MLC Election 2024: ಪ್ರಜ್ವಲ್ ಪ್ರಕರಣ ನಡುವೆಯೇ ವಿಧಾನ ಪರಿಷತ್ 6 ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ; ಜೂ 6 ಕ್ಕೆ ಫಲಿತಾಂಶ
ಪ್ರಜ್ವಲ್ ರೇವಣ್ಣ ಹಗರಣದ ನಡುವೆಯೂ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರೆಯುವ ಸಾಧ್ಯತೆ ಇದ್ದು, ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಜೂನ್ 3ಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ 4 ಮತ್ತು ಜೆಡಿಎಸ್ 2 ಸ್ಥಾನಗಳಿಗೆ ಸ್ಪರ್ಧೆ ಮಾಡಲಿದೆ.
ಬೆಂಗಳೂರು: ವಿಧಾನ ಪರಿಷತ್ತಿನ (Karnataka Legislative Council Election 2024) ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ದ್ವೈ ವಾರ್ಷಿಕ ಚುನಾವಣೆಗೆ ಜೂನ್ 3ರಂದು ಮತದಾನ ನಡೆಯಲಿದ್ದು, ಈ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP JDS Alliance) ಮುಂದುವರೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಪೆನ್ ಡ್ರೈವ್ ಹಗರಣದ ಹೊರತಾಗಿಯೂ ಹೊಂದಾಣಿಕೆ ಮುಂದುವರೆಯಲಿದೆ ಎರಡೂ ಪಕ್ಷಗಳ ನಾಯಕರು ಸ್ಪಷ್ಟಪಡಿಸಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್ ನ ಎಸ್‌ಎಲ್ ಭೋಜೇಗೌಡ ಅವರ ಅವಧಿ ಜೂನ್ 21ಕ್ಕೆ ಅಂತ್ಯಗೊಳ್ಳಲಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮರಿತಿಬ್ಬೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ.
ಈ ಚುನಾವಣೆಗೂ ಮೈತ್ರಿ ಅಭಾದಿತವಾಗಿ ಮುಂದುವರೆಯಲಿದೆ. ಮೌಖಿಕವಾಗಿ ಸ್ಥಾನ ಹೊಂದಾಣಿಕೆ ಕುರಿತು ನಿರ್ಧಾರವಾಗಿದೆ. ಉಳಿದ 4 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಜೆಡಿಎಸ್ ತಿಳಿಸಿದೆ. ಬಿಜೆಪಿ ಮುಖಂಡರೂ ಹೊಂದಾಣಿಕೆಯನ್ನು ಅಲ್ಲಗಳೆದಿಲ್ಲ. ಆದರೆ ಸೀಟು ಹೊಂದಾಣಿಕೆ ಕುರಿತು ಇನ್ನಷ್ಟೇ ತೀರ್ಮಾನವಾಗಬೇಕಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ಜೆಡಿಎಸ್ ಹೊಂದಾಣಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಎನ್‌ಡಿಎ ಮೈತ್ರಿ ವಿಫಲವಾಗಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಈ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದರೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಮೂಲಕ ಈ ಹೊಂದಾಣಿಕೆಯನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಅವರನ್ನು ಬಾರಿ ಮತಗಳ ಅಂತರದಿಂದ ಸೋಲಿಸಿದ್ದರು.
ಬಿಜೆಪಿಯ ಇತರ ಮೂಲಗಳ ಪ್ರಕಾರ ಇತ್ತೀಚಿನ ಜೆಡಿಎಸ್‌ನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೈತ್ರಿ ಮುಂದುವರೆಯುವುದು ಅನುಮಾನ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಹಗರಣದಲ್ಲಿ ದೇಶ ವಿದೇಶಗಳಲ್ಲಿ ಬಿಜೆಪಿ ಮುಜುಗರಕ್ಕೆ ಸಿಲುಕಿದೆ. ದೇಶದ ಉದ್ದಗಲಕ್ಕೂ ಅತ್ಯಚಾರಿಗಳನ್ನು ಬಿಜೆಪಿ ಬೆಂಬಲಿಸುತಿದೆ ಎಂಬ ಹೊಸ ವಾದ ಹುಟ್ಟಿಕೊಳ್ಳುತ್ತಿದೆ. ಈ ಹಗರಣದಿಂದ ಬಿಜೆಪಿಗೆ ಮುಜುಗರ ಉಂಟಾಗಿರುವುದು ಸುಳ್ಳಲ್ಲ. ಆದ್ದರಿಂದ ವರಿಷ್ಠರು ಮೈತ್ರಿ ಮುಂದುವರೆಸಲು ಒಪ್ಪಿಕೊಳ್ಳುವುದು ಅನುಮಾನ ಎಂದು ಮತ್ತೊಬ್ಬ ಬಿಜೆಪಿ ಮುಖಂಡರು ಪ್ರತಿಪಾದಿಸುತ್ತಾರೆ.
ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹು ಮುಖ್ಯವಾಗಿದೆ. ಜೆಡಿಎಸ್ ಬೆಂಬಲದೊಂದಿಗೆ ವಿಧಾನಪರಿಷತ್‌ನಲ್ಲಿ ಬಿಜೆಪಿ ಮುಂದಿದೆ. 75 ಸದಸ್ಯರ ಬಲದಲ್ಲಿ ಬಿಜೆಪಿ ಜೆಡಿಎಸ್ 39 ಸದಸ್ಯರನ್ನು ಹೊಂದಿದ್ದು ಸರಳ ಬಹುಮತ ಹೊಂದಿದೆ. ಬಿಜೆಪಿ 32, ಕಾಂಗ್ರೆಸ್ 29 ಮತ್ತು ಜೆಡಿಎಸ್ 7 ಸದಸ್ಯರನ್ನು ಹೊಂದಿವೆ. ಈ ಬಹುಮತದ ಆಧಾರದಲ್ಲಿಯೇ ಬಿಜೆಪಿಯ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಮುಂದುವರೆದಿದ್ದಾರೆ.
ಈ ಆರು ಸ್ಥಾನಗಳ ಫಲಿತಾಂಶ ಮತ್ತು ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್ ಗೆ ಆಯ್ಕೆಯಾಗುವ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲಿದೆ. 2018ರಲ್ಲಿ ನಡೆದ ದ್ವೈ ವಾರ್ಷಿಕ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಕಾಂಗ್ರೆಸ್ 1, ಬಿಜೆಪಿ 3 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ ಬಿಜೆಪಿಯಿಂದ ಗೆದ್ದಿದ್ದ ಅಯನೂರು ಮಂಜುನಾಥ್ ಮತ್ತು ಜೆಡಿಎಸ್ ನಿಂದ ಗೆದ್ದಿದ್ದ ಮರಿತಿಬ್ಬೇಗೌಡ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಈಗಾಗಲೇ 6 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆಗಲೇ ಮತದಾರರ ನೋಂದಣಿ ಮತ್ತು ಪ್ರಚಾರದಲ್ಲಿ ನಿರತರಾಗಿದ್ದಾರೆ. ವಿಧಾನಪರಿಷತ್‌ನಲ್ಲಿ ವಿಧಾನಸಭೆಯ ಸದಸ್ಯ ಬಲದ ಆಧಾರದ ಮೇಲೆ 11 ಸ್ಥಾನಗಳ ಅವಧಿ 2024ರ ಜೂನ್ 17ರಂದು ಮುಕ್ತಾಯವಾಗಲಿದೆ. ಜಗದೀಶ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಹೀಗೆ 12 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿಧಾನಸಭೆಯ ಶಾಸಕರ ಬಲದ ಆಧಾರದಲ್ಲಿ ಕಾಂಗ್ರೆಸ್ 9, ಬಿಜೆಪಿ 2 ಮತ್ತು ಬಿಜೆಪಿ ಸಹಕಾರ ನೀಡಿದರೆ ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಅವಕಾಶವಿದೆ. ಒಟ್ಟಾರೆ ಜೂನ್ ನಲ್ಲಿ ಕಾಂಗ್ರೆಸ್‌ನ ಹೊಸ ಸಭಾಪತಿಯನ್ನು ಕಾಣಬಹುದಾಗಿದೆ.