ಕನ್ನಡ ಸುದ್ದಿ  /  Karnataka  /  Political News Despite Staying Away From Politics Karnataka Bjp Control By Ex Cm Bs Yediyurappa Mrt

ಟಿಕೆಟ್ ಹಂಚಿಕೆ, ಅತೃಪ್ತರ ಶಮನ ಏನೇ ಇದ್ದರೂ ಇವರ ಮಾತೇ ಅಂತಿಮ; ಪಕ್ಷದ ಅಧಿಕಾರದಿಂದ ದೂರವಿದ್ದರೂ ಯಡಿಯೂರಪ್ಪ ಹಿಡಿತದಲ್ಲಿದೆ ಕರ್ನಾಟಕ ಬಿಜೆಪಿ

BS Yediyurappa: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಬಿಜೆಪಿ ಕಮಾಂಡ್ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ ಭಾರಿ ಹಿನ್ನಡೆ ಅನುಭವಿಸಿತ್ತು. ಸೋಲಿನ ಪರಾಮರ್ಶೆ ಬಳಿಕ ಬಿಎಸ್‌ವೈಗೆ ಫುಲ್ ಪವರ್ ನೀಡಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (PTI)

ಬೆಂಗಳೂರು: ಈ ಹೊತ್ತಿಗೆ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಪವರ್‌ಫುಲ್ ರಾಜಕಾರಣಿ ಎಂದರೆ ಅದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa). ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದ ಮಟ್ಟಿಗೆ ಇಡೀ ಪಕ್ಷವನ್ನು ಬೆರಳ ತುದಿಯಲ್ಲಿ ಆಡಿಸುವಷ್ಟು ಶಕ್ತಿಶಾಲಿ. ಹಾಗೆ ನೋಡಿದರೆ ಯಡಿಯೂರಪ್ಪ ಈ ವೇಳೆಗೆ ನೇಪಥ್ಯಕ್ಕೆ ಸರಿಯಬೇಕಿತ್ತು, ಇಲ್ಲವೇ ಪಕ್ಷದ ಹಿರಿಯರ ಮನೆಯ ಸದಸ್ಯರಾಗಬೇಕಿತ್ತು. ಆದರೆ ಹಾಗೆ ಆಗಲು ಒಪ್ಪದೆ ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಿ ಉಳಿದುಕೊಂಡಿದ್ದಾರೆ. ಮಾತ್ರವಲ್ಲ, ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ (Lok Sabha Election 2024) ಮೇಲೂ ಹಿಡಿತವನ್ನು ಬಿಟ್ಟುಕೊಟ್ಟಿಲ್ಲ. ಇಡೀ ದೇಶದಲ್ಲಿ ಪ್ರಧಾನಿ ಮೋದಿ ಅಮಿತ್ ಶಾ ಪ್ರಬಲ ಮತ್ತು ಶಕ್ತಿಶಾಲಿ ಎಂದು ಬಿಂಬಿತಾಗೊಂಡಿದ್ದರೂ ರಾಜ್ಯದ ಮಟ್ಟಿಗೆ ಯಡಿಯೂರಪ್ಪ ಅವರೇ ನಂಬರ್ 1 ಎನ್ನುವುದರಲ್ಲಿ ಅನುಮಾನವೇ ಇಲ್ಲ.

81 ವರ್ಷದ ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೂ ಪಕ್ಷದ ಮೇಲಿನ ಹಿಡಿತ ಮಾತ್ರ ಒಂದಿಂಚೂ ಕದಲಿಲ್ಲ. ಟಿಕೆಟ್ ಹಂಚಿಕೆ, ಭಿನ್ನಮತ ಶಮನ ಸೇರಿದಂತೆ ಎಲ್ಲ ಸಮಸ್ಯೆಗಳ ನಿವಾರಣೆಗೆ ಇವರ ಮುಂದಾಳತ್ವ ಅನಿವಾರ್ಯವಾಗಿದೆ. ಪುತ್ರ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಅನಾಯಾಸವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಯಾರಿಗೆ ಟಿಕೆಟ್ ತಪ್ಪಿಸಬೇಕೋ ಅವರಿಗೆ ತಪ್ಪಿಸುವಲ್ಲಿ ಯಾರಿಗೆ ಕೊಡಿಸಬೇಕೋ ಅವರಿಗೆ ಕೊಡಿಸುವಲ್ಲಿ ಸಫಲವಾಗಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡಿಸಿದ್ದಾರೆ. ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಮತ್ತು ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಡಿಸಿರುವುದು ಅವರ ಪಕ್ಷದ ಮೇಲಿನ ಹಿಡಿತ ಇದೆ ಎನ್ನುವುದಕ್ಕೆ ಜ್ವಲಂತ ನಿರ್ದೇಶನ. ಮೈಸೂರಿನಲ್ಲಿ ಒಡೆಯರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿಯೂ ಯಡಿಯೂರಪ್ಪ ಅವರ ಪಾತ್ರ ಇದೆ ಎಂದು ಮುಖಂಡರು ಹೇಳುತ್ತಾರೆ.

ಮಾಧುಸ್ವಾಮಿ, ಕರಡಿ ಸಂಗಣ್ಣ, ರೇಣುಕಾಚಾರ್ಯ, ಚಂದ್ರಪ್ಪ ಮೊದಲಾದವರಿಕೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಪ್ರಯತ್ನ ಮಾಡಲೇ ಇಲ್ಲ ಇದು ಅವರ ಚಾಣಾಕ್ಷತೆಗೆ ಸಾಕ್ಷಿ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವರಿಷ್ಠರು ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದರು. ಬಹುಮತದಲ್ಲಿದ್ದ ಪಕ್ಷ 66 ಸ್ಥಾನಗಳಿಗೆ ಕುಸಿದಿತ್ತು. ಅದಕ್ಕೆ ಪ್ರತಿಯಾಗಿ ಪಕ್ಷ ಹೀನಾಯ ಸೋಲು ಅನುಭವಿಸಿತ್ತು. ಈ ಭಾರಿ ಎಚ್ಚೆತ್ತುಕೊಂಡಿರುವ ಹೈ ಕಮಾಂಡ್ ಪಕ್ಷವನ್ನು ಯಡಿಯೂರಪ್ಪ ಅವರ ಹಿಡಿತಕ್ಕೆ ಒಪ್ಪಿಸಿದೆ.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಅವರು ಬೇರು ಮಟ್ಟದ ರಾಜಕಾರಣಿ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅವರ ಬೆಂಬಲಿಗರು ಇದ್ದಾರೆ. ಅದರಲ್ಲೂ ವೀರಶೈವ ಸಮುದಾಯ ಇವರನ್ನು ಅದ್ವಿತೀಯ ನಾಯಕ ಎಂದೇ ಪರಿಗಣಿಸಿದೆ. ಈ ಎಲ್ಲ ಕಾರಣಗಳಿಗಾಗಿ ಪಕ್ಷ ಅವರ ನಾಯಕತ್ವದಲ್ಲೇ ಚುನಾವಣೆಗೆ ಸಜ್ಜಾಗಿದೆ. ಹಾಗೆಯೇ ಪ್ರತಿ ಹಂತದಲ್ಲೂ ತಮ್ಮ ಮಾತು ನಡೆಯುವಂತೆ ಪಟ್ಟುಗಳನ್ನು ಹಾಕುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದು ಕಂಡು ಬಿಜೆಪಿ ಮುಖಂಡರೇ ಅಚ್ಚರಿಪಟ್ಟಿದ್ದರು.

ಕಳೆದ ವರ್ಷ ನವಂಬರ್‌ನಲ್ಲಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಪುತ್ರನಿಗೆ ಅಡ್ಡಿಯಾಗುವ ಎಲ್ಲ ವೀರಶೈವ ಮುಖಂಡರನ್ನು ಹಿಂದಿನ ಸೀಟ್‌ಗೆ ತಳ್ಳಿದ್ದರು. ಆದರೆ ಯಾವುದೇ ಸಂದರ್ಭದಲ್ಲೂ ವರಿಷ್ಠರು ತುಟಿ ಪಿಟಿಕ್ ಎಂದಿಲ್ಲ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಬಾರಿ ಯಡಿಯೂರಪ್ಪ ಅವರಿಂದ ಪಕ್ಷಕ್ಕೆ ಲಾಭ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಇರುವ 25 ಸ್ಥಾನಗಳನ್ನು ಉಳಸಿಕೊಳ್ಳುವುದು ಕಷ್ಟ ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ. ಈ 25 ಸ್ಥಾನಗಳನ್ನು ಬಿಜೆಪಿ ಗೆದ್ದಾಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದರು. ಅವರು ಅಧಿಕಾರದಿಂದ ಕೆಳಗಿಳಿದಾಗ ನಡೆದ ಪ್ರಮುಖ ಚುನಾವಣೆ 2023ರ ವಿಧಾನಸಭಾ ಚುನಾವಣೆ. ಅವರಿಲ್ಲದೆ ನಡೆದ ಆ ಚುನಾವಣೆಯಲ್ಲಿ ಪಕ್ಷ ತೀವ್ರ ಪೆಟ್ಟು ತಿಂದಿತ್ತು. ಈಗ ಸ್ವಲ್ಪ ಸುಧಾರಿಸಿಕೊಳ್ಳಬಹುದು ಅಷ್ಟೇ.

IPL_Entry_Point