ಶೆನ್‌ಜೆನ್ ವೀಸಾ ಬಳಸುತ್ತಿದ್ದಾರಾ ಪ್ರಜ್ವಲ್ ರೇವಣ್ಣ, ಬ್ಲೂಕಾರ್ನರ್ ನೋಟಿಸ್‌ಗೆ ವಿದೇಶಗಳಿಂದ ಪ್ರತಿಕ್ರಿಯೆಯೇ ಇಲ್ಲ- ಇತ್ತೀಚಿನ 5 ವಿದ್ಯಮಾನ
ಕನ್ನಡ ಸುದ್ದಿ  /  ಕರ್ನಾಟಕ  /  ಶೆನ್‌ಜೆನ್ ವೀಸಾ ಬಳಸುತ್ತಿದ್ದಾರಾ ಪ್ರಜ್ವಲ್ ರೇವಣ್ಣ, ಬ್ಲೂಕಾರ್ನರ್ ನೋಟಿಸ್‌ಗೆ ವಿದೇಶಗಳಿಂದ ಪ್ರತಿಕ್ರಿಯೆಯೇ ಇಲ್ಲ- ಇತ್ತೀಚಿನ 5 ವಿದ್ಯಮಾನ

ಶೆನ್‌ಜೆನ್ ವೀಸಾ ಬಳಸುತ್ತಿದ್ದಾರಾ ಪ್ರಜ್ವಲ್ ರೇವಣ್ಣ, ಬ್ಲೂಕಾರ್ನರ್ ನೋಟಿಸ್‌ಗೆ ವಿದೇಶಗಳಿಂದ ಪ್ರತಿಕ್ರಿಯೆಯೇ ಇಲ್ಲ- ಇತ್ತೀಚಿನ 5 ವಿದ್ಯಮಾನ

ಹಾಸನ ಲೈಂಗಿಕ ಹಗರಣ; ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್‌ಗಳ ಆರೋಪಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರ ನಿಖರ ಸ್ಥಳ ಪತ್ತೆ ಕಷ್ಟವಾಗಿದೆ. ಶೆನ್‌ಜೆನ್ ವಿಸಾ ಬಳಸುತ್ತಿದ್ದಾರಾ ಪ್ರಜ್ವಲ್ ರೇವಣ್ಣ ಎಂಬ ಸಂದೇಹ ಶುರುವಾಗಿದ್ದು, ಬ್ಲೂಕಾರ್ನರ್ ನೋಟಿಸ್‌ಗೆ ವಿದೇಶಗಳಿಂದ ಪ್ರತಿಕ್ರಿಯೆಯೇ ಇಲ್ಲ. ಇತ್ತೀಚಿನ 5 ವಿದ್ಯಮಾನಗಳ ವಿವರ ಹೀಗಿದೆ.

ಹಾಸನ ಲೈಂಗಿಕ ಹಗರಣ; ನಿಖರ ಸ್ಥಳಪತ್ತೆಯಾಗದಂತೆ ವಿದೇಶದ ಶೆನ್‌ಜೆನ್ ವಿಸಾ ಬಳಸುತ್ತಿದ್ದಾರಾ ಪ್ರಜ್ವಲ್ ರೇವಣ್ಣ ಎಂಬ ಸಂದೇಹ ವ್ಯಕ್ತವಾಗಿದೆ.
ಹಾಸನ ಲೈಂಗಿಕ ಹಗರಣ; ನಿಖರ ಸ್ಥಳಪತ್ತೆಯಾಗದಂತೆ ವಿದೇಶದ ಶೆನ್‌ಜೆನ್ ವಿಸಾ ಬಳಸುತ್ತಿದ್ದಾರಾ ಪ್ರಜ್ವಲ್ ರೇವಣ್ಣ ಎಂಬ ಸಂದೇಹ ವ್ಯಕ್ತವಾಗಿದೆ.

ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ವಾಪಸ್ ಬರುವಂತೆ ವ್ಯಾಪಕ ಒತ್ತಡ ಹೇರಲಾಗುತ್ತಿದೆ. ಈ ನಡುವೆ, ಹಾಸನ ಲೈಂಗಿಕ ಹಗರಣ (Hassan Sex Scandal) ಕ್ಕೆ ಸಂಬಂಧಿಸಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಪೋಟೋ ಶೇರ್ ಮಾಡಿದ ಕೇಸ್‌ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ (Karnataka High Court) ಗೆ ಅರ್ಜಿ ಸಲ್ಲಿಸಿದ್ದಾರೆ.

ನವೀನ್ ಗೌಡ ಅಲಿಯಾಸ್ ಎನ್.ಆರ್.ನವೀನ್ ಕುಮಾರ್, ಎನ್.ಕಾರ್ತಿಕ್, ಬಿ.ಸಿ.ಚೇತನ್ ಕುಮಾರ್ ಮತ್ತು ಹೆಚ್.ವಿ. ಪುಟ್ಟರಾಜು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಆರೋಪಿಗಳು. ಇಷ್ಟೂ ಆರೋಪಿಗಳು ಪ್ರತ್ಯೇಕವಾಗಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ರಜಾಕಾಲದ ಪೀಠ, ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ಅಂದರೆ ಹಾಸನದ ಸಿಇಎನ್ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಜ್ವಲ್ ರೇವಣ್ಣ ಕೇಸ್; ಇತ್ತೀಚಿನ 5 ವಿದ್ಯಮಾನಗಳಿವು

1) ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ತೆರಳಿದ ಬಳಿಕ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಕೆ ಮಾಡಿಲ್ಲ. ಹೀಗಾಗಿ ಅವರ ವಿರುದ್ಧದ ಬ್ಲೂಕಾರ್ನರ್ ನೋಟಿಸ್‌ ಕೆಲಸ ಮಾಡಿಲ್ಲ. ವಿದೇಶಗಳಿಗೂ ಈ ಬಗ್ಗೆ ವಿವರ ಸಂಗ್ರಹಿಸಿ ಪ್ರತಿಕ್ರಿಯಿಸುವುದು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಏ.26 ರಂದು ರಾತ್ರಿ ಪ್ರಜ್ವಲ್ ಜರ್ಮನಿಗೆ ತೆರಳಿದ್ದರು.

2) ಬ್ರಿಟನ್ ಹಾಗೂ ಸ್ವಿಜರ್ಲೆಂಡ್ ಹೊರತು ಪಡಿಸಿ ಜರ್ಮನಿ ಒಳಗೊಂಡಂತೆ ಯೂರೋಪ್ ಖಂಡದ 21 ದೇಶಗಳಿಗೆ ಶನ್‌ಜೆನ್ ವೀಸಾ ಬಳಸಿ ಪ್ರಯಾಣಿಸಬಹುದು. ಈ ಅವಕಾಶವನ್ನು ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

3) ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಮಾಡಿದ ಮನವಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಂದಿಸಿದ್ದು, ಪ್ರಜ್ವಲ್ ರೇವಣ್ಣಗೆ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್‌ಗೆ ಪ್ರಜ್ವಲ್ ರೇವಣ್ಣ 10 ದಿನಗಳ ಒಳಗೆ ಪ್ರತಿಕ್ರಿಯಿಸಬೇಕು. ತಪ್ಪಿದರೆ, ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದಾಗಲಿದೆ. ವಿವರ ಓದಿಗೆ - ಪಾಸ್‌ಪೋರ್ಟ್ ರದ್ದು ಕೋರಿ ಕರ್ನಾಟಕ ಮನವಿ ಹಿನ್ನೆಲೆ; ಲೈಂಗಿಕ ದೌರ್ಜನ್ಯ ಆರೋಪಿ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ನೋಟಿಸ್

4) ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಮಾಡಬೇಕು ಎಂದು ಕೋರಿದ ಕರ್ನಾಟಕ ಸರ್ಕಾರದ ಪತ್ರ ಮೇ 21 ರಂದು ಬಂದಿದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರವೇ ತಡ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸುತ್ತ ಜೈಶಂಕರ್ ಈ ವಿಷಯ ತಿಳಿಸಿದರು. ವಿವರ ಓದಿಗೆ- ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಕೋರಿ ಮೇ 21ಕ್ಕೆ ಮನವಿ ಬಂದಿದೆ; ಕೇಂದ್ರದಿಂದ ತಡ ಎಂದ ಕಾಂಗ್ರೆಸ್‌ಗೆ ಸಚಿವ ಎಸ್‌ ಜೈಶಂಕರ್ ತಿರುಗೇಟು

5) ಪ್ರಜ್ವಲ್​ ರೇವಣ್ಣ ಅವರನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ ಎಚ್‌ ಡಿ ದೇವೇಗೌಡರು. ವಿದೇಶಕ್ಕೆ ಕಳುಹಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ನಿಮ್ಮ ವಕೀಲ ಜ್ಞಾನಕ್ಕೆ ಅಗೌರವ ಬರುವಂತೆ ಮಾತನಾಡಬೇಡಿ. ಬಹಳಷ್ಟು ಮಹಾನುಭಾವರು ಆ ವೃತ್ತಿಗೆ ಕಳಸಪ್ರಾಯರಾಗಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ದಯಮಾಡಿ ನೀವು ಇನ್ನೆಂದೂ ನಾನು ವಕೀಲಿಕೆ ಮಾಡುತ್ತಿದ್ದೆ ಎನ್ನಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ದೇವರಾಜೇಗೌಡ ನ್ಯಾಯಾಂಗ ಬಂಧನ 14 ದಿನ ವಿಸ್ತರಣೆ

ಅತ್ಯಾಚಾರ ಕೇಸ್‌ನ ಆರೋಪಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ನ್ಯಾಯಾಂಗ ಬಂಧನ ಅವಧಿ ಮತ್ತೆ 14 ದಿನಗಳ ಕಾಲ (ಜೂನ್ 7ರ ವರೆಗೆ) ವಿಸ್ತರಣೆಯಾಗಿದೆ. ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶ ನೀಡಿದ್ದು, ನ್ಯಾಯಾಂಗ ಬಂಧನವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.

ಮಹಿಳೆಯೊಬ್ಬರು ದೇವರಾಜೇಗೌಡ ವಿರುದ್ಧ ಹೊಳೆನರಸೀಪುರ ಪೊಲೀಸ್​​ ಠಾಣೆಯಲ್ಲಿ ಅತ್ಯಾಚಾರದ ದೂರು ನೀಡಿದ್ದರು. ಇದರಂತೆ, ಮೇ 11ರಂದು ದೇವರಾಜೇಗೌಡರನ್ನು ಪೊಲೀಸರು ಬಂಧಿಸಿದರು. ಮೇ 28 ರಂದು ದೇವರಾಜೇಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner