Karnataka Elections: ಕಾಂಗ್ರೆಸ್- ಬಿಜೆಪಿ ರಣತಂತ್ರಕ್ಕೆ ಮಂಕಾಯಿತೇ ಜೆಡಿಎಸ್ ಕುಮಾರಣ್ಣನ ಒನ್ ಮ್ಯಾನ್ ಶೋ
Exit Polls Analysis: ಈ ಬಾರಿಯ ಎಕ್ಸಿಟ್ ಪೋಲ್‌ಗಳಲ್ಲಿ ಜೆಡಿಎಸ್‌ಗೆ (JDS) ಅತಿ ದೊಡ್ಡ ನಷ್ಟ ಆಗುವ ಸ್ಪಷ್ಟ ಸೂಚನೆ ಸಿಕ್ಕಿದೆ. ಜೆಡಿಎಸ್ ಕಳಾಹೀನ ಪ್ರದರ್ಶನಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂದು ಪರಿಶೀಲಿಸಿದ್ದಾರೆ ಪತ್ರಕರ್ತ ಎಂ.ಶ್ರೀನಿವಾಸ. ಅಂದಹಾಗೆ ಇದು ಎಕ್ಸಿಟ್ ಪೋಲ್ ಆಧರಿಸಿದ ವಿಶ್ಲೇಷಣೆ. ಅಂತಿಮ ಫಲಿತಾಂಶ ಬೇರೆಯೇ ಆಗಬಹುದು.
Karnataka Assembly Elections: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದೆ. ಅದರ ಬೆನ್ನಿಗೇ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ. ಮೇಲುನೋಟಕ್ಕೆ ಕಾಂಗ್ರೆಸ್‌ಗೆ (Congress) ಈ ಬಾರಿ ಪ್ಲಸ್ ಆಗುವಂಥ ಟ್ರೆಂಡ್ ಅನ್ನು ಬಹುತೇಕ ಸಮೀಕ್ಷೆಗಳು (Exit Polls) ಸೂಚನೆ ನೀಡಿವೆ. ಬಿಜೆಪಿಗೆ (BJP)ಒಂದೆರಡು ಸಮೀಕ್ಷೆಗಳು ಮಾತ್ರ ಕಳೆದ ಬಾರಿಯಷ್ಟೇ ಅಥವಾ ಸರಳ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದಿವೆ. ಆದರೆ ಈ ಬಾರಿ ಅತಿ ದೊಡ್ಡ ನಷ್ಟ ಆಗುವ ಸ್ಪಷ್ಟ ಸೂಚನೆ ಸಿಕ್ಕಿರುವುದು ಜೆಡಿಎಸ್ (JDS) ಪಕ್ಷಕ್ಕೆ. ಜೆಡಿಎಸ್‌ಗೆ ಬರಬಹುದಾದ ಸ್ಥಾನಗಳು ಗಣನೀಯವಾಗಿ ಕಡಿಮೆ ಆಗಬಹುದು ಎಂಬ ಮುನ್ಸೂಚನೆ ಸಿಕ್ಕಿದೆ.
ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಜೆಡಿಎಸ್‌ಗೆ ಲಾಭ ಆಗುತ್ತದೆ ಎಂಬುದು ಲೆಕ್ಕಾಚಾರ ಆಗಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳು ಯಾವುದರಲ್ಲೂ ತೆನೆ ಹೊತ್ತ ಮಹಿಳೆ ಮೂವತ್ತರ ಸಂಖ್ಯೆಯನ್ನು ಸಹ ಮುಟ್ಟುವಂತೆ ಕಾಣುತ್ತಿಲ್ಲ. ಕಳೆದ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್‌ಗೆ ಮನೆ ಬಾಗಿಲಿಗೆ ಮುಖ್ಯಮಂತ್ರಿ ಹುದ್ದೆ ಹುಡುಕಿಕೊಂಡು ಬಂದಿತ್ತು. “ಅದೃಷ್ಟವಂತ” ಮುಖ್ಯಮಂತ್ರಿ ಎಂಬ ಮಾತು ಎಚ್.ಡಿ. ಕುಮಾರಸ್ವಾಮಿ ಅವರ ವಿಚಾರದಲ್ಲಿ ನಿಜವಾಗಿತ್ತು.
ಆದರೆ, ಆ ನಂತರದಲ್ಲಿ ಜೆಡಿಎಸ್ ಅಧಿಕಾರದ ಗದ್ದುಗೆಗೆ ಏರಿದ್ದು ಹೌದಾದರೂ ತನ್ನ ಮೂವರು ಶಾಸಕರನ್ನು ಕಳೆದುಕೊಂಡಿತು. ಇವರು ಬಿಜೆಪಿಗೆ ಜಂಪ್ ಮಾಡಿದರು. ಇದರ ಜತೆಗೆ ಗುಬ್ಬಿ, ಅರಸೀಕೆರೆ, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್, ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಜೆಡಿಎಸ್ ತೊರೆದರು. ಅಲ್ಲಿಗೆ ಪಕ್ಷದ ಬಲ ಮತ್ತೊಂದು ಸುತ್ತಿಗೆ ಕುಂದಿತು.
ಪಂಚರತ್ನ ಯಾತ್ರೆ- ಹಾಸನ ಟಿಕೆಟ್ ಗೊಂದಲ
ಇನ್ನು ಈ ಬಾರಿ ವಿಧಾನಸಭಾ ಚುನಾವಣೆಗೆ ಪಂಚರತ್ನ ಯಾತ್ರೆಯ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಉಳಿಸಿಕೊಳ್ಳುವಲ್ಲಿ, ಉತ್ತೇಜಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದರು. ಆದರೆ ಅದು ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯ ವಿಚಾರ ಗೊಂದಲ ಸೃಷ್ಟಿಸುವುದರೊಂದಿಗೆ ಅಲ್ಲಿಯವರೆಗಿನ ಉತ್ಸಾಹ, ಚೈತನ್ಯ ಧಸಕ್ಕನೆ ಕೆಳಗೆ ಇಳಿಯಿತು. ಅಲ್ಲಿಯ ತನಕ 'ಮಿಷನ್ ಒನ್ ಟ್ವೆಂಟಿ ತ್ರೀ' ಅನ್ನುತ್ತಿದ್ದ ಕುಮಾರಸ್ವಾಮಿ ಕೂಡ ಸರಳ ಬಹುಮತ ಅಥವಾ ಅಲ್ಪ- ಸ್ವಲ್ಪ ಸ್ಥಾನದ ಕೊರತೆ ಬೀಳಬಹುದು ಅನ್ನತೊಡಗಿದರು.
ಆದರೆ, ಈ ಸಲ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ರೂಪಿಸಿದ ಸ್ಟ್ರಾಟೆಜಿ ಜೆಡಿಎಸ್‌ಗೆ ದೊಡ್ಡ ಹೊಡೆತ ನೀಡಿದೆ. ಕುಮಾರಸ್ವಾಮಿ ಅವರ ಪಾಲಿಗೆ ಮಂಡ್ಯ, ರಾಮನಗರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ಮೈಸೂರು ಭದ್ರಕೋಟೆ. ಆದರೆ ಇಷ್ಟು ಸಮಯ ಇಲ್ಲೆಲ್ಲ ಕಾಂಗ್ರೆಸ್ ಜತೆಗೆ ನೇರ ಹಣಾಹಣಿ ಇರುತ್ತಿತ್ತು. ಈ ಬಾರಿ ಇಲ್ಲೆಲ್ಲ ಬಿಜೆಪಿ ಸಹ ತೋಳೇರಿಸಿ, ಕಾದಾಡಿದೆ. ಅಸಲಿಗೆ ಬಿಜೆಪಿ ತನ್ನ ಚುನಾವಣಾ ಪ್ರಚಾರ ಶುರು ಮಾಡಿದ್ದೇ ಮಂಡ್ಯದಲ್ಲಿ.
ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆ, ಬಿಜೆಪಿಗೆ ಸುಮಲತಾ ಬೆಂಬಲ ಘೋಷಣೆ ಮಾಡಿದ್ದು, ಮೇಲುಕೋಟೆ ಕ್ಷೇತ್ರದಲ್ಲಿ ರೈತಸಂಘದ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಕಾಂಗ್ರೆಸ್ ನಿಂದ ಅಭ್ಯರ್ಥಿ ಹಾಕದೇ ಇದ್ದದ್ದು, ನೀವು ಜೆಡಿಎಸ್‌ಗೆ ಮತ ಹಾಕಿದರೆ ಅದು ಕಾಂಗ್ರೆಸ್ ಗೆ ಹಾಕಿದಂತೆಯೇ ಎಂದು ಸ್ವತಃ ಪ್ರಧಾನಿ ವಾಗ್ದಾಳಿ ನಡೆಸಿದ್ದು ಸಹ ಜೆಡಿಎಸ್ ಮತ ಬ್ಯಾಂಕ್‌ನಲ್ಲಿ ಬದಲಾವಣೆಗೆ ಕಾರಣ ಅಗಿರುವಂತೆ ಕಾಣಿಸುತ್ತದೆ.
ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಚಾರ ವೈಖರಿ ಸಹ ಜೆಡಿಎಸ್‌ಗೆ ಒಳೇಟು ನೀಡಿದೆ. ಅತಂತ್ರ ಸ್ಥಿತಿ ಬಂದು ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆದಲ್ಲಿ ಅದರಿಂದ ಅಭಿವೃದ್ಧಿ- ಬೆಳವಣಿಗೆಗೆ ಮಾರಕ ಎಂಬ ಅಂಶವನ್ನು ಮತದಾರರಿಗೆ ದಾಟಿಸುವಲ್ಲಿ ಕಾಂಗ್ರೆಸ್- ಬಿಜೆಪಿ ಯಶಸ್ಸು ಕಂಡಿರುವಂತೆಯೇ ಕಾಣುತ್ತಿದೆ. ಅಡಿಗೆರೆ ಹಾಕಿ ಹೇಳುವಂಥ ಅಂಶವೆಂದರೆ ಜೆಡಿಎಸ್ ಮತಬುಟ್ಟಿಗೆ ಬಿಜೆಪಿ ದೊಡ್ಡ ಮಟ್ಟದಲ್ಲೇ ಕೈ ಹಾಕಿರುವುದು ನಿಕ್ಕಿ ಆಗುತ್ತದೆ. ಯಾವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಭದ್ರ ನೆಲೆ ಇದೆ ಎನ್ನಲಾಗಿತ್ತೋ ಅಲ್ಲಿ ಟಿಪ್ಪು, ಉರಿಗೌಡ- ನಂಜೇಗೌಡ ಇಂಥ ವಿಚಾರಗಳು ಚರ್ಚೆಗೆ ತಂದು ಬಿಜೆಪಿಯಿಂದ ಚುನಾವಣಾ ವಿಷಯವನ್ನೇ ಬದಲಿಸಲಾಯಿತು. ಅದು ಕೂಡ ಜೆಡಿಎಸ್ ಗೆ ಹಿನ್ನಡೆ ಮಾಡಿದಂತೆ ಕಾಣುತ್ತಿದೆ.
ಕುಟುಂಬ ರಾಜಕಾರಣ
ಇನ್ನು ಹಾಸನ ಟಿಕೆಟ್ ವಿಚಾರದ ಚರ್ಚೆ ಹುಟ್ಟು ಹಾಕಿದ ಸಂಗತಿಗಳ ಜತೆಗೆ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮಗನಿಗಾಗಿ “ಸ್ಥಾನ ತ್ಯಾಗ” ಮಾಡಿದ್ದು ಸಹ ಬಿಜೆಪಿಯಿಂದ ಯಶಸ್ವಿ ಅಸ್ತ್ರವಾಗಿ ಬಳಸಲಾಯಿತು. ಜೆಡಿಎಸ್ ಬಗ್ಗೆ ಡಿಕೆ ಶಿವಕುಮಾರ್ ಮೃದುವಾದಂತೆ ಕಂಡುಬಂದರೆ, ಸಿದ್ದರಾಮಯ್ಯ ಮಾಮೂಲಿನಂತೆ ದಾಳಿ ಮುಂದುವರಿಸಿದರು. ಇದಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದ್ದು ಬಿಜೆಪಿಯ ದೆಹಲಿ ನಾಯಕರು ಹಾಗೂ ಜೆಡಿಎಸ್ ಪರಿವಾರ್ ಲಿಮಿಟೆಡ್ ಎಂದು ಮೂದಲಿಸಿದ ಪ್ರಧಾನಿ ನರೇಂದ್ರ ಮೋದಿ.
ಒಂದು ವೇಳೆ ಈ ಬಾರಿ ಸರ್ಕಾರದಲ್ಲಿ ಜೆಡಿಎಸ್ ಭಾಗವಾಗದೇ ಇದ್ದಲ್ಲಿ ಬಹಳ ಕಷ್ಟವಾಗಲಿದೆ. ಏಕೆಂದರೆ ಅಧಿಕಾರದಿಂದ ಹೀಗೆ ಎರಡೆರಡು ಅವಧಿಗೆ ದೂರ ಇರುವ ಪಕ್ಷದ ಕಾರ್ಯಕರ್ತರನ್ನಾಗಲೀ ಶಾಸಕರನ್ನಾಗಲೀ ಉಳಿಸಿಕೊಳ್ಳುವುದು ಬಹಳ ದೊಡ್ಡ ಸವಾಲು. ಕುಮಾರಸ್ವಾಮಿ ಅವರು ಪದೇಪದೇ ಜೆಡಿಎಸ್ ಪಕ್ಷದ ವಿಸರ್ಜನೆ ಬಗ್ಗೆ ಪದೇಪದೇ ಮಾತನಾಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಒಂದು ವೇಳೆ ನಿಜವಾದಲ್ಲಿ ಅವರ ಮಾತು ನಿಜವಾಗಿಯೇ ಬಿಡಬಹುದು, ಆದರೆ ಹಾಗಾಗದಿರಲಿ.
ಬರಹ: ಎಂ.ಶ್ರೀನಿವಾಸ
(ಲೇಖಕರು ನ್ಯೂಸ್ ಮೀಟರ್ ಜಾಲತಾಣದಲ್ಲಿ ಫ್ಯಾಕ್ಟ್‌ಚೆಕರ್ ಆಗಿ ಕೆಲಸ ಮಾಡುತ್ತಾರೆ. ವಿವಿಧ ಪತ್ರಿಕೆ, ವೆಬ್‌ಸೈಟ್‌ಗಳಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಲೇಖಕರ ಇಮೇಲ್: sreekabeer@gmail.com)
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಎಚ್ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.