Karnataka Politics: ಕರ್ನಾಟಕದಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ; ಸಿದ್ದರಾಮಯ್ಯ, ಡಿಕೆಶಿ ಬೆಂಬಲಿಗರ ಫೈಟ್, ಡಿಕೆಶಿ ಪರ ಸ್ವಾಮೀಜಿ
Karnataka cm post ವರ್ಷದ ಹಿಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ವಿಚಾರವಾಗಿ ಚರ್ಚೆ ನಡೆದೇ ಇದೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆದರೂ ಆ ಸ್ಥಾನಕ್ಕೆ ಬರಲು ಡಿಕೆಶಿವಕುಮಾರ್ ಪ್ರಯತ್ನ ಮುಂದುವರೆಸಿದ್ದಾರೆ. ಈಗ ಮತ್ತೊಂದು ಸುತ್ತಿನ ಚಟುವಟಿಕೆ ತೀವ್ರಗೊಂಡಿದೆ.

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆಯ ಸದ್ದು ಮತ್ತೆ ಕಾಂಗ್ರೆಸ್‌ನಲ್ಲಿ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಆ ಸ್ಥಾನಕ್ಕೆ ತರುವ ಪ್ರಯತ್ನಗಳು ಮತ್ತೆ ಶುರುವಾಗಿವೆ. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಿಸಿ ಇನ್ನೊಬ್ಬರಿಗೆ ನೀಡಬೇಕು ಎನ್ನುವ ಕೂಗು ಕೂಡ ಜೋರಾಗುತ್ತಿದೆ. ಈಗಾಗಲೇ ಕರ್ನಾಟಕ ಕಾಂಗ್ರೆಸ್ ನಲ್ಲಿ ರೂಪುಗೊಂಡಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಬಣಗಳ ನಡುವೆ ವಾಕ್ಸಮರ ಚುರುಕುಗೊಂಡಿದೆ. ಸಿಎಂ ಸ್ಥಾನ ಬದಲಾವಣೆ ಬೆಳವಣಿಗೆ ಪುಷ್ಟೀಕರೀಸುವಂತೆ ಸ್ವಾಮೀಜಿ ಒಬ್ಬರು ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರು ಡಿಕೆಶಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳುವ ಮೂಲಕ ಚರ್ಚೆ ಹೆಚ್ಚಿಸಿದ್ದಾರೆ.
ಬಣ ಫೈಟ್‌ಗೆ ಕಾರಣವೇನು?
ಕಳೆದ ವರ್ಷದ ಮೇ ನಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಂದಾಗಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗು ಡಿಕೆಶಿ ಅವರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಪಕ್ಷದ ಅಧ್ಯಕ್ಷರಿಗೆ ಸಿಎಂ ಸ್ಥಾನ ನೀಡಬೇಕು ಎನ್ನುವುದು ಡಿಕೆಶಿ ಅವರ ಬೇಡಿಕೆಯಾಗಿತ್ತು. ಆಗ ಹಿರಿತನದ ಆಧಾರ, ಗ್ಯಾರಂಟಿ ಜಾರಿ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಸಿದ್ದರಾಮಯ್ಯ ಅವರನ್ನೇ ಸಿಎಂ ಸ್ಥಾನಕ್ಕೆ ಹೈ ಕಮಾಂಡ್ ಕೂರಿಸಿತ್ತು. ಅಸಮಾಧಾನದ ನಡುವೆಯೇ ಒಪ್ಪಿಕೊಂಡಿದ್ದ ಡಿಕೆಶಿ ಪ್ರಮುಖ ಖಾತೆಗಳು, ಡಿಸಿಎಂ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವಂತೆ ಕೋರಿದ್ದರು. ಅವರನ್ನೇ ಡಿಸಿಎಂ ಆಗಿ ಮಾಡಲಾಗಿತ್ತು. ಇದಾದ ನಂತರ ಲೋಕಸಭೆ ಚುನಾವಣೆ ನಡೆದು ಫಲಿತಾಂಶವೂ ಬಂದಿತು. ಕರ್ನಾಟಕದಲ್ಲಿ ಕಾಂಗ್ರೆಸ್ ವಿಧಾನಸಭೆಯಲ್ಲಿ ಪಡೆದ ಫಲಿತಾಂಶವನ್ನು ಪಡೆಯಲು ಆಗದೇ ಇದ್ದರೂ ಸ್ಥಾನಗಳನ್ನು ಉತ್ತಮಪಡಿಸಿಕೊಂಡಿತು. ಚುನಾವಣೆ ಮುಗಿದ ನಂತರ ಈಗ ಕರ್ನಾಟಕದಲ್ಲಿ ನಾಯಕತ್ವ ಜಟಾಪಟಿ ನಡೆದಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಶಾಸಕರು ಕೆಪಿಸಿಸಿ ಅಧ್ಯಕ್ಷರನ್ನು ಬದಲಿಬೇಕು. ಮೂವರು ಡಿಸಿಎಂ ನೇಮಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇತ್ತ ಡಿಕೆಶಿವಕುಮಾರ್ ಬೆಂಬಲಿತ ಶಾಸಕರು ಡಿಕೆಶಿ ಅವರನ್ನು ಸಿಎಂ ಸ್ಥಾನಕ್ಕೆ ತರಬೇಕು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಅವರು ಶ್ರಮ ಹಾಕಿದ್ದಾರೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ.ಸಚಿವರಾದ ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಸ್ಥಾನದ ಬೇಡಿಕೆ ಮುಂದೆ ಇಟ್ಟರೆ, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ಡಿಕೆಶಿ ಅವರೇ ಸಿಎಂ ಆಗಬೇಕು ಎನ್ನುವ ಹೇಳಿಕೆ ನೀಡಿದ್ದಾರೆ.
ಸ್ವಾಮೀಜಿ ಹೇಳಿಕೆ
ಇದರ ನಡುವೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಮಠದಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಗುರುವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಡಿಕೆಶಿವಕುಮಾರ್ ಅವರ ಪರವಾಗಿಯೇ ಮಾತನಾಡಿ ಸಿಎಂ ಸ್ಥಾನದ ಬದಲಾವಣೆ ಚರ್ಚೆಗೆ ಬಲ ತುಂಬಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮಗೆ ಹೆಚ್ಚು ಅವಧಿ ಕೆಲಸ ಮಾಡಿದ ಅನುಭವವಿದೆ. ಈಗ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಡಿ. ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಮಾತ್ರ ಇದು ಸಾಧ್ಯ. ಸಿಎಂ ಸ್ಥಾನವನ್ನ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಿ. ಡಿಕೆಶಿ ಒಬ್ಬರು ಮಾತ್ರ ಸಿಎಂ ಆಗಿಲ್ಲ. ಸಿದ್ದರಾಮಯ್ಯಗೆ ನಾನು ನಮಸ್ಕಾರ ಮಾಡ್ತೇನೆ ದಯವಿಟ್ಟು ಸಿಎಂ ಮಾಡಿ ಎಂದು ಕೋರಿಕೊಂಡರು. ವೇದಿಕೆಯಲ್ಲಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸ್ವಾಮೀಜಿಗಳು ,ಗಣ್ಯರ ಉಪಸ್ಥಿತಿಯಲ್ಲಿ ನೀಡಿದ ಹೇಳಿಕೆ ಚರ್ಚೆಗೆ ಈಡು ಮಾಡಿತು.
ಸಿಎಂ ಸೂಚನೆ
ಇದರ ನಡುವೆ ಡಿಸಿಎಂ ಹುದ್ದೆಗಳ ವಿಚಾರವಾಗಿ ಕಾಂಗ್ರೆಸ್‌ನ ಯಾವುದೇ ಸಚಿವರು, ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇಂತಹ ವಿಷಯಗಳನ್ನು ಪಕ್ಷದ ವೇದಿಕೆ, ಸಭೆಗಳಲ್ಲಿ ಚರ್ಚಿಸಬೇಕು.ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ಹೇಳಿಕೆ ನೀಡಬಾರದು ಎಂದು ಹೇಳಿದರು.
ಡಿಕೆಶಿ ಬೇಡಿಕೆ ಏನು
- ಹಿಂದೆ ಹೇಳಿದಂತೆ ಮುಖ್ಯಮಂತ್ರಿ ಹುದ್ದೆಯನ್ನು ತಮಗೆ ನೀಡಬೇಕು
- ಪಕ್ಷಕ್ಕಾಗಿ ಕೆಲಸ ಮಾಡಿ ಅಧಿಕಾರಕ್ಕೆ ತಂದಿರುವುದರಿಂದ ಅವಕಾಶ ಕೊಡಿ
- ಮುಂದೆ ಏನಾಗುತ್ತದೋ ಗೊತ್ತಿಲ್ಲ. ಈಗಂತೂ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು
- ಸಿದ್ದರಾಮಯ್ಯ ಬಣದವರು ಹಾದಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು
ಸಿದ್ದು ಲೆಕ್ಕಾಚಾರವೇನು
- ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಬಂದಿಲ್ಲ. ಇದಕ್ಕೆ ಎಲ್ಲರೂ ಹೊಣೆ ಹೊರಬೇಕು
- ಗ್ಯಾರಂಟಿ ಸೇರಿದಂತೆ ಘೋಷಿತ ಯೋಜನೆ ಜಾರಿ ಮಾಡಿರುವುದರಿಂದ ಸಿಎಂ ಸ್ಥಾನದ ಬದಲಾವಣೆ ಬೇಡ
- ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬೆಂಬಲಿಗರಾದ ಎಂಬಿ ಪಾಟೀಲ್ ಇಲ್ಲವೇ ಸತೀಶ್ ಜಾರಕಿಹೊಳಿಗೆ ಕೊಡಿಸುವುದು
- ಉಪಮುಖ್ಯಮಂತ್ರಿ ಹುದ್ದೆ ಹೆಚ್ಚಿಸುವ ಪ್ರಸ್ತಾವ ಮಾಡಿ ಡಿಕೆಶಿ ಅವರನ್ನು ನಿಯಂತ್ರಿಸುವುದು
