Opinion: ವಿಧಾನಸಭೆಯಲ್ಲಿ ಬಿಜೆಪಿಗೆ ಕಾಡುತ್ತಿದೆ ನಾಯಕತ್ವ ಬಿಕ್ಕಟ್ಟು, ಅಂಕಿಅಂಶಗಳ ಸಹಿತ ಖಡಕ್ ಮಾತನಾಡಬಲ್ಲರೇ ಅಶೋಕ್?
ಕನ್ನಡ ಸುದ್ದಿ  /  ಕರ್ನಾಟಕ  /  Opinion: ವಿಧಾನಸಭೆಯಲ್ಲಿ ಬಿಜೆಪಿಗೆ ಕಾಡುತ್ತಿದೆ ನಾಯಕತ್ವ ಬಿಕ್ಕಟ್ಟು, ಅಂಕಿಅಂಶಗಳ ಸಹಿತ ಖಡಕ್ ಮಾತನಾಡಬಲ್ಲರೇ ಅಶೋಕ್?

Opinion: ವಿಧಾನಸಭೆಯಲ್ಲಿ ಬಿಜೆಪಿಗೆ ಕಾಡುತ್ತಿದೆ ನಾಯಕತ್ವ ಬಿಕ್ಕಟ್ಟು, ಅಂಕಿಅಂಶಗಳ ಸಹಿತ ಖಡಕ್ ಮಾತನಾಡಬಲ್ಲರೇ ಅಶೋಕ್?

ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ಡಿ 9 ರಿಂದ ಆರಂಭವಾಗಲಿದೆ. ಪ್ರತಿಪಕ್ಷ ಈಗ ಆಡಳಿತ ಪಕ್ಷದ ಕಾರ್ಯವೈಖರಿಯ ಲೋಪದೋಷಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಆದರೆ ಕರ್ನಾಟಕದ ವಿರೋಧ ಪಕ್ಷ ಬಿಜೆಪಿ ಈ ಬಾರಿ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬಲ್ಲದೇ ಎನ್ನುವ ಬಗ್ಗೆ ಪ್ರಶ್ನೆಗಳು ಮೂಡಿವೆ. (ಬರಹ: ಶ್ರೀನಿವಾಸ ಮಠ)

ಕರ್ನಾಟಕ ಪ್ರತಿಪಕ್ಷ ನಾಯಕ ಆರ್ ಅಶೋಕ್
ಕರ್ನಾಟಕ ಪ್ರತಿಪಕ್ಷ ನಾಯಕ ಆರ್ ಅಶೋಕ್

ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಈ ಆರ್.ಅಶೋಕ್ ಅವರಿಗೆ ಇಂಥದ್ದೊಂದು ಮಹತ್ವದ ಜವಾಬ್ದಾರಿ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಕರ್ನಾಟಕದ ಜಿಡಿಪಿ, ರಾಜ್ಯದ ಮೇಲಿರುವ ಸಾಲದ ಪ್ರಮಾಣ, ಆರ್ಥಿಕ ನೀತಿ ಇಂಥದ್ದರ ಬಗ್ಗೆ ಎಳೆಎಳೆಯಾಗಿ ತೆರೆದಿಟ್ಟು, ಅಂಕಿ-ಅಂಶಗಳ ಸಹಿತವಾಗಿ ಈ ಮಹಾನಾಯಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಈವರೆಗೂ ಕಂಡುಬಂದಿಲ್ಲ. ಇನ್ನು “ಅಡ್ಜಸ್ಟ್ ಮೆಂಟ್” ಅಶೋಕ್ ಅಂತಲೇ ಬಿಜೆಪಿಯ ಒಳಗೆ ಇವರನ್ನು ಕರೆಯುತ್ತಾರೆ. ಅದನ್ನು ಆರೋಪ ಅಥವಾ ಆ ಪಕ್ಷದ ಒಳಗೆ ಇವರ ಏಳ್ಗೆ ಸಹಿಸದವರು ಹೀಗೆ ಗೂಬೆ ಕೂರಿಸುತ್ತಿದ್ದಾರೆ ಅಂದುಕೊಂಡು ಬಿಡೋಣ. ಉಪ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಿದ, ಕರ್ನಾಟಕದ ಪ್ರಮುಖ ಜಾತಿಯಲ್ಲಿ ಒಂದಾದ ಒಕ್ಕಲಿಗ ಸಮುದಾಯದ ಅಶೋಕ್‌ಗೆ ತನ್ನ ಸ್ವಂತ ಶಕ್ತಿ ಹಾಗೂ ವರ್ಚಸ್ಸಿನಿಂದ ಎಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬರುವಂಥ ಸಾಮರ್ಥ್ಯ ಇದೆ? ಇದು ಉತ್ತರ ಸಿಗಲೇಬೇಕಾದ ಪ್ರಶ್ನೆ ಆಗಿದೆ.

ಯಾವ ಪಕ್ಷದ ನೇತೃತ್ವ ಇರುವಾಗ ಏನು ಕೆಲಸ ಆಗಿದೆ, ಆಗಿಲ್ಲ, ಬಜೆಟ್, ಅನುದಾನ, ಮನೆಗಳ ನಿರ್ಮಾಣ ಇವುಗಳ ಬಗ್ಗೆ ಕರ್ನಾಟಕ ರಾಜಕಾರಣದಲ್ಲಿ ಅಂಕಿ- ಅಂಶಗಳ ಸಹಿತವಾಗಿ ಮಾತನಾಡಬಲ್ಲಂಥ ರಾಜಕಾರಣಿ ಹಾಗೂ ನಾಯಕ ಅಂತ ಇದ್ದರೆ ಅದು ಸಿದ್ದರಾಮಯ್ಯ ಅವರು ಮಾತ್ರ. ಈಗಂತೂ ವಿಧಾನಸಭೆಯಲ್ಲಿ ವಿರೋಧ ಪಕ್ಷದಲ್ಲಿ ಅಂಕಿ- ಅಂಶ ಮುಂದಿಟ್ಟು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಬೆವರಿಳಿಯುವಂತೆ ಮಾಡಬಲ್ಲಂಥವರು ಇಲ್ಲದಂತಾಯಿತು. ಹೇಗೆ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವಿರೋಧ ಪಕ್ಷವೇ ಇಲ್ಲವೇ ಎಂಬಂತೆ ಇತ್ತಲ್ಲ, ಅದೇ ರೀತಿ ಈಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೂ ವಿರೋಧ ಪಕ್ಷವೇ ಇಲ್ಲದಂತಾಗಿದೆ.

ವಿರೋಧ ಪಕ್ಷದ ಮುಖವಾಗಿದ್ದ ಕುಮಾರಸ್ವಾಮಿಯೇ ಕೇಂದ್ರಕ್ಕೆ ಹೋದರು. ಇದ್ದುದರಲ್ಲಿ ಸರ್ಕಾರದ ಹಗರಣಗಳು ಅಥವಾ ತೀರ್ಮಾನ- ನಿರ್ಧಾರಗಳ ಬಗ್ಗೆ ಮಾಧ್ಯಮಗಳ ಗಮನ ಸೆಳೆಯುವಂತೆ ಸದ್ದು ಮಾಡುತ್ತಿದ್ದವರು ಎಚ್.ಡಿ.ಕುಮಾರಸ್ವಾಮಿ. ಅವರು ಲೋಕಸಭೆ ಚುನಾವಣೆಗೆ ನಿಂತು, ಗೆದ್ದು ಕೇಂದ್ರ ಸಚಿವರಾದರು. ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಹಿಂದೂ- ಮುಸ್ಲಿಂ ಎನ್ನುವ ವಿಚಾರ ಬಿಟ್ಟು, ಬೇರೆ ಯಾವುದನ್ನೂ ಗಂಭೀರವಾದ ಚರ್ಚೆ ಮಾಡುವ ಉದ್ದೇಶವೂ ಇಲ್ಲ, ಸಾಮರ್ಥ್ಯವೂ ಕಾಣಲ್ಲ. ಅಶೋಕ್ ಅವರಿಗಂತೂ ಸಿದ್ದರಾಮಯ್ಯ ಎದುರಿಗೆ ನಿಂತರೆ ಹೊಗಳಿಕೆ ಧಾರಾಳವಾಗಿ ಬಂದು ಬಿಡುತ್ತದೆ.

ಅದೆಲ್ಲಿ ಹೋದರು ಸುರೇಶ್‌ ಕುಮಾರ್, ಅಶ್ವತ್ಥ ನಾರಾಯಣ

ಜೆಡಿಎಸ್ ಕಡೆಯಿಂದ ಈಗ ಹದಿನೇಳೋ- ಹದಿನೆಂಟೋ ಶಾಸಕರು ಇದ್ದಾರೆ. ಅದರಲ್ಲಿ ಜಿ.ಟಿ.ದೇವೇಗೌಡರು ಲೆಕ್ಕಕ್ಕಿಲ್ಲ. ಎಚ್.ಡಿ.ರೇವಣ್ಣ ಅವರಿಗೆ ಸಿದ್ರಾಮಣ್ಣನ ಮೇಲೆ ಪ್ರೀತಿ. ಸೋಮಣ್ಣ, ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಯಡಿಯೂರಪ್ಪ ಹೀಗೆ ಮೊದಲ ಸಾಲಿನ ಯಾವ ನಾಯಕರೂ ಈಗ ಬಿಜೆಪಿ ಪರವಾಗಿ ವಿಧಾನಸಭೆಯಲ್ಲಿ ನಿಂತು ಗುಡುಗುವುದಕ್ಕೆ ಇಲ್ಲ. ಬಿ.ವೈ.ವಿಜಯೇಂದ್ರ ಅವರ ಧ್ವನಿಗೆ ಯಡಿಯೂರಪ್ಪನವರ ಸಾಮ್ಯತೆ ಇದೆ. ಆದರೆ ಅನುಭವ, ಬದ್ಧತೆ, ನೈಪುಣ್ಯ ಇದ್ಯಾವುದೂ ಕಂಡುಬರಲ್ಲ. ಈ ಮಧ್ಯೆ ಅಶ್ವತ್ಥ ನಾರಾಯಣ, ಸುರೇಶ್ ಕುಮಾರ್ ಅದೆಲ್ಲಿ ಹೋಗಿಬಿಟ್ಟರೋ ಏನೋ ಗೊತ್ತಿಲ್ಲ.

ಮತ್ತೆ ಅಶೋಕ್ ವಿಚಾರಕ್ಕೆ ಅಂತ ಬರುವುದಾದರೆ, ಮುಂದಿನ ವಿಧಾನಸಭೆ ಚುನಾವಣೆಗೆ ಅಶೋಕ್‌ಗೆ ಪದ್ಮನಾಭನಗರ ಕ್ಷೇತ್ರದಲ್ಲೇ ಬಹಳ ಕಷ್ಟವಾಗುವಂತಿದೆ. ಏಕೆಂದರೆ, ಬಿಜೆಪಿಯಲ್ಲಿನ ಸ್ಥಳೀಯ ಹಲವು ಮುಖಂಡರು ಕಾಂಗ್ರೆಸ್‌ಗೆ ಜಂಪ್ ಮಾಡಿದ್ದಾರೆ. ಕ್ಷೇತ್ರದಲ್ಲಿ ಸುತ್ತಾಡಿಕೊಂಡು ಬರ್ತೀನಿ ಅಂತೇನಾದರೂ ಅಶೋಕ್ ಬಂದರೆ ಬೆನ್ನ ಹಿಂದೆ ಜನ ಬೇಕು ಅಂದರೆ ದುಡ್ಡು ಕೊಟ್ಟು ಕರೆದುಕೊಂಡು ಬರಬೇಕು ಹಾಗಿದೆ ಪರಿಸ್ಥಿತಿ. ಯಾಕೆಂದರೆ, ಈ ಅಶೋಕ್ ಆರ್‌ಎಸ್‌ಎಸ್‌ ಪ್ರಾಡಕ್ಟ್‌ಗಳ ಥರ ಒಳ್ಳೆ ವಾಗ್ಮಿ ಅಲ್ಲ. ಅದೇ ವೇಳೆ ಒಳ್ಳೆ ಸಂಘಟಕರಾ ಅಂತ ನೋಡಿದರೆ, ಅದೂ ಅಲ್ಲ. ಹೋಗಲಿ ಎದ್ದು- ಬಿದ್ದು ಪಕ್ಷಕ್ಕಾಗಿ ಕೆಲಸ ಮಾಡ್ತಾರಾ ಅಂದರೆ, ಅಡ್ಜಸ್ಟ್‌ಮೆಂಟ್ ಅಶೋಕ್ ಅನ್ನೋ ಹೆಸರು ಸುಮ್ಮನೆ ಅಂತೂ ಬಂದಿದ್ದಲ್ಲ. ಸ್ಥಳೀಯವಾಗಿ ಉಂಡೆ ಲೆಕ್ಕದಂತೆ ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ಹಾರಿದ್ದಾರೆ.

ತಾನು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಳನ್ನೇ ಪರಿಹರಿಸಿಲ್ಲ

ಹೊಸಕೆರೆಹಳ್ಳಿ ಕೆರೆಯ ಬಳಿ ಕೆರೆಕೋಡಿ ರಸ್ತೆಯ ವಿವಾದವೊಂದು ಹಾಗೇ ಕೂತಿದೆ. ಆ ಕಡೆ ರಾಜರಾಜೇಶ್ವರಿ ನಗರದ ಶಾಸಕ- ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಮುನಿರತ್ನ, ಪದ್ಮನಾಭ ನಗರದ ಶಾಸಕ ಆರ್. ಅಶೋಕ್ ಇಬ್ಬರೂ ಈ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಯತ್ನಿಸುತ್ತಿಲ್ಲ. ದಿನದಲ್ಲಿ ಅದೆಷ್ಟು ಮಂದಿ ವಾಹನ ಸವಾರರು ಹಿಡಿಶಾಪ ಹಾಕಿಕೊಂಡು ಇಲ್ಲಿ ಓಡಾಡುತ್ತಾರೆ ಅಂದರೆ, ಈ ಇಬ್ಬರೂ ನಾಯಕರನ್ನು ಇಲ್ಲಿ ಒಂದು ದಿನದ ಮಟ್ಟಿಗೆ ನಿಲ್ಲಿಸಿ, ಜನರ ಬೈಗುಳವನ್ನು ಕೇಳಿಸಬೇಕು. ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗ್ಲೋಬಲ್ ಕಾಲೇಜಿಗೆ, ನ್ಯಾಷನಲ್ ಹಿಲ್ ವ್ಯೂ ಶಾಲೆಗೆ ತೆರಳಬೇಕಾದರೂ ಇದೇ ಹೊಸಕೆರೆಹಳ್ಳಿ ಕೆರೆ ಕೋಡಿ ರಸ್ತೆಯಲ್ಲಿ ಓಡಾಡಬೇಕು. ವರ್ಷಗಳು ಕಳೆದರೂ ಮಣ್ಣಿನ ರಸ್ತೆಯ ಸಮಸ್ಯೆಯೊಂದು ಹಾಗೇ ಇದೆ. ರಸ್ತೆಯನ್ನು ವಿಸ್ತರಣೆ ಮಾಡುವುದಕ್ಕಾಗಿ ಡಾಂಬರು ರಸ್ತೆಯನ್ನು ಕಿತ್ತು ಹಾಕಿ, ಮಣ್ಣಿನ ರಸ್ತೆಯನ್ನು ಹಾಗೇ ಬಿಡಲಾಗಿದೆ. ಇದು ಹಗರಣ- ವಿವಾದ ಅಂತ ಯಥಾಸ್ಥಿತಿಯಲ್ಲಿ ಇಡಲಾಗಿದ್ದು, ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಅದೇನು ಸಮಸ್ಯೆಯೋ, ಅದನ್ನು ಬಗೆಹರಿಸುವ ಗೋಜಿಗೆ ಈ ಯಾವ ನಾಯಕರೂ ಮುಂದಾಗಿಲ್ಲ.

ಆರ್. ಅಶೋಕ್ ಎಂಥ ದೂರದೃಷ್ಟಿ ಇರುವ ಹಾಗೂ ಜನರ ಅನುಕೂಲಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಅಂತ ನೋಡಬೇಕು ಅಂತಾದರೆ ಜಯನಗರ ಮೂರನೇ ಬ್ಲಾಕ್ ಬಳಿ ಇರುವ ಸ್ಕೈ ವಾಕರ್ ಮೇಲೆ ಎಷ್ಟು ಜನ ಓಡಾಡುತ್ತಾರೆ ಅಂತ ಲೆಕ್ಕ ಹಾಕಿಸಿಬಿಡಬೇಕು. ಏಕೆಂದರೆ ಒಬ್ಬರಿಗೂ ಪ್ರಯೋಜನ ಆಗದ ಅದು ವರ್ಷಗಳಿಂದ ಹಾಗೇ ದೃಷ್ಟಿ ಬೊಂಬೆ ರೀತಿ ನಿಂತಿದೆ. ಅದಕ್ಕೆ ಎಷ್ಟು ಲಕ್ಷ ಖರ್ಚು ಮಾಡಿದರೋ ಒಂದು ನಯಾಪೈಸೆಯ ಪ್ರಯೋಜನ ಇಲ್ಲ. ಅಶೋಕ್ ಪ್ರತಿನಿಧಿಸುವ ಪದ್ಮನಾಭಗರ ಕ್ಷೇತ್ರದ್ದೇ ಇಂಥ ಹತ್ತಾರು ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಇದರ ಮಧ್ಯೆ ಮಗನ ರಾಜಕೀಯ ಪ್ರವೇಶಕ್ಕೆ ಅದಾಗಲೇ ಪ್ರಯತ್ನ ಶುರು ಮಾಡಿದ್ದಾರೆ. ಇನ್ನು ಈಗಲ್ಲದೆ ಇನ್ನೊಂದು ಎಲೆಕ್ಷನ್‌ಗೆ ತಮ್ಮ ಮಗನಿಗೆ ಇವರು ಖಂಡಿತಾ ಬಿಜೆಪಿಯ ಟಿಕೆಟ್ ಕೊಡಿಸಿಯೇ ಕೊಡುತ್ತಾರೆ. ಅದಾಗಲೇ ಬ್ಯಾನರ್, ಬಂಟಿಂಗ್ ಗಳಲ್ಲಿ, ಕಟೌಟ್ ಗಳಲ್ಲಿ, ಹಬ್ಬದ- ಹುಟ್ಟುಹಬ್ಬದ ಶುಭಾಶಯದ ಫೋಟೋಗಳಲ್ಲಿ ಅಶೋಕ್ ಅವರ ಮಗನ ಪ್ರವೇಶ ಆಗಿದೆ.

ಕರ್ನಾಟಕದಲ್ಲಿ ಈಗಿರುವುದು ನಾಮ್ ಕೇ ವಾಸ್ತೆ ವಿರೋಧ ಪಕ್ಷ

ಸದ್ಯಕ್ಕೆ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವುದು ಇಪ್ಪತ್ತೈದು ವರ್ಷದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ. ಹಾಗೂ ಇದೇ ಅವಧಿಯಲ್ಲಿ ಅತ್ಯಂತ ದುರ್ಬಲವಾಗಿ ಕಾಣುವ ಬಿಜೆಪಿ ನೇತೃತ್ವದ ವಿರೋಧ ಪಕ್ಷ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಬಿಟ್ಟು, ಜಾರಿಗೆ ತಂದಿರುವ ನೀರಾವರಿ ಯೋಜನೆಗಳು, ರಸ್ತೆ ಕಾಮಗಾರಿಗಳು, ಆಸ್ಪತ್ರೆ- ಶಿಕ್ಷಣ, ಬಂಡವಾಳ ವೆಚ್ಚದ ಯೋಜನೆಗಳು, ರಾಜ್ಯದ ಸಾಲವನ್ನು ಏನಾದರೂ ತೀರಿಸಿದೆಯಾ ಇತ್ಯಾದಿ ವಿಚಾರಗಳ ಬಗ್ಗೆ ಆಡಳಿತ ಪಕ್ಷವೂ ಮಾತನಾಡಲ್ಲ, ವಿರೋಧ ಪಕ್ಷಗಳು ಸಹ ತುಟಿ ಬಿಚ್ಚಲ್ಲ. ವಿಪಕ್ಷ ನಾಯಕರಾದ ಆರ್. ಅಶೋಕ್ ಅವರು ಇಂಥವುಗಳ ಬಗ್ಗೆ ಅಂಕಿ- ಅಂಶಗಳ ಸಹಿತ ಏಕೆ ಮಾತನಾಡಲ್ಲ. ಬಿಜೆಪಿ ಸರ್ಕಾರ ಇದ್ದಾಗ ಜಾರಿಗೆ ಬಂದಂಥ ಯೋಜನೆ, ಕಾಮಗಾರಿಗಳು, ಮೀಸಲಿಟ್ಟ ಅನುದಾನ, ಯೋಜನಾ ವೆಚ್ಚ ಇತ್ಯಾದಿಗಳನ್ನು ಈಗಿನ ಸರ್ಕಾರ ಮಾಡುತ್ತಿರುವ ವೆಚ್ಚ ಹಾಗೂ ಹಣದ ಮೀಸಲಿನ ಜೊತೆಗೆ ಒಪ್ಪಿಟ್ಟು ಏಕೆ ಜನರ ಮುಂದೆ ಇಡಲ್ಲ?

ವಕ್ಫ್, ಮುಡಾ ಹಗರಣ, ಅಬಕಾರಿ ಹಗರಣ ಹೀಗೆ ಬಿಜೆಪಿಗೆ ವರ್ಷವೊಪ್ಪತ್ತಿನಲ್ಲಿಯೇ ಎಷ್ಟೊಂದು ಅಸ್ತ್ರಗಳು ಸಿಕ್ಕಿವೆ ಎನಿಸುತ್ತದೆ. ಆದರೆ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೆ ಅಬ್ಬರಿಸುತ್ತಿದ್ದಾರೆ. ಅಶೋಕ್ ವಿಪಕ್ಷಗಳ ನಾಯಕ ಅಲ್ಲ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅಂತ ಶ್ರಮಿಸುತ್ತಿದ್ದಾರೆ ಅನ್ನೋರು ಒಬ್ಬರು. ಆ ವಿಜಯೇಂದ್ರ ಯಾವ ಬಿಜೆಪಿ ರಾಜ್ಯಾಧ್ಯಕ್ಷ ಅನ್ನೋರು ಮತ್ತೊಬ್ಬರು. ಅಶೋಕ್ ಹಾಗೂ ವಿಜಯೇಂದ್ರ ಇಬ್ಬರೂ ತಮ್ಮ ನೇಮ್ ಪ್ಲೇಟ್ ಗೋಸ್ಕರ ಹುದ್ದೆಯಲ್ಲಿ ಕೂತಿರುವಂತೆ ಕಾಣುತ್ತಾರೆ. ಕರ್ನಾಟಕ- ಕನ್ನಡಿಗರ ಪಾಲಿಗೆ ಇದು ಬಹಳ ಸಂಕಷ್ಟದ ಸಮಯ. ಇನ್ನು ನಾಲ್ಕು ವರ್ಷ ಹೇಗೋ ಏನೋ?

Whats_app_banner