ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಕ್ಷೇತ್ರಗಳಲ್ಲಿ ಎಡವಿದ ಡಿಕೆ ಶಿವಕುಮಾರ್, ಮತ್ತೆ ಒಕ್ಕಲಿಗ ನಾಯಕನಾಗಿ ಮೇಲೇಳಲು ಸರ್ವ ಪ್ರಯತ್ನ- ವಿಶ್ಲೇಷಣೆ

ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಕ್ಷೇತ್ರಗಳಲ್ಲಿ ಎಡವಿದ ಡಿಕೆ ಶಿವಕುಮಾರ್, ಮತ್ತೆ ಒಕ್ಕಲಿಗ ನಾಯಕನಾಗಿ ಮೇಲೇಳಲು ಸರ್ವ ಪ್ರಯತ್ನ- ವಿಶ್ಲೇಷಣೆ

ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಕ್ಷೇತ್ರಗಳಲ್ಲಿ ಗೆದ್ದು ಬೀಗಿ ಲೋಕಸಭಾ ಚುನಾವಣೆಯಲ್ಲಿ ಎಡವಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮತ್ತೆ ಒಕ್ಕಲಿಗ ನಾಯಕನಾಗಿ ಮೇಲೇಳಲು ಸರ್ವ ಪ್ರಯತ್ನ; ಫೀನಿಕ್ಸ್‌ ಪಕ್ಷಿಯಂತೆ ಎದ್ದು ಬರುವರೇ ಡಿಸಿಎಂ? ( ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಕ್ಷೇತ್ರಗಳಲ್ಲಿ ಎಡವಿದ ಡಿಕೆ ಶಿವಕುಮಾರ್, ಮತ್ತೆ ಒಕ್ಕಲಿಗ ನಾಯಕನಾಗಿ ಮೇಲೇಳಲು ಸರ್ವ ಪ್ರಯತ್ನ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಪ್ರಾಬಲ್ಯ ಸಾಧಿಸಿದ್ದು, ಇದರ ಫಲ ಬಿಜೆಪಿಗೂ ಸಿಕ್ಕಿದೆ. (ಕಡತ ಚಿತ್ರ)
ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಕ್ಷೇತ್ರಗಳಲ್ಲಿ ಎಡವಿದ ಡಿಕೆ ಶಿವಕುಮಾರ್, ಮತ್ತೆ ಒಕ್ಕಲಿಗ ನಾಯಕನಾಗಿ ಮೇಲೇಳಲು ಸರ್ವ ಪ್ರಯತ್ನ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಪ್ರಾಬಲ್ಯ ಸಾಧಿಸಿದ್ದು, ಇದರ ಫಲ ಬಿಜೆಪಿಗೂ ಸಿಕ್ಕಿದೆ. (ಕಡತ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಂತದಲ್ಲೇ ಹಿನ್ನೆಡೆ ಅನುಭವಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೆ ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಒಕ್ಕಲಿಗ ನಾಯಕರ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದ ಅವರಿಗೆ ಈ ಚುನಾವಣೆ ಮುಜುಗರ ತಂದೊಡ್ಡಿದೆ.

ಒಕ್ಕಲಿಗ ಸಮುದಾಯ ಬಲಿಷ್ಠವಾಗಿರುವ ಹಾಸನ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತೀವ್ರ ಹಿನ್ನೆಡೆ ಅನುಭವಿಸಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್ ದಾಖಲೆಯ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಮಂಡ್ಯದಲ್ಲಿ ಕೇಂದ್ರ ಸಚಿವ ಜೆಡಿಎಸ್‌ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಮತ್ತು ಕೋಲಾರದಲ್ಲಿ ಮಲ್ಲೇಶ್‌ ಬಾಬು ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ತುಮಕೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ, ಮೈಸೂರಿನಲ್ಲಿ ಒಡೆಯರ್‌, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ಚಿಕ್ಕಬಳ್ಳಾಪುರದಲ್ಲಿ ಡಾ.ಡಿ.ಸುಧಾಕರ್‌ ಗೆಲುವು ಸಾಧಿಸಿದ್ದಾರೆ.

ಎಂಟು ಒಕ್ಕಲಿಗ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದರೂ ಗೆದ್ದಿದ್ದು ಒಬ್ಬ ಅಭ್ಯರ್ಥಿ ಮಾತ್ರ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯ. ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್‌ ಅವರಿಗೆ ಒಂದು ಹೆಜ್ಜೆ ಹಿಂದೆ ಸರಿದ ಅನುಭವವಾಗಿರಲಿಕ್ಕೂ ಸಾಕು. ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರು ಜೆಡಿಎಸ್‌ ಬಿಜೆಪಿ ಎರಡೂ ಪಕ್ಷಗಳನ್ನು ಕೈ ಬಿಟ್ಟು ಕಾಂಗ್ರೆಸ್‌ ಬೆಂಬಲಿಸಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್‌ 135 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಒಂದು ವರ್ಷದ ಅಂತರದಲ್ಲಿ ಮತ್ತೆ ಒಕ್ಕಲಿಗರು ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿರುವುದು ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಇದರಿಂದ ಕಂಗೆಟ್ಟಿರುವ ಶಿವಕುಮಾರ್‌ ಇತ್ತೀಚೆಗೆ ಒಕ್ಕಲಿಗ ಸಚಿವರು ಮತ್ತು ಶಾಸಕರಿಗೆ ಔತಣಕೂಟ ಹಮ್ಮಿಕೊಂಡಿದ್ದರು. ಮತ್ತೆ ಒಕ್ಕಲಿಗರ ವಿಶ್ವಾಸವನ್ನು ಗಳಿಸಲು ಈ ಸಭೆಯಲ್ಲಿ ಚರ್ಚೆ ನಡೆದಿದೆ. ಒಕ್ಕಲಿಗರ ಬೆಂಬಲ ಏಕೆ ಕಡಿಮೆಯಾಯಿತು ಎಂಬ ಬಗ್ಗೆ ಕಾರಣಗಳನ್ನು ತಿಳಿದುಕೊಳ್ಳಬೇಕಿದೆ ಮತ್ತು ಪರಿಹಾರಗಳನ್ನು ರೂಪಿಸಬೇಕಿದೆ ಎಂದು ಅವರು ಸಭೆಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಕ್ಕಲಿಗರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸುವುದಾಗಿ ಘೋಷಿಸಿದ ಡಿ ಕೆ ಶಿವಕುಮಾರ್

ಸೋತಿರುವುದು ನಿಜ. ಈ ಸೋಲು ತಾತ್ಕಾಲಿಕ ಎಂದು ಭಾವಿಸುತ್ತೇನೆ. ಮುಂದಿನ 6 ತಿಂಗಳಲ್ಲಿ ಮತ್ತೆ ಒಕ್ಕಲಿಗರ ವಿಶ್ವಾಸವನ್ನು ಗಳಿಸುತ್ತೇನೆ. 2028ರ ಚುನಾವಣೆಯಲ್ಲೂ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ. ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮರಳಿ ಒಕ್ಕಲಿಗರ ವಿಶ್ವಾಸವನ್ನು ಗಳಿಸುವುದಾಗಿಯೂ ಅವರು ಒಕ್ಕಲಿಗ ಶಾಸಕರ ಮುಂದೆ ಶಪಥ ಮಾಡಿದ್ದಾರೆ.

ಅತ್ತ ಶಿವಕುಮಾರ್‌ ಬೇಸರದಲ್ಲಿದ್ದರೆ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಂಪಿನ ಸಚಿವರು ಶಾಸಕರು ಶಿವಕುಮಾರ್‌ ವಿರುದ್ಧ ತಮ್ಮ ಕತ್ತಿಗಳನ್ನು ಮತ್ತಷ್ಟು ಹರಿತಗೊಳಿಸುತ್ತಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಶಿವಕುಮಾರ್‌ ಅವರನ್ನು ಬೆಂಬಲಿಸುವುದಾಗಿ ಮತ್ತೆ ಹೇಳಿದ್ದಾರೆ. ಮೂವರು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಲು ಇದು ಸಕಾಲ ಎಂದು ಸಚಿವರಾದ ಸತೀಶ್‌ ಜಾರಕಿಹೊಳಿ ಮತ್ತು ಡಾ.ಎಚ್.ಸಿ.ಮಹದೆವಪ್ಪ ಮತ್ತು ಪುನರುಚ್ಚರಿಸಿದ್ದಾರೆ. ಈ ಅಭಿಪ್ರಾಯಗಳು ಶಿವಕುಮಾರ್‌ ಅವರ ಸ್ಥಾನಕ್ಕೆ ಕುತ್ತು ತರುವಂತಿವೆ ಎಂದು ಅವರ ಬೆಂಬಲಿಗರು ವಿಶ್ಲೇಷಿಸುತ್ತಾರೆ.

ಒಕ್ಕಲಿಗರ ನಾಯಕರಾಗಿ ಎಚ್‌ಡಿ ದೇವೇಗೌಡ, ಎಚ್‌ ಡಿ ಕುಮಾರಸ್ವಾಮಿ

2020ರಲ್ಲಿ ಸಂಕಷ್ಟ ಕಾಲದಲ್ಲಿ ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 135 ಸ್ಥಾನಗಳನ್ನು ಗೆಲ್ಲುವಲ್ಲಿ ಅವರ ಪರಿಶ್ರಮವನ್ನು ಅಲ್ಲಗಳೆಯುವಂತಿಲ್ಲ. ಸರಕಾರ ಮತ್ತು ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವಷ್ಟು ಶಿವಕುಮಾರ್‌ ಅವರನ್ನು ಬೆಂಬಲಿಸುವವರ ಸಂಖ್ಯೆ ಕಡಿಮೆ. ಹೊರಗಿನ ಎದುರಾಳಿಗಳನ್ನು ಎದುರಿಸುವುದು ಸುಲಭ. ಒಳಗಿನ ಶತ್ರುಗಳನ್ನು ಎದುರಿಸುವುದು ಕಷ್ಟ ಸಾಧ್ಯ. ಹಾಗಾಗಿ ತಮ್ಮ ಎದುರಾಳಿಗಳಿಗೆ ತಕ್ಕ ಉತ್ತರ ನೀಡಲು ಬೆಂಬಲಿಗರ ಕೊರತೆ ಇರುವುದನ್ನು ಅವರ ಬೆಂಬಲಿಗರು ಒಪ್ಪಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅಹಿಂದ ವರ್ಗಗಳ ಚಾಂಪಿಯನ್‌ ಆಗಿ ಸಮರ್ಥವಾಗಿ ಬಿಂಬಿಸಿಕೊಳ್ಳುವಲ್ಲಿ ಯಶಸಸ್ವಿಯಾಗಿದ್ದಾರೆ. ಈ ವರ್ಗಗಳು ಅವರನ್ನು ಒಪ್ಪಿಕೊಂಡಿವೆ. ಆದರೆ ಶಿವಕುಮಾರ ಒಕ್ಕಲಿಗರ ಅದ್ವಿತೀಯ ನಾಯಕ ಎಂದು ಬಿಂಬಿತಗೊಂಡಿಲ್ಲ. ಈಗಲೂ ತಮ್ಮ ನಾಯಕ ಎಂದು ಒಕ್ಕಲಿಗರು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಒಪ್ಪಿಕೊಂಡಿದ್ದಾರೆಯೇ ಹೊರತು ಶಿವಕುಮಾರ್‌ ಅವರನ್ನು ಅಲ್ಲ ಎನ್ನುವುದು ಸತ್ಯ.

ಮತ್ತೆ ಫೀನಕ್ಸ್‌ ಪಕ್ಷಿಯ ಮಾದರಿಯಲ್ಲಿ ಡಿಕೆ ಶಿವಕುಮಾರ್‌ ಧೂಳಿನಿಂದ ಎದ್ದು ಬರುವರೆ ? ಕಾದು ನೋಡಬೇಕು.

( ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)