ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಣ್ಣ ರಿಲೀಫ್; ಆರೋಪ ನಿಗದಿ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಡೆ, ವಿಚಾರಣೆ ಜ 16ಕ್ಕೆ ಮುಂದೂಡಿಕೆ
Prajwal Revanna Case: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಣ್ಣ ರಿಲೀಫ್ ಸಿಕ್ಕಿದೆ. ಆರೋಪ ನಿಗದಿ ಪ್ರಕ್ರಿಯೆ ಆರಂಭಿಸದಂತೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ಜನವರಿ16ಕ್ಕೆ ವಿಚಾರಣೆಯನ್ನು ಮುಂದೂಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Prajwal Revanna Case: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅತ್ಯಾಚಾರ ಪ್ರಕರಣ ರದ್ದು ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ. ಮುಂದಿನ ಆದೇಶದ ವರೆಗೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿ ಜ.16ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿ ಪ್ರಕ್ರಿಯೆಗೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿ ಪ್ರಕ್ರಿಯೆ ಆರಂಭಿಸಲು ಜ.13ಕ್ಕೆ ದಿನಾಂಕ ನಿಗದಿಯಾಗಿತ್ತು. ಈಗಿನ ಹೈಕೋರ್ಟ್ ಆದೇಶದಿಂದ ಪ್ರಜ್ವಲ್ ನಿಟ್ಟುಸಿರು ಬಿಡುವಂತಾಗಿದೆ. ಜೈಲು ಸೇರಿದ್ದ ಪ್ರಜ್ವಲ್ ರೇವಣ್ಣಗೆ ಸ್ಥಳೀಯ ಮತ್ತು ಹೈಕೋರ್ಟ್‌ನಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ. ಕೆಳ ಹಂತದ ನ್ಯಾಯಾಲಯಗಳ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠ 'ಆರೋಪಿ ಸೋ ಪವರ್ ಫುಲ್' ಎಂದು ಒಂದು ಸಾಲಿನ ಆದೇಶದ ಮೂಲಕ ಪ್ರಜ್ವಲ್ ರೇವಣ್ಣ ಅವರ ಅರ್ಜಿ ವಜಾಗೊಳಿಸಿತ್ತು.
ಕೆ.ಆರ್. ನಗರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ತಮ್ಮ ಹೆಸರು ಕೈಬಿಡುವಂತೆ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಫೆ.7ರಂದು ಇತ್ಯರ್ಥಪಡಿಸುವುದಾಗಿಯೂ ನ್ಯಾಯಪೀಠ ತಿಳಿಸಿದೆ.
ಈ ಹಿಂದೆ ನವಂಬರ್ ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಅರ್ಜಿದಾರರ ಪರ ವಕೀಲ ಅರುಣ್ ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದರಾದರೂ ನ್ಯಾಯಲಯ ದೂರನ್ನು ಆಧರಿಸಿ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ತಿಳಿಸಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧದ ಕೇಸ್ ಹಿನ್ನೆಲೆ
ಜನಪ್ರತಿನಿಧಿ ಮಹಿಳೆಯೊಬ್ಬರು ದೂರು ನೀಡಿ 2021ರಲ್ಲಿ ಹಾಸನದಲ್ಲಿ ವಸತಿ ನಿಲಯ ಸಂಬಂಧ ಚರ್ಚಸಿಲು ಪ್ರಜ್ವಲ್ ರೇವಣ್ಣ ಅವರ ಕಚೇರಿಗೆ ತೆರಳಿದ್ದೆ. ಆಗ ಅವರು ಪಿಸ್ತೂಲು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದರು. ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಆನಂತರವೂ ವಿಡಿಯೋ ತೋರಿಸಿ ನಗ್ನವಾಗುವಂತೆ ಬೆದರಿಸಿದ್ದರು. ಈ ವಿಷಯವನ್ನು ಬಾಯಿ ಬಿಟ್ಟರೆ ವಿಡಿಯೋ ಲೀಕ್ ಮಾಡುವುದಾಗಿಯೂ ಹೆದರಿಸಿದ್ದರು ಎಂದು ದೂರು ಸಲ್ಲಿಸಿದ್ದರು. ಈ ಸಂಬಂಧ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ದೂರು ದಾಖಲಾಗಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 23 ರಂದು 123 ಸಾಕ್ಷ್ಯಗಳ 2,144 ಪುಟಗಳ ಮೊದಲ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸೆಪ್ಟೆಂಬರ್ 9 ರಂದು 1652 ಪುಟಗಳ ಎರಡನೇ ದೋಷಾರೋಪಣ ಪಟ್ಟಿಯನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಬೆಂಗಳೂರಿನ ಸಿಸಿಹೆಚ್-42 ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. 113 ಸಾಕ್ಷಿದಾರರು, ಸಂತ್ರಸ್ಥೆ ಮತ್ತು ಪ್ರಕರಣದ ಪ್ರಮುಖ ಸಾಕ್ಷಿದಾರರ ಹೇಳಿಕೆಗಳು, ಹಲವು ಕಡೆ ಕೃತ್ಯಕ್ಕೆ ಸಂಬಂಧಿಸಿದಂತೆ ಸ್ಥಳ ಮತ್ತು ಅಮಾನತು ಮಹಜರ್ ನಡೆಸಿ ಜೈವಿಕ, ಭೌತಿಕ, ವೈಜ್ಞಾನಿಕ, ಮೊಬೈಲ್, ಡಿಜಿಟಲ್ ಹಾಗೂ ಇತರೆ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿತ್ತು. ಈ ಪ್ರಕರಣದ ಕುರಿತು ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ಏಪ್ರಿಲ್ 28 ರಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಜೆಡಿಎಸ್ ನಾಯಕ ಪ್ರಜ್ವಲ್ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ. ಪ್ರಜ್ವಲ್ ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ.
(ವರದಿ- ಎಚ್. ಮಾರುತಿ, ಬೆಂಗಳೂರು)