Analysis: ರಾಷ್ಟ್ರ ರಾಜಕಾರಣಕ್ಕೆ ಘಟಾನುಘಟಿ ವಿಪಕ್ಷ ನಾಯಕರು; ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಸಮರ್ಥರ ಕೊರತೆ
ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಆದ ನಂತರ ಕರ್ನಾಟಕ ವಿಧಾನ ಸಭೆ ಮತ್ತು ಪರಿಷತ್ತಿನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ಅನುಭವಿಗಳ ಕೊರತೆ ಎದುರಾಗಿದೆ. (ಬರಹ: ಎಚ್.ಮಾರುತಿ)
ವಿಧಾನಮಂಡಲದ ಘಟಾನುಘಟಿ ಸದಸ್ಯರು ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಎರಡೂ ಸದನಗಳಲ್ಲಿ ಅನುಭವಿಗಳಿಲ್ಲದೆ ಪ್ರತಿಪಕ್ಷಗಳು ಸೊರಗುವ ಲಕ್ಷಣಗಳು ಕಾಣಿಸುತ್ತಿವೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದು ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಅನುಭವಿಗಳ ಕೊರತೆ ಕಾಣಿಸಿಕೊಂಡಿದೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿದ್ದರು. ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಅವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರಲ್ಲಿ ನಿಷ್ಣಾತರಾಗಿದ್ದರು. ಇದೀಗ ಅವರಿಬ್ಬರೂ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಪಡೆದಿರುವುದರಿಂದ ವಿಧಾನಸಭೆಯಲ್ಲಿ ಅವರ ಸ್ಥಾನ ತುಂಬುವ ಸದಸ್ಯರಿಲ್ಲದಂತಾಗಿದೆ.
ಸರ್ಕಾರವನ್ನು ಅಂಕಿಅಂಶಗಳಿಂದ ಕಟ್ಟಿ ಹಾಕಲು ಅಧಿಕಾರ ನಡೆಸಿ ಅನುಭವವಿದ್ದರೆ ಮಾತ್ರ ಸಾಧ್ಯ. ಅಧ್ಯಯನಶೀಲರಾಗಿದ್ದರೆ ಇನ್ನೂ ಸುಲಭ. ಹಾಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ಸಮರ್ಥ ನಾಯಕರಾಗಿ ಹೊರ ಹೊಮ್ಮಲು ಇನ್ನೂ ಸಾಧ್ಯವಾಗಿಲ್ಲ. ಉಪ ಮುಖ್ಯಮಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ ಸಾರಿಗೆಯಂತಹ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರೂ ಅವರಿಗೆ ಆಡಳಿತವ ವೈಫಲ್ಯಗಳನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತಾಪಿಸುವ ಹಿಡಿತ ಇನ್ನೂ ಸಿಕ್ಕಿಲ್ಲ. ಸದನದ ಒಳಗೆ ಮತ್ತು ಹೊರಗೆ ಅವರು ಸರ್ಕಾರವನ್ನು ಎದುಸಲು ನಡೆಸುತ್ತಿರುವ ಪ್ರಯತ್ನಗಳು ಪೇಲವ ಎನ್ನಿಸುತ್ತಿವೆ. ಸಮರ್ಥ ಎದುರಾಳಿ ಇಲ್ಲದೇ ಹೋದರೆ ಆಡಳಿತ ಪಕ್ಷದ ಹಾದಿ ಸುಲಭವಾಗುತ್ತದೆ.
ಆರ್ ಅಶೋಕ್‌ಗೆ ಅಸಹಕಾರ
ಅಶೋಕ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ನೇಮಿಸಿದ ನಂತರ ಅವರಿಗೆ ಪಕ್ಷದೊಳಗೆ ನಿರೀಕ್ಷಿತ ಸಹಕಾರ ಸಿಕ್ಕಿಲ್ಲ. ಕಳೆದ ಬೆಳಗಾವಿ ಅಧಿವೇಶನದಲ್ಲಿಯೂ ಇದು ಸ್ಪಷ್ಟವಾಗಿ ಗೋಚರಿಸಿ ನಗೆಪಾಟಲಿಗೆ ಈಡಾಗಿದ್ದು ಸುಳ್ಳಲ್ಲ. ಅರವಿಂದ ಬೆಲ್ಲದ ಉಪ ನಾಯಕಗಿದ್ದರೂ ಅವರಿನ್ನೂ ಮೈಚಳಿ ಬಿಟ್ಟು ಸಕಾರದ ವಿರುದ್ಧ ತಿರುಗಿ ಬಿದ್ದಿಲ್ಲ. ಇವರಿಗೆ ಸಹಕಾರ ನೀಡಲು 9 ಸದಸ್ಯರ ಸಹಕಾರ ಸಮಿತಿ ರಚಿಸಿದ್ದರೂ ಯಾವುದೇ ಸಹಕಾರ ಸಿಕ್ಕಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಲು ನಿರ್ಧರಿಸಿವೆ. ಇದಕ್ಕಾಗಿ ಅನುಭವಿ ಶಾಸಕರ ಹುಡುಕಾಡದಲ್ಲಿ ತೊಡಗಿವೆ.
ವಿಧಾನಪರಿಷತ್‌ನಲ್ಲಿದ್ದ ಅನುಭವಿ ಸದಸ್ಯ ಕೋಟಾ ಶ್ರೀನಿವಾಸ ಪುಜಾರಿ ಅವರೊಬ್ಬರು ಮಾತ್ರ. ಇದೀಗ ಅವರೂ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದಾರೆ. ಅವರ ಸ್ಥಾನವನ್ನು ತುಂಬಬಲ್ಲ ಮತ್ತೊಬ್ಬ ಸದಸ್ಯ ಬಿಜೆಪಿಯೊಳಗೆ ಕಂಡು ಬರುತ್ತಿಲ್ಲ. ಪ್ರತಿಪಕ್ಷದ ನಾಯಕರ ಆಯ್ಕೆಯಲ್ಲಿ ಅನುಭವದ ಜೊತೆಗೆ ಜಾತಿಯೂ ಮುಖ್ಯವಾಗುತ್ತದೆ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜುಲೈ ತಿಂಗಳಲ್ಲಿ ವಿಧಾನ ಮಂಡಲ ಅಧಿವೇಶನ
ಇದೇ ತಿಂಗಳ 13ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಧಾನಮಂಡಲದ ಅಧಿವೇಶನದ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ. ಬಹುಶಃ ಜುಲೈ ಮಧ್ಯಭಾಗದಲ್ಲಿ ಅಧಿವೇಶನ ನಡೆಯಲಿರುವ ಸಾಧ್ಯತೆಗಳಿವೆ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಲು ವಿಪಕ್ಷಗಳಲ್ಲಿ ಸಿದ್ದತೆಗಳು ನಡೆಯುತ್ತಿವೆ. ಈ ಅವ್ಯವಹಾರದ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕೆಂದು ಪಟ್ಟು ಹಿಡಿದಿದೆ.
ಈ ಮಧ್ಯೆ ವಿಧಾನಸಭೆಯಲ್ಲಿ ಜಂಟಿ ಹೋರಾಟ ನಡೆಸಲು ಸಿದ್ದತೆಗಳು ನಡೆದಿರುವಾಗಲೇ ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಇರಿಸಿದೆ. ಬಹುಶಃ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಈ ಸ್ಥಾನಕ್ಕೆ ನೇಮಿಸಲುವ ಬಯಕೆ ಹೊಂದಿದೆ. ಒಂದು ವೇಳೆ ಉಪ ನಾಯಕ ಸ್ಥಾನವನ್ನು ಬಿಟ್ಟುಕೊಟ್ಟರೆ ಪ್ರತಿಪಕ್ಷದ ಬಲ ಹೆಚ್ಚಲಿದೆ ಎಂಬ ಸಂದೇಶವನ್ನು ಜೆಡಿಎಸ್ ಮುಖಂಡರು ಬಿಜೆಪಿ ನಾಯಕರಿಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಪರಿಷತ್ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಲಾಬಿ ಆರಂಭವಾಗಿದೆ. ಒಕ್ಕಲಿಗ ಸಮುದಾಯದ ಸಿಟಿ ರವಿ ತ್ತು ಹಿಂದುಳಿದ ವರ್ಗಕ್ಕೆ ಸೇರಿದ ಎನ್.ರವಿಕುಮಾರ್ ನಡುವೆ ಪೈಪೋಟಿ ಆರಂಬವಾಗಿದೆ. ಜೂನ್ ಎರಡನೇ ವಾರದಲ್ಲಿ ಈ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಂದು ವೇಳೆ ಸಿ.ಟಿ.ರವಿ ಆಯ್ಕೆಯಾದರೆ ಒಕ್ಕಲಿಗರೇ ಆದ ಆರ್.ಅಶೋಕ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಆಗ ಈ ಸ್ಥಾನಕ್ಕೆ ಕಾರ್ಕಳ ಶಾಸಕ ಹಿಂದುಳಿದ ವರ್ಗಕ್ಕೆ ಸೇರಿದ ಸುನೀಲ್ ಕುಮಾರ್ ಆಯ್ಕೆಯಾಗಬಹುದು. ಅಶೋಕ ಅವರ ಬದಲಾವಣೆಗೆ ಒತ್ತಡ ಹೆಚ್ಚಾದರೆ ಮಾಜಿ ಉಪಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ ಅವರನ್ನು ಪರಿಗಣಿಸುವ ಸಾಧ್ಯತೆಗಳಿವೆ. ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೈಕಮಾಂಡ್ ಈ ಸ್ಥಾನಗಳಿಗೆ ಅಯ್ಕೆ ನಡೆಸಲಿದೆ.