ಮೂವರು ಡಿಸಿಎಂ ಹುದ್ದೆಗೆ ಸಚಿವರ ಇಂಗಿತ: ಪಕ್ಷದ ಹಿತವೋ, ಡಿಕೆ ಶಿವಕುಮಾರ್ ಕೈ ಕಟ್ಟಿ ಹಾಕುವ ತಂತ್ರವೋ ?
ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಸಿಎಂ ಆಗಲೇಬೇಕು ಎಂಬ ಪಟ್ಟಿನಿಂದ ಹಿಂದೆ ಸರಿದಿದ್ದರು. ಸರ್ಕಾರದಲ್ಲಿ ಬೆಂಗಳೂರು ಒಂದು ತೂಕವಾದರೆ ಇಡೀ ರಾಜ್ಯ ಒಂದು ತೂಕ. ಬೆಂಗಳೂರಿಗೆ ಡಿಕೆಶಿ ಅವರೇ ನಾಡಪ್ರಭು. ಆದರೆ ಇದೀಗ ಕೇಳಿಬಂದಿರುವ ಇಂಗಿತ ಕುತೂಹಲ ಮೂಡಿಸಿದೆ.

ಬೆಂಗಳೂರು: ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಕೋರಿ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆಯಲಾಗುವುದು ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಟ್ರೆಂಡಿಂಗ್ ಸುದ್ದಿ
ಸರ್ಕಾರ ಶತದಿನ ಪೂರೈಸಿದ ನಂತರದ ಬೆಳವಣಿಗೆಗಳು ಸರ್ಕಾರವನ್ನು ಗೊಂದಲದ ಗೂಡಿಗೆ ದೂಡುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಸಿಎಂ ಆಗಲೇಬೇಕು ಎಂಬ ಪಟ್ಟಿನಿಂದ ಹಿಂದೆ ಸರಿದಿದ್ದರು. ಸರ್ಕಾರದಲ್ಲಿ ಬೆಂಗಳೂರು ಒಂದು ತೂಕವಾದರೆ ಇಡೀ ರಾಜ್ಯ ಒಂದು ತೂಕ. ಬೆಂಗಳೂರಿಗೆ ಡಿಕೆಶಿ ಅವರೇ ನಾಡಪ್ರಭು. ಮೂಗು ತೂರಿಸಲು ಮುಖ್ಯಮಂತ್ರಿಗಳಿಗೂ ಅವಕಾಶ ಇಲ್ಲ. ಬೆಂಗಳೂರಿನ ಆಗು ಹೋಗುಗಳನ್ನು ಕುರಿತು ಸಿದ್ದರಾಮಯ್ಯ ಒಂದೇ ಒಂದು ಸಭೆ ಮಾಡಲಾಗಿಲ್ಲ. ಒಮ್ಮೆಯೂ ನಗರ ಪ್ರದಕ್ಷಿಣೆ ಹೋಗಲಾಗಿಲ್ಲ. ಅಷ್ಟರ ಮಟ್ಟಿಗೆ ಅವರಿಗೆ ಟೈಟ್ ಸೆಕ್ಯೂರಿಟಿ ವಿಧಿಸಲಾಗಿದೆ.
ಡಿಕೆಶಿ ಕಟ್ಟಿ ಹಾಕುವ ತಂತ್ರ:
ಲೋಕಸಭಾ ಚುನಾವಣೆ ನಂತರ ಏನೆಲ್ಲಾ ಪಲ್ಲಟಗಳು ಸಂಭವಿಸಬಹುದು. ಆಗಿನಿಂದಲೇ ಸಿಎಂ ಹುದ್ದೆಗೆ ಶಿವಕುಮಾರ್ ಸಜ್ಜಾಗಬಹುದು. ನೇರವಾಗಿಯೇ ಎರಡು ಶಕ್ತಿ ಕೇಂದ್ರಗಳು ಹುಟ್ಟಿ ಕೊಳ್ಳಬಹುದು. ಈ ಎಲ್ಲ ಬೆಳವಣಿಗೆಗಳು ತಮ್ಮ ದಾರಿಗೆ ಮಗ್ಗುಲು ಮುಳ್ಳಾಗಬಹುದು ಎಂದು ಸಿದ್ದರಾಮಯ್ಯ ತಮ್ಮ ಆಪ್ತರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲವು ಸಚಿವರು ಮತ್ತು ಶಾಸಕರು 5 ವರ್ಷ ಪೂರ್ತಿ ಸಿದ್ದರಾಮಯ್ಯ ಅವರೇ ಸಿಎಂ ಎಂದು ಅವಕಾಶ ಸಿಕ್ಕಾಗಲೆಲ್ಲಾ ಪ್ರತಿಪಾದಿಸುತ್ತಿದ್ದಾರೆ. ಈ ಮೂಲಕ ಶಿವಕುಮಾರ್ ಅವರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಾ ಬಂದಿದೆ. ಎರಡನೇ ಅಸ್ತ್ರವನ್ನು ರಾಜಣ್ಣ ಪ್ರಯೋಗಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ವೀರಶೈವ ಲಿಂಗಾಯತ ಸಮುದಾಯಕ್ಕೆ ತಲಾ ಒಂದು ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕೇಳಿಕೊಳ್ಳಲಾಗುವುದು. ಅಕ್ಟೋಬರ್ ಮೊದಲ ವಾರ ಹೈಕಮಾಂಡ್ ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಈ ವಿಚಾರಕ್ಕೆ ಸಹಮತ ವ್ಯಕ್ತಪಡಿಸುವ ಮುಖಂಡರನ್ನು ಒಳಗೊಂಡ ನಿಯೋಗವನ್ನು ಹೈಕಮಾಂಡ್ ಬಳಿಗೆ ಕರೆದುಕೊಂಡು ಹೋಗುವ ಬಗ್ಗೆ ಚಿಂತಿಸಲಾಗುವುದು ಎಂದು ಒಂದೇ ಉಸುರಿಗೆ ಹೇಳಿದ್ದಾರೆ. ಇವರ ಹೇಳಿಕೆ ಇಡೀ ಕಾಂಗ್ರೆಸ್ ಸಮುದಾಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಉಗುಳುವಂತೆಯೂ ಇಲ್ಲ, ನುಂಗುವಂತೆಯೂ ಇಲ್ಲ !
ಮತ್ತೊಂದು ಕಡೆ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಭಾವನೆ ಕೇಳಿ ಬರುತ್ತಿದೆ. ಬೆಲೆ ಏರಿಕೆ, ವರ್ಗಾವಣೆ ದಂಧೆ, ಪಕ್ಷಪಾತ ಧೋರಣೆ, ಅಭಿವೃದ್ಧಿಗೆ ಅನುದಾನದ ಕೊರತೆ, ಕೆಲವು ಸಚಿವರು ಮಾತಿನ ಮಂಟಪ ಕಟ್ಟುತ್ತಿದ್ದರೆ ಇನ್ನೂ ಕೆಲವರು ನಿಷ್ಕ್ರಿಯರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಗ್ಯಾರಂಟಿಗಳ ಜಾರಿಯಿಂದಲೇ 20 ಲೋಕಸಭಾ ಸ್ಥಾನ ಗೆಲ್ಲುವ ಭ್ರಮೆಯ ಪೊರೆಯಿಂದ ಆಚೆ ಬಂದಿರುವ ಹಾಗಿಲ್ಲ. ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಇದುವರೆಗೂ ವಿಪಕ್ಷಗಳ ಬಾಯಿಗೆ ಆಹಾರವಾಗದ ಹಾಗೆ ಎಚ್ಚರ ವಹಿಸಿತ್ತು. ಇನ್ನು ಮುಂದೆ ಸಿಕ್ಕ ಸಣ್ಣ ಅವಕಾಶವನ್ನು ವಿಪಕ್ಷಗಳು ಬಿಡುವುದಿಲ್ಲ. ಅದರಲ್ಲೂ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರು ನೇರವಾಗಿಯೇ ದಾಳಿ ನಡೆಸುತ್ತಿದ್ದಾರೆ. ನಿಧಾನವಾಗಿಯಾದರೂ ಬಿಜೆಪಿ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ.
ಸಿದ್ದು ಇಂಗಿತಕ್ಕೆ ಮಾತಿನ ರೂಪ ಕೊಟ್ಟ ಸಚಿವ ರಾಜಣ್ಣ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನದ ಇಂಗಿತಕ್ಕೆ ರಾಜಣ್ಣ ಮಾತಿನ ರೂಪ ಕೊಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸರ್ಕಾರದ ವರ್ಚಸ್ಸು ವೃದ್ಧಿ, ಲೋಕಸಭಾ ಚುನಾವಣೆ ಮತ್ತು ಶಿವಕುಮಾರ್ ಅವರನ್ನು ಕಟ್ಟಿ ಹಾಕುವುದು ಸಿದ್ದರಾಮಯ್ಯ ಪಾಳಯದ ಉದ್ದೇಶ. ಅದರಲ್ಲೂ ಶಿವಕುಮಾರ್ ಪ್ರಮುಖ ಗುರಿ. ಹೈ ಕಮಾಂಡ್ ಆದೇಶದಂತೆ ಸಿಎಂ ಮತ್ತು ಡಿಸಿಎಂ ಗುಂಪುಗಳು ಮೌನಕ್ಕೆ ಶರಣಾಗಿವೆ. ಬಹುಶಃ ಲೋಕಸಭಾ ಚುನಾವಣೆ ನಂತರ ಜ್ವಾಲಾಮುಖಿ ಸ್ಫೋಟಗೊಳ್ಳಲೂಬಹುದು. ರಾಜಸ್ತಾನದ ಕಾಂಗ್ರೆಸ್ ಸರ್ಕಾರದ ಘಟನಾವಳಿಗಳು ಇಲ್ಲಿಯೂ ಪುನರಾವರ್ತನೆ ಆಗುವ ಸಾಧ್ಯತೆಗಳು ಇಲ್ಲದಿಲ್ಲ. ಶಿವಕುಮಾರ್ ಮತ್ತೊಬ್ಬ ಸಚಿನ್ ಪೈಲಟ್ ಆಗಲೂಬಹುದು.
ರಾಜಣ್ಣ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ನಾನೇನೂ ಹೇಳುವುದು ಇಲ್ಲ. ಹೈ ಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮುಗುಮ್ಮಾಗಿ ಹೇಳಿದ್ದಾರೆ. ಇಂತಹ ಭಾವನೆಗಳಿಗೆ ಕಡಿವಾಣ ಹಾಕುವ ಇಚ್ಛೆ ಇದ್ದಿದ್ದರೆ ಅವರು ಖಡಕ್ ಎಚ್ಚರಿಕೆ ನೀಡುತ್ತಿದ್ದರು. ಸಿದ್ದರಾಮಯ್ಯ ಅವರಿಗೂ ಈ ಹೇಳಿಕೆ ಬೇಕಿತ್ತೇನೋ?
ವರದಿ: ಎಚ್ ಮಾರುತಿ