ಹೊರನಾಡಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದಿಂದ ನವ ಚಂಡಿಕಾ ಹೋಮ; ಬಿಜೆಪಿ ಗೆಲುವಿಗೆ ಪ್ರಾರ್ಥನೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೊರನಾಡಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದಿಂದ ನವ ಚಂಡಿಕಾ ಹೋಮ; ಬಿಜೆಪಿ ಗೆಲುವಿಗೆ ಪ್ರಾರ್ಥನೆ

ಹೊರನಾಡಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದಿಂದ ನವ ಚಂಡಿಕಾ ಹೋಮ; ಬಿಜೆಪಿ ಗೆಲುವಿಗೆ ಪ್ರಾರ್ಥನೆ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುಟುಂಬ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತವರ ಕುಟುಂಬ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಾನುವಾರ (ಮಾರ್ಚ್ 24) ನವ ಚಂಡಿಕಾ ಹೋಮ ಮಾಡಿಸಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತವರ ಕುಟುಂಬ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಾನುವಾರ (ಮಾರ್ಚ್ 24) ನವ ಚಂಡಿಕಾ ಹೋಮ ಮಾಡಿಸಿದ್ದಾರೆ.

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತವರ ಕುಟುಂಬದವರು ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಾನುವಾರ (ಮಾರ್ಚ್ 24) ಚಂಡಿಕಾ ಹೋಮ ಮಾಡಿಸಿದ್ದಾರೆ. ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಎಸ್‌ವೈ ಕುಟುಂಬ ಮಾಡಿಸಿರುವ ಹೋಮ, ಪೂಜಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸೊಸೆ ಹಾಗೂ ಪುತ್ರಿಯವರು ಕೂಡ ಭಾಗವಹಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕೆಂದು ಈ ಹೋಮವನ್ನು ಮಾಡಿಸಿದ್ದಾರೆ ಎಂದು ವರದಿಯಾಗಿದೆ. ದೇವರ ಆಶೀರ್ವಾದ, ಎಲ್ಲಾ ರೀತಿಯ ಅಡೆತಡೆಗಳ ನಿವಾರಣೆ ಹಾಗೂ ಎಲ್ಲಾ ಇಷ್ಟಾರ್ಥಗಳು ಈಡೇರಿಕೆಗಾಗಿ ಈ ನವ ಚಂಡಿಕಾ ಹೋಮವನ್ನು ಮಾಡಲಾಗಿದೆ.

ಹೋಮದ ಬಳಿಕ ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ಬೆಳೆ ಚೆನ್ನಾಗಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಹೋಮವನ್ನು ಮಾಡಿದ್ದೇವೆ. ಜೊತೆಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದು ಪ್ರಾರ್ಥಿಸಿದ್ದೇವೆ. ದೇವರ ಹಾಗೂ ಜನರ ಆಶೀರ್ವಾದಿಂದ ಕರ್ನಾಟಕದ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಪ್ರಧಾನಿ ಮೋದಿ ಅವರಿಗೆ ಮತ್ತಷ್ಟು ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದೇವೆ. ರಾಜ್ಯದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಮೂಲಕ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಿದೆ. ಇದಕ್ಕಾಗಿ ಈ ವಿಶೇಷ ಪೂಜೆ ಹಾಗೂ ಹೋಮವನ್ನು ಮಾಡಿಸಿದ್ದೇವೆ ಎಂದು ವಿವರಿಸಿದ್ದಾರೆ. ಕೇಂದ್ರ ಸರ್ಕಾರ ಸರಿಯಾಗಿ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿರುವ ಕುರಿತ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ನಿರ್ಧಾರ ಕರಾಳವಾಗಿದೆ. ಸರ್ಕಾರದ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಹೋಗುವ ಮೂಲಕ ಸಿದ್ದರಾಮಯ್ಯ ಅವರು ಡ್ರಾಮಾ ಮಾಡುತ್ತಿದ್ದಾರೆ. ಇದು ಸಿಎಂ ಸ್ಥಾನಕ್ಕೆ ಅಗೌರವ ತೋರಿದಂತಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Whats_app_banner