್ಟು ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದಿತ್ತು. ಯುಗಾದಿ ಹಬ್ಬಕ್ಕೆ ಅಂತ ಸೀರೆ ಗಿಫ್ಟ್ ನೀಡಲಾಗಿದೆ ಎಂದು ಹೇಳಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು

ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ವಿಡಿಯೋದಲ್ಲಿ ವ್ಯಕ್ತಿ ತನ್ನ ಗ್ರಾಮದಲ್ಲಿ ಸೀರೆಗಳನ್ನು ಹಂಚುವ ಬದಲಿಗೆ ಸೌಲಭ್ಯಗಳು ಹಾಗೂ ಅಭಿವೃದ್ಧಿ ಬಗ್ಗೆ ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾನೆ.

ಈ ಸೀರೆ ಬಿಟ್ಟರೆ ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇಷ್ಟು ವರ್ಷ ನಮ್ಮ ಯೋಗಕ್ಷೇಮದ ಬಗ್ಗೆ ಕೇಳುವವರು ಯಾರೂ ಇರಲಿಲ್ಲ. ಈಗ ಚುನಾವಣೆ ಸಮಯವಾದ್ದರಿಂದ ನನ್ನ ತಾಯಿ ಮತ್ತು ಪತ್ನಿಗೆ ಸೀರೆ ನೀಡಿದ್ದಾರೆ. ಇದು ಸರ್ಕಾರ ನೀಡಿದ ಸೌಲಭ್ಯ ಎಂದು ಸೀರೆಗೆ ಬೆಂಕಿ ಹಚ್ಚಿದ್ದಾನೆ.

ಕೋವಿಡ್ ಸಮಯದಲ್ಲಿ ಯಾರೂ ನಮ್ಮ ಬಗ್ಗೆ ಕೇಳಲಿಲ್ಲ, ಇಲ್ಲಿ ಹಿರಿಯರು ಮತ್ತು ಮಕ್ಕಳು ಇದ್ದಾರೆ. ನಮಗೆ ಒಂದು ಕೆಜಿ ಅಕ್ಕಿ ನೀಡುವ ಸಾಮರ್ಥ್ಯ ಅವರಿಗಿಲ್ಲ, ನಮಗೆ ಕೆಲಸವಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದಾನೆ. ಸ್ಥಳೀಯ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಿಟಿ ರವಿ ಬೆಂಬಲಿಗರು ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ಬಿಜೆಪಿ ನಾಯಕ ಧನಂಜಯ್ ಜಾಧವ್ ಅವರು ಬೆಳಗಾವಿಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ನೀಡಿದ್ದ ಮಿಕ್ಸರ್-ಗ್ರೈಂಡರ್ ಗಳನ್ನು ಕಿತ್ತೆಸೆದು ತಮ್ಮ ಗಿಫ್ಟ್ ಗಳನ್ನು ನೀಡಿದ್ದರು. ಆ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಭಾವಚಿತ್ರ ಇದ್ದ ಟಿಫಿನ್ ಬಾಕ್ಸ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

IPL_Entry_Point