ಕನ್ನಡ ಸುದ್ದಿ  /  Karnataka  /  Political News 5 42 Crore Voters In Karnataka For Lok Sabha Election 2024 Election Ambassadors Appointed Rmy

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿದ್ದಾರೆ 5.42 ಕೋಟಿ ಮತದಾರರು; ರಾಹುಲ್ ದ್ರಾವಿಡ್ ಸೇರಿ ಮೂವರು ಚುನಾವಣಾ ರಾಯಭಾರಿಗಳ ನೇಮಕ

ಕರ್ನಾಟಕದಲ್ಲಿ 5.42 ಕೋಟಿ ಮತದಾರರು ಇದ್ದಾರೆ. 2.71 ಕೋಟಿ ಪುರುಷ ಹಾಗೂ 2.70 ಕೋಟಿ ಮಹಿಳಾ ಮತದಾರರು ಇದ್ದು, ರಾಜ್ಯದ ಅಧಿಕಾರಿಗಳು ಮಾಡಿಕೊಂಡಿರುವ ಚುನಾವಣಾ ಸಿದ್ಧತಾ ಕುರಿತ ಮಾಹಿತಿ ಇಲ್ಲಿದೆ. (ವರದಿ: ಮಾರುತಿ)

2024ರ ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ 2 ಹಂತಗಳಲ್ಲಿ ನಡೆಯಲಿದೆ. ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕರ್ನಾಟಕದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
2024ರ ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ 2 ಹಂತಗಳಲ್ಲಿ ನಡೆಯಲಿದೆ. ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕರ್ನಾಟಕದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೆಹಲಿಯಲ್ಲಿಂದು (ಮಾರ್ಚ್ 16, ಶನಿವಾರ) ಲೋಕಸಭೆ ಚುನಾವಣೆಯನ್ನು 7 ಹಂತಗಳಲ್ಲಿ ನಡೆಸುವುದಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ರಾಜ್ಯದಲ್ಲಿನ ಚುನಾವಣಾ ಅಧಿಕಾರಿಗಳು ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 5,42,08,088 ಜನರು ಮತದಾನ ಮಾಡಲು ಅರ್ಹರಾಗಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್, ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹಾಗೂ ಪ್ಯಾರಾ ಒಲಂಪಿಯನ್ ಅಥ್ಲೀಟ್ ಗಿರೀಶ್ ಗೌಡ ಅವರನ್ನು ಕರ್ನಾಟಕ ಚುನಾವಣಾ ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 2,71,21,407 ಪುರುಷ ಮತದಾರರು, 2,70,81,748 ಮಹಿಳಾ ಮತದಾರರು ಮತ್ತು 4,933 ತೃತೀಯ ಲಿಂಗಿಗಳು ಸೇರಿ ಒಟ್ಟು 5,42,08,088 ಮತದಾರರಿದ್ದಾರೆ. ರಾಜ್ಯದಲ್ಲಿ ಎರಡೂ ಹಂತದ ಮತದಾನಕ್ಕೆ 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ 11,24,622 ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 38,794 ಬುಡಕಟ್ಟು ಮತದಾರರಿದ್ದರೆ 5,70,168 85 ವರ್ಷ ಮೇಲ್ಪಟ್ಟ ಮತದಾರರಿದ್ದು, ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. 3,51,153 ಸಿಬ್ಬಂದಿ ಅಂಚೆ ಮತದಾನ ಮಾಡಲಿದ್ದಾರೆ. 3,200 ಸಾಗರೋತ್ತರ ಮತದಾರರು ಇರುವುದು ಮತ್ತೊಂದು ವಿಶೇಷ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 31,74,098 ಮತದಾರರಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೇವಲ 15,72,958 ಮತದಾರರಿದ್ದು, ಅತಿ ಕಡಿಮೆ ಮತದಾರರನ್ನು ಹೊಂದಿರುವ ಲೋಕಸಭಾ ಕ್ಷೇತ್ರವಾಗಿದೆ. ಈ ಬಾರಿಯ ಚುನಾವಣೆಯಲ್ಲಿ 224 ಮತಗಟ್ಟೆಗಳನ್ನು ದಿವ್ಯಾಂಗರು ನಿರ್ವಹಣೆ ಮಾಡಲಿದ್ದಾರೆ. ಮೊದಲ ಬಾರಿಗೆ ಕೆಲವು ಮತಗಟ್ಟೆಗಳನ್ನು ದಿವ್ಯಾಂಗರೇ ನಿರ್ವಹಣೆ ಮಾಡುತ್ತಿರುವುದು ಪ್ರಜಾತಂತ್ರದ ಮತ್ತೊಂದು ವಿಶೇಷವಾಗಿದೆ. ಈ ಮೂಲಕ ತಾವೂ ಸಹ ಸಾಮಾನ್ಯರಂತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಬಹುದು ಎನ್ನುವುದಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎನ್ನುವುದು ರಾಜ್ಯ ಚುನಾವಣಾ ಆಯೋಗದ ಅಭಿಮತವಾಗಿದೆ.

ಕರ್ನಾಟಕದಲ್ಲಿ 2 ಹಂತಗಳಲ್ಲಿ ಲೋಕಸಭೆ ಚುನಾವಣೆ

ಕರ್ನಾಟಕದಲ್ಲಿ ಏಪ್ರಿಲ್ 26 ಶುಕ್ರವಾರ ಮತ್ತು ಮೇ 7 ಮಂಗಳವಾರ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. 2024ರ ಜೂನ್ 4ರ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.

2019 ರ ಚುನಾವಣೆಗೆ ಹೋಲಿಸಿದರೆ ಶೇ. 4 ರಷ್ಟು ಮತದಾನ ಹೆಚ್ಚಳವಾಗಲಿದ್ದು, ಶೇ.72 ರಷ್ಟು ಮತದಾನ ಮೀರುವ ಸಾಧ್ಯತೆಗಳಿವೆ. 58,834 ಮತಗಟ್ಟೆಗಳಲ್ಲಿ 3.5 ಲಕ್ಷ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ರಾಜ್ಯಾದ್ಯಂತ 30,000ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.

17 ವರ್ಷ ದಾಟಿರುವವರು ಮುಂಗಡವಾಗಿ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಮಾರ್ಚ್ 31ರ ವರೆಗೆ ಕಾಲಾವಕಾಶ ಇದೆ. ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮತದಾನವಾಗುತ್ತಿದೆ. ಬೆಂಗಳೂರಿನ 3000 ಸೇರಿದಂತೆ ಕಡಿಮೆ ಮತದಾನವಾಗುವ 5000 ಮತಗಟ್ಟೆಗಳನ್ನು ಗುರುತಿಸಿದ್ದು, ಮತದಾನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇಂದಿನಿಂದಲೇ (ಮಾರ್ಚ್ 16, ಶನಿವಾರ) ನೀತಿ ಸಂಹಿತೆ ಜಾರಿಯಾಗಿದೆ. ಇನ್ನ ರಾಜಕೀಯ ಪಕ್ಷಗಳ ಅಬ್ಬರ ಜೋರಾಗಿ ನಡೆಯಲಿದೆ. ಸಭೆ, ಸಮಾರಂಭ, ಪ್ರಚಾರಗಳ ಮೂಲಕ ಮತಯಾಚನೆ ಮಾಡಲಿದ್ದಾರೆ.

IPL_Entry_Point