Opinion: ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ; ರಾಜೀವ್ ಹೆಗಡೆ ಬರಹ
ಅಂದ್ಹಾಗೆ ಈ 'ಜಾತ್ಯತೀತʼ ಶಬ್ದವನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎನ್ನುವುದು ಖಂಡಿತ ಅನಂತ್‌ಕುಮಾರ್ ಹೆಗಡೆ ಮಾತಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯ ನೂರಾರು ಸಭೆಗಳಲ್ಲಿ ಈ ವಿಷಯದ ಬಗ್ಗೆ ಗಂಟೆಗಟ್ಟಲೇ ಭಾಷಣವಾಗಿದೆ. ಬಿಜೆಪಿಯ ಸಂವಿಧಾನ ಬದಲಾವಣೆ ಉದ್ದೇಶವು ಖಂಡಿತ ಮೀಸಲಾತಿಯಲ್ಲ.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಅನಂತ್ ಕುಮಾರ್ ಹೆಗಡೆಯನ್ನು ಒಬ್ಬ ಹುಚ್ಚ ಎಂದಿದ್ದಾರೆ. ರವಿಕುಮಾರ್ ಅವರನ್ನು ನಾನು ಸಾಕಷ್ಟು ವರ್ಷಗಳಿಂದ ರಾಜಕೀಯ ಹಾಗೂ ಇತರ ವೇದಿಕೆಗಲ್ಲಿ ನೋಡಿದ್ದೇನೆ. ಆದರೆ ಯಾರನ್ನೋ ಮೆಚ್ಚಿಸುವ ಅನಿವಾರ್ಯತೆಗೆ ಬಿದ್ದು ಇಷ್ಟೊಂದು ಹೀನಾಯ ಸ್ಥಿತಿಗೆ ಹೋಗುತ್ತಾರೆ ಎನ್ನುವ ಅರಿವಿರಲಿಲ್ಲ. ರವಿಕುಮಾರ್ ಅವರಂಥ ನಾಯಕರೇ ರಾಹುಲ್ ಗಾಂಧಿ ರೀತಿ ಮಾತನಾಡಲು ಹಾಗೂ ಆಲೋಚಿಸಲು ಆರಂಭಿಸಿದಾಗ, 'ಸಂವಿಧಾನ ಬದಲಾವಣೆʼ ಹಾಗೂ ‘’ಮೀಸಲಾತಿʼ ಕುರಿತು ಕಾಂಗ್ರೆಸ್‌ನ ಅಪಪ್ರಚಾರ, ಡೀಪ್‌ಫೇಕ್ ವಿಡಿಯೋಗಳೇನು ಅಪಾಯಕಾರಿ ಎನಿಸುವುದಿಲ್ಲ. ಇಲ್ಲವಾದಲ್ಲಿ ರವಿಕುಮಾರ್ ಬಗ್ಗೆ ನಾವು ಇಲ್ಲಿವರೆಗೆ ಅಂದುಕೊಂಡದ್ದು ಸುಳ್ಳು ಎಂದು ಪಶ್ಚಾತ್ತಾಪ ಪಡಬೇಕಾಗುತ್ತದೆ.
ಸಂವಿಧಾನ ಬದಲಾವಣೆಗೆ ಸಂಬಂಧಿಸಿ ಅನಂತ್‌ಕುಮಾರ್ ಹೆಗಡೆ ಹತ್ತಾರು ಬಾರಿ, ವಿವಿಧ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಆ ಬಗ್ಗೆ ವಿವಿಧ ಮಾಧ್ಯಮಗಳಲ್ಲೂ ವಿಶೇಷ ಸಂದರ್ಶನದ ಮೂಲಕ ತಮ್ಮ ಸ್ಪಷ್ಟ ನಿಲುವುನ್ನು ಕೂಡ ಹೇಳಿದ್ದಾರೆ. ಇಂತಹ ಒಂದು ವಿಡಿಯೋವನ್ನು ಕೆಳಗೆ ಕಾಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದೇನೆ ಒಮ್ಮೆ ವೀಕ್ಷಿಸಿ (ರಾಜೀವ್ ಹೆಗಡೆ ಅವರ ಮೂಲ ಫೇಸ್‌ಬುಕ್ ಪೋಸ್ಟ್ ಈ ಬರಹದ ಕೊನೆಯಲ್ಲಿದೆ. ವಿಡಿಯೊ ಕೂಡ ಅವರ ಪೋಸ್ಟ್‌ನಲ್ಲಿಯೇ ಇದೆ). ಅನಂತ್‌ಕುಮಾರ್ ಅವರ ಮಾತಿನಂತೆ ಸಂವಿಧಾನ ಬದಲಾವಣೆಗೆ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ.
'ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಜಾತ್ಯತೀತ ಎನ್ನುವ ಉಲ್ಲೇಖವೇ ಇರಲಿಲ್ಲ. ಸಂವಿಧಾನದ ಪೀಠಿಕೆಯಲ್ಲೂ ಆ ಅಂಶವಿಲ್ಲ. ಹಾಗಿದ್ದರೆ ಅಂಬೇಡ್ಕರ್ ಅವರಿಗೆ ಸಮಾಜವಾದ ಹಾಗೂ ಜಾತ್ಯತೀತತೆ ಬಗ್ಗೆ ಗೊತ್ತಿರಲಿಲ್ಲವೆಂದೇನಲ್ಲ. ಇಂದಿರಾ ಗಾಂಧಿ ಕಾಲದಲ್ಲಿ ರಾಜಕೀಯ ಕಾರಣಗಳಿಗೆ ಈ ಅಂಶಗಳನ್ನು ಸೇರಿಸಲಾಯಿತು. ಕಾಲ ಬದಲಾದಂತೆ ಸಂವಿಧಾನದಲ್ಲಿ ಅಗತ್ಯ ತಿದ್ದುಪಡಿ ಮಾಡಲೆಂದೇ ಸಂಸದರನ್ನು ಜನರು ಆಯ್ಕೆ ಮಾಡುತ್ತಾರೆ. ಅದನ್ನೇ ನಾವು ಮಾಡಲು ಹೊರಟಿದ್ದೇವೆʼ ಎಂದು ಹೇಳಿದ್ದಾರೆ. ಅಂದ್ಹಾಗೆ ಈ ಭಾಷಣಗಳಲ್ಲಿ ಎಲ್ಲಿಯೂ ಅವರು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿಲ್ಲ. ಹಾಗೆಯೇ ಮೀಸಲಾತಿ ತೆಗೆಯಬೇಕು ಎಂದು ಕೂಡ ಹೇಳಿಲ್ಲ. ಅಷ್ಟಕ್ಕೂ ಅವರು ಒಂದು ಕಡೆ ಮಾತನಾಡುತ್ತಾ, ʼನಮಗೆ ಅಂಬೇಡ್ಕರ್ ರಚಿಸಿದ ಮೂಲ ಸಂವಿಧಾನ ಬೇಕೆ ಹೊರತು, ಕಾಂಗ್ರೆಸ್ಸಿಗರು ಸೇರಿಸಿದ ಕೊಳಕುಗಳು ಬೇಡʼ ಎಂದು ಕೂಡ ಸ್ಪಷ್ಟಪಡಿಸಿದ್ದರು.
ಜಾತ್ಯತೀತ ಶಬ್ದದ ಬಗ್ಗೆ ಆರ್‌ಎಸ್‌ಎಸ್, ಬಿಜೆಪಿ ಸಭೆಗಳಲ್ಲಿ ಸಾಕಷ್ಟು ಭಾಷಣಗಳಾಗಿವೆ
ಅನಂತ್ ಅವರ ಹೇಳಿಕೆಯ ತಲೆ, ಬುಡವನ್ನು ಕತ್ತರಿಸಿದ ಕೆಲ ಮಾಧ್ಯಮಗಳು, ಕಾಂಗ್ರೆಸ್‌ನ ಐಟಿ ಸೆಲ್‌ಗಳು 'ಸಂವಿಧಾನ ಬದಲಾವಣೆ ಮಾಡಲು ನಾವು ಹೊರಟಿದ್ದೇವೆʼ ಎನ್ನುವುದನ್ನಷ್ಟೇ ಉಳಿಸಿಕೊಂಡರು. ಅದರಲ್ಲಿ ಯಾವುದೇ ತಪ್ಪಿಲ್ಲ. ಇಂತಹ ಕುಚೇಷ್ಟೆ ಮಾಡಲೆಂದೇ ಪ್ರತಿಪಕ್ಷಗಳು ಹಾಗೂ ಕೆಲ ಮಾಧ್ಯಮಗಳಿರುತ್ತವೆ. ಇದನ್ನೇ ಉತ್ತರ ಪ್ರದೇಶದಲ್ಲಿ ಅಸ್ತ್ರವನ್ನಾಗಿಸಿಕೊಂಡು ಪ್ರತಿಪಕ್ಷಗಳು ಹೆಚ್ಚಿನ ಸೀಟು ಕೂಡ ಗೆದ್ದವು. ಅಮೆರಿಕಕ್ಕೆ ಹೋದಾಗ ರಾಹುಲ್ ಗಾಂಧಿಯ ಮೀಸಲಾತಿ ಹೇಳಿಕೆಯನ್ನು ಕೂಡ ಕೆಲ ಮಾಧ್ಯಮ ಹಾಗೂ ಬಿಜೆಪಿ ಐಟಿ ಸೆಲ್ ಅದೇ ರೀತಿ ಬಳಸಿಕೊಂಡಿತ್ತು.
ಆದರೆ ಬಿಜೆಪಿಯು ತನ್ನದೇ ನಾಯಕನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ಸರಿ ಮಾಡುವ ಪ್ರಯತ್ನವನ್ನೂ ಮಾಡಲಿಲ್ಲ. ಹಾಗೆಯೇ ಜನರಿಗೆ ಸರಿಯಾದ ಮಾಹಿತಿ ನೀಡುವ ಕೆಲಸವನ್ನೂ ಮಾಡಲಿಲ್ಲ. ಅಂದ್ಹಾಗೆ ಈ ‘ಜಾತ್ಯತೀತʼ ಶಬ್ದವನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎನ್ನುವುದು ಖಂಡಿತ ಅನಂತ್‌ಕುಮಾರ್ ಹೆಗಡೆ ಮಾತಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯ ನೂರಾರು ಸಭೆಗಳಲ್ಲಿ ಈ ವಿಷಯದ ಬಗ್ಗೆ ಗಂಟೆಗಟ್ಟಲೇ ಭಾಷಣವಾಗಿದೆ. ಈಗ ಅನಂತ್‌ಕುಮಾರ್ ಅವರನ್ನು ಹುಚ್ಚ ಎಂದಿರುವ ರವಿಕುಮಾರ್ ಕೂಡ ಈ ವಿಷಯಕ್ಕೆ ಸಂಬಂಧಿಸಿ ಹತ್ತಾರು ಭಾಷಣ ಮಾಡಿರುತ್ತಾರೆ. ಆದರೆ ವ್ಯತ್ಯಾಸವೇನೆಂದರೆ ಅನಂತ್‌ಕುಮಾರ್ ಹೆಗಡೆಗೆ ಟವೆಲ್ ಸುತ್ತಿಕೊಂಡು ಹೊಡೆಯಲು ಬರುವುದಿಲ್ಲ. ಆದರೆ ಕೆಲವು ಕುಮಾರರು ’ಹಾವು ಸಾಯಬಾರದು, ಕೋಲು ಮುರಿಯಬಾರದುʼ ಎನ್ನುವ ರಾಜಕೀಯ ಲೆಕ್ಕಾಚಾರದಲ್ಲಿ ಮಾತನಾಡುತ್ತಾರೆಯಷ್ಟೇ.
ಅನಂತ್‌ಕುಮಾರ್ ಹೆಗಡೆಗೆ ಸಂಬಂಧಿಸಿ ರವಿಕುಮಾರ್ ಹೇಳಿಕೆ ನೋಡಿದಾಗ, ಕಾಂಗ್ರೆಸ್ ಮಾಡಿದ್ದು ಖಂಡಿತ ಅಪಪ್ರಚಾರವಲ್ಲ. ಒಂದೊಮ್ಮೆ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದಾದರೆ, ರಾಹುಲ್ ಗಾಂಧಿಯ ಆ ದುಷ್ಟಕೂಟದಲ್ಲಿ ರವಿಕುಮಾರ್ ಕೂಡ ಭಾಗಿಯಾಗುತ್ತಾರೆ.
ಬಿಜೆಪಿ ನಾಯಕರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ
ಕರ್ನಾಟಕ ಬಿಜೆಪಿ ಹಾಗೂ ಅದರ ನಾಯಕರು ಉದ್ದಾರವಾಗುವುದಿಲ್ಲ ಎಂದು ಸುಮ್ಮನೇ ಬಾಯಿಚಪಲಕ್ಕೆ ಹೇಳುವುದಲ್ಲ. ಈ ನಾಯಕರಿಗೆ ತಮ್ಮ ಸೈದ್ಧಾಂತಿಕ ನಿಲುವುಗಳ ಬಗ್ಗೆಯೇ ಸ್ಪಷ್ಟತೆಯಿಲ್ಲ. ‘ಸಂವಿಧಾನ ಬದಲಾವಣೆʼ ಎನ್ನುವುದನ್ನು ಮೀಸಲಾತಿಗೆ ನೇರವಾಗಿ ಸಂಬಂಧ ಕಲ್ಪಿಸುವ ಮೂಲಕ ತನ್ನ ಉದ್ದೇಶವನ್ನು ಕಾಂಗ್ರೆಸ್ ಸಾಧಿಸಿಯಾಯಿತು. ಆದರೆ ಬಿಜೆಪಿಯ ಸಂವಿಧಾನ ಬದಲಾವಣೆ ಉದ್ದೇಶವು ಖಂಡಿತ ಮೀಸಲಾತಿಯಲ್ಲ. ಇಂದು ಮೀಸಲಾತಿಯನ್ನು ಕಾಂಗ್ರೆಸ್‌ಗಿಂತ ಗಟ್ಟಿಯಾಗಿ ಬಿಜೆಪಿ ಪ್ರತಿಪಾದಿಸುತ್ತಿದೆ. ಆದರೆ ರವಿಕುಮಾರ್ ಅವರಂಥ ನಾಯಕರ ಬೇಜವಾಬ್ದಾರಿ ಹೇಳಿಕೆಗಳು ಹಾಗೂ ಕರ್ನಾಟಕ ಬಿಜೆಪಿಯ ಒಂದಿಷ್ಟು ಅಸಮರ್ಥ ವಕ್ತಾರರ ಕಾರಣದಿಂದ ಬಿಜೆಪಿಯ ಪ್ರಮುಖ ಅಜೆಂಡಾದಲ್ಲಿ ಒಂದಾದ ’ಜಾತ್ಯತೀತʼವನ್ನು ಸಂವಿಧಾನದಿಂದ ತೆಗೆಯಬೇಕು ಎನ್ನುವುದು ಕೂಡ ಮೂಲೆಗುಂಪಾಗಿದೆ.
ಅಂದ್ಹಾಗೆ ಇಂಗ್ಲಿಷ್‌ನ ‘ಸೆಕ್ಯುಲರ್ʼ ಹಾಗೂ ಪ್ರಾದೇಶಿಕ ಭಾಷೆಯ 'ಜಾತ್ಯತೀತತೆʼಗೆ ಸಾಕಷ್ಟು ವ್ಯತ್ಯಾಸವಿದೆ. ಈ ಜಾತ್ಯತೀತೆ ಹಾಗೂ ಮೀಸಲಾತಿಗೆ ಯಾವುದೇ ಸಂಬಂಧವಿಲ್ಲ. ನಮ್ಮ ಸಂವಿಧಾನದಲ್ಲಿ 'ಜಾತ್ಯತೀತತೆʼಯನ್ನು ತುರುಕುವ ಮೊದಲೇ ಮೀಸಲಾತಿ ವ್ಯವಸ್ಥೆಯನ್ನು ಅಂಬೇಡ್ಕರ್ ಅವರು ಸಾಮಾಜಿಕ ಸುಧಾರಣೆಗೆ ಜಾರಿ ಮಾಡಿಯಾಗಿತ್ತು. 'ಜಾತ್ಯತೀತತೆʼ ಎನ್ನುವ ಶಬ್ದದ ಸೇರ್ಪಡೆಗೆ ರಾಜಕೀಯ, ಧಾರ್ಮಿಕ ವೋಟ್ ಬ್ಯಾಂಕ್ ಕಾರಣವಿದೆಯೇ ಹೊರತು, ಅಲ್ಲಿ ಯಾವುದೇ ಸಾಮಾಜಿಕ ಸುಧಾರಣೆಯೂ ಅಡಗಿಲ್ಲ. ಹುಚ್ಚರು ಯಾರೆಂಬುದನ್ನು ನೀವೆ ನಿರ್ಧರಿಸಿ.
ಬರಹ: ರಾಜೀವ್ ಹೆಗಡೆ
(ಗಮನಿಸಿ: ಈ ಬರಹದಲ್ಲಿರುವ ಲೇಖಕರ ವೈಯಕ್ತಿಕ ಅಭಿಪ್ರಾಯ)