ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ, ಇದು ಅನ್ಯಾಯವಲ್ಲವೇ; ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ, ಇದು ಅನ್ಯಾಯವಲ್ಲವೇ; ರಾಜೀವ ಹೆಗಡೆ ಬರಹ

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ, ಇದು ಅನ್ಯಾಯವಲ್ಲವೇ; ರಾಜೀವ ಹೆಗಡೆ ಬರಹ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವುದಾದರೆ, ಆ ಮಾನದಂಡ ಡಿಕೆ ಶಿವಕುಮಾರ್‌ ಉಪಮುಖ್ಯಮಂತ್ರಿ ಹುದ್ದೆಗೂ ಅನ್ವಯವಾಗಬೇಕಲ್ಲವೇ ಎಂದು ಹಿರಿಯ ಪತ್ರಕರ್ತ ರಾಜೀವ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ?
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ? (PTI)

ಮುಡಾ ಸೈಟ್​ ಹಗರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್​ಐಆರ್​​ ದಾಖಲಾಗುತ್ತಿದ್ದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಜೋರಾಗಿದೆ. ಅತ್ತ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಆದರೆ, ರಾಜೀನಾಮೆ ವಿಷಯದ ಚರ್ಚೆ ನಡೆಯುತ್ತಿಲ್ಲ. ಈ ಕುರಿತು ರಾಜೀವ ಹೆಗಡೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಎರಡೂ ಪ್ರತ್ಯೇಕ ಪ್ರಕರಣಗಳನ್ನು ಒಂದೇ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದ್ದರೂ, ರಾಜೀನಾಮೆ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮಾತ್ರ ಧ್ವನಿ ಕೇಳಿಬರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿರುವುದು ರಾಜೀವ ಹೆಗಡೆ ಅವರ ಬರಹ.

ಮುಡಾ ಹಗರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಲೋಕಾಯುಕ್ತ ತನಿಖೆಗೆ ಆದೇಶವಾಗಿದೆ. ಹೀಗಾಗುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವುದು ಪ್ರತಿಪಕ್ಷಗಳ ಕಡೆಯಿಂದ, ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಆಗ್ರಹಿಸುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಅಪರೂಪಕ್ಕೆ ಎನ್ನುವಂತೆ ಬೀದಿಗೆ ಬಂದು ಪ್ರತಿಭಟನೆ ಮಾಡುವ ಮಟ್ಟಿಗೆ ಎಚ್ಚರವಾಗಿದ್ದಾರೆ. ರಾಜ್ಯದಲ್ಲಿ ಪ್ರತಿಪಕ್ಷಕ್ಕೆ ಜೀವ ಬಂದಿದೆ ಎನ್ನುವ ಖುಷಿಯ ನಡುವೆ ತನಿಖೆಯ ಬಗ್ಗೆ ಒಂದಿಷ್ಟು ವಿಚಾರಗಳನ್ನು ಅರಿಯೋಣ.

ಸಿದ್ದರಾಮಯ್ಯ ಒಬ್ಬರು ಮಾತ್ರ ರಾಜೀನಾಮೆ ನೀಡಿದರೆ ಸಾಕೆ?

ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ ಆದೇಶದ ಪ್ರಕಾರ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿ ಮುಡಾ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಲಿದೆ. ಲೋಕಾಯುಕ್ತ ತನಿಖೆಯೆಂದರೆ ಆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಯಲಿದೆ. ಲೋಕಾಯುಕ್ತ ಪೊಲೀಸರು ಮೇಲ್ನೋಟಕ್ಕೆ ಸ್ವತಂತ್ರರು ಎಂದು ಹೇಳಬಹುದು. ಲೋಕಾಯುಕ್ತ ಹುದ್ದೆಯಲ್ಲಿ ನ್ಯಾ.ಸಂತೋಷ್‌ ಹೆಗ್ಡೆ ಅವರನ್ನು ಈ ಕ್ಷಣದಲ್ಲಿ ಮಿಸ್‌ ಮಾಡಿಕೊಳ್ಳುತ್ತಾ, ಆ ತನಿಖೆಯ ವರದಿ ಏನು ಬರಲಿದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರವಾಗಿದೆ. ಇಂತಹ ಸ್ಥಿತಿಯಲ್ಲಿ ಪಾರದರ್ಶಕ ತನಿಖೆ ಹಾಗೂ ನೈತಿಕತೆ ಆಧಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಕೇಳುವುದು ರಾಜಕೀಯ ಹಾಗೂ ಕಾನೂನು ವ್ಯಾಪ್ತಿಯಲ್ಲಿ ಖಂಡಿತಾ ಸರಿಯಾಗಿದೆ. ಈ ಹಿಂದೆ ಯಡಿಯೂರಪ್ಪ ಸೇರಿ ಇತರರ ವಿರುದ್ದ ಆರೋಪ ಬಂದಾಗ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರ ವಾದವೂ ಇದೇ ನೆಲೆಗಟ್ಟಿನಲ್ಲಿತ್ತು. ಸಿದ್ದರಾಮಯ್ಯ ಅವರ ರಾಜಕೀಯ ಪಥವನ್ನು ನೋಡಿದಾಗ ಕುಗ್ಗಿರುವ ಅವರ ಮುಖವನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ನೆನೆಸಿಕೊಳ್ಳುವುದ ಕಷ್ಟ. ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಪ್ರಧಾನಿ ಸೇರಿ ಕರ್ನಾಟಕದ ಪ್ರತಿಪಕ್ಷಗಳು, ಮಾಧ್ಯಮಗಳು ಏಕಮುಖವಾಗಿ ನೋಡುತ್ತಿವೆ ಎಂದು ನನಗೆ ಅನಿಸುತ್ತಿದೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ಸುಮಾರು ಒಂದು ವರ್ಷದ ಹಿಂದೆ ಲೋಕಾಯುಕ್ತ ಪೊಲೀಸ್‌ ತನಿಖೆಗೆ ನಮ್ಮ ರಾಜ್ಯ ಸರ್ಕಾರವೇ ಆದೇಶಿಸಿದೆ. ಅದಕ್ಕೆ ಹೈಕೋರ್ಟ್‌ ಸಿಂಧುತ್ವ ಕೂಡ ದೊರೆತಿದೆ. ತಾರ್ಕಿಕ ಹಾಗೂ ಕಾನೂನುಬದ್ಧವಾಗಿ ನೋಡಿದಾಗ ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರಕರಣದ ವಿಚಾರಣೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸರ ಮೂಲಕವೇ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ವ್ಯಾಪ್ತಿ ಅಥವಾ ಉದ್ದ-ಅಗಲ ನೋಡಿದರೆ ಡಿಕೆಶಿಯೇ ಒಂದಿಷ್ಟು ಕ್ವಿಂಟಾಲ್‌ ಹೆಚ್ಚು ತೂಗುತ್ತಾರೆ. ಇನ್ನು ಪ್ರಭಾವ, ಒತ್ತಡ ಎನ್ನುವ ಕಲ್ಪನೆಯ ವಿಚಾರಗಳು ಬಂದಾಗ ಪ್ರತಿಯೊಬ್ಬರೂ ಸ್ಪರ್ಧೆಗೆ ನಿಲ್ಲುತ್ತಾರೆ. ಅಧಿಕಾರದಲ್ಲಿದ್ದಾಗ ತಾನು ಪ್ರಭಾವ ಬೀರುವುದಿಲ್ಲ ಎನ್ನುವುದು, ಚುನಾವಣೆಯ ಪ್ರಣಾಳಿಕೆಯಲ್ಲಿ ಜನರಿಗೆ ನೀಡುವ ಭರವಸೆಯಷ್ಟೇ ಸತ್ಯವಾಗಿರುತ್ತದೆ.

ಹೀಗಾಗಿ ಎರಡೂ ಪ್ರತ್ಯೇಕ ಪ್ರಕರಣಗಳನ್ನು ಒಂದೇ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ ಅಥವಾ ನಡೆಸಲಿದೆ. ಆದರೆ ರಾಜೀನಾಮೆ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮಾತ್ರ ಹೋರಾಟವೇಕೆ? ಸಿದ್ದರಾಮಯ್ಯ ಬಗ್ಗೆ ಮಾತ್ರ ಮಾತನಾಡುತ್ತಿರುವುದೇಕೆ?

ಡಿಕೆ ಶಿವಕುಮಾರ್‌ ವಿರುದ್ಧ ಏಕಿಲ್ಲ

ಒಂದೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವುದಾದರೆ, ಅದೇ ಮಾನದಂಡವು ಡಿಕೆ ಶಿವಕುಮಾರ್‌ ಅವರ ಉಪಮುಖ್ಯಮಂತ್ರಿ ಹುದ್ದೆಗೂ ಅನ್ವಯವಾಗಬೇಕಲ್ಲವೇ? ಡಿಕೆಶಿಯವರು ಕಳೆದ ಕೆಲ ತಿಂಗಳಿಂದ ವಿಚಾರಣೆ ನಡೆಸುತ್ತಿದ್ದರೂ ರಾಜೀನಾಮೆಯ ಯಾವುದೇ ಕೂಗಿಲ್ಲ, ಕಿರುಚಾಟವೂ ಎಲ್ಲಿಯೂ ಕಾಣಿಸುತ್ತಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರಿಗೆ ಹೊಸ ಮಾನದಂಡವೇಕೆ?

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ, ಈ ಸರ್ಕಾರವೇ ಇರದಿರುವಾಗ ಡಿಕೆಶಿ ಉಪಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ. ಆದರೆ ಹೊಸ ಸರ್ಕಾರ ರಚನೆಯಾದಾಗಲೂ ಡಿಕೆ ಶಿವಕುಮಾರ್‌ ಅವರು ಸಿಎಂ ಅಥವಾ ಡಿಸಿಎಂ ಆಗಿರಕೂಡದು. ಒಂದೇ ರಾಜ್ಯ, ಒಂದೇ ಪಕ್ಷ, ಒಂದೇ ಕಾನೂನು, ಒಂದೇ ತನಿಖಾ ಸಂಸ್ಥೆ ವಿಚಾರಕ್ಕೆ ಸಂಬಂಧಿಸಿ ಎರಡು ನ್ಯಾಯ ಪಂಚಾಯಿತಿ ಮಾಡುವುದು ಸರಿಯಲ್ಲ. ಇಲ್ಲವಾದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವೇ ಬರುವುದಿಲ್ಲ. ಅಂದ ಹಾಗೆ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಬಿಟ್ಟರೆ ಸಿದ್ದರಾಮಯ್ಯ ಜಾಗವನ್ನು ಸದ್ಯದ ಮಟ್ಟಿಗೆ ತುಂಬಲು ಇನ್ಯಾರೂ ಕಾಣಿಸುತ್ತಿಲ್ಲ. ಆದರೆ ಖರ್ಗೆ ವಿರುದ್ಧವೂ ಕಾನೂನು ಹೋರಾಟ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಇಷ್ಟಾದರೂ ಯಾರಿಗೂ ಡಿಕೆ ಶಿವಕುಮಾರ್‌ ವಿರುದ್ಧದ ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದ ಲೋಕಾಯುಕ್ತ ತನಿಖೆ ಕಾಣಿಸದಿರುವುದು ಅನ್ಯಾಯವಲ್ಲವೇ.