ಅಧಿಕಾರದ ದಾಹಕ್ಕೆ ಆರ್ಥಿಕ ದಿವಾಳಿತನದ ಗುತ್ತಿಗೆ ಪಡೆಯುತ್ತಿರುವ ಪಕ್ಷಗಳು! ರಾಜೀವ ಹೆಗಡೆ ಬರಹ
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 25 ಗ್ಯಾರಂಟಿಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆೆ ಮಾಡಿದೆ. ಕೈ ಪಕ್ಷದ ನ್ಯಾಯ ಪತ್ರದ ಕುರಿತು ರಾಜೀವ್ ಹೆಗಡೆ ಅವರ ಫೇಸ್‌ಬುಕ್ ಬರಹವನ್ನು ಓದಿ.

ಭಾರತದಲ್ಲಿ ಸುಮಾರು 6.50 ಕೋಟಿ ಬಿಪಿಎಲ್ ಪಡಿತರ ಚೀಟಿದಾರರು ಇದ್ದಾರೆ. ಹಾಗೆಯೇ ಸುಮಾರು 3 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣೆ ಪ್ರಣಾಳಿಕೆ ಪ್ರಕಾರ ಈ 9.50 ಕೋಟಿ ಜನರಿಗೆ ಪ್ರತಿ ವರ್ಷ ತಲಾ 1 ಲಕ್ಷ ರೂಪಾಯಿ ಕೊಡಲಾಗುತ್ತದೆ. ಅಂದರೆ ಕೇವಲ ಈ ಎರಡು ಯೋಜನೆಗಳ ವಾರ್ಷಿಕ ವೆಚ್ಚ ಬರೋಬ್ಬರಿ 9.50 ಲಕ್ಷ ಕೋಟಿ ರೂಪಾಯಿ ಆಗಲಿದೆ. ಅಂದರೆ ಪ್ರಸಕ್ತ ವರ್ಷದ ಬಜೆಟ್ ಗಾತ್ರದಲ್ಲಿ ಶೇ.20ರಷ್ಟು ಪಾಲನ್ನು ಕೇವಲ ಇವೆರಡು ಯೋಜನೆ ಆಕ್ರಮಿಸಿಕೊಳ್ಳಲಿದೆ. ಈಗಾಗಲೇ ದೇಶದಲ್ಲಿ ಜಾರಿ ಇರುವ ಉಚಿತ ಯೋಜನೆ ಹಾಗೂ ಸಬ್ಸಿಡಿಗಳಿಗಾಗಿ ಸುಮಾರು 7 ಲಕ್ಷ ಕೋಟಿ ರೂಪಾಯಿ ಅನುದಾನ ವ್ಯಯಿಸಲಾಗುತ್ತಿದೆ. ಅಲ್ಲಿಗೆ ಹಾಲಿ ಇರುವ ಯೋಜನೆ ಜತೆಗೆ ಈ ಕೇವಲ ಇವೆರಡನ್ನು ಮಾತ್ರ ಸೇರಿಸಿದರೂ ಸುಮಾರು 17 ಲಕ್ಷ ಕೋಟಿ ಹಣ ಬೇಕಾಗುತ್ತದೆ. ಅಂದರೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿನ ಸುಮಾರು ಶೇ.40ರಷ್ಟು ಹಣವು ಉಚಿತ ಯೋಜನೆ ಹಾಗೂ ಸಬ್ಸಿಡಿಗೆ ಹೋಗಲಿದೆ.
2024-25ರ ಲೇಖಾನುದಾನದಲ್ಲಿ ಕೇಂದ್ರ ಸರ್ಕಾರವು ಬಂಡವಾಳ ವೆಚ್ಚಕ್ಕಾಗಿ 11.11 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು. ಇದೇ ಮೊತ್ತದ ಮೂಲಕ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ನೋಡುವುದಾದರೆ, ಬಂಡವಾಳ ವೆಚ್ಚಕ್ಕೆ ಒಂದು ರೂಪಾಯಿಯೂ ಉಳಿಯುವುದಿಲ್ಲ. ಹಾಗೆಯೇ ಎಲ್ಲ ಭರವಸೆಗಳನ್ನು ಈಡೇರಿಸಬೇಕಾದರೆ ಕುಬೇರನ ಸಂಪತ್ತನ್ನು ದೋಚಿ, ಇನ್ನಷ್ಟು ಸಾಲ ಕೂಡ ಮಾಡಬೇಕಾಗಬಹುದು. ಆದರೆ ಕೇವಲ ಎರಡೇ ಗ್ಯಾರಂಟಿ ಯೋಜನೆ ನೋಡುವುದಾದರೆ, ಬಂಡವಾಳ ವೆಚ್ಚದ ಶೇ.85ರಷ್ಟು ಹಣವು ನೇರವಾಗಿ ಇಲ್ಲಿಗೆ ವರ್ಗಾವಣೆ ಆಗಲಿದೆ.
ಯಾವುದೇ ಒಂದು ದೇಶಕ್ಕೆ ಬಂಡವಾಳ ವೆಚ್ಚ ಮಾಡಲು ಹಣವೇ ಇಲ್ಲವಾದಲ್ಲಿ ಅಥವಾ ಸಾಲ ಮಾಡಿದ ಹಣವೆಲ್ಲ ಬಂಡವಾಳೇತರ ಯೋಜನೆಗಳಿಗೆ ವರ್ಗಾವಣೆಯಾದರೆ ಆ ರಾಷ್ಟ್ರದ ಆರ್ಥಿಕತೆ ಏನಾಗಲಿದೆ ಎಂದು ಪ್ರಮಾಣಪತ್ರ ನೀಡಲು ಯಾವುದೇ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದಿದ ಆರ್ಥಿಕ ತಜ್ಞರು ಬೇಕಿಲ್ಲ. ಇಲ್ಲೇ ಪಕ್ಕದ ಶ್ರೀಲಂಕಾ ಹಾಗೂ ಪಾಕಿಸ್ತಾನವನ್ನು ನೋಡಿದರೆ ಅರ್ಥವಾಗುತ್ತದೆ. ಸುಲಭವಾಗಿ ಅರ್ಥೈಸಿಕೊಳ್ಳಲು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಪಂಜಾಬ್ ಸರ್ಕಾರದ ಆರ್ಥಿಕ ನೀತಿಗಳನ್ನು ಅರ್ಥೈಸಿಕೊಂಡರೂ ಸಾಕಾಗುತ್ತದೆ.
ದೇಶದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ. ಪ್ರಜಾಪ್ರಭುತ್ವದ ಪ್ರಭುಗಳಾದ ಮತದಾರರು ಆ ಆಯ್ಕೆಯನ್ನು ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಆದರೆ ಈ ರೀತಿ ದೇಶವನ್ನು ಬೀದಿ ಬಿಕಾರಿಗಳನ್ನಾಗಿ ಮಾಡುವ ಯೋಜನೆಗಳಿಂದ ರಾಜಕಾರಣದ ಹಸಿವು ತೀರಬಹುದು. ಬದಲಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಿಲ್ಲ.
ಉಚಿತ ಯೋಜನೆಗಳನ್ನು ಯಾವುದೇ ಪಕ್ಷ ಹಾಗೂ ಸರ್ಕಾರ ಘೋಷಿಸಿದರೂ ಅದಕ್ಕೆ ವಿರೋಧ ಸದಾ ಇರುತ್ತದೆ. ಇದೇ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಉಚಿತ ಯೋಜನೆಗಳ ಘೋಷಣೆ ಮಾಡಿದಾಗಲೂ ವಿರೋಧಿಸಿ ಬರೆದಿದ್ದೆ. ಆದರೆ ಆಗ ಒಂದಿಷ್ಟು ಆರ್ಥಿಕ ತಜ್ಞರು, ಆಕ್ರೋಶ ಹೊರಹಾಕಿದ್ದರು. ಬಡವರಿಗೆ ಹಣ ನೀಡುವುದರಿಂದ ಮಾರುಕಟ್ಟೆಗೆ ಹಣ ನೀಡಿದಂತಾಗುತ್ತದೆ. ಅದರಿಂದ ಆರ್ಥಿಕತೆ ಇನ್ನಷ್ಟು ಬೆಳೆಯಲಿದೆ ಎನ್ನುವುದು ಅವರ ವಾದವಾಗಿತ್ತು. ಆದರೆ ಈ ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಜಾರಿಯಾಗಿ ಸರಿ ಸುಮಾರು ಒಂದು ವರ್ಷಗಳು ಕಳೆದಿವೆ.
ಆರ್ಥಿಕ ತಜ್ಞರು ಹೇಳಿದಂತೆ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗುವ ಬದಲಿಗೆ, ನಿರೀಕ್ಷಿತ ಪ್ರಮಾಣಕ್ಕಿಂತಲೂ ಕಡಿಮೆ ತೆರಿಗೆ ದೊರೆತಿದೆ. ರಾಜ್ಯ ಸರ್ಕಾರದ ಸಾಲದ ಪ್ರಮಾಣದ ದಿನದಿಂದ ದಿನಕ್ಕೆ ಏರುತ್ತಿದೆ. ವೈರುಧ್ಯವೆಂದರೆ ಆ ಹಣವು ಬಂಡವಾಳ ವೆಚ್ಚವಾಗುವ ಬದಲಿಗೆ, ಗ್ಯಾರಂಟಿ ಯೋಜನೆಗಳ ಹೊಟ್ಟೆ ತುಂಬಿಸಲು ವಿನಿಯೋಗ ಆಗುತ್ತಿದೆ. ರಾಜ್ಯದ ವಿದ್ಯುತ್ ನಿಗಮಗಳ ಸಾಲದ ಹೊರೆಯ ಕಥೆ ಇಷ್ಟರಲ್ಲಿಯೇ ಹೊರಬರಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳನ್ನು ಹೇಗೆ ಓಡಿಸಲಾಗುತ್ತಿದೆ ಎನ್ನುವುದಕ್ಕೆ ಡಿಪೋ ಮ್ಯಾನೇಜರ್‌ಗಳ ಸಂಕಷ್ಟವನ್ನು ಒಮ್ಮೆ ಕೇಳಿ ನೋಡಿ. ಒಟ್ಟಾರೆಯಾಗಿ ಬಂಡವಾಳ ವೆಚ್ಚಕ್ಕೆ ಖರ್ಚಾಗುವುದಕ್ಕಿಂತಲೂ ಅಧಿಕ ಮೊತ್ತದ ಹಣವು ರಾಜಕೀಯ ಉದ್ದೇಶದ ಗ್ಯಾರಂಟಿಗಳಿಗೆ ಖರ್ಚಾಗುತ್ತಿವೆ.
ಇನ್ನೆಷ್ಟು ದಿನ ಭಿಕ್ಷೆ?
ಉಚಿತ ಯೋಜನೆಗಳನ್ನು ನೀಡುವುದರಲ್ಲಿ ಯಾವುದೇ ಪಕ್ಷಗಳು ಹಿಂದೆ ಬಿದ್ದಿಲ್ಲ. ಮತದಾರರಿಗೆ ಇಂತಹ ಆಸೆಗಳನ್ನು ತೋರಿ ನಿಜವಾದ ಜನಕಲ್ಯಾಣವನ್ನು ಗಗನ ಕುಸುಮವಾಗಿಡುವುದು ರಾಜಕೀಯ ಪಕ್ಷಗಳ ನಿಜವಾದ ಬಣ್ಣವಾಗಿದೆ. ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಕೂಡ ಇದೇ ದಿಕ್ಕಿನತ್ತ ಸಾಗಿದ್ದನ್ನು ನೋಡಿದಾಗ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾದಿಯನ್ನು ಬಿಜೆಪಿ ತುಳಿಯುವುದಿಲ್ಲ ಎಂದು ಪೂರ್ತಿಯಾಗಿ ನಂಬಲಾಗದು. ಆದಾಗ್ಯೂ ಈ ರೀತಿ ಹಣ ನೀಡುವ ಬದಲು ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯದ ಮೂಲಕ ಜನರಿಗೆ ಹಣ ಬರುವಂತೆ, ಉಳಿತಾಯ ಆಗುವಂತೆ ಮಾಡುವುದು ಯಾವಾಗ? ನಮ್ಮ ಮತದಾರರು ಅದನ್ನು ಅರಿತುಕೊಳ್ಳುವುದು ಯಾವಾಗ?
ಕೊನೆಯದಾಗಿ: ಕರ್ನಾಟಕದಲ್ಲಿನ ಉಚಿತ ಯೋಜನೆಗಳಿಂದಾಗಿ ಬರ ಪರಿಹಾರ ಕಾರ್ಯಕ್ರಮಗಳು ಹೇಗೆ ನಡೆಯುತ್ತಿವೆ, ಮೂಲ ಸೌಕರ್ಯ ಯೋಜನೆಗಳು ಏನಾಗುತ್ತಿವೆ ಎನ್ನುವುದನ್ನು ರಾಜ್ಯದ ಶಾಸಕರುಗಳೇ ದಿನ ಬೆಳಗಾದರೆ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಹೀಗಾಗಿ ನಮ್ಮ ದೇಶವನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ ರೀತಿ ದಿವಾಳಿ ಮಾಡಲು ಹೊರಟವರನ್ನು ಪೋಷಿಸುವ ಕೆಲಸವನ್ನು ಮಾಡಬೇಡಿ. ಈ ಕೆಲಸವನ್ನು ಯಾರೇ ಮಾಡಿದರೂ ಪಕ್ಷಾತೀತವಾಗಿ ವಿರೋಧಿಸಲೇಬೇಕು.
