Opinion: ಕನ್ನಡ, ಕರುನಾಡ ನೆಲದ ಸಾಂಸ್ಕೃತಿಕ, ಸಾಮಾಜಿಕ ನೆಲೆಗಟ್ಟಿನ ಚೌಕಟ್ಟಿನಲ್ಲೇ ಬಹಿರಂಗ ಪ್ರಚಾರ ಸಂಪನ್ನ
Political Opinion: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಒಟ್ಟು ಪ್ರಚಾರ ಅಭಿಯಾನದ ಒಂದು ಅವಲೋಕನ ಇಲ್ಲಿದೆ. ಮೊದಲ ಕಂತಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಅಭಿಯಾನದ ಕಡೆಗೊಂದು ಇಣುಕುನೋಟ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023 (Karnataka Assembly Election 2023)ರ ಮತದಾನ ದಿನ (Voting Day) ಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಚಾರದ ಅಬ್ಬರ ಕೊನೆಗೊಂಡಿದೆ. ಮೂರೂ ಪಕ್ಷಗಳ ಪ್ರಚಾರ ಅಭಿಯಾನವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕರ್ನಾಟಕ, ಕನ್ನಡ, ಕರುನಾಡ ಸಂಸ್ಕೃತಿಗಳ ಕೇಂದ್ರಿತವಾಗಿಯೇ ಇತ್ತು ಎಂಬುದು ವಿಶೇಷ. ಹಿಂದಿನೆಲ್ಲ ಚುನಾವಣೆಗಳ ಪ್ರಚಾರ ವೈಖರಿಗೆ ಹೋಲಿಸಿದರೆ ಈ ಬಾರಿ ಕರುನಾಡ ಮಣ್ಣು ಮೆಟ್ಟಿದ ನಾಯಕರೆಲ್ಲ ಪ್ರಚಾರದಲ್ಲಿ ಪ್ರಜ್ಞಾವಂತ ನಡವಳಿಕೆಯ ಚೌಕಟ್ಟಿನೊಳಗೆ ಸೇರಿಕೊಂಡದ್ದು ಗಮನಾರ್ಹ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪ್ರಚಾರ ಅಭಿಯಾನ ಅವಲೋಕನಕ್ಕೆ ಇದು ಸಕಾಲ.
ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದ ಕಾರಣ ಈ ಸಲ ಆಡಳಿತ ಚುಕ್ಕಾಣಿ ಹಿಡಿಯಲೇ ಬೇಕು ಎಂಬ ಪ್ರಬಲ ಇಚ್ಛೆಯೊಂದಿಗೆ ಬಹಳಷ್ಟು ಮುಂಚಿತವಾಗಿಯೇ ಕೆಲಸ ಶುರುಮಾಡಿದೆ. ಯೋಜಿತ ರೂಪದಲ್ಲೇ ಸರ್ಕಾರದ ಮೇಲೆ, ಸರ್ಕಾರದ ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸುತ್ತ ಬಂದಿತ್ತು. ಪಕ್ಷ ಗೆದ್ದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಬಹಿರಂಗವಾಗಿಯೇ ಕಾಣಿಸಿಕೊಂಡಿತ್ತು. ಆದಾಗ್ಯೂ, ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅದನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು.
ಚುನಾವಣಾ ಪ್ರಚಾರ ಶುರುವಾದ ಬಳಿಕ ಯೋಜನಾಬದ್ಧವಾಗಿ ಸಾಗಿದ್ದ ಅಭಿಯಾನ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯೊಂದಿಗೆ ದಾರಿ ತಪ್ಪಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದರು, ಬಳಿಕ ಬಿಜೆಪಿಯನ್ನು ವಿಷದ ಹಾವು ಎಂದದ್ದು ಎಂದು ಸಮಜಾಯಿಷಿ ನೀಡಲೆತ್ನಿಸಿದರು. ಇನ್ನೊಂದೆಡೆ, ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಪ್ರಸ್ತಾಪಿಸಿ, ಮತದಾರರಲ್ಲಿ ಹಿಂದು ಭಾವ ಜಾಗೃತಗೊಳಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಯಿತು.
ವಾಸ್ತವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆ. ಗೆಲ್ಲಬೇಕಾದ ಅನಿವಾರ್ಯತೆ ಇದೆ. ತವರು ರಾಜ್ಯದಲ್ಲಿ ಗೆದ್ದರಷ್ಟೇ ಅವರಿಗೆ ಎಐಸಿಸಿ ಅಧ್ಯಕ್ಷರಾಗಿ ಅವರ ಪ್ರಭಾವ ಬೆಳೆಯಲು ಸಾಧ್ಯ. ಇವೆಲ್ಲದರ ನಡುವೆ, ಕಾಂಗ್ರೆಸ್ ಪಕ್ಷದ ಪ್ರಚಾರವೂ ಕನ್ನಡ, ಕರ್ನಾಟಕದ ಅಸ್ಮಿತೆಯ ಚೌಕಟ್ಟಿನಲ್ಲೇ ಮುಂದುವರಿದಿತ್ತು. ಬಿಜೆಪಿ ಕರ್ನಾಟಕ ವಿರೋಧಿ, ಕನ್ನಡ ವಿರೋಧಿ ಎಂಬುದನ್ನು ಬಿಂಬಿಸುವ ಪ್ರಯತ್ನ ಸಾಗಿತ್ತು. ಕೊನೆಗೆ ಬೈಬೈ ಬಿಜೆಪಿಯೊಂದಿಗೆ ಬಹಿರಂಗ ಅಭಿಯಾನಕೊನೆಗೊಂಡಿದೆ.
ಜೆಡಿಎಸ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ರಾಜ್ಯದ ಹಿತ ಕಾಪಾಡಲ್ಲ. ಅದನ್ನು ಕಾಪಾಡಬೇಕಾದರೆ ಪ್ರಾದೇಶಿಕ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ವರ್ಷದ ಹಿಂದೆಯೇ ಅಭಿಯಾನ ಶುರುಮಾಡಿತ್ತು. ಮನೆ ಮನೆಗಳಲ್ಲಿ ಕನ್ನಡ ಬಾವುಟ ಹಾರಿಸುವ ಪರಿಕಲ್ಪನೆಯನ್ನು ನವೆಂಬರ್ 1ರಂದು ಜಾರಿಗೊಳಿಸಲೆತ್ನಿಸಿತ್ತು. ಜನತಾ ಸರ್ಕಾರ ರಚನೆ ಆದರೆ ಅಲ್ಲಿ ಕನ್ನಡಿಗರದ್ದೇ ಅಧಿಕಾರ ಎಂಬುದರ ಕಡೆಗೆ ಒತ್ತು ನೀಡಿ ಪ್ರಚಾರ ಮಾಡಿತ್ತು. ಕೊನೆಗೆ ಇದು ಮಾಜಿ ಪ್ರಧಾನಿ ದೇವೇಗೌಡರ ಕನಸು ಎಂಬುದನ್ನೂ ಬಿಂಬಿಸಿತ್ತು.
ಇನ್ನು ಬಿಜೆಪಿ ಅಭಿಯಾನಕ್ಕೆ ಚುರುಕು ಮೂಡಿದ್ದೇ ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ನಂತರದಲ್ಲಿ. ಡಬಲ್ ಎಂಜಿನ ಸರ್ಕಾರದ ಆಶಯದೊಂದಿಗೆ ಆರಂಭವಾದ ಪ್ರಚಾರದ ನಡುವೆ ಹಲವು ವಿಷಯಗಳು ಪ್ರಸ್ತಾಪವಾದವು. ಕೊನೆಗೊಂಡದ್ದು ಹಿಂದುತ್ವ ಜಾಗೃತಿ, ಪೂರ್ಣ ಬಹುಮತದ ಸರ್ಕಾರ ರಚನೆಗೆ ಮತದಾರರ ನೆರವು ಅಗತ್ಯ ಎಂಬುದನ್ನು ಪ್ರತಿಪಾದಿಸುವ ಮೂಲಕ ಎಂಬುದು ಗಮನಾರ್ಹ.
ಒಟ್ಟಿನಲ್ಲಿ ಹೇಳುವುದಾದರೆ, ರಾಜ್ಯ ರಾಜಕಾರಣ ಅನ್ಯ ರಾಜ್ಯಗಳಲ್ಲಿನ ರಾಜಕಾರಣದಂತೆ ಅಲ್ಲ. ಅಲ್ಲೆಲ್ಲ ದ್ವೇಷ ರಾಜಕಾರಣವೇ ಹೆಚ್ಚು. ಇಲ್ಲಿ ಹಾಗಲ್ಲ. ರಾಜಕಾರಣ ಸೈದ್ಧಾಂತಿಕ ಚೌಕಟ್ಟಿನಲ್ಲಿರುತ್ತದೆಯೇ ಹೊರತು, ಅದು ನಾಯಕರ ಮಟ್ಟದಲ್ಲಿ ವ್ಯಕ್ತಿಗತ ದ್ವೇಷ, ವೈಷಮ್ಯಕ್ಕೆ ಹೋಗುವುದಿಲ್ಲ. ಇದಕ್ಕೆ ಒಂದು ಸಣ್ಣ ನಿದರ್ಶನ ಹೇಳಬೇಕು ಎನ್ನುವುದಾದರೆ, ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಗಿದ್ದಾಗ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರನ್ನು ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದರು ಯಡಿಯೂರಪ್ಪ. ಹಾಗೆ, ಒಟ್ಟು ಬಹಿರಂಗ ಪ್ರಚಾರ ಅಭಿಯಾನವು ಕನ್ನಡ ನೆಲದ ಸಾಂಸ್ಕೃತಿಕ, ಸಾಮಾಜಿಕ ನೆಲೆಗಟ್ಟನ್ನು ಮೀರಿ ಹೋಗಲಿಲ್ಲ ಎಂಬುದೇ ಸಮಾಧಾನದ ವಿಚಾರ.
ವಿಭಾಗ