Bengaluru-Mysuru Expressway: ಯಾರೋ ಆ ಚರಂಡಿಯನ್ನು..ಹೆದ್ದಾರಿ ಜಲಾವೃತ ವೃತ್ತಾಂತದ ಹಿಂದಿನ ಸತ್ಯ ಬಿಚ್ಚಿಟ್ಟ ಪ್ರತಾಪ್ ಸಿಂಹ!
ರಾಮನಗರದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃತಗೊಂಡಿದ್ದಕ್ಕೆ ಕಾರಣ ತಿಳಿಸಿರುವ ಸಂಸದ ಪ್ರತಾಪ್ ಸಿಂಹ, ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಗಬಸವನದೊಡ್ಡಿಯ ಬಳಿ ಬರುವ ಹೆದ್ದಾರಿಯ ಕೆಳಸೇತುವೆ ಈಗ ಸುಲಭ ಸಂಚಾರಕ್ಕೆ ಸಿದ್ಧವಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಬೆಂಗಳೂರು: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಜಲಾವೃತಗೊಂಡಿದೆ. ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಬಳಿ ಬರುವ ಹೆದ್ದಾರಿಯ ಕೆಳಸೇತುವೆ, ಇತ್ತೀಚಿಗೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಮಧ್ಯೆ ಹೆದ್ದಾರಿ ಜಲಾವೃತ ವೃತ್ತಾಂತದ ಬಗ್ಗೆ ಸಂಸದ ಪ್ರತಾಪ್ ಸಿಂಹ ಬೇರೆಯದ್ದೇ ಕಾರಣ ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಈ ಕುರಿತು ವಿಡಿಯೋವೊಂದನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರತಾಪ್ ಸಿಂಹ, 'ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ಳುತ್ತೀನಿ! ಮಳೆ ನೀರು ಹೋಗುವ ಚರಂಡಿಯನ್ನು ಯಾರೋ ರಸ್ತೆ ಮಾಡಿಕೊಳ್ಳಲು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು. ಎರಡು Hume Pipe ಹಾಕಿ ಸರಿಪಡಿಸಿದ್ದೇವೆ. ಧನ್ಯವಾದಗಳು..' ಎಂದು ತಿಳಿಸಿದ್ದಾರೆ.
'ಎಕ್ಸ್‌ಪ್ರೆಸ್‌ವೇನಲ್ಲಿ ಮಳೆ ನೀರುವ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ರಸ್ತೆ ಮೇಲೆ ನಿಲ್ಲುವ ನೀರು ಹರಿದು ಹೋಗಲು ನಿರ್ಮಿಸಲಾಗಿದ್ದ ಚರಂಡಿಯನ್ನೇ ಯಾರೋ ಅನಧಿಕೃತವಾಗಿ ಮುಚ್ಚಿದ್ದರಿಂದ ಇಷ್ಟೆಲ್ಲಾ ರಾದ್ಧಾಂತ ಸಂಭವಿಸಿದೆ. ಓಡಾಟಕ್ಕಾಗಿ ಚರಂಡಿ ಮುಚ್ಚಿ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು..' ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 'ಗ್ರಾಮಸ್ಥರು ಚರಂಡಿ ಮಾರ್ಗವನ್ನು ಮುಚ್ಚಿದ್ದರಿಂದ ನೀರು ಸರಾಗವಾಗಿ ಹರಿಯಲಾಗದೆ, ರಸ್ತೆಯಲ್ಲಿಯೇ ಮಳೆಯ ನೀರು ಸಂಗ್ರಹವಾಗಿತ್ತು. ಮಾದಾಪುರ ಮತ್ತು ಸುತ್ತಮುತ್ತಲಿನ ಕೆಲವು ಗ್ರಾಮಸ್ಥರು ತಮ್ಮ ಕೃಷಿ ಜಮೀನುಗಳಿಗೆ ಓಡಾಡಲು, ಚರಂಡಿ ಮಾರ್ಗವನ್ನು ಮುಚ್ಚಿ ರಸ್ತೆ ಮಾಡಿಕೊಂಡಿದ್ದರು. ಸುಮಾರು 3 ಮೀಟರ್ ಅಗಲ ಮಣ್ಣು ಮುಚ್ಚಿ ದಾರಿ ಮಾಡಿಕೊಂಡಿದ್ದರು. ಸರ್ವೀಸ್ ರಸ್ತೆಯಿಂದ ಸಾಗಲು ಈ ರಸ್ತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಬೃಹತ್ ಪೈಪ್‌ಗಳನ್ನು ಅಳವಡಿಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದೆ.
ಇಷ್ಟೇ ಅಲ್ಲದೇ ಗ್ರಾಮಸ್ಥರು ಹಾಕಿದ್ದ ದಿಬ್ಬವನ್ನು ತೆರವುಗೊಳಿಸಲಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು 1.2 ಮೀಟರ್ ವ್ಯಾಸದ ಎರಡು ಸಾಲಿನ ಪೈಪಲ್‌ಗಳನ್ನು ಅಳವಡಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಏನಾಗಿತ್ತು?:
ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ, ರಾಮನಗರದ ಸಂಗಬಸವನದೊಡ್ಡಿಯ ಸಮೀಪದ ಹೆದ್ದಾರಿಯ ಕೆಳಗಿನ ಸೇತುವೆಯಲ್ಲಿ ನೀರು ಸಂಗ್ರಹವಾಗಿತ್ತು. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸುಮಾರು ಎರಡು ಅಡಿಗಳಷ್ಟು ನೀರು ರಸ್ತೆಯಲ್ಲಿ ನಿಂತಿದ್ದರಿಂದ, ವಾಹನಗಳು ನಿಧಾನವಾಗಿ ಚಲಿಸಬೇಕಾದ ಅನಿವಾರುಯತೆಗೆ ಸಿಲುಕಿದವು. ಇದರಿಂದಾಗಿ ಅಪಘಾತವೂ ಸಂಭವಿಸಿದ್ದು, ವಾಹನ ಸವಾರರು ತೀವ್ರ ತೊಂದರೆಗೆ ಗುರಿಯಾದರು.
ಕಾಮಗಾರಿ ಪೂರ್ಣಗೊಳಿಸದೇ ಹೆದ್ಧಾರಿ ಉದ್ಘಾಟನೆ ಮಾಡಲಾಗಿದ್ದು, ದುಬಾರಿ ಟೋಲ್ ಕಟ್ಟಿಸಿಕೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸಿಲ್ಲ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದರು.
ಅಷ್ಟೇ ಅಲ್ಲದೇ ಹೆದ್ದಾರಿಯಲ್ಲಿ ವಿಶ್ರಾಂತಿ ಸ್ಥಳ, ಶೌಚಾಲಯ ವ್ಯವಸ್ಥೆ ಇಲ್ಲ ಎಂದೂ ಹಲವು ವಾಹನ ಸವಾರರು ದೂರಿದ್ದರು. ಉತ್ತಮ ಹೆದ್ದಾರಿ ನಿರ್ಮಾಣಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ಟೋಲ್ ಸಂಗ್ರಹವೇ ಹೆಚ್ಚಾಗಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದರು.
ಇನ್ನು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದುಬಾರಿ ಟೋಲ್ ಸಂಗ್ರಹಣೆ ವಿರುದ್ಧ, ಕಳೆದೊಂದು ವಾರದಿಂದ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಟೋಲ್ ಫ್ರಿ ಸರ್ವೀಸ್ ರಸ್ತೆ ಸೌಲಭ್ಯ ಒದಗಿಸದೇ, ಟೋಲ್ ಸಂಗ್ರಹಣೆ ಮಾಡುತ್ತಿರುವುದು ಜನರನ್ನು ಲೂಟಿ ಹೊಡೆಯುವ ಕುತಂತ್ರ ಎಂದು ಪ್ರತಿಭಟನಕಾರರು ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.