ಕೊವಿಡ್ ಹರಡಿದ್ದಾಗ ಮೇಕೆದಾಟು ಯಾತ್ರೆ ಮಾಡಿದ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಮೊಕದ್ದಮೆ ಹಿಂಪಡೆಯಲು ಸಂಪುಟ ಒಪ್ಪಿಗೆ
Karnataka Politics: ಕರ್ನಾಟಕದಲ್ಲಿ ಕೊವಿಡ್ ಹರಡಿದ್ದಾಗ ಕಾಂಗ್ರೆಸ್ ಪಕ್ಷವು ಮೇಕೆದಾಟು ಪಾದಯಾತ್ರೆ ನಡೆಸಿತ್ತು. ಕೊವಿಡ್ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಪಾದಯಾತ್ರೆ ನಡೆಸಿದ್ದರಿಂದ ಕೋವಿಡ್–19 ನಿಯಮ ಉಲ್ಲಂಘನೆಯಾಗಿತ್ತು ಎಂಬ ಕಾರಣಕ್ಕೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಮೊಕದ್ದಮೆಗಳನ್ನು ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಪ್ರಕರಣ ಹಿಂದಕ್ಕೆ ಪಡೆಯುವ ಸಂಬಂಧ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಪ್ರಸ್ತಾವನೆ ಸಲ್ಲಿಸಿದ್ದರು. ಬುಧವಾರ ನಡೆದ ಸಚಿವ ಸಂಪುಟದ ಉಪಸಮಿತಿಯ ಶಿಫಾರಸಿನಂತೆ 9 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವುದಕ್ಕಾಗಿ, ಹೈಕೋರ್ಟ್‌ನ ಅನುಮತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸಭೆ ಅನುಮೋದಿಸಿದೆ ಎಂದರು.
ರಾಜ್ಯದ ಜನಪ್ರತಿನಿಧಿಗಳಿಂದ ಮತ್ತು ಸಾರ್ವಜನಿಕರಿಂದ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ಒಳಾಡಳಿತ ಇಲಾಖೆಯಿಂದ ಸಚಿವ ಸಂಪುಟದ ನಿರ್ಣಯದಂತೆ ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳನ್ನು ಹಿಂದಕ್ಕೆ ಪಡೆದಿಲ್ಲ ಎಂದೂ ಅವರು ಇದೇ ಸಂದರ್ಭ ಸ್ಪಷ್ಟಪಡಿಸಿದರು.
ಭ್ರಷ್ಟಾಚಾರ ಆರೋಪ ಸಾಬೀತು: ಓರ್ವ ಅಧಿಕಾರಿ ಸೇವೆಯಿಂದ ವಜಾ, ಇಬ್ಬರಿಗೆ ಕಡ್ಡಾಯ ನಿವೃತ್ತಿ
ಭ್ರಷ್ಟಾಚಾರ ಆರೋಪ ಸಾಬೀತಾಗಿರುವುದರಿಂದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಬ್ಬ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲು ಮತ್ತು ಇಬ್ಬರನ್ನು ಕಡ್ಡಾಯ ನಿವೃತ್ತಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು. ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಡಾ ಎಂ.ಎಚ್.ನಾಗೇಶ್ ಅವರನ್ನು ವಜಾಗೊಳಿಸಲು ಸಂಪುಟ ಅನುಮೋದನೆ ನೀಡಿದೆ. ಇವರು ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ 2007–08 ನೇ ಸಾಲಿನಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಂಸ್ಥೆಯ ನೌಕರರ ಪಿಂಚಣಿ ಮೊತ್ತ ರೂಪಾಯಿ 1 ಕೋಟಿಯನ್ನು ಯೂನಿಟ್ ಟ್ರಸ್ಟ್ ಆಫ್ ಇಂಡಿಯಾದ ಮ್ಯುಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರು ಮತ್ತು ಕೋಟ್ಯಂತರ ಮೌಲ್ಯದ ಯಂತ್ರೋಪಕರಣ ಖರೀದಿಸಿ ಬಳಕೆ ಮಾಡದೇ ಹಾಗೇ ಇಟ್ಟುಕೊಂಡಿದ್ದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಅಧಿಕಾರಿಗೆ 5 ವರ್ಷಗಳ ಸರಳ ಸಜೆ ಮತ್ತು ರೂ 20 ಲಕ್ಷ ದಂಡ ವಿಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪಾಟೀಲ ವಿವರಿಸಿದರು.
ಸ್ರ್ತೀರೋಗ ತಜ್ಞೆಯರಿಗೆ ಕಡ್ಡಾಯ ನಿವೃತ್ತಿ
ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಆಸ್ಪತ್ರೆಯಿಂದ ಮಹಿಳೆಯನ್ನು ಬಿಡುಗಡೆ ಮಾಡಲು ಮಾಡಲು, ಆಕೆಯ ಪತಿಯಿಂದ ರೂ. 5,000 ಲಂಚ ಕೇಳಿದ ಆರೋಪದ ಮೇಲೆ 2015 ರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಡಾ ಉಷಾ ಎಸ್ ಕದರಮಂಡಲಗಿ ಮತ್ತು ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಮತ್ತು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆಗಾಗಿ 2010 ರಲ್ಲಿ ದಾಖಲಾಗಿದ್ದ ನಿರ್ಮಲಾ ಅವರಿಂದ ರೂ 2,500 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಾ ಎಸ್.ಡಿ.ನಾಗಮಣಿ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.