Political News: 31 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, ನಾಯಕತ್ವಕ್ಕೆ ಯುವತಲೆಮಾರು
ಕನ್ನಡ ಸುದ್ದಿ  /  ಕರ್ನಾಟಕ  /  Political News: 31 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, ನಾಯಕತ್ವಕ್ಕೆ ಯುವತಲೆಮಾರು

Political News: 31 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, ನಾಯಕತ್ವಕ್ಕೆ ಯುವತಲೆಮಾರು

ಬಿಜೆಪಿಯ ಕರ್ನಾಟಕ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, 10 ಉಪಾಧ್ಯಕ್ಷರು, ನಾಲ್ಕು ಪ್ರಧಾನ ಕಾರ್ಯದರ್ಶಿಗಳು ಸೇರಿ 31 ಪದಾಧಿಕಾರಿಗಳ ಹೆಸರು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಯಡಿಯೂರಪ್ಪ ಆಪ್ತರು ಕೂಡ ಇದ್ದಾರೆ. ಹೊಸ ತಲೆಮಾರಿಗೆ ನಾಯಕತ್ವದ ಮತ್ತು ಪಕ್ಷ ಸಂಘಟನೆಯ ಹೊಣೆಗಾರಿಕೆ ವಹಿಸಿದ್ದು ಸ್ಪಷ್ಟವಾಗಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನೀಲ್ ಕುಮಾರ್ ಮತ್ತು ಜೆ.ಪ್ರೀತಂ ಗೌಡ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನೀಲ್ ಕುಮಾರ್ ಮತ್ತು ಜೆ.ಪ್ರೀತಂ ಗೌಡ

ಕರ್ನಾಟಕದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿ ಒಂದು ತಿಂಗಳ ನಂತರ ಶನಿವಾರ (ಡಿ.23) ರಾತ್ರಿ ಪಕ್ಷದ ಹೊಸ ಪಧಾಧಿಕಾರಿಗಳ ಪಟ್ಟಿ ಬಿಡುಗಡೆಯಾಯಿತು.

ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಬಿಜೆಪಿ ಕರ್ನಾಟಕದ ನೂತನ ರಾಜ್ಯ ಪದಾಧಿಕಾರಿಗಳನ್ನು ಘೋಷಿಸಿದ್ದಾರೆ. ಪಟ್ಟಿಯಲ್ಲಿ 10 ಉಪಾಧ್ಯಕ್ಷರು, 4 ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ರಾಜ್ಯ ಕಾರ್ಯದರ್ಶಿಗಳು, ಖಜಾಂಚಿ, ಏಳು ಮೋರ್ಚಾಗಳ ರಾಜ್ಯ ಅಧ್ಯಕ್ಷರ ಹೆಸರುಗಳಿವೆ.

ಹಿರಿಯ ನಾಯಕರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜುಗೌಡ ನಾಯಕ್, ಎನ್.ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ಸಂತೋಷ್ ನಾಯ್ಕ್, ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್, ಎಂ.ರಾಜೇಂದ್ರ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಮಾಜಿ ಸಚಿವ ಹಾಗೂ ಲಿಂಗಾಯತ ಮುಖಂಡ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ಮತ್ತು ಎನ್.ಮಹೇಶ್ ಉಪಾಧ್ಯಕ್ಷರಾಗಿ ನೇಮಕಗೊಂಡವರಲ್ಲಿ ಸೇರಿದ್ದಾರೆ. ಜಾತಿ ಸಮೀಕರಣದ ಲೆಕ್ಕಾಚಾರದಲ್ಲೂ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಾಲ್ಕು ಬಾರಿ ಶಾಸಕ ಹಾಗೂ ಪಕ್ಷದ ಪ್ರಮುಖ ಒಬಿಸಿ ಮುಖವಾಗಿರುವ ವಿ.ಸುನೀಲ್ ಕುಮಾರ್ ಅವರು ಪಕ್ಷದ ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಸುನೀಲ್ ಕುಮಾರ್‌ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವವರು. ವಿ.ಸುನೀಲ್ ಕುಮಾರ್ ಅವರ ಹೆಸರು ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಕೇಳಿಬಂದಿತ್ತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಂಘಟನಾತ್ಮಕವಾಗಿ ಪ್ರಭಾವಿ ಮತ್ತು ನಿರ್ಣಾಯಕ ಹೊಣೆಗಾರಿಕೆಯಾಗಿದೆ.

ಇನ್ನುಳಿದಂತೆ ಎರಡು ಸಲದ ಶಾಸಕ ಪರಿಶಿಷ್ಟ ಜಾತಿ (ಎಸ್‌ಸಿ) ನಾಯಕ ಪಿ.ರಾಜೀವ್‌, ಕೆ.ಆರ್‌.ಪುರಂನ ಮಾಜಿ ಶಾಸಕ ಎನ್‌.ಎಸ್‌.ನಂದೀಶ್ ರೆಡ್ಡಿ, ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದು ಪಕ್ಷ ಸಂಘಟಿಸುತ್ತಿರುವ ಜೆ.ಪ್ರೀತಂ ಗೌಡ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿಗಳಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ವಯಸ್ಸನ್ನು ಗಮನಿಸುವುದಾದರೆ, ವಿಜಯೇಂದ್ರ ಅವರಿಗೆ 48, ಸುನೀಲ್ ಕುಮಾರ್‌ ಅವರಿಗೆ 48, ರಾಜೀವ್ ಅವರಿಗೆ 46, ನಂದೀಶ್ ರೆಡ್ಡಿಗೆ 52, ಪ್ರೀತಂ ಗೌಡ ಅವರಿಗೆ 41 ವರ್ಷ. ಪಕ್ಷ ಸಂಘಟನೆಯ ಹೊಣೆಗಾರಿಕೆಯನ್ನು ಹೊಸ ತಲೆಮಾರಿಗೆ ವರ್ಗಾಯಿಸಿದ ಸ್ಪಷ್ಟ ಸೂಚನೆ ಇದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಾಸನ ಜಿಲ್ಲೆಯ ಸಕಲೇಶಪುರದಿಂದ ಈ ಬಾರಿ ಗೆದ್ದು ಶಾಸಕರಾಗಿರುವ ಎ.ಎಸ್. ಮಂಜುನಾಥ್ ಅಲಿಯಾಸ್ ಸಿಮೆಂಟ್ ಮಂಜು ಅವರನ್ನು ಪಕ್ಷದ ಎಸ್ಸಿ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜನತಾ ದಳ (ಜಾತ್ಯತೀತ) ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಈ ಪ್ರಾದೇಶಿಕ ಪಕ್ಷದ ಪ್ರಮುಖ ನೆಲೆಯಾದ ಹಾಸನದಲ್ಲಿ ಆಕ್ರಮಣಕಾರಿಯಾಗಿ ಪಕ್ಷವನ್ನು ಸಂಘಟಿಸುವುದಕ್ಕೆ ಪಕ್ಷದ ವರಿಷ್ಠರು ಗಮನನೀಡಿದ್ದಾರೆ.

ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರ ಟ್ವೀಟ್ ಹೀಗಿದೆ

Whats_app_banner