Karnataka Politics: ಸಿಎಂ ಬದಲಾವಣೆ ಬೇಡಿಕೆ ನಡುವೆ ದೆಹಲಿಗೆ ಹೊರಟ ಸಿಎಂ, ಡಿಸಿಎಂ ಜೋಡಿ, ಜತೆಯಾಗಿ ಹೊರಟ ಕಾರಣವೇನು?
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬೇಡಿಕೆ ನಡುವೆ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿ ಭೇಟಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಬೆಂಗಳೂರು:ಕರ್ನಾಟಕದಲ್ಲಿ ಸಿಎಂ ಬದಲಾವಣೆ ಕೂಗು ಎದ್ದಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಹಲವು ಸದಸ್ಯರು ಗುರುವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಜೂನ್ 29ರಂದು 8 ಗಂಟೆಗೆ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ. ಈಗಾಗಲೇ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸಹಿತ ಹಲವರು ಪ್ರಯಾಣ ಬೆಳೆಸಿದ್ದು, ಕಾಂಗ್ರೆಸ್ ವರಿಷ್ಠರನ್ನೂ ಭೇಟಿ ಮಾಡುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಿಂದ ಗೆದ್ದಿರುವ ಎಲ್ಲಾ ಲೋಕಸಭಾ ಹಾಗು ರಾಜ್ಯಸಭಾ ಸದಸ್ಯರನ್ನು, ಹಾಗೂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಕೇಂದ್ರದಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ರಾಜ್ಯ ಸರ್ಕಾರದ ಪರವಾಗಿ ಎಲ್ಲರೂ ಈ ಯೋಜನೆಗಳನ್ನು ಮಂಜೂರು ಮಾಡಿಸುವುದು, ಹಣ ಬಿಡುಗಡೆ ಮಾಡಿಸುವುದು, ಸಂಪನ್ಮೂಲ ಹೆಚ್ಚು ಮಾಡಲು ಪ್ರಯತ್ನ ಪಡಬೇಕೆಂದು ತಿಳಿಸಲು ನೂತನ ಸಂಸದರನ್ನು ಭೇಟಿ ಮಾಡಲಾಗುವುದು ಎನ್ನುವುದು ಸಿಎಂ ಸಿದ್ದರಾಮಯ್ಯ ಅವರ ವಿವರಣೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರು ಬಿಟ್ಟುಕೊಡಬೇಕು ಎನ್ನುವ ಬಹಿರಂಗ ಹೇಳಿಕೆಯನ್ನು ಕೆಂಪೇಗೌಡ ಜಯಂತಿಯಲ್ಲಿ ಒಕ್ಕಲಿಗ ಸಮುದಾಯದ ಸ್ವಾಮೀಜಿ ಒಬ್ಬರು ನೀಡಿದ ನಂತರ ದೆಹಲಿ ಭೇಟಿ ಮಹತ್ವ ಪಡೆದಿದೆ. ಸಿಎಂ ಸ್ಥಾನವನ್ನು ಡಿಕೆಶಿ ಅವರಿಗೆ ಬಿಟ್ಟುಕೊಡಲು ಸಿದ್ದರಾಮಯ್ಯ ಅವರು ಮನಸು ಮಾಡಬೇಕು ಎಂದು ಚಂದ್ರಶೇಖರ ಸ್ವಾಮೀಜಿ ಅವರು ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇದೆ. ಹೈಕಮಾಂಡ್ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಎನ್ನುವ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು. ಇದರ ಬೆನ್ನಲ್ಲೇ ಪೂರ್ವ ನಿಗದಿಯಂತೆ ಇಬ್ಬರು ನಾಯಕರು ಹಾಗೂ ಸಚಿವರು ದೆಹಲಿ ಕಡೆಗೆ ಹೊರಟರು, ಮೂರು ದಿನ ಇಬ್ಬರು ನಾಯಕರು ದೆಹಲಿಯಲ್ಲಿ ಇರಲಿದ್ದಾರೆ.
ಇದರ ಜತೆಯಲ್ಲಿಯೇ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೂಡ ಧಾರವಾಡದಲ್ಲಿ ಹೇಳಿಕೆ ನೀಡಿ, ಮುಖ್ಯಮಂತ್ರಿ ಅಧಿಕಾರ ಒಂದು ವರ್ಷವೋ ಎರಡೂ ವರೆ ವರ್ಷವೋ ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಸ್ವಾಮೀಜಿ ಅವರ ಹೇಳಿಕೆ ವೈಯಕ್ತಿಕ. ಸಿಎಂ ಬದಲಾವಣೆ ವಿಚಾರವಾಗಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.
ವರಿಷ್ಠರ ಭೇಟಿ ಸಾಧ್ಯತೆ
ಲೋಕಸಭೆ ಚುನಾವಣೆ ಫಲಿತಾಂಶ, ಕರ್ನಾಟಕದಲ್ಲಿನ ರಾಜಕೀಯ ಸ್ಥಿತಿಗತಿ ಸಹಿತ ಹಲವು ವಿಚಾರವಾಗಿ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತಿರರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪಕ್ಷದಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ ಸಹಿತ ಹಲವು ವಿಚಾರಗಳೂ ಚರ್ಚೆಗೆ ಬರಬಹುದು, -ಈ ಕುರಿತಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಮುಖಂಡರು ನೀಡುತ್ತಿರುವ ಹೇಳಿಕೆಗೆಳಿಗೆ ತೆರೆ ಬೀಳಬಹುದು ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಕೇಂದ್ರ ಸಚಿವರ ಭೇಟಿ
ವಿಶೇಷವಾಗಿ ನಮ್ಮ ಸಚಿವರೂ ಕೂಡ ಜೊತೆಗೂಡಿದ್ದು, ದೆಹಲಿಯಲ್ಲಿ ಪ್ರಧಾನಮಂತ್ರಿ ಭೂಸಾರಿಗೆ ಸಚಿವರು,ರೈಲ್ವೆ, ನೀರಾವರಿ , ಗೃಹ ಸಚಿವರು ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಲಿರುವುದಾಗಿ ಸಿದ್ದರಾಮಯ್ಯ ಹೇಳಿದರು.
ಗೃಹಸಚಿವರು ಭೇಟಿಗೆ ಇನ್ನೂ ಸಮಯ ನಿಗದಿಮಾಡಿಲ್ಲ. ಶೀಘ್ರವೇ ಮಾಡುತ್ತಾರೆ.ನಿತಿನ್ ಗಡ್ಕರಿಯವರು ಸಮಯ ನಿಗದಿ ಮಾಡಿದ್ದಾರೆ. ರಾಜ್ಯದಲ್ಲಿ ಆಗಬೇಕಿರುವ ಕೆಲಸಗಳಪಟ್ಟಿ ಕಳುಹಿಸಲಾಗಿದೆ. ಹೊಸ ಸರ್ಕಾರದಿಂದ ಮಂಡಿಸಲಾಗುವ ಬಜೆಟ್ ನಲ್ಲಿ ಕರ್ನಾಟಕ ನಿರೀಕ್ಷೆ ಮಾಡುವ ಕೆಲಸಗಳ ಪಟ್ಟಿಯನ್ನು ಕಂದಾಯ ಸಚಿವರು ಈಗಾಗಲೇ ಮಂಡಿಸಿದ್ದಾರೆ ಎಂದು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಗುರುವಾರ ಹೇಳಿದರು.