ಜಟಾಪಟಿ: ಸಿಎಂ ವಿರುದ್ಧ ಮಾಜಿ ಸಿಎಂ ಸಾಲು ಸಾಲು ಆರೋಪ; ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಲ್ಲ ಎಂದ ಸಿದ್ದರಾಮಯ್ಯ
Siddaramaiah vs HD Kumarasway: ಸಿಎಂ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಹೆಚ್ಡಿಕೆ, ಅದರಂತೆ ಇಂದು (ಸೆಪ್ಟೆಂಬರ್ 28, ಶನಿವಾರ) ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಸಾಲು ಸಾಲು ಆರೋಪ ಮಾಡಿದರು. ಮತ್ತೊಂದೆ ಕುಮಾರಸ್ವಾಮಿ ಆರೋಪಗಳಿಗೆ ನಾನು ಉತ್ತರ ಕೊಡಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.
ಬೆಂಗಳೂರು/ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣದಲ್ಲಿ ಎ1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಂಗೇನಹಳ್ಳಿಯ 1.11 ಎಕರೆ ಭೂಮಿ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸೆಪ್ಟೆಂಬರ್ 27ರ ಶುಕ್ರವಾರ ಮೈಸೂರು ಮತ್ತು ಬೆಂಗಳೂರಿನಲ್ಲಿ ಸಿಎಂ ಮತ್ತು ಮಾಜಿ ಸಿಎಂ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಸಿಎಂ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಹೆಚ್ಡಿಕೆ, ಅದರಂತೆ ಇಂದು (ಸೆಪ್ಟೆಂಬರ್ 28, ಶನಿವಾರ) ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಸಾಲು ಸಾಲು ಆರೋಪ ಮಾಡಿದರು. ಮತ್ತೊಂದೆ ಕುಮಾರಸ್ವಾಮಿ ಆರೋಪಗಳಿಗೆ ನಾನು ಉತ್ತರ ಕೊಡಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು
ಮುಡಾ ಹಗರಣಕ್ಕೆ ಸಿಲುಕಿದ ಕ್ಷಣದಿಂದಲೂ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ರಾಜಭವನವನ್ನು ದುರುಪಯೋಗ ಮಾಡಿಕೊಳ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದೀಗ ಈ ಆರೋಪಕ್ಕೆ ಸಂಬಂಧಿಸಿ ಹೆಚ್ಡಿಕೆ, ಸಿಎಂ ವಿರುದ್ಧ ವಿಡಿಯೋ ಮೂಲಕ ಬಾಂಬ್ ಸಿಡಿಸಿದ್ದಾರೆ. 2011ರಲ್ಲಿ ವಿಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದು ಗರ್ವನರ್ ಕುರಿತು ಏನೆಲ್ಲಾ ಮಾತನಾಡಿದರು ಎನ್ನುವ ವಿಡಿಯೋವನ್ನು ಕುರಿತು ಕುಮಾರಸ್ವಾಮಿ ಬಿಡುಗಡೆ ಮಾಡಿ, ಈಗ ಪದೇ ಪದೇ ಆರೋಪ ಮಾಡುತ್ತಿರುವ ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದಾರೆ. ತಾವು ಕೂಡ ಈ ವಿಡಿಯೋ ನೋಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಗಂಗೇನಹಳ್ಳಿಯ 1 ಎಕರೆ 11 ಗುಂಟೆ ಜಮೀನಿನ ಡಿನೋಟಿಫಿಕೇಷನ್ ಸಂಬಂಧ ಕುಮಾರಸ್ವಾಮಿ ರಾಜೀನಾಮೆಯನ್ನೂ ನೀಡದೆ ಜಾಮೀನು ಪಡೆದು ಹೊರಗೆ ಓಡಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಉತ್ತರಿಸಿದ ಹೆಚ್ಡಿಕೆ, ನಿಮ್ಮಂಗೆ ರಾಜೀನಾಮೆ ಕೊಡದೆ ಭಂಡತನ ಪ್ರದರ್ಶಿಸಲ್ಲ ಎಂದರು. ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನೇಕೆ ರಾಜೀನಾಮೆ ಕೊಡಬೇಕು, ನನಗೇನು ತಲೆ ಕೆಟ್ಟಿದ್ಯಾ? ನಾನೇನಾದೂ ತಪ್ಪು ಮಾಡಿದ್ದೇನಾ? ಅವಶ್ಯಕತೆ ಬಂದಾಗ ರಾಜೀನಾಮೆ ಕೊಡುವೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ, ನನ್ನ ವಿರುದ್ಧ ಇದೇ ಮೊದಲ ಬಾರಿಗೆ ರಾಜಕೀಯ ಕೇಸ್ ಹಾಕಲಾಗಿದೆ ಎಂದು ಹೇಳಿದ್ದ ಸಿದ್ದರಾಮಯ್ಯ ಹೇಳಿಕೆಗೂ ಕೌಂಟರ್ ಕೊಟ್ಟ ಮಾಜಿ ಸಿಎಂ, ಅವರ ವಿರುದ್ಧ ದಾಖಲಾಗಿರುವ 50 ಪ್ರಕರಣಗಳು ಇನ್ನೂ ಬಾಕಿ ಇವೆ. ಅದರ ದಾಖಲೆಗಳು ಇಲ್ಲಿವೆ ನೋಡಿ ಎಂದು ಪ್ರದರ್ಶಿಸಿದರು.
ಮೈಸೂರು ಹಗರಣದಲ್ಲಿ ನಿಮ್ಮ ಪಾತ್ರವೇ ಇಲ್ಲವೆಂದಾದರೆ ಸಚಿವ ಸಂಪುಟದಲ್ಲಿ ರಾಜ್ಯಪಾಲರಿಗೆ ನೇರವಾಗಿ ಉತ್ತರಿಸುವ ಬದಲಿಗೆ ಕ್ಯಾಬಿನೆಟ್ ಜೊತೆ ಚರ್ಚಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದು ಸೇರಿ ಹಲವು ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಹಲವು ಕೇಸ್ಗಳಲ್ಲಿ ಎಫ್ಐಆರ್ ಹಾಕಿ, ತಕ್ಷಣ ಬಂಧಿಸುವ ಪ್ರಕ್ರಿಯೆ ನಡೆಸಿಕೊಂಡು ಬಂದಿದ್ದೀರಿ. ಆದರೆ ನಿಮ್ಮ ವಿರುದ್ಧ 48 ಗಂಟೆಗಳಾದರೂ ಎಫ್ಐಆರ್ ದಾಖಲಾಗಲಿಲ್ಲವೇಕೆ? ಗೃಹ ಸಚಿವರೇ ಇದಕ್ಕೆ ನೀವೇ ಉತ್ತರ ಕೊಡಬೇಕು ಎಂದು ಜಿ ಪರಮೇಶ್ವರ ವಿರುದ್ಧವೂ ಹೆಚ್ಡಿಕೆ ಕಿಡಿಕಾರಿದರು. ಮಾತೆತ್ತಿದರೆ ನಮ್ಮ ಸರ್ಕಾರ 136 ಸೀಟ್ ಬಂದಿದೆ. ಸರ್ಕಾರ ಅಸ್ಥಿರಕ್ಕೆ ಬಿಜೆಪಿ-ಜೆಡಿಎಸ್ ಷಡ್ಯಂತ್ರ ನಡೆಸ್ತಿದೆ ಎನ್ನುತ್ತೀರಿ. ನೀವೇಳಿದ್ದು ನಿಜ ಅಭಿವೃದ್ಧಿ ಮಾಡಲೆಂದೇ ಜನ ಅಧಿಕಾರ ಕೊಟ್ಟಿದ್ದಾರೆ. ಆದರೆ, ನೀವು ಮಾತ್ರ ಏನು ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ್ದಾರೆ.
ಮಾತನಾಡುವಾಗೆಲ್ಲಾ, ನನ್ನ ಮುಗಿಸೋಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳುತ್ತೀರಿ. ನಮಗ್ಯಾಕೆ ಹೊಟ್ಟೆ ಹುರಿ. ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ. ನೀವು ಏನು ಕೆಲಸ ಮಾಡುತ್ತೀರೋ ಆ ಕೆಲಸವಷ್ಟೇ ಶಾಶ್ವತವಾಗಿ ಉಳಿಯುತ್ತದೆ ಎಂದ ಅವರು, ಚುನಾವಣಾ ಬಾಂಡ್ ಕುರಿತು ಮಾತನಾಡಿದರು. ಚುನಾವಣೆ ಬಾಂಡ್ ಸೀತಾರಾಮನ್ ವೈಯಕ್ತಿಕ ಖಾತೆಗೆ ಹೋಗಿದೆಯೇ? ನಿಮ್ಮ ರೀತಿ ಅವರು ಲಪಟಾಯಿಸಿಲ್ಲ. ಡಿನೋಟಿಫಿಕೇಷನ್ ಬಳಿಕ ಪ್ರಕರಣಗಳ ಕುರಿತೂ ಚರ್ಚಿಸಿ. ಕೃಷ್ಣ ಬೈರೇಗೌಡರೇ ಈ ಬಗ್ಗೆ ವ್ಯತ್ಯಾಸ ಏನಿದೆ ಎಂಬುದನ್ನು ನೋಡಿ. ನೀವು ಕಾನೂನು ಸಚಿವರಾಗಿ ಕೆಲಸ ಮಾಡಿದ್ದೀರಿ. 1997-2022ರವರೆಗೆ ಕಡತಗಳನ್ನು ತೆಗಿದುನೋಡಿ. ಅಲ್ಲಿ ನನ್ನ ಹೆಸರೇ ಇಲ್ಲ. ಕಡತ ಬಂದಾಗಷ್ಟೇ ಸಹಿ ಮಾಡಿದ್ದೇನೆ. ಡಿನೋಟಿಫಿಕೇಷನ್ ಆದೇಶಿಸಿಲ್ಲ. ಎಲ್ಲಾ ರೀತಿಯ ಮಾಹಿತಿ ಪಡೆದು ಜವಾಬ್ದಾರಿ ಹೇಗೆ ನಿಭಾಯಿಸಬೇಕು ನೋಡಿ ಎಂದು ಹೇಳಿದ್ದೀನಿ ಎಂದು ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಲ್ಲ ಎಂದ ಸಿದ್ದರಾಮಯ್ಯ
ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೆಚ್ಡಿಕೆ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಬೇಕು ಅಂಥ ಎಲ್ಲಿದೆ ಹೇಳಿ. ಅವರ ಆರೋಪಗಳಿಗೆ ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಮತ್ತೆ ಮತ್ತೆ ಅದನ್ನೇ ನನ್ನ ಬಳಿ ಕೇಳಬೇಡಿ. 8 ಗಂಟೆ ಅವಧಿಯ ಔಟ್ ಪುಟ್ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಏನು ಉತ್ತರ ಕೊಡಬೇಕು ಹೇಳಿ. ಮಾಧ್ಯಮಗಳಿಗೆ ನಿನ್ನೆಯೇ ಎಲ್ಲಾ ವಿವರಗಳನ್ನು ಕೊಟ್ಟಿದ್ದೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇವತ್ತು ಮಾಧ್ಯಮಗಳಿಗೆ ಹೇಳುವುದಕ್ಕೆ ಏನು ಇಲ್ಲ. ನೀವೇ ಏನಾದರೂ ಇದ್ರೇ ಹೇಳಿ. ಕಾನೂನು ಸಲಹೆಗಾರ ಪೊನ್ನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ಬಂದಿದ್ದಾರೆ ಅಷ್ಟೇ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ. ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದಾರೆ.