ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಜಟಾಪಟಿ; ಬಿಜೆಪಿಗೆ ಅಸ್ತ್ರವಾಗಿದ್ದ ಪ್ರಕರಣಕ್ಕೆ ಕಾಂಗ್ರೆಸ್ ಸೆಡ್ಡು
ಬಿಜೆಪಿ ಸರ್ಕಾರದಲ್ಲಿ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ವಹಿಸಿದ್ದ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಲು ಮುಂದಾಗಿದೆ. ಇದು ಎರಡೂ ಪಕ್ಷಗಳ ಜಟಾಪಟಿಗೆ ಕಾರಣವಾಗಿದೆ.
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಪ್ರಸ್ತುತ ಕರ್ನಾಟಕ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ತನಿಖೆಗೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರ (BJP Govt) ಸಿಬಿಐಗೆ (CBI) ಅನುಮತಿ ನೀಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ (Karnataka Congress Govt) ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಯಿಂದ ವಾಪಸ್ ಪಡೆಯಲು ನಿರ್ಧರಿಸಿದೆ.
ಇದೇ ಗುರುವಾರ (ನವೆಂಬರ್ 23) ನಡೆದಿರುವ ರಾಜ್ಯ ಸಚಿವ ಸಂಪುಟದಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್‌ಕೆ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದಿದ್ದು, ಸಿಎಂ ಸಿದ್ದರಾಮಯ್ಯ (CM Siddarmaiah) ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಕೆಶಿ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ನಾಯಕರು
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಳೀನ್ ಕುಮಾರ್ ಕಟೀಲ್, ಸಿಟಿ ರವಿ, ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ನಿರ್ಧಾರವನ್ನು ಟೀಕಿಸಿದ್ದಾರೆ. ಜಾರಿ ನಿರ್ದೇಶನಾಲಯ-ಇಡಿ ನೀಡಿದ್ದ ಪತ್ರ, ಅಡ್ವೋಕೇಟ್ ಜನರಲ್ ಒಪ್ಪಿಗೆಯೊಂದಿಗೆ ಡಿಕೆ ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಸೇಡಿನ ಭಾಗವಾಗಿ ತಮ್ಮ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕೇಸ್ ವಜಾಗೊಳಿಸುವಂತೆ ಡಿಕೆ ಶಿವಕುಮಾರ್ ಅವರು ಮಾಡಿದ್ದ ಮನವಿಯನ್ನು ಘನ ಉಚ್ಚ ನ್ಯಾಯಾಲಯ ಈಗಾಗಲೇ ತಿರಸ್ಕರಿಸಿ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ. ಆದಾಗ್ಯೂ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ತಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಪೋಷಣೆಯ ಕ್ರಮವನ್ನು ಸಮರ್ಥಿಸಲು ವ್ಯರ್ಥ ಪ್ರಯತ್ನ ನಡೆಸಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ.
ಕೇಸರಿ ಕಲಿಗಳಿಗೆ ಕಾಂಗ್ರೆಸ್ ನಾಯಕರ ತಿರುಗೇಟು
ಇತ್ತ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಗರಿಗೆ ತಿರುಗೇಟು ನೀಡಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಡಿಕೆ ಶಿವಕುಮಾರ್ ಆಗ ಶಾಸಕರಾಗಿದ್ದರು. ಶಾಸಕರ ವಿರುದ್ಧ ತನಿಖೆಗೆ ವಹಿಸಬೇಕಾದರೆ ಸ್ಪೀಕರ್ ಅನುಮತಿ ಪಡೆಯಬೇಕು. ಆದರೆ ಅಂದಿನ ಸರ್ಕಾರ ಸಭಾಧ್ಯಕ್ಷರ ಅನುಮತಿಯನ್ನೇ ಪಡೆದಿಲ್ಲ. ಜೊತೆಗೆ ಅಡ್ವೋಕೇಟ್ ಜನರ ಅವರ ಅಭಿಪ್ರಾಯವನ್ನೂ ಪರಿಗಣಿಸಿಲ್ಲ. ಸಿಬಿಐ ಮನವಿಗೆ ಮೌಖಿಕವಾಗಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ ಇದು ಕಾನೂನುಬಾಹಿರವಾಗಿದೆ.
ನಮ್ಮ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ವಹಿಸಿದ್ದ ಪ್ರಕರಣವನ್ನು ವಾಪಸ್ ಪಡೆಯಲು ನಿರ್ಧಾರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ, ಸಚಿವರಾದ ಪರಮೇಶ್ವರ್, ಹೆಚ್‌ಕೆ ಪಾಟೀಲ್, ಪ್ರಿಯಾಂಕ್ ಖರ್ಗೆ ಅವರು ಸಚಿವ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಗುಜರಾತ್‌ನಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಲ್ಲಿನ 42 ಕಾಂಗ್ರೆಸ್ ಶಾಸಕರಿಗೆ ಬೆಂಗಳೂರು ಸಮೀಪದ ಈಗಲ್‌ಟನ್ ರೆಸಾರ್ಟ್‌ನಲ್ಲಿ ಉಳಿಯಲು ಡಿಕೆ ಶಿವಕುಮಾರ್ ವ್ಯವಸ್ಥೆ ಮಾಡಿದ್ದರು. ಈ ಶಾಸಕರ ಜವಾಬ್ದಾರಿಯನ್ನು ಇವರೇ ವಹಿಸಿದ್ದರು. ಅದೇ ಸಂದರ್ಭದಲ್ಲಿ ಅಂದರೆ 2017ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಡಿಕೆಶಿ ಅವರ ಕನಕಪುರ ಮನೆ, ಬೆಂಗಳೂರಿನ ನಿವಾಸ, ಕಚೇರಿ ಹಾಗೂ ಆಪ್ತರ ಮನೆಗಳು ಸೇರಿದಂತೆ 39 ಕಡೆ ದಾಳಿ ನಡೆಸಿದ್ದರು. ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ಅವರ ಡೈರಿಯಲ್ಲಿ ಹೆಸರು ಪತ್ತೆಯಾದ ನಂತರ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದ್ದರು. ಆದರೆ ಅವರ ಉತ್ತರ ಮನವರಿಯಾಗದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿತ್ತು.
ಐಟಿ ಅಧಿಕಾರಿಗಳ ದಾಳಿ ವೇಳೆ ಸುಮಾರು 7.5 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದರು. ಮತ್ತೊಂದೆಡೆ ಐಟಿ ಅಧಿಕಾರಿಗಳು ಮಾಹಿತಿ ಆಧಾರದ ಮೇಲೆ ಜಾರಿನಿರ್ದೇಶನಾಯ-ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ವಿಚಾರಣೆಯ ಸಲುವಾಗಿ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇಡಿ ತನಿಖೆಯನ್ನು ಆಧಾರಿಸಿ ಸಿಬಿಐ ಕೂಡ ಫೀಲ್ಡ್‌ಗೆ ಇಳಿದಿತ್ತು. ಡಿಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರದ ಅನುಮತಿಯನ್ನು ಕೋರಲಾಗಿತ್ತು. 2019ರ ಸೆಪ್ಟೆಂಬರ್ 15 ರಂದು ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಸಿಬಿಐ ಅಧಿಕಾರಿಗಳು 2020ರ ಅಕ್ಟೋಬರ್ 3 ರಂದು ಡಿಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ಆದಾಖಲಿಸಿ ತನಿಖೆಯನ್ನು ನಡೆಸುತ್ತಿದೆ.
ಡಿಕೆಶಿ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಕಾನೂನಾತ್ಮಕವಾಗಿ ಇಲ್ಲ. ಸ್ಪೀಕರ್ ಅನುಮತಿ, ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯದೇ ತನಿಖೆಗೆ ನೀಡಲಾಗಿದೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರು, ಡಿಸಿಎಂ ಡಿಕೆಶಿ ಅವರ ವಿರುದ್ಧದ ಸಿಬಿಐ ತನಿಖೆಯ ಅನುಮತಿಯನ್ನು ವಾಪಸ್ ಪಡೆದಿದ್ದಾರೆ. ಕಳೆದ ಮೂರು ದಿನಗಳಿಂದ ಇದೇ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಜೊತೆ ಜೆಡಿಎಸ್ ನಾಯಕರೂ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.