ಕನ್ನಡ ಸುದ್ದಿ  /  Karnataka  /  Praveen Nettaru Main Accused Found In Saudi Arabia? Reports

Praveen Nettaru Murder Case: ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಪತ್ತೆ?

ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಈ ಕುರಿತು ಎನ್‌ಐಎ ಅಥವಾ ಸರಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಹತ್ಯೆಯಾದ ಪ್ರವೀಣ್‌ ನೆಟ್ಟಾರು
ಹತ್ಯೆಯಾದ ಪ್ರವೀಣ್‌ ನೆಟ್ಟಾರು

ಬೆಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಈ ಕುರಿತು ಎನ್‌ಐಎ ಅಥವಾ ಸರಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ವರದಿಗಳ ಪ್ರಕಾರ, ಮೊಹಮ್ಮದ್ ಶರೀಫ್​, ಕೆ.ಎ.ಮಸೂದ್​ ಎಂಬ ಇಬ್ಬರು ಪ್ರಮುಖ ಆರೋಪಿಗಳು ಸೌದಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಮೊಹಮ್ಮದ್​ ಮುಸ್ತಫಾ, ಎಂ.ಹೆಚ್​.ತುಫೈಲ್​​, ಎಂ.ಆರ್​.ಉಮರ್​ ಫಾರೂಕ್​, ಅಬೂಬಕರ್​​ ಸಿದ್ಧಿಕಿ ಎಂಬವರು ಸೌದಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರಲ್ಲಿ ಮೊಹಮ್ಮದ್ ಶರೀಫ್​, ಕೆ.ಎ.ಮಸೂದ್​ ಪ್ರಮುಖ ಆರೋಪಿಗಳಾಗಿದ್ದಾರೆ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. ಈ ಆರು ಆರೋಪಿಗಳ ಸುಳಿವು ನೀಡಿದವರಿಗೆ 24 ಲಕ್ಷ ರೂ. ನೀಡುವುದಾಗಿ ಬಹುಮಾನ ಘೋಷಣೆ ಮಾಡಲಾಗಿತ್ತು.

ಈಗಾಗಲೇ ಈ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಐಪಿಸಿ ಸೆಕ್ಷನ್ 120ಬಿ (ಅಪರಾಧ ಸಂಚಿನ ಶಿಕ್ಷೆ) , 153ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದನೆ), 302 (ಕೊಲೆ) ಮತ್ತು 34 (ಒಂದೇ ಉದ್ದೇಶ ಸಾಧನೆಗಾಗಿ ಹಲವು ವ್ಯಕ್ತಿಗಳು ಸೇರಿ ನಡೆಸುವ ಕೃತ್ಯ) ಹಾಗೂ ಯುಎಪಿಎ ಕಾಯ್ದೆಯ 16, 18 ಮತ್ತು 20ನೇ ಸೆಕ್ಷನ್‌ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 15 (1) (a) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸುಮಾರು 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿವೆ. 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಮಂದಿಗಾಗಿ ಹುಡುಕಾಟ ನಡೆದಿದೆ. ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್‌ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಈ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ 20 ಆರೋಪಿಗಳ ಪೈಕಿ, ಮುಸ್ತಫಾ ಪೈಚರ್, ಮಸೂದ್ ಕೆಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕಿ, ಉಮ್ಮರ್ ಫಾರೂಕ್ ಎಂಆರ್ ಮತ್ತು ತುಫೈಲ್ ಎಂಎಚ್ ತಲೆಮರೆಸಿಕೊಂಡಿದ್ದರು.

ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್‌ ಬಳಿ ಪ್ರವೀಣ್‌ ನೆಟ್ಟಾರು ಕೋಳಿ ಮಾಂಸದಂಗಡಿ ನಡೆಸುತ್ತಿದ್ದರು. ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್‌ ನೆಟ್ಟಾರು ಮೇಲೆ ಮಾರಾಕಾಸ್ತ್ರಗಳಿಂದ ಏಕಾಕಿ ದಾಳಿ ನಡೆಸಿ ಹತ್ಯೆ ಮಾಡಿದ್ದರು.

ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಆಕ್ರೋಶಗೊಂಡಿದ್ದರು. ಈ ಘಟನೆಗೆ ಪೂರಕವಾಗಿ ಬಳಿಕ ಪಿಎಫ್‌ಐ ಸಂಘಟನೆಯನ್ನೂ ನಿಷೇಧಿಸಲಾಗಿತ್ತು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಅದರ ಸಹ ಸಂಘಟನೆಗಳು, ಅಧೀನ ಸಂಸ್ಥೆಗಳಿಗೆ ಐದು ವರ್ಷ ನಿಷೇಧ ಹೇರಲಾಗಿದೆ. ಪಿಎಫ್‌ಐನ ಕೆಲವೊಂದು ಸ್ಥಾಪಕ ಸದಸ್ಯರು ನಿಷೇಧಿತ ಸ್ಟುಡೆಂಟ್‌ ಇಸ್ಲಾಮಿಕ್‌ ಮೂವ್ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಮತ್ತು ಜಮತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ)ಯಂತಹ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಸಾಬೀತುಗೊಂಡಿರುವುದರಿಂದ ಪಿಎಫ್‌ಐಗೆ ನಿಷೇಧ ಹೇರಿರುವುದಾಗಿ ಕೇಂದ್ರ ಸರಕಾರ ತಿಳಿಸಿತ್ತು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಜತೆಗೆ ಅದರ ಇತರೆ ಸಂಘಟನೆಗಳಾದ ರೆಹಾಬ್‌ ಇಂಡಿಯಾ ಫೌಂಡೇಷನ್‌ (ಆರ್‌ಐಎಫ್‌), ಕ್ಯಾಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ), ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ), ನ್ಯಾಷನಲ್‌ ಕಾನ್‌ಫೆಡರೇಷನ್‌ ಆಪ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಜೇಷನ್‌ (ಎನ್‌ಸಿಎಚ್‌ಆರ್‌ಒ), ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌, ಜೂನಿಯರ್‌ ಫ್ರಂಟ್‌, ಎಂಪವರ್‌ ಇಂಡಿಯಾ ಫೌಂಡೇಷನ್‌ ಮತ್ತು ರೆಹಾಬ್‌ ಫೌಂಡೇಷನ್‌, ಜತೆಗೆ ಕೇರಳದಲ್ಲಿ ಪಿಎಫ್‌ಐ ಜತೆಗೆ ನಂಟು ಹೊಂದಿರುವ ಇತರೆ ಸಂಘಟನೆಗಳಿಗೆ ನಿಷೇಧ ಹೇರಲಾಗಿದೆ.

IPL_Entry_Point