ಕನ್ನಡ ಸುದ್ದಿ  /  Karnataka  /  Praveen Nettaru Murder Case: 9 Policemen From Dakshina Kannada Appointed To Nia

Praveen Nettaru Murder Case: ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ: NIAಗೆ ದಕ್ಷಿಣ ಕನ್ನಡದ 9 ಪೊಲೀಸರ ನೇಮಕ

ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ತನಿಖೆಗೆ ಸಹಕರಿಸಲು ದಕ್ಷಿಣ ಕನ್ನಡದ 9 ಮಂದಿ ಪೊಲೀಸ್​ ಸಿಬ್ಬಂದಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ಒಂದು ತಿಂಗಳ ಮಟ್ಟಿಗೆ ನೇಮಕ ಮಾಡಲಾಗಿದೆ.

ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು
ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು

ದಕ್ಷಿಣ ಕನ್ನಡ : ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ತನಿಖೆಗೆ ಸಹಕರಿಸಲು ದಕ್ಷಿಣ ಕನ್ನಡದ 9 ಮಂದಿ ಪೊಲೀಸ್​ ಸಿಬ್ಬಂದಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ಒಂದು ತಿಂಗಳ ಮಟ್ಟಿಗೆ ನೇಮಕ ಮಾಡಿ ಎಡಿಜಿಪಿ ಡಾ ಎಮ್​ ಎ ಸಲೀಂ ಆದೇಶ ಹೊರಡಿಸಿದ್ದಾರೆ.

ಈಗಾಗಲೆ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಹತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿದೆ. ಮುಂದಿನ ಒಂದು ತಿಂಗಳ ಕಾಲ ಈ ಒಂಭತ್ತು ಮಂದಿ ಪೊಲೀಸರು ಬೆಂಗಳೂರು ಎನ್ಐಎ ವಿಭಾಗದ ಅಧಿಕಾರಿಗಳ‌ ಜೊತೆ ಸೇರಿಕೊಳ್ಳಲಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಉದಯ ರವಿ, ವೇಣೂರು ಠಾಣೆಯ ಹೆಡ್ ಕಾನ್ಸ್​ಟೇಬಲ್​ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್​​ ಪ್ರವೀಣ್ ರೈ ಮತ್ತು ಆದ್ರಾಮ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್​ ಉದಯ ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಅನಿಲ್, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ ಇವರನ್ನು ಒಳಗೊಂಡ ಪೋಲಿಸರ ತಂಡವನ್ನು ಎನ್ಐಎಗೆ ನೇಮಿಸಿಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್​ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್‌ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್‌ ನೆಟ್ಟಾರು ಅವರು ಜುಲೈ 26ರ ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಏಕಾಏಕೆ ದಾಳಿ ಮಾಡಿ ಹತ್ಯೆ ಮಾಡಿದ್ದರು.

ಪ್ರಕರಣ ಸಂಬಂಧ ಈವರೆಗೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಪಿಎಫ್‌ಐ ಜತೆ ನಂಟು ಇರುವ ಕುರಿತು ಮಾಹಿತಿ ಲಭಿಸಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದರು. ಭಯೋತ್ಪಾದನೆ ಉದ್ದೇಶದಿಂದ ಪ್ರವೀಣ್‌ ನೆಟ್ಟಾರು ಹತ್ಯೆ ಮಾಡಲಾಗಿದೆ ಎಂದು ಎನ್ಐಎ ಹೇಳಿದೆ.

ಮೃತ ಪ್ರವೀಣ್​ ಕುಟುಂಬಕ್ಕೆ ರಾಜ್ಯ ಬಿಜೆಪಿ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಸಚಿವ ಅಶ್ವತ್ಥ್​ ನಾರಾಯಣ ಕೂಡ ವ್ಯಯಕ್ತಿಕವಾಗಿ 10 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ? ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ತೇಜಸ್ವಿ ಸೂರ್ಯ ಕೂಡ, ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತ ಪ್ರವೀಣ್ ಕುಟುಂಬಕ್ಕೆ 15 ಲಕ್ಷ ಸಹಾಯ ಹಸ್ತ ನೀಡುವ ಭರವಸೆ ನೀಡಿದ್ದರು. ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿದ್ದು, 5 ಲಕ್ಷ ರೂ. ಚೆಕ್ ವಿತರಣೆ ಮಾಡಿದ್ದಾರೆ.