BJP JDS alliance: ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿ ಜೆಡಿಎಸ್ ಮೈತ್ರಿ?; ಏನು ಬೇಕಾದರೂ ಆಗಬಹುದೆಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
BJP JDS alliance: ರಾಜ್ಯ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಬಿಜೆಪಿ ನಾಯಕರು, ಜೆಡಿಎಸ್ ನಾಯಕರ ನಡುವೆ ಮೈತ್ರಿ ಏರ್ಪಟ್ಟಂತೆ ಕಾಣುತ್ತಿದೆ. ಎರಡೂ ಪಕ್ಷಗಳ ನಾಯಕರು ವಿಶೇಷವಾಗಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿರುವುದು ಗಮನಾರ್ಹ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ತೀವ್ರ ವಾಗ್ದಾಳಿ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವೈಎಸ್‌ಟಿ ತೆರಿಗೆ, ಸಿಎಂಒ ವರ್ಗಾವಣೆ ದಂಧೆ, ಕ್ಯಾಶ್ ಫೋರ್ ಪೋಸ್ಟಿಂಗ್ ದಂಧೆಯಲ್ಲಿ ತೊಡಗಿದೆ ಎಂದು ನೇರ ಆರೋಪ ಮಾಡಿರುವ ಕುಮಾರಸ್ವಾಮಿ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್. ಯಡಿಯುರಪ್ಪ, ಬಸವರಾಜ ಬೊಮ್ಮಾಯಿ ನಿಂತುಕೊಂಡಿದ್ದಾರೆ.
ಈ ವಿದ್ಯಮಾನದ ನಡುವೆ, 2024 ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.
“ನಾನು ವಿಶೇಷವಾಗಿ ಯಾರನ್ನೂ ಹೆಸರಿಸಲು ಬಯಸುವುದಿಲ್ಲ. ಏನು ಬೇಕಾದರೂ ಆಗಬಹುದು. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಬಹುಶಃ ಇದು ಈ ವರ್ಷಾಂತ್ಯ ಅಥವಾ ಸಂಸತ್ ಚುನಾವಣೆಯ ನಂತರ ಸಂಭವಿಸುತ್ತದೆ. ಅದಕ್ಕಾಗಿ ನಾವು ಕಾಯಬೇಕಾಗಿದೆ ಎಂದು ಕರ್ನಾಟಕ ಮಾಜಿ ಮುಖ್ಯಮಂತ್ರಿ ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಯಡಿಯೂರಪ್ಪ ಹೇಳಿರುವುದೇನು?
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
''ಎಚ್‌ಡಿ ಕುಮಾರಸ್ವಾಮಿ ಹೇಳುತ್ತಿರುವುದೆಲ್ಲವೂ ಸಂಪೂರ್ಣ ಸತ್ಯ ಮತ್ತು ಅವರ ಹೇಳಿಕೆಯನ್ನು ನಾನು ಬೆಂಬಲಿಸಲು ಬಯಸುತ್ತೇನೆ. ಕುಮಾರಸ್ವಾಮಿ ಮತ್ತು ನಾವು ಭವಿಷ್ಯದಲ್ಲಿ ಒಟ್ಟಿಗೆ ಹೋರಾಡುತ್ತೇವೆ ”ಎಂದು ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದೊಂದಿಗೆ ಜೆಡಿಎಸ್ ಕೈಜೋಡಿಸಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.
ಪಿಟಿಐ ವರದಿ ಪ್ರಕಾರ, ಕುಮಾರಸ್ವಾಮಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯ ಕೆಲವು ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ-ಜೆಡಿ(ಎಸ್) ಮೈತ್ರಿ ಸಾಧ್ಯತೆಯ ಬಗ್ಗೆ ಕೇಳಿದಾಗ, ಜೂನ್ 12 ರಂದು ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಚುನಾವಣಾ ತಿಳಿವಳಿಕೆಯನ್ನು ಪರಿಸ್ಥಿತಿ ಬಂದಾಗ ತೀರ್ಮಾನ ತೆಗೆದುಕೊಳ್ಳಲಾಗುವುದು ಮತ್ತು ಸಂಸತ್ತಿನ ಚುನಾವಣೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವ ಯಾವುದೇ ಪ್ರಸ್ತಾಪವು ತಮ್ಮ ಮುಂದೆ ಇಲ್ಲ ಎಂದು ಹೇಳಿದರು.
ಮಾರನೇ ದಿನ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್‌ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ರಾಜ್ಯಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಮುಂದಿನ ದಿನಗಳಲ್ಲಿ ನೋಡೋಣ, ರಾಜಕೀಯದಲ್ಲಿ ಭವಿಷ್ಯ ಹೇಳುವುದು ಕಷ್ಟ ಎಂದರು.
ಕರ್ನಾಟಕದಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಒಟ್ಟು 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿತ್ತು. ಅದೇ ರೀತಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ (ಸುಮಲತಾ ಅಂಬರೀಶ್) ಗೆಲುವು ಕಂಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಪಡೆದುಕೊಂಡಿದ್ದವು.