MLA Letter: ನನ್ನ ಹೆಸರಲ್ಲಿ ಹರಿದಾಡುತ್ತಿರುವುದು ಫೇಕ್ ಲೆಟರ್, ಸಿಎಂಗೆ ನಾನು ಯಾವುದೇ ಪತ್ರ ಬರೆದಿಲ್ಲ: ಶಾಸಕ ಬಿ.ಆರ್. ಪಾಟೀಲ ಸ್ಪಷ್ಟೀಕರಣ
ಸಚಿವರ ವಿರುದ್ದ ಶಾಸಕ ಬಿ.ಆರ್.ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಪತ್ರ ಬರೆಯಲಾಗಿದೆ ಎನ್ನುವ ಸ್ಪಷ್ಟನೆ ಹೊರ ಬಿದ್ದಿದೆ. ನನ್ನಹಾಗೂ ಪ್ರಿಯಾಂಕ್ ಖರ್ಗೆ( Priyank Kharge) ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಇಂತಹ ಪತ್ರ ಸೃಷ್ಟಿಸಿದ್ದು ಪೊಲೀಸರಿಗೂ ದೂರು ನೀಡುವೆ ಎಂದು ಪಾಟೀಲ್ ಹೇಳಿದ್ದಾರೆ.
ಬೆಂಗಳೂರು: ಸಿಎಂ ಅವರಿಗೆ ತಾವು ಯಾವುದೇ ಪತ್ರ ಬರೆದಿಲ್ಲ. ನಕಲಿ ಪತ್ರ ತಯಾರಿಸಿ ಬಿಟ್ಟಿದ್ದಾರೆ ಎಂದು ಅಳಂದ ಶಾಸಕ ಬಿ.ಆರ್.ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಈ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳುಗಳನ್ನು ಹರಿಬಿಡಲಾಗಿದೆ. ಶಾಸಕರ ಕುಂದುಕೊರತೆಗಳನ್ನು ಆಲಿಸಲು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ಫೇಕ್ ಲೆಟರ್ ಹರಿದು ಬಿಟ್ಟಿದ್ದಾರೆ ಎಂದು ಶಾಸಕ ಬಿ.ಆರ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಪತ್ರ ತಮ್ಮದಲ್ಲಾ, ತಾವು ಕೊಟ್ಟ ಪತ್ರಕ್ಕೂ ಈ ಪತ್ರದಲ್ಲಿರುವ ವಿಷಯಕ್ಕೂ ಸಂಬಂಧವಿಲ್ಲ. ಈ ಫೇಕ್ ಲೆಟರ್ ನಲ್ಲಿ ನನ್ನ ಸಹಿಯನ್ನು ಫೋಟೋ ಶಾಪ್ ಮೂಲಕ ಅಂಟಿಸಲಾಗಿದೆ. ಅಲ್ಲದೇ ಈ ಫೇಕ್ ಲೆಟರ್ ನಲ್ಲಿ ನನ್ನ ಹಳೆಯ ಮನೆಯ ವಿಳಾಸ ಬರೆಯಲಾಗಿದೆ. ಪತ್ರವನ್ನು ಡಿಜಿಟಲ್ ನಲ್ಲಿ ಟೈಪ್ ಮಾಡಿ, ಸಹಿಗೆ ಜೆರಾಕ್ಸ್ ನಿಂದ ಸ್ಕ್ಯಾನ್ ಮಾಡಿ ಬಳಸಲಾಗಿದೆ. ಈ ಪತ್ರ ನನ್ನದಲ್ಲಾ. ನನ್ನ ಎಲ್ಲಾ ಅಧಿಕೃತ ಪತ್ರಗಳಲ್ಲಿ ಕ್ರಮ ಸಂಖ್ಯೆಯನ್ನು ಪೂರ್ವನಿಯೋಜಿತವಾಗಿ ಪ್ರಿಂಟ್ ಮಾಡಿರಲಾಗಿದೆ. ಇದು ಫೇಕ್ ಲೆಟರ್ ಎನ್ನಲು ಅಷ್ಟು ಸಾಕು ಎಂದು ಹೇಳಿದ್ದಾರೆ.
ನನ್ನ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ಮನಸ್ತಾಪ ಹಚ್ಚಲು ಕುತಂತ್ರದಿಂದ ಮಾಡಿರುವಂತಿದೆ. ಇದನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೂಡ ಕಲಬುರ್ಗಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಿದ್ದೇನೆ ಎಂದೂ ಶಾಸಕ ಬಿ.ಆರ್ ಪಾಟೀಲ್ ತಿಳಿಸಿದ್ದಾರೆ.