ಕನ್ನಡ ಸುದ್ದಿ  /  Karnataka  /  Praveen Nettaru: Karnataka State Govt Issued An Order By Appointing Late Praveen Nettaru S Wife Nuthana Kumari At Cm Office On Contract Basis

Praveen Nettaru: ದಿ.ಪ್ರವೀಣ್‌ ನೆಟ್ಟಾರು ಪತ್ನಿಗೆ ಸಿಎಂ ಕಚೇರಿಲಿ ಕೆಲಸ; ನೇಮಕ ಆದೇಶ ನೀಡಿದ ಕರ್ನಾಟಕ ಸರ್ಕಾರ

ದಿವಂಗತ ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡಿ ನೇಮಕ ಆದೇಶ ಹೊರಡಿಸಿದೆ.

ನೂತನ ಕುಮಾರಿ ಮತ್ತು ಅವರ ಪತಿ ದಿವಂಗತ ಪ್ರವೀಣ್‌ ನೆಟ್ಟಾರು (ಕಡತ ಚಿತ್ರ)
ನೂತನ ಕುಮಾರಿ ಮತ್ತು ಅವರ ಪತಿ ದಿವಂಗತ ಪ್ರವೀಣ್‌ ನೆಟ್ಟಾರು (ಕಡತ ಚಿತ್ರ) (SM)

ಬೆಂಗಳೂರು: ಭಾರತೀಯ ಜನತಾ ಪಕ್ಷದ ಯುವ ನೇತಾರ ದಿವಂಗತ ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡಿ ನೇಮಕ ಆದೇಶ ಹೊರಡಿಸಿದೆ.

ಈ ನೇಮಕ ಆದೇಶವನ್ನು ಕರ್ನಾಟಕ ಬಿಜೆಪಿ ಶೇರ್‌ ಮಾಡಿಕೊಂಡಿದ್ದು, ಮತಾಂಧರಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ಶ್ರೀಮತಿ ನೂತನ ಕುಮಾರಿ ಎಂ. ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಬಿಜೆಪಿ ಎಂದು ಹೇಳಿಕೊಂಡಿದೆ.

ದಿವಂಗತ ಪ್ರವೀಣ್‌ ನೆಟ್ಟಾರು ಅವರ ಪತ್ನಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಕಟಿಸಿದ್ದರು. ಅದರಂತೆ ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದಾರೆ.

ನೇಮಕ ಆದೇಶದಲ್ಲಿ ಏನಿದೆ?

ಸುಳ್ಯ ತಾಲೂಕು ಬೆಳ್ಳಾರೆಯ ನೆಟ್ಟಾರು ನಿವಾಸಿ ನೂತನಾ ಕುಮಾರಿ ಅವರಿಗೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಸಿ ಗ್ರೂಪ್‌ ನೌಕರ ಹುದ್ದೆ ನೀಡಲಾಗುತ್ತದೆ. ಮುಖ್ಯಮಂತ್ರಿಯವರ ಪದಾಧಿಕಾರದವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆ ಇರುತ್ತದೆ. ಗುತ್ತಿಗೆ ಆಧಾರದ ಹುದ್ದೆಗಳ ನಿಯಮಾವಳಿಗಳಿಗೆ ಇದು ಒಳಪಟ್ಟಿರುತ್ತದೆ. ವೇತನ ಮಾಸಿಕ 30,350 ರೂಪಾಯಿ ಇರಲಿದೆ. ಸೆಪ್ಟೆಂಬರ್‌ 22ರಿಂದ ಮುಂದಿನ ಎರಡು ತಿಂಗಳ ಅವಧಿಯೊಳಗೆ ನೂತನಾ ಅವರು ತಮ್ಮ ಶೈಕ್ಷಣಿಕ ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂಬ ಒಕ್ಕಣೆ ಆದೇಶದಲ್ಲಿದೆ.

ಆದೇಶ ಪತ್ರ ನೂತನಾ ಕೈ ಸೇರಿಲ್ಲ

ಮುಖ್ಯಮಂತ್ರಿ ಅವರ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿರುವ ವಿಚಾರ ಅಧಿಕೃತವಾಗಿ ಗೊತ್ತಾಗಿಲ್ಲ. ಈ ಬಗ್ಗೆ ಸಿಎಂ ಕಚೇರಿಯಿಂದಾಗಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದಾಗಲಿ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಮೌಖಿಕ ಮಾಹಿತಿಯಾಗಲಿ, ಆದೇಶ ಪತ್ರವಾಗಲಿ ಕೈ ಸೇರಿಲ್ಲ. ಆದೇಶ ಪತ್ರ ಬಂದ ಮೇಲೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ನೂತನಾ ಮಾಧ್ಯಮಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

IPL_Entry_Point