ಕನ್ನಡ ಸುದ್ದಿ  /  ಕರ್ನಾಟಕ  /  ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ್ರು, ಜೆಡಿಎಸ್‌ಗೆ 3 ರಲ್ಲಿ 2 ಸ್ಥಾನ, ಪಕ್ಷ ಬಲವರ್ಧನೆಗೆ ಇದು ಸಹಕಾರಿಯಾದೀತೆ- ವಿಶ್ಲೇಷಣೆ

ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ್ರು, ಜೆಡಿಎಸ್‌ಗೆ 3 ರಲ್ಲಿ 2 ಸ್ಥಾನ, ಪಕ್ಷ ಬಲವರ್ಧನೆಗೆ ಇದು ಸಹಕಾರಿಯಾದೀತೆ- ವಿಶ್ಲೇಷಣೆ

ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಯಿತು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ್ರು. ಕರ್ನಾಟಕದಲ್ಲಿ ಜೆಡಿಎಸ್‌ಗೆ 3 ರಲ್ಲಿ 2 ಸ್ಥಾನ ಬಂತು. ಈ ವಿದ್ಯಮಾನಗಳು ಪಕ್ಷ ಬಲವರ್ಧನೆಗೆ ಇದು ಸಹಕಾರಿಯಾದೀತೆ? (ವಿಶ್ಲೇಷಣೆ- ಎಚ್. ಮಾರುತಿ, ಬೆಂಗಳೂರು)

ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ್ರು, ಜೆಡಿಎಸ್‌ಗೆ 3 ರಲ್ಲಿ 2 ಸ್ಥಾನ, ಪಕ್ಷ ಬಲವರ್ಧನೆಗೆ ಇದು ಸಹಕಾರಿಯಾದೀತೆ- ವಿಶ್ಲೇಷಣೆ (ಕಡತ ಚಿತ್ರ)
ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾದ್ರು, ಜೆಡಿಎಸ್‌ಗೆ 3 ರಲ್ಲಿ 2 ಸ್ಥಾನ, ಪಕ್ಷ ಬಲವರ್ಧನೆಗೆ ಇದು ಸಹಕಾರಿಯಾದೀತೆ- ವಿಶ್ಲೇಷಣೆ (ಕಡತ ಚಿತ್ರ)

ಬೆಂಗಳೂರು: ಜೆಡಿಎಸ್‌ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ನೇಮಕಗೊಂಡಿರುವುದು ಮತ್ತು ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರರಲ್ಲಿ ಎರಡು ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಹಳೇ ಮೈಸೂರು ವಿಭಾಗದಲ್ಲಿ ಪಕ್ಷದ ಪುನಃಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ.

ಕ್ಷೇತ್ರಕ್ಕೆ ಹೊರಗಿನವ ಎಂಬ ಆಪಾದನೆಯ ನಡುವೆಯೂ ಎಚ್. ಡಿ. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2.80 ಲಕ್ಷ ಮತಗಳ ಅಂತರದಿಂದ ದಾಖಲೆಯ ಜಯಗಳಿಸಿ ಅಚ್ಚರಿ ಮೂಡಿಸಿದ್ದರು. ಅದರ ಬೆನ್ನಲ್ಲೇ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಪಕ್ಷದ ಬೆಳವಣಿಗೆಗೆ ಸಹಕಾರಯಾಗಲಿದೆ ಎಂದು ಕಾರ್ಯಕರ್ತರು ಭಾವಿಸಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ನಂತರ ಕಾರ್ಯಕರ್ತರು ಕುಗ್ಗಿಹೋಗಿದ್ದರು, ಅದೆಷ್ಟೋ ಸ್ಥಳಿಯ ಮುಖಂಡರು ಮತ್ತು ಕಾರ್ಯಕರ್ತರು ಅನ್ಯ ಪಕ್ಷಗಳತ್ತ ವಲಸೆ ಹೋಗಿದ್ದೂ ಉಂಟು. ಇದೀಗ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದು ಮತ್ತೆ ಹಳೆಯ ದಿನಗಳು ಮರುಕಳಿಸುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದೇ ನಿಟ್ಟಿನಲ್ಲಿ ನಾಳೆ (ಜೂನ್‌ 16) ಸಕ್ಕರೆ ನಾಡು ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಇದು ಅವರಿಗೆ ಚೊಚ್ಚಲ ಚುನಾವಣೆಯೂ ಆಗಿತ್ತು. ಆಡಳಿತಾರೂಢ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್‌ ಸ್ವತಂತ್ರ ಅಭ್ಯರ್ಥಿ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರ ವಿರುದ್ಧ ಪರಾಭವಗೊಂಡಿದ್ದರು. 2018ರಲ್ಲಿ ಮಂಡ್ಯದ ಎಲ್ಲ 7 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಪೂರ್ಣ ಗೆಲುವು ದಾಖಲಿಸಿದ್ದರೂ ಜೆಡಿಎಸ್‌ ಸೋಲು ಆಶ್ಚರ್ಯ ಮೂಡಿಸಿತ್ತು.

ಮಂಡ್ಯ ಆರಂಭದಿಂದಲೂ ಜೆಡಿಎಸ್‌ ನ ಭದ್ರ ಕೋಟೆ. 2014ರಲ್ಲಿ ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು ಮತ್ತು 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡ ಲೋಕಸಭೆಗೆ ಆಯ್ಕೆಯಾಗಿದ್ದರು. ಅದಕ್ಕೂ ಹಿಂದಿನ ಫಲಿತಾಂಶಗಳನ್ನು ನೋಡುವುದಾದರೆ 1998ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಚಿತ್ರನಟ ಅಂಬರೀಷ್‌ ಗೆಲುವು ಸಾಧಿಸಿದ್ದರು. 2009ರಲ್ಲೂ ಜೆಡಿಎಸ್‌ ಅಭ್ಯರ್ಥಿ ಎನ್.ಚೆಲುವರಾಯಸ್ವಾಮಿ ಆಯ್ಕೆಯಾಗಿದ್ದರು. ಆದರೆ 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿ ಚಿತ್ರನಟಿ ರಮ್ಯಾ ಎದುರು ಸೋಲು ಕಂಡಿತ್ತು. ಹೀಗೆ ಮಂಡ್ಯ ದಶಕಗಳ ಕಾಲ ಜೆಡಿಎಸ್‌ ನ ಭದ್ರಕೋಟೆಯಾಗಿತ್ತು.

ಆದರೆ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ ಆರ್‌ ಪೇಟೆ ಹೊರತುಪಡಿಸಿದರೆ ಜೆಡಿಎಸ್‌ 7 ಕ್ಷೇತ್ರಗಳಲ್ಲೂ ಮುಗ್ಗರಿಸಿತ್ತು. ಹಳೇ ಮೈಸೂರಿನ ಪಕ್ಷದ ಪ್ರಮುಖ ನೆಲೆಯಾದ ಜಿಲ್ಲೆಯೊಂದರಲ್ಲಿ ಜೆಡಿಎಸ್‌ ಮುಗಿದೇ ಹೋಯಿತು ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿತ್ತು. ಜಿಲ್ಲೆಯಲ್ಲಿ ಜೆಡಿಎಸ್‌ ಅಸಿತ್ವವೇ ಇಲ್ಲ ಎಂಬ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ 6 ತಿಂಗಳ ಮುಂಚೆಯೇ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಟಾರ್‌ ಚಂದ್ರು ಎಂಬ ಉದ್ಯಮಿಯನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಹಣದ ಥೈಲಿಯೊಂದಿಗೆ ಮಂಡ್ಯ ಸುತ್ತಿದ ಚಂದ್ರು ಅವರಿಗೆ ಗೆಲುವು ಮರೀಚಿಕೆಯಾಗಿತ್ತು. ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳು ಮತ್ತು ಮೈಸೂರು ಜಿಲ್ಲೆಯ ಕೆ ಆರ್‌ ಪೇಟೆ ಸೇರಿದಂತೆ ಎಲ್ಲ 8 ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಭರ್ಜರಿ ಮುನ್ನೆಡೆ ಸಾಧಿಸಿದ್ದರು.

ಕೇಂದ್ರ ಸಚಿವರಾಗಿ ಜವಬ್ದಾರಿ ವಹಿಸಿಕೊಂಡಿರುವುದು ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಸಂಘಟಿಸಲು ಸಹಾಯಕವಾಗುತ್ತದೆ. ಪಕ್ಷವನ್ನು ಬಿಟ್ಟು ಅನ್ಯ ಪಕ್ಷಗಳಿಗೆ ಸೇರ್ಪಡೆಯಾಗಿರುವವರು ಮತ್ತೆ ಮಾತೃ ಪಕ್ಷಕ್ಕೆ ಮರಳಲಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ಮತ್ತೆ ವಿಜೃಂಭಿಸಲಿದೆ ಎಂದು ಅಭಿಪ್ರಾಯಪಡುತ್ತಾರೆ. ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಪಕ್ಷ ಬಲವರ್ಧನೆಯಾಗಲಿದೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪಕ್ಷ ಗಟ್ಟಿಗೊಳ್ಳಲಿದೆ ಎಂದೂ ಹೇಳುತ್ತಾರೆ. ಇದೇ ಉದ್ದೇಶದಿಂದಲೇ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

ಪಕ್ಷವನ್ನು ಮತ್ತೆ ಸಂಘಟಿಸಲು ಕುಮಾರಸ್ವಾಮಿ ಅವರಿಗೆ ವೇದಿಕೆಯೊಂದು ಬೇಕಿತ್ತು. ಅದು ಸಿಕ್ಕಾಗಿದೆ. ಜೆಡಿಎಸ್‌ ಎಷ್ಟರ ಮಟ್ಟಿಗೆ ಬಲಗೊಳ್ಳಲಿದೆಯೇ ಎಂದು ಮುಂಬರುವ ಯಾವುದಾದರೊಂದು ಚುನಾವಣೆಯ ಫಲಿತಾಂಶದಲ್ಲಿ ಉತ್ತರ ಸಿಗಬಹುದು.

(ವಿಶ್ಲೇಷಣೆ- ಎಚ್. ಮಾರುತಿ, ಬೆಂಗಳೂರು)