ವಿಜ್ಞಾನದ ಸೊಗಸು ಹೆಚ್ಚಿಸುವ ಪ್ರಾಯೋಗಿಕ ಕಲಿಕೆಗೆ 'ಪ್ರಯೋಗ'ದ ವೇದಿಕೆ: ಎಚ್‌ಎಸ್‌ ನಾಗರಾಜ್ ಸಂದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  ವಿಜ್ಞಾನದ ಸೊಗಸು ಹೆಚ್ಚಿಸುವ ಪ್ರಾಯೋಗಿಕ ಕಲಿಕೆಗೆ 'ಪ್ರಯೋಗ'ದ ವೇದಿಕೆ: ಎಚ್‌ಎಸ್‌ ನಾಗರಾಜ್ ಸಂದರ್ಶನ

ವಿಜ್ಞಾನದ ಸೊಗಸು ಹೆಚ್ಚಿಸುವ ಪ್ರಾಯೋಗಿಕ ಕಲಿಕೆಗೆ 'ಪ್ರಯೋಗ'ದ ವೇದಿಕೆ: ಎಚ್‌ಎಸ್‌ ನಾಗರಾಜ್ ಸಂದರ್ಶನ

ವಿಜ್ಞಾನವನ್ನು ಮಕ್ಕಳು ಇಷ್ಟಪಟ್ಟು ಕಲಿಯುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಮಹತ್ತರ ಕಾರ್ಯಕ್ಕೆ 'ಪ್ರಯೋಗ' ಸಂಸ್ಥೆಯು ಮುಂದಾಗಿದೆ. ಕರ್ನಾಟಕದ ಸಾವಿರಾರು ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ವಿಜ್ಞಾನದ ದೀಕ್ಷೆ ಕೊಟ್ಟಿರುವ 'ಪ್ರಯೋಗ' ಸಂಸ್ಥೆಯ ಸಂಸ್ಥಾಪಕ ಎಚ್‌ಎಸ್ ನಾಗರಾಜ ಅವರ ಮನದ ಮಾತು ಇಲ್ಲಿದೆ. (ಸಂದರ್ಶನ: ಅರ್ಚನಾ ವಿ.ಭಟ್)

'ಪ್ರಯೋಗ' ಸಂಸ್ಥೆ ವಿತರಿಸಿರುವ ವಿಜ್ಞಾನ ಕೈಪಿಡಿ ಪ್ರದರ್ಶಿಸುತ್ತಿರುವ ಮಕ್ಕಳು (ಎಡಚಿತ್ರ). ವಿದ್ಯಾರ್ಥಿಯೊಂದಿಗೆ ಸಂಸ್ಥೆಯ ನಿರ್ದೇಶಕ ಎಚ್‌ಎಸ್‌ ನಾಗರಾಜ
'ಪ್ರಯೋಗ' ಸಂಸ್ಥೆ ವಿತರಿಸಿರುವ ವಿಜ್ಞಾನ ಕೈಪಿಡಿ ಪ್ರದರ್ಶಿಸುತ್ತಿರುವ ಮಕ್ಕಳು (ಎಡಚಿತ್ರ). ವಿದ್ಯಾರ್ಥಿಯೊಂದಿಗೆ ಸಂಸ್ಥೆಯ ನಿರ್ದೇಶಕ ಎಚ್‌ಎಸ್‌ ನಾಗರಾಜ

ಪ್ರಾಯೋಗಿಕ ಕಲಿಕೆಯ ಮೂಲಕ ಮಕ್ಕಳಿಗೆ ವಿಜ್ಞಾನ ಕಲಿಕೆಯ ಹಲವು ಮಾದರಿಗಳನ್ನು ಸೃಷ್ಟಿಸುವ ಮಹತ್ತರ ಕಾರ್ಯವನ್ನು 'ಪ್ರಯೋಗ' ಸಂಸ್ಥೆ ಮಾಡುತ್ತಿದೆ. ಕರ್ನಾಟಕದಲ್ಲಿ, ಅಷ್ಟೇಕೆ ಇಡೀ ದೇಶದಲ್ಲಿಯೇ ಹಲವು ಪ್ರಥಮಗಳಿಗೆ ಕಾರಣವಾದ ಶೈಕ್ಷಣಿಕ ಸಂಸ್ಥೆಯಿದು. ವಿಜ್ಞಾನ ಕ್ಷೇತ್ರಗಳಲ್ಲಿ ಹತ್ತಾರು ಅದ್ಭುತಗಳಿಗೆ ಕಾರಣವಾದ ಈ ಸಂಸ್ಥೆಯಲ್ಲಿ ಮಕ್ಕಳೇ ಪ್ರಯೋಗ ಮಾಡಿ ಸಿದ್ಧಪಡಿಸಿದ ಹಲವು ಸಂಶೋಧನಾ ವರದಿಗಳು ಖ್ಯಾತ ಸೈನ್ಸ್‌ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ. ಇಂಥ ಮಹತ್ವದ ಸಂಸ್ಥೆಯ ಕನಸು ಕಂಡು, ಅದಕ್ಕೆ ತಮ್ಮ ಶ್ರದ್ಧೆ ಮತ್ತು ಬದ್ಧತೆಯಿಂದ ಸಾಕಾರ ರೂಪ ನೀಡಿದ ಎಚ್‌.ಎಸ್‌.ನಾಗರಾಜ ಅವರ ಸಂದರ್ಶನ ಇಲ್ಲಿದೆ.

  • 'ಪ್ರಯೋಗ’ ಸಂಸ್ಥೆಯ ಉದ್ದೇಶವೇನು?
    – ಅಧ್ಯಯನ ಅಥವಾ ವಿದ್ಯಾಭ್ಯಾಸ ಎನ್ನುವುದು ಕೇವಲ ಪುಸ್ತಕ ಓದುವುದರಿಂದಷ್ಟೇ ಸಾಧ್ಯವಾಗುವುದಿಲ್ಲ. ಜ್ಞಾನಾರ್ಜನೆಗೆ ಅಗತ್ಯ ಪರಿಸರದ ನಿರ್ಮಾಣ ಆಗಬೇಕು. ಓದುವುದು ಎಂದಾಕ್ಷಣ ಜೀವನದಲ್ಲಿ ಮುಂದಿನ ತಲೆಮಾರು ಅವರ ಅಗತ್ಯಗಳನ್ನು, ಮುಂದೆ ಬರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯ ಬರಬೇಕು. ಬ್ರಿಟಿಷರು ರೂಪಿಸಿರುವ ಶಿಕ್ಷಣ ಪದ್ಧತಿಯನ್ನೇ ಇಂದಿಗೂ ನಾವು ಅನುಸರಿಸುತ್ತಿದ್ದೇವೆ. ಅವರಿಗೆ ಗುಮಾಸ್ತರಷ್ಟೇ ಬೇಕಿತ್ತು. ಆದರೆ ಈಗ ಸ್ವತಂತ್ರವಾಗಿ ಯೋಚಿಸುವ ಪ್ರಜೆಗಳನ್ನು ರೂಪಿಸುವುದು ಶಿಕ್ಷಣದ ಉದ್ದೇಶವಾಗಬೇಕು. ಮಕ್ಕಳು ಓದಿದ್ದು ಮರೆಯಬಹುದು, ಆದರೆ ಸೈಕಲು ತುಳಿಯುವುದು ಅಥವಾ ಈಜುವುದನ್ನು ಕಲಿತವರು ಎಂದಿಗೂ ಆ ವಿದ್ಯೆಯನ್ನು ಮರೆಯುವುದಿಲ್ಲ. ನಾವು ಓದಿದ್ದು ಮರೆಯಬಹುದು, ಅನುಭವಿಸಿದ್ದು ಮರೆಯುವುದಿಲ್ಲ. ವಿಜ್ಞಾನ ಶಿಕ್ಷಣದಲ್ಲಿ ಇದನ್ನು ರೂಪಿಸುವುದು, ಜಾರಿಗೆ ತರುವುದು, ಆಸಕ್ತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವುದು 'ಪ್ರಯೋಗ' ಸಂಸ್ಥೆಯ ಉದ್ದೇಶ.
  • ‘ಪ್ರಯೋಗ’ ಸಂಸ್ಥೆ ಹುಟ್ಟಿದ್ದು ಹೇಗೆ?
    – ನಾನು 25 ವರ್ಷ ಭೌತಶಾಸ್ತ್ರದ ಪಾಠ ಮಾಡಿದ್ದೇನೆ. ವಿಜ್ಞಾನ ಕಲಿಕೆಯನ್ನು ಕೇವಲ 'ಉರು' ಹೊಡಿಸಿ ಅಭ್ಯಾಸ ಮಾಡಿಸಿದರೆ ಅಂಕಗಳು ಬರಬಹುದಾದರೂ ವಿದ್ಯಾರ್ಥಿಗೆ ಹೆಚ್ಚು ಪ್ರಯೋಜನವಿಲ್ಲ. ಇದು ಮನವರಿಕೆಯಾದ ನಂತರ ಪ್ರಾಯೋಗಿಕ ಕಲಿಕೆಗೆ ಒತ್ತು ಕೊಡಬೇಕು ಎನ್ನುವ ನನ್ನ ಅಭಿಪ್ರಾಯವನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಂಡೆ. ಒಂದಿಷ್ಟು ಜನರು ಕೈಜೋಡಿಸಿದರು. 'ಪ್ರಯೋಗ' ಆರಂಭವಾಯಿತು.
  • 'ಪ್ರಯೋಗ'ದ ವೈಶಿಷ್ಟ್ಯಗಳೇನು?
    - ಪ್ರಾಯೋಗಿಕ ಕಲಿಕೆಗಾಗಿ ರೂಪಿಸಿರುವ ಸಂಸ್ಥೆ ಇದು. ಮೊಬೈಲ್‌ನ ಉದಾಹರಣೆಯೊಂದಿಗೆ ಇದನ್ನು ವಿವರಿಸುತ್ತೇನೆ. ಈಗ್ಗೆ 35 ವರ್ಷಗಳ ಹಿಂದೆ ಮೊಬೈಲ್ ಎನ್ನುವ ಸಾಧನದ ಬಗ್ಗೆ ಯಾರಿಗಾದರೂ ಹೇಳಿದರೆ ನಂಬುತ್ತಲೇ ಇರಲಿಲ್ಲ. ಆದರೆ ಇವತ್ತಿನ ಪರಿಸ್ಥಿತಿ ಹೇಗೆ? ಮೊಬೈಲ್‌ ಇಲ್ಲದ ಜಗತ್ತು ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಇವತ್ತಿನ ಯುವಕರಿಗೆ ನಂಬಲೂ ಕಷ್ಟವಾದೀತು. ವಿಜ್ಞಾನ ಕಲಿಕೆಯ ವಿಚಾರದಲ್ಲಿಯೂ ಇಂಥದ್ದೇ ಯೋಚನೆಯಿತ್ತು. ಅತ್ಯುನ್ನತ ತಂತ್ರಜ್ಞಾನಗಳು (ಹೈ ಎಂಡ್ ಟೆಕ್ನಾಲಜಿ) ಹೇಗಿರುತ್ತವೆ ಎನ್ನುವುದನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸಿದರೆ, ಅದನ್ನು ಅವರು ಬಳಸುವ ಮೂಲಕ ವಿಜ್ಞಾನದ ತತ್ವಗಳನ್ನು ಕಲಿತರೆ ಒಳ್ಳೆಯದು ಎನ್ನುವ ತತ್ವಕ್ಕೆ 'ಪ್ರಯೋಗ' ರೂಪುಗೊಂಡಿದೆ. ಪ್ರಾಯೋಗಿಕ ಕಲಿಕೆ, ವಿದ್ಯಾರ್ಥಿಗಳೇ ಇಲ್ಲಿ ವಿಜ್ಞಾನಿಗಳು, ಮಕ್ಕಳ ಹಿನ್ನೆಲೆಯನ್ನು ಗಮನಿಸದೇ ಅವರ ಕನಸುಗಳನ್ನಷ್ಟೇ ಗಮನಿಸಿ ಇಲ್ಲಿ ಪ್ರೋತ್ಸಾಹಿಸಲಾಗುವುದು. ಇದೇ 'ಪ್ರಯೋಗ'ದ ವೈಶಿಷ್ಟ್ಯ.

'ಪ್ರಯೋಗ' ಸಂಸ್ಥೆ ಒದಗಿಸಿರುವ ಪ್ರಯೋಗಾಲಯ ಕಿಟ್ ಮೂಲಕ ಪಾಠ ಮಾಡುತ್ತಿರುವ ಅಂಬಳೆ ಸರ್ಕಾರಿ ಶಾಲೆಯ ಶಿಕ್ಷಕಿ.
'ಪ್ರಯೋಗ' ಸಂಸ್ಥೆ ಒದಗಿಸಿರುವ ಪ್ರಯೋಗಾಲಯ ಕಿಟ್ ಮೂಲಕ ಪಾಠ ಮಾಡುತ್ತಿರುವ ಅಂಬಳೆ ಸರ್ಕಾರಿ ಶಾಲೆಯ ಶಿಕ್ಷಕಿ.
  • 'ಪ್ರಯೋಗ'ದಲ್ಲಿ ಮಕ್ಕಳ ಸಾಮರ್ಥ್ಯವನ್ನು ಹೇಗೆ ಅಂದಾಜಿಸುತ್ತೀರಿ?
    - ಪ್ರತಿ ಮಗುವು ಬೇರೆಬೇರೆ ರೀತಿಯಲ್ಲಿ ಯೋಚಿಸುತ್ತದೆ. ಆ ಮಕ್ಕಳು ಹೇಗೆ ಯೋಚಿಸುತ್ತಾರೆ, ಹೇಗೆ ಕಲಿಯುತ್ತಾರೆ ಎಂದು ಗೊತ್ತಾದರೆ ಸಾಂದರ್ಭಿಕವಾಗಿ ಆಯಾ ಭೂಪ್ರದೇಶದಲ್ಲಿ ಯಾವ ರೀತಿ ಹೇಳಿಕೊಡಬೇಕು ಅಂತ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯುತ್ತಿದೆ. ನಮ್ಮಲ್ಲಿಗೆ ಬರುವ ಎಲ್ಲ ಮಕ್ಕಳ ಬಗ್ಗೆಯೂ ಹಲವು ರೀತಿಯ ದತ್ತಾಂಶ ಸಂಗ್ರಹಿಸುತ್ತೇವೆ. ಆ ಮಗು ಹೇಗೆ ಯೋಚಿಸುತ್ತದೆ? ಕಾನ್ಸಪ್ಟೆ ಲರ್ನಿಂಗ್‌ ಆಗ್ತಾ ಇದೆಯಾ? ಐಡಿಯಾ ಬರುತ್ತಿದೆಯಾ? ಇದು ಬೇರೆ, ಅದು ಬೇರೆ ಅಂತ ಗೊತ್ತಾಗುತ್ತಿದೆಯಾ, ನೆಟ್ವರ್ಕ್‌ ಮಾಡುವುದು, ಕಾಂಟ್ರಾಸ್ಟ್‌ ಮಾಡುವುದು, ಕಂಪ್ಯೂಟೇಷನ್‌ ಸ್ಕಿಲ್‌, ಪ್ರಾಬ್ಲಮ್‌ ಸಾಲ್ವಿಂಗ್‌ ಸ್ಕಿಲ್‌ ಎಂದು ಅಧ್ಯಯನ ಮಾಡುತ್ತಿರುತ್ತೇವೆ. ಈ ಅಧ್ಯಯನಕ್ಕೆ ಸುಮಾರು 5 ವರ್ಷ ಹಿಡಿಯುತ್ತದೆ.
  • 'ಪ್ರಯೋಗ'ದಲ್ಲಿ ಯಾವೆಲ್ಲ ಚಟುವಟಿಕೆಗಳು ನಡೆಯುತ್ತವೆ?
    - ಇಲ್ಲಿಗೆ ಪ್ರತಿ ವಾರ ನಾಲ್ಕು ದಿನ 3 ಶಾಲೆಯ 100 ಮಕ್ಕಳು ಬರುತ್ತಾರೆ. ಪ್ರತಿದಿನ 2 ಶಾಲೆಗಳ ಮಕ್ಕಳು ಇಲ್ಲಿ ವಿಜ್ಞಾನ ಕಲಿಯುತ್ತಿರುತ್ತಾರೆ. ಇದರ ಜೊತೆಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ನಮ್ಮ ಕೆಲಸ ನಡೆಯುತ್ತಿದೆ. ಸುಮಾರು 11,000 ಮಕ್ಕಳು ನಮ್ಮೊಂದಿಗೆ ಇದ್ದಾರೆ. ಪ್ರತಿ ಮಕ್ಕಳಿಗೆ ಕೈಪಿಡಿಗಳನ್ನು ಕೊಡುತ್ತೇವೆ. ವಿಜ್ಞಾನ ಶಿಕ್ಷಕರಿಗೆ ತರಬೇತಿ ಕೊಡುವುದರೊಂದಿಗೆ ಅವರಿಗೂ ಪ್ರತ್ಯೇಕ ಕೈಪಿಡಿ ಸಿದ್ಧಪಡಿಸಿಕೊಟ್ಟಿದ್ದೇವೆ. ಈ ಕೈಪಿಡಿಗಳನ್ನು ಆಧರಿಸಿ ಪ್ರಯೋಗದ ಚಟುವಟಿಕೆ ನಡೆಸಲು ಪ್ರಯೋಗಾಲಯಗಳನ್ನೂ ಮಾಡಿಕೊಟ್ಟಿದ್ದೇವೆ. ಗಣಿತ ಶಿಕ್ಷಣಕ್ಕಾಗಿ 'ಧಾತು', ವಿದ್ಯಾರ್ಥಿ ವಿಜ್ಞಾನಿಗಳಿಗಾಗಿ 'ಅನ್ವೇಷಣಾ' ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ನಮ್ಮಲ್ಲಿರುವ ಎಲ್ಲ ಸೌಲಭ್ಯಗಳೂ ಉಚಿತ.
  • 'ಪ್ರಯೋಗ' ಕೇಂದ್ರವನ್ನು ವೀಕ್ಷಿಸಲು ಶಾಲಾ ಮಕ್ಕಳು ಬರಬಹುದೇ?
    - ಖಂಡಿತ ಬರಬಹುದು. ಒಂದು ದಿನಕ್ಕೆ ಗರಿಷ್ಠ 50 ಮಕ್ಕಳ ಭೇಟಿಗೆ ಅವಕಾಶವಿದೆ. ಆದರೆ ಮೊದಲೇ ಕರೆ ಮಾಡಿ ಮಾಹಿತಿ ಕೊಟ್ಟಿರಬೇಕು.
  • ನೀವು ಸಂಗ್ರಹಿಸುವ ಮಕ್ಕಳ ಮಾಹಿತಿ, ದತ್ತಾಂಶವನ್ನು ಏನು ಮಾಡುತ್ತೀರಿ? ಯಾರಿಗೆ ಕೊಡುತ್ತೀರಿ?
    – ರಾಜ್ಯ ಪಠ್ಯಕ್ರಮದ (ಸ್ಟೇಟ್ ಸಿಲಬಸ್) ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣದ ಚಟುವಟಿಕೆ ನಡೆಯುತ್ತಿದೆ. ನಾವು ಸಂಗ್ರಹಿಸುವ ದತ್ತಾಂಶವನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ನಮ್ಮದೇ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ. ನಾವು ಒಂದು ಮಾದರಿಯನ್ನು ರೂಪಿಸಿಕೊಡಲು ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು ಇತರ ಸಂಸ್ಥೆಗಳೂ ಅನುಸರಿಸಬಹುದು. ಈ ಥರದ ಪ್ರಯತ್ನಗಳು ರಾಷ್ಟ್ರಮಟ್ಟದಲ್ಲಿಯೂ ನಡೆಯಬೇಕಿದೆ.

  • ಈ ಎಲ್ಲಾ ಚಟುವಟಿಕೆಗಳನ್ನು ಮಾಡಲು ಹಣಕಾಸನ್ನು ಹೇಗೆ ಹೊಂದಿಸಿಕೊಳ್ಳುತ್ತಿದ್ದೀರಿ?
    – ನಾನು ಮತ್ತು ನಮ್ಮ ಟ್ರಸ್ಟ್‌ನ ಸದಸ್ಯರು ಈ ಮೊದಲು ಶಿಕ್ಷಕರಾಗಿದ್ದವರು ಅಥವಾ ಶಿಕ್ಷಣ ಕ್ಷೇತ್ರದಲ್ಲಿದ್ದವರು. 'ಪ್ರಯೋಗ'ದ ಮೊದಲ 7 ವರ್ಷಗಳ ಚಟುವಟಿಕೆಘಳನ್ನು ನಮ್ಮ ಸ್ವಂತ ದುಡಿಮೆ ಹಣದ ಉಳಿತಾಯದಲ್ಲಿ ನಿರ್ವಹಿಸಿದೆವು. ನಂತರದ ದಿನಗಳಲ್ಲಿ ಹಲವು ಕಾರ್ಪೊರೇಟ್ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಫಂಡ್) ನಮ್ಮೊಡನೆ ಕೈಜೋಡಿಸಿದವು. ಈ ಪೈಕಿ ಕಂಪನಿಯೊಂದು ದೊಡ್ಡಮಟ್ಟದಲ್ಲಿ ಸಹಾಯ ಮಾಡಿತು. ಇತ್ತೀಚಿನ ದಿನಗಳಲ್ಲಿ ಹಲವು ಸಹೃದಯರು ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬರುತ್ತಿದ್ದಾರೆ.
  • 'ಪ್ರಯೋಗ' ಸಂಸ್ಥೆಯ ಮೂಲಕ ಏನು ಸಾಧಿಸಬೇಕು ಎಂದುಕೊಂಡಿದ್ದೀರಿ?
    - ಸದ್ಯಕ್ಕೆ ನಾವು ಕರ್ನಾಟಕದಲ್ಲಿ ಸಕ್ರಿಯರಾಗಿದ್ದೇವೆ. ನಾವು ಒಂದು ಮಾದರಿ ರೂಪಿಸುವ ಕೆಲಸ ಮಾಡುತ್ತಿದ್ದೇವೆ. ಮುಂದೊಂದು ದಿನ ಇದು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರಾಯೋಗಿಕ ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಆಗಲು ನಾವು ಮುನ್ನುಡಿ ಬರೆಯುತ್ತಿದ್ದೇವೆ.
  • 'ಧಾತು' ಕಾರ್ಯಕ್ರಮದ ಬಗ್ಗೆ ವಿವರಿಸಿ
    - ಇದು ಗಣಿತಕ್ಕೆ ಸಂಬಂಧಿಸಿದ ಕಾರ್ಯಕ್ರಮ. ಗಣಿತ ಕಷ್ಟ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಗಣಿತವಿಲ್ಲದೆ ಏನೂ ಇಲ್ಲ. ಜೀವನದಲ್ಲಿ ಬದಕಲು, ಒಂದು ಅಂಗಡಿಗೆ ಹೋಗಿ ವ್ಯಾಪಾರ ಮಾಡಬೇಕೆಂದರೂ, ಗಣಿತ ಬೇಕು. ಗಣಿತವನ್ನು ಭಯವಿಲ್ಲದೆ ಕಲಿಸುವ ಸಾಧ್ಯತೆಯ ಮಾದರಿ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಟ್ಯೂರಿಂಗ್ ಅವಾರ್ಡ್‌ (ಇದು ಗಣಿತದಲ್ಲಿ ನೊಬೆಲ್ ಪ್ರಶಸ್ತಿಗೆ ಸಮಾನವಾದುದು) ವಿಜೇತ ಗಣಿತಜ್ಞರಾದ ಜೆಫ್ರಿ ಉಲ್ಮಾನ್ ನಮ್ಮ ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. 'ಧಾತು' ಶೀಘ್ರದಲ್ಲಿಯೇ ಆರಂಭವಾಗಲಿದೆ. ನಾವು ಉಪಯುಕ್ತ ಎಂದು ಕಂಡುಕೊಳ್ಳುವ ಗಣಿತದ ಕಲಿಕಾ ಮಾದರಿಯನ್ನು ಮುಕ್ತವಾಗಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತೇವೆ. ಅದನ್ನು ಯಾರು ಉಚಿತವಾಗಿ ಬಳಸಿಕೊಳ್ಳಬಹುದು. ಗಣಿತವನ್ನು ಆಟದಂತೆ ಕಲಿಸುವ ಪ್ರಯತ್ನ ಇದು.

  • ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆ ಎಂದು ಪೋಷಕರು, ಶಿಕ್ಷಕರು ಕಂಡುಕೊಳ್ಳುವುದು ಹೇಗೆ?
    – ಈಗ ಊಟದ ವಿಷಯ ಮಾತನಾಡೋಣ. ಮಗುವಿಗೆ ಯಾವ ತಿನಿಸು ಇಷ್ಟ ಎಂದು ತಾಯಿ ಹೇಗೆ ಕಂಡುಕೊಳ್ಳುತ್ತಾಳೆ. ಮಗುವಿಗೆ ಹಲವು ಬಗೆಯ ತಿನಿಸು ಕೊಟ್ಟು ಯಾವುದು ಇಷ್ಟ ಎಂದು ಕಂಡುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮಗು ಪದೇಪದೆ ಯಾವುದಕ್ಕೆ ಕೈಹಾಕುತ್ತದೆಯೋ ಅದೇ ತಿನಿಸು ಮಗುವಿಗೆ ಇಷ್ಟವಿರಬಹುದು ಎನ್ನುವ ತೀರ್ಮಾನಕ್ಕೆ ತಾಯಿ ಬರುತ್ತಾಳೆ. ವಿವಿಧ ವಿಷಯಗಳನ್ನು ಮೊದಲು ಮಕ್ಕಳಿಗೆ ಹೀಗೆಯೇ ಕೊಡಬೇಕು. ಉದಾ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಇತಿಹಾಸ ಇತ್ಯಾದಿ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಪರಿಕರಗಳನ್ನು ಕೊಟ್ಟು ಮಗು ಯಾವುದನ್ನು ಹೆಚ್ಚು ಕುತೂಹಲದಿಂದ ಗಮನಿಸುತ್ತದೆ ಮತ್ತು ಹೆಚ್ಚು ಕಾಲ ಕಳೆಯುತ್ತದೆ ಎನ್ನುವುದನ್ನು ಗಮನಿಸಿದರೆ ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆ ಎನ್ನುವುದನ್ನು ಗುರುತಿಸಬಹುದು.
  • ಹಲವಾರು ಬಗೆಯ ಪೋಷಕರನ್ನು ನೀವು ಮಾತನಾಡಿಸಿದ್ದೀರಿ. ನಿಮ್ಮ ಪ್ರಕಾರ ಇಂದಿನ ಪೋಷಕರಲ್ಲಿ ಯಾವ ಬಗೆಯ ಬದಲಾವಣೆ ಬೇಕು?
    - ನಮ್ಮ ಬಾಲ್ಯಕ್ಕೂ, ನಮ್ಮ ಪೋಷಕರಿಗೂ ಇಂದಿನ ಮಕ್ಕಳ ಬಾಲ್ಯಕ್ಕೂ, ಈಗಿನ ಪೋಷಕರಿಗೂ ಬಹಳ ವ್ಯತ್ಯಾಸವಿದೆ. ನಿಜ ಹೇಳಬೇಕು ಎಂದರೆ ಇಂದಿನ ಮಕ್ಕಳ ಮೇಲೆ ಹೆಚ್ಚು ಒತ್ತಡವಿದೆ. ನಾವು ಮಕ್ಕಳಿಗೆ ಕೊಡಬೇಕಾದದ್ದು ಪ್ರೀತಿ ಮತ್ತು ಕಲಿಕೆಗೆ ಪೂರಕವಾದ ವಾತಾವರಣ ಮಾತ್ರ. ಮಿಕ್ಕಿದ್ದನ್ನೆಲ್ಲಾ ಮಗುವೇ ಕಂಡುಕೊಳ್ಳುತ್ತದೆ. ಮಕ್ಕಳಿಗೆ ಟಿವಿ ನೋಡಬೇಡ, ಮೊಬೈಲ್‌ನಿಂದ ದೂರ ಇರು ಎನ್ನುವ ಪೋಷಕರು ಸ್ವತಃ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಮುಖ್ಯ. ಮಕ್ಕಳು ನಾವು ಹೇಳುವುದನ್ನು ಕೇಳದಿರಬಹುದು, ಆದರೆ ನಮ್ಮ ನಡತೆಯನ್ನು ಮಾತ್ರ ಖಂಡಿತ ಅನುಸರಿಸುತ್ತಾರೆ. ಮಗು ಒಂದು ಯಂತ್ರವಲ್ಲ. ಇಂದು ಮಕ್ಕಳಿಗಿಂತ ಪೋಷಕರಿಗೆ ಶಿಕ್ಷಣ ಕೊಡಬೇಕಿದೆ. ಜೀವನವೆಂದರೆ ಕೇವಲ ಅಂಕ, ಅಂಕಪಟ್ಟಿಯಷ್ಟೇ ಅಲ್ಲ.
  • ಪೋಷಕರಿಗೆ ನೀವು ಏನು ಸಲಹೆ ಕೊಡುತ್ತೀರಿ?
    - ನಮ್ಮ ಮಕ್ಕಳ ಭವಿಷ್ಯವನ್ನು ನಾವು ರೂಪಿಸುತ್ತೇವೆ ಎನ್ನುವ ಭ್ರಮೆಯನ್ನು ಪೋಷಕರು ಮೊದಲು ತಲೆಯಿಂದ ತೆಗೆದು ಹಾಕಬೇಕು. ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರ ಉತ್ಸಾಹಕ್ಕೆ ನೀರೆರೆಯುವುದು ಬಹಳ ಮುಖ್ಯ. ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ಓದಿಸಿ. ಅವರನ್ನು ಒಳ್ಳೆಯ ಪ್ರಜೆಗಳನ್ನಾಗಿಸಲು ಪ್ರಯತ್ನಿಸಿ. ಡಿಗ್ರಿ ಸರ್ಟಿಫಿಕೇಟ್‌ಗಳಷ್ಟೇ ಶಿಕ್ಷಣವಲ್ಲ. ವ್ಯಕ್ತಿಯ ಯೋಗ್ಯತೆಯನ್ನು ಸಂಬಳವಷ್ಟೇ ತೀರ್ಮಾನ ಮಾಡಬಾರದು. ಬದುಕಿಗಾಗಿ ಶಿಕ್ಷಣ ಬೇರೆ, ಹೊಟ್ಟೆಪಾಡಿಗಾಗಿ ಶಿಕ್ಷಣ ಬೇರೆ. (education is for life not for livelihood).

(ಪ್ರಯೋಗ ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ www.prayoga.org.in ಜಾಲತಾಣದಲ್ಲಿ ಲಭ್ಯ).