Karnataka Election: ಕರ್ನಾಟಕ ಚುನಾವಣೆಯಲ್ಲಿ 'ರಕ್ತದಲ್ಲಿ ಪತ್ರ'ದ ರಾಜಕೀಯ; ಚುನಾವಣೆ ಘೋಷಣೆ ಬಳಿಕ ರಕ್ತದಾನ ಇಲ್ಲದೆ ರೋಗಿಗಳ ಪರದಾಟ
ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ರಕ್ತದಲ್ಲಿ ಪತ್ರ ಬರೆದುಕೊಡುವ ಸವಾಲುಗಳ ನಡುವೆ ರಕ್ತದಾನ ಶಿಬಿರಗಳು ನಡೆಯದೆ ರಕ್ತದ ಅಭಾವ ಎದುರಾಗಿದೆ.
ಬೆಂಗಳೂರು: ಜಗದೀಶ್ ಶೆಟ್ಟರ್ (Jagadish shettar) ಅವರು ಪಕ್ಷದ್ರೋಹ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಬಾರಿಯ ಚುನಾವಣೆಯಲ್ಲಿ (Karnataka Election) ಗೆಲ್ಲುವುದಿಲ್ಲ. ಗೆಲ್ಲಲು ಬಿಡಬಾರದು. ಇದನ್ನು ಸವಾಲಾಗಿ ಸ್ವೀಕರಿಸಿ ರಕ್ತದಲ್ಲಿ ಬರೆದು(Letter in Blood) ಕೊಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yeddyurappa) ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಶೆಟ್ಟರ್ ವಿರುದ್ಧ ಅಬ್ಬರಿಸಿದ್ದರು.
ಮಾಜಿ ಸಿಎಂ ಬಿಎಸ್ ವೈ ಈ ಹೇಳಿಕೆ ನೀಡಿದ ಬಳಿಕ ರಾಜ್ಯದಲ್ಲಿ ನೆತ್ತರು ಬರಹವೇ ಭಾರಿ ಚರ್ಚೆಯಾಗ್ತಿದೆ. ಕಾಂಗ್ರೆಸ್ ನಾಯಕರು ಕೂಡ ತಾವೇನು ಕಮ್ಮಿಇಲ್ಲ ಅಂತ ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ. ಕಾಂಗ್ರೆಸ್ 15 ದಿನಗಳಲ್ಲಿ ಅಧಿಕಾರಕ್ಕೆ ಬರುತ್ತೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಮಾರ್ ತಿರುಗೇಟು ನೀಡಿದ್ದರು.
ಪತ್ರಕರ್ತ ಸಂಗಮೇಶ್ ಮೆಣಸಿನಕಾಯಿ ಅವರು ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ರಕ್ತದಲ್ಲಿ ಬರೆದುಕೊಡ್ತೀನಿ ಅಂತೀರಲ್ಲ, ಎಷ್ಟು ಸಲ ರಕ್ತದಾನ ಮಾಡೀರಿ ನೀವು? ರಕ್ತವನ್ನ ಎಲ್ಲೋ ಬರೆದು ಹಾಳು ಮಾಡ್ತೀನಿ (ಮಾಡಲ್ಲ ಬಿಡಿ ನೀವು!) ಅಂತೀರಲ್ಲ, ಒಂದು ಹನಿ ರಕ್ತದ ಬೆಲೆಯದಾರೂ ಗೊತ್ತಾ ನಿಮಗೆ? ಸುಮ್ಮನೆ ಎದುರಿಗೆ ಕ್ಯಾಮರಾ ಇರತ್ತೆ ಅಂತ ಬಾಯಿಗೆ ಬಂದದ್ದು, ಅದೂ ರಕ್ತವನ್ನು ವ್ಯರ್ಥವಾಗಿಸುವ, ಹಗುರ ಮಾತು ಆಡಬೇಡಿ. ರಕ್ತ ಬಿಟ್ಟಿ ಸಿಗಲ್ಲ, ಕೆಲವೊಮ್ಮೆ ನಿಮ್ಮ ಇಷ್ಟೂ ಸಂಪತ್ತು ಒತ್ತೆ ಇಟ್ಟರೂ ಸಿಗಬೇಕಾದ ಸಮಯಕ್ಕೆ ಸಿಗೋದೇ ಇಲ್ಲ! ಅಂತ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇವರ ಈ ಪೋಸ್ಟ್ ಗೆ ತರಹೇವಾರು ಕಾಮೆಂಟ್ ಗಳು ಬಂದಿವೆ. ರಕ್ತ ಅಂತ ಹೇಳ್ಯಾರಿ ಸರ್, ತಮ್ಮದ ರಕ್ತ ಅಂತ ಎಲ್ಲೂ ಹೇಳಿಲ್ಲ. ಅಂತಹ ಪ್ರಾಗ ಬಂದರೆ ಬಂದರೆ ಕೋಳಿ, ಕುರಿ ರಕ್ತದಾಗ ಬರಿತಾರ ಎಂದು ಹೇಮರೆಡ್ಡಿ ಎಂ ಸೈದಾಪುರ್ ಎಂಬುವರು ಪ್ರತಿಕ್ರಿಯಿಸಿದ್ದಾರೆ.
ಬಹಳ ಸಾರಿ ಅವರ ಬಾಯಿಯಿಂದ ಈ ಮಾತನ್ನು ಕೇಳಿದ್ದೇವೆ. ಎಂದೂ ಎಲ್ಲಿಯೂ ಯಾರಿಗೂ ತಮ್ಮ ರಕ್ತದಿಂದ ಬರೆದುಕೊಟ್ಟ ಉದಾಹರಣೆ ಇಲ್ಲ. ರಾಜಕಾರಣ ಅಂದರೆ ಏನೊ ಒಂದು ಹಾರಿಕೆ ಮಾತಾಡಿದರೆ ಆಯಿತು. ಆ ಮಾತಿಗೆ ತೂಕವೆ ಇಲ್ಲ ಅಂತ ಟಿಪ್ಪುಸಾಬ್ ಕಲಕೋಟಿ ಅವರು ಕಾಮೆಂಟ್ ಮಾಡಿದ್ದಾರೆ.
ರಕ್ತದಾನ ಶ್ರೇಷ್ಠದಾನ ಯಾರು ಸಹ ರಕ್ತವನ್ನು ವ್ಯರ್ಥ ಮಾಡಬೇಡಿ - ಶೆಟ್ಟರ್
ಲಿಂಗಾಯತ ಸಮುದಾಯದ ಯುವಕನೊರ್ವ ರಕ್ತದಲ್ಲೇ ಪತ್ರ ಬರೆದಿರುವುದು ದೊಡ್ಡ ಸುದ್ದಿಯಾಗಿದೆ. ನೂರಕ್ಕೆ ನೂರರಷ್ಟು ಜಗದೀಶ್ ಶೆಟ್ಟರ್ ವಿಜಯಶಾಲಿ ಆಗುತ್ತಾರೆ. ಈ ಸಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಜೈ ಕಾಂಗ್ರೆಸ್ ಅಂತ ಅಭಿಯಾನಿ ಮಂಜುನಾಥ್ ಯಂಟ್ರುವಿ ಅವರು ಪತ್ರ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈತನ ಪತ್ರವನ್ನು ಸ್ವೀಕರಿಸಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, "ರಕ್ತದಾನ ಶ್ರೇಷ್ಠದಾನ ಯಾರು ಸಹ ರಕ್ತವನ್ನು ವ್ಯರ್ಥ ಮಾಡಬೇಡಿ ಅವಶ್ಯಕತೆ ಇರುವವರಿಗೆ ದಾನ ಮಾಡಿ" ಎಂದು ಮನವಿ ಮಾಡಿದ್ದಾರೆ.
ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂದು ತಮ್ಮ ರಕ್ತದಲ್ಲಿ ಬರೆದು ದಿಟ್ಟ ಉತ್ತರವನ್ನು ನೀಡಿದಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಂಜುನಾಥ ಯಂಟ್ರುವಿ ಅವರನ್ನು ಇಂದು ಆತ್ಮೀಯವಾಗಿ ಸನ್ಮಾನಿಸಲಾಯಿತು ಎಂದು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂತಹ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ನನ್ನ ಗೆಲುವಿಗೆ ಮುಖ್ಯ ಕಾರಣ ಅಂತ ಶೆಟ್ಟರ್ ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಎಲ್ಲೂ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ಹೀಗಾಗಿ ರಕ್ತದ ಅಭಾವ ಎದುರಾಗಿದೆ. ಬೇಡಿಕೆ ಮತ್ತು ಪೂರೈಕೆಯಲ್ಲೂ ವ್ಯತ್ಯಾಸವಾಗುತ್ತಿದೆ ಎಂದು ರಕ್ತನಿಧಿ ಕೇಂದ್ರಗಳ ಪ್ರತನಿಧಿಗಳು ಹೇಳುತ್ತಿದ್ದಾರೆ. ಆದಷ್ಟೂ ಬೇಗ ರಕ್ತದ ಅಭಾವ ನಿವಾರಣೆಯಾಗಿ ರೋಗಿಗಳಿಗೆ ಸೂಕ್ತ ಸಮಯಕ್ಕೆ ಅಗತ್ಯ ರಕ್ತ ಸಿಗುವಂತಾಗಬೇಕು.